ಯಾರೋ ನನ್ನ ಮೊಬೈಲ್​ ಟ್ಯಾಪ್ ಮಾಡ್ತಿದ್ದಾರೆ, ಎಲ್ಲೇ ಹೋದರೂ ಕೆಲ ವ್ಯಕ್ತಿಗಳು ಹಿಂದೆ ಬರುತ್ತಾರೆ: ಅರವಿಂದ್ ಬೆಲ್ಲದ್ ಆರೋಪ

ಜೈಲಿನಲ್ಲಿರುವ ವ್ಯಕ್ತಿಗೆ ಮೊಬೈಲ್​ ಸಿಗಲು ಹೇಗೆ ಸಾಧ್ಯವಿದೆ. ಕರೆಮಾಡಿದ್ದ ವ್ಯಕ್ತಿ ನಾನು ಸ್ವಾಮಿ ಎಂದು ಪರಿಚಯಿಸಿಕೊಂಡಿದ್ದ. ಸಿಎಂ ಸ್ಥಾನಕ್ಕೆ ನಿಮ್ಮ ಹೆಸರು ಕೇಳಿಬರುತ್ತಿದೆ ಎಂದು ಹೇಳಿದ್ದ ಎಂದು ಬೆಲ್ಲದ್ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಯಾರೋ ನನ್ನ ಮೊಬೈಲ್​ ಟ್ಯಾಪ್ ಮಾಡ್ತಿದ್ದಾರೆ, ಎಲ್ಲೇ ಹೋದರೂ ಕೆಲ ವ್ಯಕ್ತಿಗಳು ಹಿಂದೆ ಬರುತ್ತಾರೆ: ಅರವಿಂದ್ ಬೆಲ್ಲದ್ ಆರೋಪ
ಶಾಸಕ ಅರವಿಂದ ಬೆಲ್ಲದ್​
Follow us
TV9 Web
| Updated By: ganapathi bhat

Updated on: Jun 17, 2021 | 5:14 PM

ಬೆಂಗಳೂರು: ಹತ್ತು ದಿನಗಳ ಹಿಂದೆ ಯುವರಾಜ ಸ್ವಾಮಿ ಕರೆ ಮಾಡಿದ್ದ. ಕರೆ ಮಾಡಿದ್ದರ ಹಿಂದೆ ದೊಡ್ಡ ಪಿತೂರಿ ಇದೆ ಅನಿಸುತ್ತಿದೆ ಎಂದು ಕುಮಾರಕೃಪಾ ಗೆಸ್ಟ್​ಹೌಸ್​ ಬಳಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್​ ಹೇಳಿಕೆ ನೀಡಿದ್ದಾರೆ. ನನ್ನನ್ನು ಅನಗತ್ಯವಾಗಿ ಜೈಲಿಗೆ ಹಾಕಿದ್ದಾರೆಂದು ಮಾತನಾಡಿದ್ದ. ನನಗೆ ಸಹಾಯ ಮಾಡಿ ಎಂದು ಯುವರಾಜ ಸ್ವಾಮಿ ಕೇಳಿದ್ದ. ನಮ್ಮ ತಂದೆ ಚಂದ್ರಕಾಂತ ಬೆಲ್ಲದ್ 5 ಬಾರಿ ಶಾಸಕರಾಗಿದ್ದರು. ನಮ್ಮ ತಂದೆ, ನಾನು ಕಪ್ಪು ಚುಕ್ಕೆ ಇಲ್ಲದೆ ಕೆಲಸ ಮಾಡಿದ್ದೇವೆ. ನನ್ನ ಫೋನ್​ ಟ್ಯಾಪ್ ಆಗ್ತಿದೆ, ನನ್ನನ್ನು ಫಾಲೋ ಮಾಡ್ತಿದ್ದಾರೆ. ಈ ಬಗ್ಗೆ ವಿಧಾನಸಭೆ ಸ್ಪೀಕರ್​ ಕಾಗೇರಿಗೆ ದೂರು ನೀಡಿದ್ದೇನೆ ಎಂದು ಅರವಿಂದ್ ಬೆಲ್ಲದ್ ತಿಳಿಸಿದ್ದಾರೆ.

ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಬರೆದಿದ್ದ ಪತ್ರ ಪ್ರದರ್ಶನ ಮಾಡಿದ್ದಾರೆ. ಈ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿಗೂ ಮನವಿ ಮಾಡಿದ್ದೇನೆ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದೇನೆ. ಜೈಲಿನಲ್ಲಿರುವ ವ್ಯಕ್ತಿ ಕರೆ ಮಾಡುತ್ತಾನೆ ಅಂದರೆ ಹೇಗೆ ಸಾಧ್ಯ? ಜೈಲಿನಲ್ಲಿರುವ ವ್ಯಕ್ತಿಗೆ ಮೊಬೈಲ್​ ಸಿಗಲು ಹೇಗೆ ಸಾಧ್ಯವಿದೆ. ಕರೆಮಾಡಿದ್ದ ವ್ಯಕ್ತಿ ನಾನು ಸ್ವಾಮಿ ಎಂದು ಪರಿಚಯಿಸಿಕೊಂಡಿದ್ದ. ಸಿಎಂ ಸ್ಥಾನಕ್ಕೆ ನಿಮ್ಮ ಹೆಸರು ಕೇಳಿಬರುತ್ತಿದೆ ಎಂದು ಹೇಳಿದ್ದ ಎಂದು ಬೆಲ್ಲದ್ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಯಾವ ಸ್ವಾಮಿ ಅಂದಾಗ ಯುವರಾಜ ಸ್ವಾಮಿ ಎಂದು ಹೇಳಿದ್ದ. ಆಗ ನನಗೆ ಗೊತ್ತಾಯಿತು, ಈತ ವಂಚಕ ಯುವರಾಜ ಸ್ವಾಮಿ. ಯುವರಾಜ ಸ್ವಾಮಿ ಬಗ್ಗೆ ಮಾಧ್ಯಮಗಳಲ್ಲಿ ವರದಿ ಗಮನಿಸಿದ್ದೆ. ಹಾಗಾಗಿ ಆತನ ಜತೆ ಹೆಚ್ಚು ಮಾತಾಡದೆ ಕರೆ ಸ್ಥಗಿತಗೊಳಿಸಿದ್ದೆ. ಯಾರೋ ನನ್ನ ಮೊಬೈಲ್​ ಟ್ಯಾಪ್ ಮಾಡ್ತಿದ್ದಾರೆ ಅನಿಸುತ್ತಿದೆ. ನಾನು ಎಲ್ಲೇ ಹೋದರೂ ಕೆಲ ವ್ಯಕ್ತಿಗಳು ಹಿಂದೆ ಬರುತ್ತಾರೆ. ಇದೆಲ್ಲವನ್ನೂ ಗಮನಿಸಿದರೆ ನನಗೆ ಅನುಮಾನ ಬರುತ್ತಿದೆ. ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದೇನೆ ಎಂದು ಕುಮಾರಕೃಪಾ ಗೆಸ್ಟ್​ಹೌಸ್​ ಬಳಿ ಅರವಿಂದ ಬೆಲ್ಲದ್​ ಹೇಳಿಕೆ ನೀಡಿದ್ದಾರೆ.

ಅರವಿಂದ ಬೆಲ್ಲದ್ ದೂರವಾಣಿಯನ್ನು ಯಾರೂ ಕದ್ದಾಲಿಸಿಲ್ಲ ನಾನು ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಎಂ.ಪಿ. ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದರೆ ಕ್ರಮಕೈಗೊಳ್ಳಬಹುದು. ಅರವಿಂದ ಬೆಲ್ಲದ್​ ದೂರವಾಣಿಯನ್ನು ಯಾರೂ ಕದ್ದಾಲಿಸಿಲ್ಲ. ಯಡಿಯೂರಪ್ಪನವರ ಸರ್ಕಾರಕ್ಕೆ ಅಂತಹ ಪರಿಸ್ಥಿತಿ ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.

ಸಿಎಂ ಆಗುತ್ತೇನೆಂದು ಸೂಟ್ ಹೊಲಿಸಿಕೊಂಡು ಓಡಾಡ್ತಿದ್ದಾರೆ. ಕೀಳುಮಟ್ಟದ ಪ್ರಚಾರಕ್ಕಾಗಿ ಇಂತಹ ಹೇಳಿಕೆ ಕೊಟ್ಟಿದ್ದಾರೆ. ಹೀಗೆಲ್ಲ ಹೇಳುವವರು ಸಿಎಂ ಆಗುವ ಕನಸು ಕಾಣುತ್ತಿದ್ದಾರೆ ಎಂದು ಅರವಿಂದ ಬೆಲ್ಲದ್​ ಹೇಳಿಕೆಗೆ ರೇಣುಕಾಚಾರ್ಯ ಖಂಡನೆ ವ್ಯಕ್ತಪಡಿಸಿದ್ದಾರೆ.

ಎಲ್ಲಾ ವಿಚಾರವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುತ್ತೇವೆ ಫೋನ್ ಟ್ಯಾಪ್​ ಆಗುತ್ತಿದೆ ಎಂದು ಬೆಲ್ಲದ್ ಹೇಳಿಕೆ ವಿಚಾರವಾಗಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್​ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲಾ ವಿಚಾರವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುತ್ತೇವೆ. ಯಾರ ಮೇಲೆ ಕ್ರಮ, ಯಾರ ಮೇಲೆ ಕ್ರಮ ಆಗಲ್ಲ ಗೊತ್ತಾಗುತ್ತೆ. ಬೆಲ್ಲದ್​ ಹೇಳಿಕೆ ಬಗ್ಗೆ ಪಕ್ಷದ ನಾಯಕರು ಚರ್ಚಿಸಿ ಹೇಳುತ್ತೇವೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್​ ಅವಲೋಕಿಸುತ್ತಾರೆ. ನಾಯಕರ ಮುಂದೆ ಹೇಳಿದ್ದನ್ನು ಬಹಿರಂಗವಾಗಿ ಹೇಳುವಂತಿಲ್ಲ ಎಂದು ರವಿಕುಮಾರ್ ತಿಳಿಸಿದ್ದಾರೆ.

ಬೆಲ್ಲದ್​ ಫೋನ್​ ಟ್ಯಾಪ್ ಮಾಡುವ ಪ್ರಮೇಯವೇ ಬರೋದಿಲ್ಲ. ಎಲ್ಲಿ ಹೋಗುತ್ತಾರೆ, ಏನ್ ಮಾತಾಡ್ತಾರೆಂಬ ಗೋಜಿಗೆ ಹೋಗಲ್ಲ. ಅರವಿಂದ ಬೆಲ್ಲದ್​ರ ಇಂತಹ ಹೇಳಿಕೆಯನ್ನು ನಾವು ಒಪ್ಪುವುದಿಲ್ಲ.ಹೇಳಿಕೆ ಸಂಬಂಧ ಏನಾದರೂ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಬಿಜೆಪಿ ಅಧ್ಯಕ್ಷರ ಸೂಚನೆ ಮೇರೆಗೆ ಯಾರು ಹೇಳಿಕೆ ಕೊಡಬಾರದು. ರೇಣುಕಾಚಾರ್ಯ ಸೇರಿದಂತೆ ಯಾರೊಬ್ರೂ ಹೇಳಿಕೆ ನೀಡಬಾರದು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ: ಬಿ ಎಸ್ ಯಡಿಯೂರಪ್ಪರನ್ನು ಸಿಎಂ ಮಾಡಿದ್ದು ಬಿಜೆಪಿ ಪಾರ್ಲಿಮೆಂಟರಿ ಬೋರ್ಡ್; ಯಾರೂ ಹಾದಿಬೀದಿಯಲ್ಲಿ ಮಾತಾಡಬಾರದು: ಸಿ ಟಿ ರವಿ

ಮುಖ್ಯಮಂತ್ರಿ ಬದಲಾವಣೆ ಇಲ್ಲ, ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟನೆ