AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿ ಎಸ್ ಯಡಿಯೂರಪ್ಪರನ್ನು ಸಿಎಂ ಮಾಡಿದ್ದು ಬಿಜೆಪಿ ಪಾರ್ಲಿಮೆಂಟರಿ ಬೋರ್ಡ್; ಯಾರೂ ಹಾದಿಬೀದಿಯಲ್ಲಿ ಮಾತಾಡಬಾರದು: ಸಿ ಟಿ ರವಿ

ನಾಳೆ ರಾಜ್ಯ ಬಿಜೆಪಿ ಘಟಕದ ಕೋರ್​ ಕಮಿಟಿ ಸಭೆ ಇದೆ. ಸಭೆಯಲ್ಲಿ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ನಡೆಯಲಿದೆ. ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.

ಬಿ ಎಸ್ ಯಡಿಯೂರಪ್ಪರನ್ನು ಸಿಎಂ ಮಾಡಿದ್ದು ಬಿಜೆಪಿ ಪಾರ್ಲಿಮೆಂಟರಿ ಬೋರ್ಡ್; ಯಾರೂ ಹಾದಿಬೀದಿಯಲ್ಲಿ ಮಾತಾಡಬಾರದು: ಸಿ ಟಿ ರವಿ
ಸಿ.ಟಿ.ರವಿ (ಸಂಗ್ರಹ ಚಿತ್ರ)
TV9 Web
| Updated By: ganapathi bhat|

Updated on: Jun 17, 2021 | 4:50 PM

Share

ಬೆಂಗಳೂರು: ನಾಯಕತ್ವ ಬದಲಾವಣೆ ಬಗ್ಗೆ ಸಂಸದೀಯ ಮಂಡಳಿ ನಿರ್ಣಯ ಕೈಗೊಳ್ಳುತ್ತದೆ. ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಬಿಜೆಪಿ ಪಾರ್ಲಿಮೆಂಟರಿ ಬೋರ್ಡ್ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆ ನೀಡಿದ್ದಾರೆ. ಯಾರೂ ಕೂಡ ಹಾದಿಬೀದಿಯಲ್ಲಿ ಮಾತನಾಡಬಾರದು. ಬದಲಾವಣೆ ಬಗ್ಗೆ ನಾನು ಹೇಳಿದರೂ ಅದು ಆಗುವುದಿಲ್ಲ. ಪಾರ್ಲಿಮೆಂಟರಿ ಬೋರ್ಡ್ ನಿರ್ಣಯವೇ ಅಂತಿಮ‌ ಆಗುತ್ತೆ. ನಾಯಕತ್ವ ಬದಲಾವಣೆ ಈಗ ಚರ್ಚೆಯ ವಿಷಯವೇ ಅಲ್ಲ ಎಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸಿ.ಟಿ. ರವಿ ಹೇಳಿಕೆ ನೀಡಿದ್ದಾರೆ.

ನಾಳೆ ರಾಜ್ಯ ಬಿಜೆಪಿ ಘಟಕದ ಕೋರ್​ ಕಮಿಟಿ ಸಭೆ ಇದೆ. ಸಭೆಯಲ್ಲಿ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ನಡೆಯಲಿದೆ. ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ. ಸಂಪುಟ ಪುನಾರಚನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ.

ನಾಯಕತ್ವದ ಬಗ್ಗೆ ಪ್ರಶ್ನೆ ಉದ್ಭವಿಸಲ್ಲ ಎಂದು ಬಿಜೆಪಿ ಕಚೇರಿಯಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಹೇಳಿಕೆ ನೀಡಿದ್ದಾರೆ. ಗೊಂದಲಗಳನ್ನು ವರಿಷ್ಠರು ಬಗೆಹರಿಸ್ತಾರೆ. ಸಾಧಕ ಬಾಧಕಗಳನ್ನು ವರಿಷ್ಠರು ಸಂಗ್ರಹಿಸುತ್ತಿದ್ದಾರೆ. ನಾವು ಮುಂದಿನ ಚುನಾವಣೆಗೆ ತಯಾರಿ ಮಾಡುತ್ತಿದ್ದೇವೆ ಎಂದು ಬಿಜೆಪಿ ಕಚೇರಿಯಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಹೇಳಿದ್ದಾರೆ.

ಸಂಪುಟ ಪುನಾರಚನೆಗೆ ಒಲವು ಉತ್ತರ ಕರ್ನಾಟಕ ಭಾಗದ ಶಾಸಕರಿಂದ ಸಂಪುಟ ಪುನಾರಚನೆಗೆ ಬೇಡಿಕೆ ಕೇಳಿಬಂದಿದೆ. ಸಂಪುಟ ಪುನಾರಚನೆ ಮಾಡಿ ಸಾಮಾಜಿಕ ‌ನ್ಯಾಯ ಕೊಡಿ ಎಂದು ಅರುಣ್ ಸಿಂಗ್ ಮುಂದೆ ಎ.ಎಸ್. ಪಾಟೀಲ್ ನಡಹಳ್ಳಿ ಬೇಡಿಕೆ ಇಟ್ಟಿದ್ದಾರೆ. ಯಾವ ಸಮುದಾಯಕ್ಕೆ ಅವಕಾಶ‌ ಸಿಕ್ಕಿಲ್ಲವೋ ಅವರಿಗೆ ಅವಕಾಶ ಕೊಡಿ. ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಚೆನ್ನಾಗಿ ಕೆಲಸ ಮಾಡ್ತಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬಗ್ಗೆ ನಮ್ಮದೇನೂ ಪ್ರಶ್ನೆ ಇಲ್ಲ. ಸಂಪುಟದಲ್ಲಿ ಬೇರೆಯವರಿಗೂ ಅವಕಾಶ ಮಾಡಿಕೊಡಿ ಎಂದು ಬಿಜೆಪಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಹೇಳಿದ್ದಾರೆ.

ಮಂತ್ರಿಗಿರಿ ವಿಚಾರದಲ್ಲಿ ನನಗೆ ಅಸಮಾಧಾನವಿರುವುದು ನಿಜ ಎಂದು ಟಿವಿ9ಗೆ ಬಿಜೆಪಿ ಹಿರಿಯ ಶಾಸಕ ತಿಪ್ಪಾರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. ಅರುಣ್ ಸಿಂಗ್ ಮುಂದೆ ನನ್ನ ಅಭಿಪ್ರಾಯ ವ್ಯಕ್ತಪಡಿಸುವೆ. ಪಕ್ಷದ ನಿಲುವು, ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ವಲಸೆ ಬಂದ ಸಚಿವರಿಂದಲೇ ಉತ್ತಮ ಕೆಲಸಗಳಾಗುತ್ತಿವೆ. ನಾಯಕತ್ವದ ವಿಚಾರ ಮಾತಾಡದಂತೆ ಅಧ್ಯಕ್ಷರ ಸೂಚನೆ ಇದೆ. ನನ್ನ ಅನುಭವ, ಸಂಪುಟದಲ್ಲಿ ಸ್ಥಾನ ಸಿಗದ ಬಗ್ಗೆ ಪ್ರಸ್ತಾಪಿಸುವೆ. ನಾಯಕನ ಪರವೋ ಪಕ್ಷದ ಪರವೋ ಎಂದಾಗ ಪಕ್ಷದ ಪರ ಎಂದು ತಿಪ್ಪಾರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.

ಕುರ್ಚಿಗಾಗಿ ಬಡಿದಾಡಬಾರದು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಬಳ್ಳಾರಿಯಲ್ಲಿ ಶ್ರೀ ಶೈಲ ಜಗದ್ಗುರುಗಳು ಹೇಳಿಕೆ ನೀಡಿದ್ದಾರೆ. ರಾಜಕೀಯ ವಿದ್ಯಮಾನಗಳ ಬಗ್ಗೆ ಮಠಾಧೀಶರು ಹೇಳಬೇಕೋ ಬೇಡವೋ ಬಗ್ಗೆ ಗೊಂದಲ ಇದೆ. ಆದರೆ, ಜನರ ಭಾವನೆಗಳನ್ನ ಮಾಧ್ಯಮದ ಮುಂದೆ ಹೇಳುವುದರಲ್ಲಿ ತೊಂದರೆ ಇಲ್ಲ. ಕೊರೊನಾ ಕಾರಣದಿಂದ ಜನರು ಸಾವು- ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ, ಕುರ್ಚಿ ಬಗ್ಗೆ ಬಡಿದಾಡಬಾರದು. ಇದನ್ನ ರಾಜಕಾರಣಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಅರುಣ್ ಸಿಂಗ್ ಜೊತೆ ಶಾಸಕ ಯತ್ನಾಳ್ ಭೇಟಿ ವಿಚಾರ ಇನ್ನೂ ಅನಿಶ್ಚಿತತೆಯಲ್ಲಿದೆ. ಸಂಜೆಯವರೆಗೆ ಕಾದುನೋಡಲು ನಾಯಕರು ಲೆಕ್ಕಾಚಾರ ಹಾಕಿದ್ದಾರೆ ಎಂದು ತಿಳಿದುಬಂದಿದೆ. ನೇರವಾಗಿ ದೆಹಲಿಗೆ ಬರಹೇಳುವ ಸಾಧ್ಯತೆ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: HD Kumaraswamy: ಮತ್ತೆ ಮುಖ್ಯಮಂತ್ರಿ ಆಗುವ ಅಭಿಲಾಷೆ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ

ಮುಖ್ಯಮಂತ್ರಿ ಬದಲಾವಣೆ ಇಲ್ಲ, ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟನೆ