ಬೆಂಗಳೂರು: ಕೊರೊನಾ ವೇಳೆ ಏನೇನು ಕೆಲಸ ಮಾಡಿದ್ದೀರೆಂದು ಪ್ರಶ್ನೆ ಮಾಡಲಾಗಿದೆ, ಌಂಬುಲೆನ್ಸ್, ಆಸ್ಪತ್ರೆ ಸೇರಿದಂತೆ ವಿವಿಧ ಕೆಲಸಗಳ ಮಾಹಿತಿ ಪಡೆದಿದ್ದೇನೆ. ಪಕ್ಷ ಸಂಘಟನೆ ಬಗ್ಗೆ ಏನೇನು ಮಾಡಬೇಕೆಂದು ನಿರ್ದೇಶನ ನೀಡಿದ್ದೇನೆ ಎಂದು ಬಿಜೆಪಿ ಕಚೇರಿಯಲ್ಲಿ ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆ ನೀಡಿದ್ದಾರೆ. ಶಾಸಕರಿಂದ ಅಭಿಪ್ರಾಯ ಸಂಗ್ರಹ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ.
ಇಂದು (ಜೂನ್ 17) ಬಿಜೆಪಿ ಶಾಸಕರು, ಕಾರ್ಯಕರ್ತರ ಜೊತೆ ಚರ್ಚೆ ನಡೆಸಲಾಗಿದೆ. ಭೇಟಿಗೆ ಕಾಲಾವಕಾಶ ಕೋರಿದ್ದವರ ಜೊತೆ ಮಾತ್ರ ಚರ್ಚೆ ಮಾಡಲಾಗಿದೆ ಎಂದು ಅರುಣ್ ಸಿಂಗ್ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಯೋಗದಿನದ ವೇಳೆ ಕಾರ್ಯಕ್ರಮ ನಡೆಸಲಿದ್ದೇವೆ. ಪ್ರಧಾನಿ ಗರೀಬ್ ಕಲ್ಯಾಣ್ ಯೋಜನೆ ಬಗ್ಗೆ ಪ್ರಶ್ನಿಸಿದ್ದೇನೆ. ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಕಾರ್ಯಗಳನ್ನು ಜನರಿಗೆ ತಲುಪಿಸಲು ಸಲಹೆ ನಿಡಲಾಗಿದೆ. ಕ್ಷೇತ್ರಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಬಗ್ಗೆ ಕೇಳಿದ್ದೇನೆ. ಜೆಡಿಎಸ್ ಲೆಕ್ಕಕ್ಕೇ ಇಲ್ಲ ಎಂದು ಶಾಸಕರು ಹೇಳಿದ್ದಾರೆ. ಕಾಂಗ್ರೆಸ್ ಆಂತರಿಕ ಜಗಳದಲ್ಲಿ ಮುಳುಗಿದೆ ಎಂದಿದ್ದಾರೆ. ಶಾಸಕರು ತಳಮಟ್ಟದಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದು ಅರುಣ್ ಸಿಂಗ್ ಮಾಹಿತಿ ನೀಡಿದ್ದಾರೆ.
ಯಾವ ಶಾಸಕರ ಜೊತೆಯೂ ನಾಯಕತ್ವದ ಬಗ್ಗೆ ಚರ್ಚಿಸಿಲ್ಲ. ಪಕ್ಷದಲ್ಲಿ ಇಬ್ಬರು ಮಾತ್ರ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಅವರಿಂದ ಪಕ್ಷದ ಘನತೆಗೆ ಧಕ್ಕೆ ಉಂಟಾಗುತ್ತಿದೆ. ಈ ಬಗ್ಗೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎಲ್ಲ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅವರು ಹೊಸಬರು ಪಕ್ಷದ ಸಿದ್ಧಾಂತ ಗೊತ್ತಿಲ್ಲ ಎಂದಿದ್ದಾರೆ ಎಂದು ಹೇಳಿದ್ದಾರೆ.
ಹೊಸಬರು, ಅವರಿಗೆ ಪಕ್ಷದ ರೀತಿ ರಿವಾಜು ಗೊತ್ತಿಲ್ಲ. ಕಾರ್ಯಕರ್ತರ ಶ್ರಮದಿಂದ ಪಕ್ಷ ಈ ಮಟ್ಟಕ್ಕೆ ಬಂದಿದೆ. ಯಾರೋ ಒಂದಿಬ್ಬರ ಹೇಳಿಕೆಯಿಂದ ಪಕ್ಷಕ್ಕೆ ಧಕ್ಕೆಯಾಗ್ತಿದೆ. ಲಕ್ಷಾಂತರ ಕಾರ್ಯಕರ್ತರ ಮನಸ್ಸಿಗೆ ನೋವಾಗುತ್ತಿದೆ. ಇಂತಹ ಒಂದಿಬ್ಬರ ವಿರುದ್ಧ ಸೂಕ್ತ ಸಮಯದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅರುಣ್ ಸಿಂಗ್ ತಿಳಿಸಿದ್ದಾರೆ.
ಶಾಸಕ, ಸಚಿವರೊಂದಿಗೆ ಚರ್ಚೆ ನಡೆಸಿದ ಬಳಿಕ ರಾಜ್ಯ ಬಿಜೆಪಿ ಕಚೇರಿಯಿಂದ ಕುಮಾರಕೃಪಾ ಅತಿಥಿಗೃಹಕ್ಕೆ ಅರುಣ್ ಸಿಂಗ್ ತೆರಳಿದ್ದಾರೆ.
ಇಂದು ಅರುಣ್ ಸಿಂಗ್ರನ್ನು ಒಟ್ಟು 52 ಶಾಸಕರು ಭೇಟಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಯಡಿಯೂರಪ್ಪ ಪರ 36 ಶಾಸಕರಿಂದ ಅರುಣ್ ಸಿಂಗ್ ಭೇಟಿಯಾಗಿದೆ. ತಟಸ್ಥ ಬಣದ 14 ಶಾಸಕರಿಂದ ಅರುಣ್ ಸಿಂಗ್ ಭೇಟಿ ಆಗಿದೆ. ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರೋಧಿ ಬಣದ ಇಬ್ಬರು ಶಾಸಕರು ಅರುಣ್ ಸಿಂಗ್ ಭೇಟಿಯಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಯಾರೋ ನನ್ನ ಮೊಬೈಲ್ ಟ್ಯಾಪ್ ಮಾಡ್ತಿದ್ದಾರೆ, ಎಲ್ಲೇ ಹೋದರೂ ಕೆಲ ವ್ಯಕ್ತಿಗಳು ಹಿಂದೆ ಬರುತ್ತಾರೆ: ಅರವಿಂದ್ ಬೆಲ್ಲದ್ ಆರೋಪ
Published On - 7:04 pm, Thu, 17 June 21