ಚುನಾವಣೆಗಾಗಿ ಬಿಜೆಪಿ ಚೀಲದಲ್ಲಿ ಹಣ ತುಂಬಿಸಿಕೊಂಡು ಹಂಚುತ್ತಿದೆ; ಡಿಕೆ ಶಿವಕುಮಾರ್ ಗಂಭೀರ ಆರೋಪ

| Updated By: ಸುಷ್ಮಾ ಚಕ್ರೆ

Updated on: Oct 21, 2021 | 9:01 PM

Hanagal By-Election 2021: ಬಿಜೆಪಿಯವರು ಗೋಣಿ ಚೀಲದಲ್ಲಿ ಹಣ ತುಂಬಿಸಿಕೊಂಡು ಒಂದು ವೋಟ್​ಗೆ 2ರಿಂದ 3 ಸಾವಿರ ರೂ. ಕೊಡ್ತಿದ್ದಾರಂತೆ‌. ನೀವು ಬಿಜೆಪಿಯಿಂದ ಹಣ ಪಡೆದು ನಮಗೆ ವೋಟ್​ ಹಾಕಿ ಎಂದು ಡಿಕೆ ಶಿವಕುಮಾರ್ ಮತದಾರರಿಗೆ ಹೇಳಿದ್ದಾರೆ.

ಚುನಾವಣೆಗಾಗಿ ಬಿಜೆಪಿ ಚೀಲದಲ್ಲಿ ಹಣ ತುಂಬಿಸಿಕೊಂಡು ಹಂಚುತ್ತಿದೆ; ಡಿಕೆ ಶಿವಕುಮಾರ್ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
Follow us on

ಹಾವೇರಿ: ಬಿಜೆಪಿಯವರು ಗೋಣಿ ಚೀಲದಲ್ಲಿ ಹಣ ತುಂಬಿಸಿಕೊಂಡು ಹೋಗಿ ಕೊಡುತ್ತಿದ್ದಾರೆ. ಹಾನಗಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಗೋಣಿ ಚೀಲ ತೆಗೆದುಕೊಂಡು ಹೋಗಿದ್ದರಲ್ಲ, ಅದರಲ್ಲಿ ಹಣ ತುಂಬಿಕೊಂಡು ಕೆಲ‌‌ ಸಚಿವರು ಬಂದಿದ್ದಾರೆ. ಬಿಜೆಪಿಯವರು ಒಂದು ವೋಟ್​ಗೆ 2ರಿಂದ 3 ಸಾವಿರ ರೂ. ಕೊಡ್ತಿದ್ದಾರಂತೆ‌ ಎಂದು ಹಾವೇರಿ ಜಿಲ್ಲೆಯ ಹುಲ್ಲತ್ತಿ ಗ್ರಾಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

ಬಿಜೆಪಿಯವರು ಹಣ ಹಂಚಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲು ಮುಂದಾಗಿದ್ದಾರೆ. ಕೆಲ ಸಚಿವರು ಗೋಣಿ ಚೀಲದಲ್ಲಿ ಹಣ ತುಂಬಿಕೊಂಡು ಬಂದಿದ್ದಾರೆ. ಹೆದ್ದಾರಿಯಲ್ಲಿ ನಿಂತು ಹಣ ಹಂಚಲಾಗುತ್ತಿದೆ. 2 ಸಾವಿರ ರೂ ನೋಟನ್ನು ಇಲ್ಲೆಲ್ಲೋ ನಿನ್ನೆ ಹಂಚಿದರಂತೆ. ಈ ಮೂಲಕ ಬಿಜೆಪಿಯವರು ಹಣದ ಹೊಳೆ ಹರಿಸುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮಗೇನಾದರೂ ಬಿಜೆಪಿಯವರು ಹಣ ಕೊಟ್ಟರೆ ಬಿಡಬೇಡಿ, ತೆಗೆದುಕೊಳ್ಳಿ. ಅವರಿಂದ ಹಣ ಪಡೆದು ನಮಗೆ ವೋಟ್​ ಹಾಕಿ. ಅವರೆಲ್ಲಾ ಶಾಸಕರನ್ನ ದುಡ್ಡು ಕೊಟ್ಟು ಖರೀದಿಸಿದವರು. ಅವಱರೋ ಮಂಚದ ರಮೇಶ್ ಜಾರಕಿಹೊಳಿ ಮನೆ ಮಾರಿ ಸರ್ಕಾರ ತಂದಿದ್ದೇನೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಕಪ್ಪು ಹಣ ತರುತ್ತೇನೆ ಎಂದು ಹೇಳಿದರು. ಎಲ್ಲರ ಖಾತೆಗೆ 15 ಲಕ್ಷ ಹಾಕ್ತೀನಿ ಅಂದರು. ಹಣ ಬಂತಾ? ಎಂದು ಡಿಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ.

ನರೇಂದ್ರ ಮೋದಿ ಯುವಕರಿಗೆ 2 ಕೋಟಿ ಉದ್ಯೋಗ ಕೊಡ್ತೀನಿ ಅಂದರು. ಆದರೆ, ಈಗ ಜನ ಕೆಲಸ ಕಳೆದುಕೊಂಡು ಊರಿಗೆ ವಾಪಸ್ ಬಂದಿದ್ದಾರೆ. ಯಾವ ಮುಖ ಇಟ್ಕೊಂಡು ಮತ ಕೇಳುತ್ತಿದ್ದಾರೆ. ಎಲ್ಲ ಗೋವಿಂದಾ.. ಗೋವಿಂದಾ ಅನ್ನೋ ಹಾಗಾಗಿದೆ ಎಂದು ಪ್ರಚಾರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಚೀಲದಲ್ಲಿ ಹಣ ತಂದು ಕೊಡ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಹಣ, ಹೆಂಡ ಹಂಚಿ ಅಧಿಕಾರ ಮಾಡಿದವರು ನೀವು. ಎರಡೂ ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ. ಕಾಂಗ್ರೆಸ್ ನಾಯಕರು ಪ್ರತಿದಿನ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದೀರಿ. ಚೀಲದಲ್ಲಿ ಹಣ ತಂದು ಬಿಜೆಪಿ ಕೊಡ್ತಿದೆ ಎಂದು ಹೇಳುತ್ತಿದ್ದೀರಿ. ಹಣ, ಹೆಂಡ ಹಂಚಿ ಅಧಿಕಾರ ಮಾಡಿದವರು ನೀವು. ಆಮೇಲೆ ನಿಮ್ಮ ಅಪಪ್ರಚಾರಗಳಿಗೆ ತಕ್ಕ ಉತ್ತರ ಕೊಡುತ್ತೇವೆ ಎಂದಿದ್ದಾರೆ.

ಬಿಜೆಪಿ ಹಣ ಹಂಚುತ್ತಿದೆ ಎಂದು ಕಾಂಗ್ರೆಸ್​ ಸುಳ್ಳು ಆರೋಪ ಮಾಡುತ್ತಿದೆ. ಹಗರಣಗಳನ್ನು ಮಾಡಿದ್ದು ಕಾಂಗ್ರೆಸ್‌ ಪಕ್ಷದ ನಾಯಕರು ಎಂದು ಕಾಂಗ್ರೆಸ್​ನ ಆರೋಪಕ್ಕೆ ವಿಜಯಪುರ ಜಿಲ್ಲೆ ಸಿಂದಗಿಯಲ್ಲಿ ಸಚಿವ ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿಂದ ಲೂಟಿ ಮಾಡಿದೆ. ಜನರಿಗೆ ಸುರಕ್ಷತೆ ಕೊಟ್ಟಿದ್ದು ನಮ್ಮ ಬಿಜೆಪಿ ಸರ್ಕಾರ. ನಾವು ಜಾತಿ ಭೇದ ಮಾಡದೆ 100 ಕೋಟಿ ಲಸಿಕೆ ನೀಡಿದ್ದೇವೆ. ಕಾಂಗ್ರೆಸ್ ಆಗಿದ್ರೆ ಲಸಿಕೆಯಲ್ಲೂ ಹಗರಣ ಮಾಡುತ್ತಿತ್ತು. ಕಾಂಗ್ರೆಸ್ ಪಕ್ಷದವರು ಸೋತು ಸುಣ್ಣವಾಗಿದ್ದಾರೆ. 2023ರಲ್ಲಿ ಕಾಂಗ್ರೆಸ್ಸನ್ನು​​ ಬೇರು ಸಮೇತ ಕಿತ್ತಾಕಬೇಕು ಎಂದು ಸಿಂದಗಿಯಲ್ಲಿ ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

ಇದನ್ನೂ ಓದಿ: ಅಲ್ಪಸಂಖ್ಯಾತರಿಗೆ ನನ್ನಿಂದ ಅನ್ಯಾಯವಾದ ಉದಾಹರಣೆ ನೀಡಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ; ಯಡಿಯೂರಪ್ಪ ಸವಾಲು

ಉಪಚುನಾವಣೆ ಪ್ರಚಾರ; ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ರಾಜಕೀಯ ನಾಯಕರ ಹೋರಾಟ