ಸಿಎಂ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದ ಎನ್​ಡಿಎ ಶಾಸಕರು ಈಗ ಸನ್ಮಾನ ಮಾಡಲು ಸಜ್ಜು!

| Updated By: ಗಂಗಾಧರ​ ಬ. ಸಾಬೋಜಿ

Updated on: Dec 01, 2024 | 3:46 PM

ತುಮಕೂರಿನಲ್ಲಿ ನಡೆಯಬೇಕಿದ್ದ ಬಿಜೆಪಿ ಪ್ರತಿಭಟನೆಯನ್ನು ವಿರೋಧ ಪಕ್ಷದ ಶಾಸಕರಿಗೂ ಅನುದಾನ ನೀಡುವ ಭರವಸೆಯ ಹಿನ್ನೆಲೆಯಲ್ಲಿ ಹಿಂಪಡೆಯಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ. ಪರಮೇಶ್ವರ್ ಭರವಸೆ ನೀಡಿದ್ದಾರೆ. ಬಿಜೆಪಿ ಶಾಸಕ ಸುರೇಶ್ ಗೌಡ ಅವರು ಕಪ್ಪುಪಟ್ಟಿ ಪ್ರದರ್ಶನವನ್ನು ರದ್ದುಗೊಳಿಸುವುದಾಗಿ ತಿಳಿಸಿದ್ದಾರೆ.

ಸಿಎಂ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದ ಎನ್​ಡಿಎ ಶಾಸಕರು ಈಗ ಸನ್ಮಾನ ಮಾಡಲು ಸಜ್ಜು!
ಸಿಎಂ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದ ಎನ್​ಡಿಎ ಶಾಸಕರು ಈಗ ಸನ್ಮಾನ ಮಾಡಲು ಸಜ್ಜು!
Follow us on

ತುಮಕೂರು, ಡಿಸೆಂಬರ್​ 01: ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್​​​ ಶಾಸಕರಿಗೂ ಅನುದಾನ ನೀಡುವುದಾಗಿ ಡಾ.ಪರಮೇಶ್ವರ್ ಭರವಸೆ ಹಿನ್ನೆಲೆ ನಗರದಲ್ಲಿ ನಾಳೆ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಬಿಜೆಪಿಯಿಂದ ನಡೆಯಬೇಕಿದ್ದ ಪ್ರತಿಭಟನೆಯನ್ನು ವಾಪಸ್ ತೆಗೆದುಕೊಳ್ಳಲಾಗಿದೆ. ನಾಳೆ ಕಪ್ಪುಪಟ್ಟಿ ಪ್ರದರ್ಶನ ಹಿಂಪಡೆಯುವುದಾಗಿ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ಗೌಡ ತಿಳಿಸಿದ್ದಾರೆ.

ಪ್ರತಿಭಟನೆ ವಾಪಸ್

ಅನುದಾನ ವಿಚಾರವಾಗಿ ನಗರದ ಐಬಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಪರಮೇಶ್ವರ್ ಭೇಟಿಯಾದ ಶಾಸಕ ಸುರೇಶ್​ ಗೌಡ, ಚರ್ಚೆ ಮಾಡಿದ್ದಾರೆ. ಈ ವೇಳೆ ವಿಪಕ್ಷ ಶಾಸಕರಿಗೂ ಅನುದಾನ ನೀಡುವುದಾಗಿ ಪರಮೇಶ್ವರ್ ಭರವಸೆ ನೀಡಿದ್ದಾರೆ. ಹಾಗಾಗಿ ಪ್ರತಿಭಟನೆ ವಾಪಸ್ ಪಡೆಯಲಾಗಿದೆ.

ಇದನ್ನೂ ಓದಿ: ಅನುದಾನ ಕಿಚ್ಚು: ತುಮಕೂರಿನಲ್ಲಿ ಸಿಎಂ ವಿರುದ್ಧ ಪ್ರತಿಭಟನೆಗೆ ಬಿಜೆಪಿ-ಜೆಡಿಎಸ್ ಶಾಸಕರು ನಿರ್ಧಾರ

ಇನ್ನು ನಾಳೆ ಸಿಎಂ ಸಿದ್ದರಾಮಯ್ಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಹಾಗಾಗಿ ಈ ಕಾರ್ಯಕ್ರಮದಲ್ಲಿ ಕಪ್ಪುಪಟ್ಟಿ ಪದರ್ಶನಕ್ಕೆ ಬಿಜೆಪಿ ಮುಂದಾಗಿತ್ತು. ಕಪ್ಪುಪಟ್ಟಿ ಪ್ರದರ್ಶನ ಮಾಡಿ ಘೋಷಣೆ ಕೂಗಿದವರಿಗೆ 1 ಲಕ್ಷ ರೂ. ಹಣ ನೀಡೋದಾಗಿ ಸುರೇಶ್ ಗೌಡ ಹೇಳಿದ್ದರು. ಈ ಬಗ್ಗೆ ಮಾತನಾಡಿದ ಅವರು, ಆಡಿಯೋದಲ್ಲಿ ಮಾತನಾಡಿರುವ ಧ್ವನಿ ನನ್ನದೇ ಎಂದು ಒಪ್ಪಿಕೊಂಡಿದ್ದಾರೆ.

ಅನುದಾನ ಕೊಡಿಸುವ ಆಶ್ವಾಸನೆ ಹಿನ್ನೆಲೆ ಪ್ರತಿಭಟನೆ ವಾಪಸ್ ಪಡೆದಿದ್ದೇವೆ. ನಾಳೆ ಸಮಾವೇಶದಲ್ಲಿ ಸಿಎಂ, ಪರಮೇಶ್ವರ್, ರಾಜಣ್ಣಗೆ ಸನ್ಮಾನ ಮಾಡುತ್ತೇವೆ. ಇದು ಸರ್ಕಾರಿ ಕಾರ್ಯಕ್ರಮ ಹೀಗಾಗಿ ನಾಳೆ ಭಾಗಿಯಾಗುತ್ತೇವೆ ಎಂದು ಹೇಳಿದ್ದಾರೆ.

ವಿಪಕ್ಷ ಶಾಸಕರಿಗೂ ಅನುದಾನ ನೀಡುತ್ತೇವೆ: ಡಾ.ಜಿ.ಪರಮೇಶ್ವರ್

ಅನುದಾನ ವಿಚಾರವಾಗಿ ನಾಳೆ ಬಿಜೆಪಿ ಶಾಸಕರ ಪ್ರತಿಭಟನೆ ವಿಚಾರವಾಗಿ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ನಾಳಿನ ಸಿಎಂ ಕಾರ್ಯಕ್ರಮ ವೇಳೆ ಪ್ರತಿಭಟನೆ ಮಾಡುತ್ತೇವೆ ಎಂದಿದ್ದರು. ಅನುದಾನ ನೀಡುವುದಾಗಿ ನಾನು ಭರವಸೆ ನೀಡಿದ್ದೇನೆ. ಹೀಗಾಗಿ ಬಿಜೆಪಿ ಶಾಶಕರು ಪ್ರತಿಭಟನೆ ಹಿಂಪಡೆಯುವ ವಿಶ್ವಾಸವಿದೆ ಎಂದಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​​ನಲ್ಲಿ ಮತ್ತೆ ಭುಗಿಲೆದ್ದ ಅನುದಾನ ವಾರ್: ‘ಕೈ’ ಶಾಸಕನ ವಿರುದ್ಧ ಪಕ್ಷದ ಮುಖಂಡರಿಂದಲೇ ವಾಗ್ದಾಳಿ

ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಬದ್ಧವಾಗಿದೆ. ಪ್ರತಿಪಕ್ಷದ ಶಾಸಕರಿಗೂ ಅನುದಾನ ಕೊಡಬೇಕೆಂದು ಸಿಎಂ ಸಿದ್ದರಾಮಯ್ಯ ಜತೆ ಚರ್ಚೆ ಮಾಡಿದ್ದೇವೆ. ವಿಪಕ್ಷ ಶಾಸಕರಿಗೂ ಅನುದಾನ ನೀಡುತ್ತೇವೆ. ಒಂದು ವೇಳೆ ಪ್ರತಿಭಟನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಸಿಎಂ ಸಿದ್ದರಾಮಯ್ಯ ಬರುವ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.