ಬೆಂಗಳೂರು, ಮೇ 23: ರಾಜ್ಯದಲ್ಲಿ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರ ಸೇರಿದಂತೆ ಒಟ್ಟು 6 ಕ್ಷೇತ್ರಗಳಿಗೆ ಜೂ.3ಕ್ಕೆ ಚುನಾವಣೆ ನಿಗದಿಯಾಗಿದೆ. ಪರಿಷತ್ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಟಿಕೆಟ್ ಕೈತಪ್ಪಿದಕ್ಕೆ ಬಿಜೆಪಿ (BJP) ಅಭ್ಯರ್ಥಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿರುವ ಹಿನ್ನೆಲೆ ಮಾಜಿ ಶಾಸಕ ರಘುಪತಿ ಭಟ್ಗೆ (K. Raghupati Bhat) ಬಿಜೆಪಿಯಿಂದ ನೋಟಿಸ್ ಜಾರಿ ಮಾಡಲಾಗಿದೆ. 2 ದಿನದೊಳಗೆ ಸ್ಪಷ್ಟೀಕರಣ ನೀಡುವಂತೆ ರಾಜ್ಯ ಬಿಜೆಪಿ ಶಿಸ್ತು ಸಮಿತಿಯಿಂದ ರಘುಪತಿ ಭಟ್ಗೆ ನೋಟಿಸ್ ನೀಡಲಾಗಿದೆ.
ಜೂ. 3 ಸೋಮವಾರದಂದು ನಡೆಯುವ ವಿಧಾನಪರಿಷತ್ ಚುನಾವಣೆಗೆ ನೈರುತ್ಯ ಪದವೀಧರರ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುತ್ತೀರಿ. ಇದು ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡಿದಂತಾಗಿದೆ. ಆದುದರಿಂದ ಈ ಪತ್ರ ತಲಪಿದ ಎರಡು ದಿನದ ಒಳಗಾಗಿ ಬಿಜಿಪಿ ಶಿಸ್ತು ಸಮಿತಿಯ ಮುಂದೆ ಸ್ಪಷ್ಠೀಕರಣ ನೀಡಬೇಕೆಂದು ನೋಟಿಸ್ ನೀಡಲಾಗಿದೆ.
ಇದನ್ನೂ ಓದಿ: ಪರಿಷತ್ ಚುನಾವಣೆಯಲ್ಲೂ ಬಿಜೆಪಿಯಲ್ಲಿ ಬಂಡಾಯ: ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್
ರಘುಪತಿ ಭಟ್ ನೈರುತ್ಯ ಪದವೀಧರ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಬಿಜೆಪಿ ಈ ಕ್ಷೇತ್ರದಿಂದ ಶಿವಮೊಗ್ಗದ ಡಾ.ಧನಂಜಯ ಸರ್ಜಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಅಲ್ಲದೆ, ಶಿಕ್ಷಕರ ಕ್ಷೇತ್ರದ ಟಿಕೆಟ್ ಅನ್ನು ಜೆಡಿಎಸ್ ಪಕ್ಷದ ಚಿಕ್ಕಮಗಳೂರು ಅಭ್ಯರ್ಥಿಗೆ ನೀಡಿದೆ. ಇದು ರಘುಪತಿ ಭಟ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಕರಾವಳಿ ಬಿಜೆಪಿಯಲ್ಲಿ ಬಂಡಾಯ ಸ್ಫೋಟ, ತೊಡೆತಟ್ಟಿದ ಉಡುಪಿ, ಮಂಗಳೂರು ನಾಯಕರು
ಈ ಕುರಿತಾಗಿ ಅವರು ಫೇಸ್ ಬುಕ್ನಲ್ಲಿ ಬರೆದುಕೊಂಡಿದ್ದರು. ಶಿಕ್ಷಕರ ಕ್ಷೇತ್ರದ ಟಿಕೆಟ್ ಜೆಡಿಎಸ್ ಪಕ್ಷದ ಚಿಕ್ಕಮಗಳೂರು ಅಭ್ಯರ್ಥಿಗೆ ನೀಡಿ ಪದವೀಧರ ಕ್ಷೇತ್ರದ ಟಿಕೆಟ್ ಶಿವಮೊಗ್ಗದ ಬಿಜೆಪಿ ಅಭ್ಯರ್ಥಿಗೆ ನೀಡಲಾಗಿದೆ. ಇದು ನಾಲ್ಕು ದಶಕಗಳಿಂದ ಬಿಜೆಪಿ ಸಂಪ್ರದಾಯ ಮುರಿದು ಕರಾವಳಿ ಭಾಗಕ್ಕೆ ನೀಡುತ್ತಿದ್ದ ಶಿಕ್ಷಕರ ಕ್ಷೇತ್ರದ ಟಿಕೆಟ್ ನೀಡದೆ. ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು ಭಾಗದ ವಿದ್ಯಾವಂತ, ಪ್ರಜ್ಞಾವಂತ ಮತದಾರರಿಗೆ ಅನ್ಯಾಯ ಮಾಡಿದ ಹಾಗಾಗಿದೆ ಎಂದು ಆಕ್ರೋಶ ಹೊರಹಾಕಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:51 pm, Thu, 23 May 24