ಬೆಂಗಳೂರು ಅ.22: ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರಿಗೆ (HD Devegowda) ಇನ್ನೊಮ್ಮೆ ಕೈಮುಗಿದು ಪ್ರಾರ್ಥನೆ ಮಾಡುತ್ತೇನೆ ಬಿಜೆಪಿ (BJP) ಜೊತೆಗಿನ ಮೈತ್ರಿ ವಿಚಾರವನ್ನು ಮರುಪರಿಶೀಲನೆ ಮಾಡಿ. ಏಕೆಂದರೆ ಜಿಲ್ಲಾಧ್ಯಕ್ಷರು, ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ. ಯಾರನ್ನೂ ನಾನು ಬಹಿರಂಗವಾಗಿ ಕರೆಯುತ್ತಿಲ್ಲ. ಲೋಕಸಭೆ ಚುನಾವಣೆಗೆ ಸಮಯವಿದೆ, ಮಾತಾಡೋಣ ಎಂದಿದ್ದೇನೆ. ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿಶ್ ಶಾ ಅವರಿಗೆ ಗೌರವ ಕೋಡೋಣ. ವ್ಯಕ್ತಿಗತವಾಗಿ ಯಾವುದೇ ಭಿನ್ನಮತವಿಲ್ಲ, ಸೈದ್ಧಾಂತಿಕವಾಗಿ ವಿರೋಧವಿದೆ ಎಂದು ಮಾಜಿ ಎಂಎಲ್ಸಿ ಸಿ.ಎಂ.ಇಬ್ರಾಹಿಂ (CM Ibrahim) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಕೇರಳ, ತಮಿಳುನಾಡು, ರಾಜಸ್ಥಾನ ಬಳಿಕ ಕಾರ್ಯಕ್ರಮದ ನಿಮಿತ್ತ ಉದಯಪುರಕ್ಕೆ ಹೋಗುತ್ತಿದ್ದೇನೆ. ಅಕ್ಟೋಬರ್ 26ರಂದು ಮುಂಬೈಗೆ ಹೋಗುತ್ತಿದ್ದೇನೆ. ಬೇರೆ ಪಕ್ಷದ ನಾಯಕರನ್ನ ಭೇಟಿ ಮಾಡುತ್ತೇನೆ. ಒಂದೇ ಕಡೆ ಕೂರಲ್ಲ. ನಾನು ತ್ರಿಲೋಕ ಸಂಚಾರಿ ಎಂದರು.
ನೀವು ಟೆಕ್ನಿಕಲಿ, ಮೆಂಟಲಿ ಜೆಡಿಎಸ್ನಲ್ಲಿ ಇದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನೂರಕ್ಕೆ ನೂರರಷ್ಟು ನಾನು ಟೆಕ್ನಿಕಲಿ, ಮೆಂಟಲಿ ಜೆಡಿಎಸ್ನಲ್ಲಿ ಇದ್ದೀನೆ. ನಾನೇ ಅದರ ಅಧ್ಯಕ್ಷ ಅಂತ ಹೇಳಿದ್ದೀನಿ. ವಿಸರ್ಜನೆ ಮಾಡೋಕೆ ಬರಲ್ಲ. ಹೆಚ್ ಡಿ ದೇವೇಗೌಡರು ತಪ್ಪು ಮಾಡಿದ್ದಾರೆ ಎಂದು ನೋವು ಆಗಿಲ್ಲ. ಇದನ್ನ ಸರಿಪಡಿಸಿಕೊಂಡು ಹೋಗೋಣ. ನಮ್ಮ ಸಂಸ್ಕೃತಿಗೆ ಅನುಗುಣವಾಗಿ ಹೋಗೋಣ ಎಂದು ಹೇಳಿದರು.
ರಾಜ್ಯಾಧ್ಯಕ್ಷ ಸ್ಥಾನದಿಂದ ವಿಸರ್ಜನೆ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು ವಿಸರ್ಜನೆ ಮಾಡೋಕೆ ಬರಲ್ಲ ಆಗೋದೆ ಇಲ್ಲ. ಇದು ಕೋಳಿ ಮೊಟ್ಟೆನಾ ಒಡೆದು ಆಮ್ಲೆಟ್ ಮಾಡಲು. ಒಂದು ಚುನಾವಣೆ ಮೂಲಕ ಆಯ್ಕೆ ಆಗಿರುವ ಬಾಡಿ. ಚುನಾವಣೆ ಆಯೋಗದಲ್ಲಿ ನೋಂದಣಿ ಮಾಡಿರುವ ಪಾರ್ಟಿ. ರೋಲ್ಸ್ ಪ್ರಕಾರ ಪಾರ್ಟಿ ನಡೆಸಬೇಕು. ನನ್ನ ಇಚ್ಛೆ ಪ್ರಕಾರ ಪಾರ್ಟಿ ನಡೆಸಲು ಆಗಲ್ಲ. ಕೋರ್ ಕಮಿಟಿ ಮಾಡಿದ್ದು ನಾನು, ಪದಾಧಿಕಾರಿಗಳು ಮಾಡಿದ್ದು ನಾನು. ಕೋರ್ ಕಮಿಟಿ ಹೆಚ್ಡಿ ದೇವೇಗೌಡ ಮಾಡಿದ್ದು ಅಲ್ಲ. ರಾಜ್ಯದಲ್ಲಿ ಜೆಡಿಎಸ್ ಅಧ್ಯಕ್ಷರಿಗೆ ಅಧಿಕಾರ ಇರುತ್ತೆ. ರಾಜ್ಯಾಧ್ಯಕ್ಷರು ಸಂವಿಧಾನ ವಿರೋಧವಾಗಿ ಹೋದರೇ, 2/3 ಬಹುಮತ ಸದಸ್ಯರಿಂದ ನೋಟಿಸ್ ಕೊಡಬೇಕು. ಮೀಟಿಂಗ್ ಕರೆದು ಆ ಸಭೆಯಲ್ಲಿ ರಾಜ್ಯಾಧ್ಯಕ್ಷರನ್ನು ತೆಗೆಯಬೇಕಾಗುತ್ತೆ ಎಂದು ತಿಳಿಸಿದರು.
ಜೆಡಿಎಸ್ ಪಕ್ಷದ ವರಿಷ್ಠರ ವಿರುದ್ಧ ನ್ಯಾಯಾಲಯದ ಮೊರೆ ಹೋಗುತ್ತೀರಾ ಪ್ರಶ್ನೆಗೆ ಉತ್ತರಿಸಿದ ಅವರು ಅಕ್ಟೋಬರ್ 26ರ ಬಳಿಕ ನೋಡೋಣ. ಅಲ್ಲಿಯವರೆಗು ವರಿಷ್ಠರು ಏನಾದರೂ ತೀರ್ಮಾನ ಮಾಡುತ್ತಾರಾ ನೋಡೋಣ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮೇಲೆ ನನಗೆ ವಿಶ್ವಾಸವಿದೆ. ಹೆಚ್ಡಿ ಕುಮಾರಸ್ವಾಮಿ ತೀರ್ಮಾನ ಮಾಡಬೇಕು, ಅವರ ಮೇಲೆ ನನಗೆ ಭರವಸೆ ಇಲ್ಲ. ವಿಜಯದಶಮಿ ಮುಗಿಯಲಿ ನೋಡೋಣ ಎಂದು ಹೇಳಿದರು.
ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಮತ್ತು ನಟ ನಿಖಿಲ ಕುಮಾರಸ್ವಾಮಿ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಭೇಟಿಯಾಗಿ ಮೈತ್ರಿ ಮಾಡಿಕೊಂಡಿದ್ದರು. ಈ ಮೈತ್ರಿ ವಿಚಾರವನ್ನು ಆಗ ರಾಜ್ಯಾಧ್ಯಕ್ಷರಾಗಿದ್ದ ಸಿಎಂ ಇಬ್ರಾಹಿಂ ಅವರನ್ನು ಕೇಳದೆ ಮಾಡಿಕೊಳ್ಳಲಾಗಿದೆ ಎಂಬ ಮಾತುಗಳು ಕೇಳಿಬಂದವು.
ಅಲ್ಲದೆ ಈ ಮೈತ್ರಿಯಿಂದ ಸಿಎಂ ಇಬ್ರಾಹಿಂ ಅಸಮಾಧಾನಗೊಂಡು, ಜೆಡಿಎಸ್ ಕಾರ್ಯಕರ್ತರ ಮತ್ತು ತಮ್ಮ ಆಪ್ತ ಜೊತೆ ಸಭೆ ನಡೆಸಿದ್ದರು. ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಅವರು ನಮ್ಮದೆ ಓರಿಜಿನಲ್ ಪಕ್ಷ, ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿಯನ್ನ ಪಕ್ಷದಿಂದ ಉಚ್ಚಾಟನೆ ಮಾಡುವ ಮಾತುಗಳನ್ನು ಆಡಿದ್ದರು.
ಈ ವಿಚಾರ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಜೆಡಿಎಸ್ನ ಹಲವು ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು ಸಿಎಂ ಇಬ್ರಾಹಿಂ ಅವರನ್ನು ಅಧಕ್ಷ ಸ್ಥಾನದಿಂದ ವಿಸರ್ಜಿಸಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:26 pm, Sun, 22 October 23