ನೀರಿಲ್ಲ, ಸ್ವಚ್ಛತೆ ಕೇಳೋ ಮಾತೇ ಇಲ್ಲ; ಗಾಂಧಿ ಗ್ರಾಮ ಪುರಸ್ಕಾರ ಪಡೆದ ಗ್ರಾಮದ ಕಥೆಯಿದು
ಆ ಗ್ರಾಮ ಪಂಚಾಯತಿಗೆ ಈ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ್ ಸಿಕ್ಕಿದೆ. ಅಲ್ಲಿ ಹೋಗಿ ನೋಡಿದರೆ ಇದಕ್ಕೇನಾ ಪ್ರಶಸ್ತಿ ಸಿಕ್ಕಿರುವುದು ಎಂದು ಆಡಿಕೊಳ್ಳುವಂತಹ ವಾತಾವರಣ ಅಲ್ಲಿದೆ. ಶುದ್ದ ಕುಡಿಯುವ ನೀರಿನ ಘಟಕವಿದ್ದೂ ಇಲ್ಲದಂತಾಗಿದೆ. ಜೊತೆಗೆ ಕುಡಿಯುವ ನೀರಿನ ಸಮಸ್ಯೆಯಿಂದ ಗ್ರಾಮದ ಜನರು ಬಳಲುವಂತಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ.
ಬೀದರ್, ಅ.04: ತಮ್ಮ ಸತ್ಯಮಾರ್ಗದಿಂದ ಇಡೀ ವಿಶ್ವಕ್ಕೆ ಚಿರಪರಿಚಿತರಾದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಹೆಸರಿನಲ್ಲಿ ನಮ್ಮ ರಾಜ್ಯ ಸರ್ಕಾರ ವಿಶೇಷ ಸಾಧನೆ ಮಾಡಿದ ಗ್ರಾಮ ಪಂಚಾಯಿತಿಗಳಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಆದ್ರೆ, ಬೀದರ್ನಲ್ಲಿ ‘ಗಾಂಧಿ ಗ್ರಾಮ’ ಪುರಸ್ಕಾರ ಪಡೆದ ಔರಾದ್ ತಾಲೂಕಿನ ಜಂಬಗಿ(Jambagi)ಗ್ರಾಮ ಪಂಚಾಯತ್ ಸರ್ಕಾರಕ್ಕೆ ಚಳ್ಳೆ ಹಣ್ಣು ತಿನ್ನಿಸಿ, ಗಾಂಧೀಜಿ ಅವರ ಹೆಸರಿಗೆ ಕಳಂಕ ತರುವ ಕೆಲಸಕ್ಕೆ ಮುಂದಾಗಿದೆ.
ಹೌದು, ಸ್ವಚ್ಛ ಭಾರತ ಅಭಿಯಾನದ ಹೆಸರಿನಲ್ಲಿ ಬೀದರ್ ಜಿಲ್ಲೆಗೆ ಕೊಟ್ಯಾಂತರ ರೂಪಾಯಿ ಹಣ ಹರಿದು ಬಂದಿದ್ದು, ದೇಶವನ್ನು ಬಯಲು ಶೌಚ ಮುಕ್ತ ಮಾಡಲು ಪ್ರಧಾನಿ ಮೋದಿ ಅವರು ನೂರಾರು ಕೋಟಿ ಅನುದಾನವನ್ನು ಗ್ರಾಮ ಪಂಚಾಯಿತಿಗಳಿಗೆ ನೀಡುತ್ತಿದ್ದಾರೆ. ಆದರೆ, ಈ ಹಣ ಸರಿಯಾಗಿ ಬಳಕೆಯಾಗುತ್ತಿಲ್ಲ. ಇಲ್ಲಿ ಶೌಚಾಲಯಗಳು ಇದ್ದರೂ ಕೂಡ ಬಳಕೆಯಾಗದೆ, ಜನರು ಇಂದಿಗೂ ಕೂಡ ಬಯಲು ಬರ್ಹಿದೆಸೆಗೆ ಹೋಗುವಂತಾ ಸ್ಥಿತಿಯಿಲ್ಲಿದೆ.
ಇದನ್ನೂ ಓದಿ:ಗಾಂಧಿ ಗ್ರಾಮ ಪುರಸ್ಕಾರ ಪಡೆದ ನೀರಲಕೇರಿ ಗ್ರಾಮದ ಅವ್ಯವಸ್ಥೆ ಬಯಲಿಗೆ, ಯಾವ ಮಾನದಂಡ ಮೇಲೆ ಈ ಪ್ರಶಸ್ತಿ?
ಇಡೀ ಗ್ರಾಮವನ್ನ ಒಂದು ಸುತ್ತು ಹಾಕಿದರೆ, ಎಲ್ಲಿ ನೋಡಿದರಲ್ಲಿ ಕಸದ ರಾಶಿಯೇ ಇದೆ. ರಸ್ತೆಯ ಮೇಲೆ ಕೊಳಚೆ ನೀರು ಹರಿಯುತ್ತಿದೆ. ಕುಡಿಯುವ ನೀರಿನ ಸಮಸ್ಯೆಯಿಂದ ಗ್ರಾಮಸ್ಥರು ಬಳಲುತ್ತಿದ್ದಾರೆ. ಈ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿದ್ದರೂ ಅದು ಕೂಡ ಬಳಕೆಯಾಗದೆ ತುಕ್ಕು ಹಿಡಿಯುತ್ತಿದೆ. ಸುಚಿತ್ವಇಲ್ಲದ ಗ್ರಾಮ ಪಂಚಾಯತಿಗೆ ಗಾಂಧಿ ಗ್ರಾಮ ಪುರಸ್ಕಾರ್ ಸಿಕ್ಕಿದ್ದು ಹೇಗೆ ಎಂದು ಇಲ್ಲಿನ ಗ್ರಾಮಸ್ಥರು ಪ್ರಶ್ನೀಸುತ್ತಿದ್ದು, ನಮಗೆ ಕುಡಿಯುವ ನೀರಿಲ್ಲ, ಸ್ವಚ್ಚತೆಯಿಲ್ಲ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಗ್ರಾಮ ಪಂಚಾಯತ್ ಗಾಂಧಿ ಗ್ರಾಮ ಪುರಷ್ಕಾರಕ್ಕೆ ಹತ್ತಾರು ನಿಯಮಗಳಿವೆ
ಜನರ ಗುಣಮಟ್ಟ ಸುಧಾರಣೆ, ಸಂಪನ್ಮೂಲ ಕ್ರೋಢೀಕರಣ, ಕುಡಿಯುವ ನೀರು, ಶೌಚಾಲಯ, ನೈರ್ಮಲ್ಯ, ರಸ್ತೆ, ಬೀದಿ ದೀಪಗಳ ನಿರ್ವಹಣೆ, ಮಹಿಳಾ ಸ್ವ ಸಹಾಯ ಸಂಘಗಳ ಮೂಲಕ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟ ಹಾಗೂ ಮನೆ ಮನೆಗಳಿಂದ ಘನ ತ್ಯಾಜ್ಯ ಸಂಗ್ರಹಿಸಲು ಉಪಯೋಗಿಸುವ ವಾಹನಕ್ಕೆ ಮಹಿಳಾ ಚಾಲಕರನ್ನು ನೇಮಕ ಮಾಡುವಲ್ಲಿ ಕೈಗೊಂಡಿರುವ ಕ್ರಮಗಳನ್ನು ಆಧರಿಸಿ ಗಾಂಧಿ ಪುರಸ್ಕಾರಕ್ಕೆ ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯ ಜನರಿಗೆ ಒದಗಿಸಿರುವ ಮೂಲ ಸೌಕರ್ಯಗಳು ಹಾಗೂ ಸೇವೆಗಳ ಜೊತೆಗೆ ಉತ್ತಮ ಆಡಳಿತ ನೀಡುವುದನ್ನು ಸಹ ಆಯ್ಕೆಗೆ ಪರಿಗಣಿಸಲಾಗುತ್ತದೆ. ಬಾಪೂಜಿ ಸೇವಾ ಕೇಂದ್ರಗಳ ಮೂಲಕ ನೀಡಲಾಗುತ್ತಿರುವ ಸೇವೆಗಳ ಬಳಕೆ ಮಾಡಿಕೊಳ್ಳಲು ನೀಡುತ್ತಿರುವ ಮಾರ್ಗದರ್ಶನ, ಗ್ರಾಮ ಪಂಚಾಯತಿ ಅರಿವು ಕೇಂದ್ರಗಳ ಡಿಜಿಟಲೀಕರಣ, ‘ಓದುವ ಬೆಳಕು’ ಕಾರ್ಯಕ್ರಮದ ಮೂಲಕ ಮಕ್ಕಳನ್ನು ಅರಿವು ಕೇಂದ್ರಗಳತ್ತ ಆಕರ್ಷಿಸಲು ಕೈಗೊಂಡಿರುವ ಕ್ರಮಗಳು ಸಹ ಗ್ರಾಮ ಪಂಚಾಯತಿಗಳನ್ನು ಪುರಸ್ಕಾರಕ್ಕೆ ಪರಿಗಣಿಸುತ್ತಾರೆ. ಆದರೆ, ಬೀದರ್ ಜಿಲ್ಲೆಯಲ್ಲಿ ಈ ಸಲ ಎಂಟು ಗ್ರಾಮ ಪಂಚಾಯತ್ ಗಳಿಗೆ ಗಾಂಧಿ ಗ್ರಾಮ ಪುರಸ್ಕಾರ್ ಸಿಕ್ಕಿವೆ. ಈ ಜಂಬಗಿ ಗ್ರಾಮ ಪಂಚಾಯತ್ ಮಾತ್ರ ಗಾಂಧಿ ಗ್ರಾಮ ಪುರಷ್ಕಾರಕ್ಕೆ ಯೋಗ್ಯವಲ್ಲ ಎಂದು ಗ್ರಾಮದ ಜನರು ಹೇಳುತ್ತಿದ್ದಾರೆ. ಈ ವಿಚಾರದ ಬಗ್ಗೆ ಸಿಇಓ ಅವರನ್ನ ಕೇಳಿದರೆ ಕಲವು ಮಾನದಂಡದ ಮೂಲಕ ಆಯ್ಕೆ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ.
ಇನ್ನು ಸರಕಾರ ಗ್ರಾಮ ಪಂಚಾಯತಿಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು ಹಾಗೂ ಸದಸ್ಯರುಗಳು ಉತ್ತಮವಾಗಿ ಕೆಲಸ ಮಾಡಲಿ ಎನ್ನುವ ಉದ್ದೇಶದಿಂದ ಸರಕಾರ ಪ್ರತಿ ವರ್ಷ ಗಾಂಧಿಜಯಂತಿಯಂದು ಗ್ರಾಮ ಪಂಚಾಯತಿಗಳಿಗೆ ಗಾಂಧಿ ಪುರಸ್ಕಾರ ನೀಡಿ ಗೌರಸುವ ಕೆಲಸ ಮಾಡುತ್ತಿದೆ. ಆದರೆ, ಇಲ್ಲಿ ಯಾವ ಪಂಚಾಯತಿಗೆ ಆ ಪುರಸ್ಕಾರ ಸಿಗಬೇಕಾಗಿತ್ತೋ, ಅಂತಹ ಪಂಚಾಯತಿಗೆ ಗಾಂಧಿ ಪುರಸ್ಕಾರ ಸಿಗದಿರುವುದು ನೋವಿನ ಸಂಗತಿಯಾಗಿದೆ. ಪಂಚಾಯತಿಗಳಿಗೂ ಕೂಡ ಈಗ ರಾಜಕೀಯ ನಾಯಕರು ಎಂಟ್ರಿಕೊಟ್ಟಿದ್ದು, ತಮಗೆ ಎಲ್ಲಿ ಹೆಚ್ಚು ಓಟ್ಗಳು ಬಿಳ್ಳುತ್ತವೆಯೋ ಅಂತಹ ಗ್ರಾಮ ಪಪಂಚಾಯತಿಗೆ ಪ್ರಶಸ್ತಿ ಕೊಡಿಸಿ ,ಆ ಪ್ರಶಸ್ತಿಯ ಮೌಲ್ಯವನ್ನು ಹಾಳು ಮಾಡುತ್ತಿರುವುದು ನೋವಿನ ಸಂಗತಿಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ