CP Yogeshwar: ಸಿಪಿ ಯೋಗೇಶ್ವರ್​​ ಕಾಂಗ್ರೆಸ್​ ಸೇರ್ಪಡೆ: ಸಿಎಂ, ಡಿಕೆ ಬ್ರದರ್ಸ್​ ತಂತ್ರ ಸಕ್ಸಸ್!

|

Updated on: Oct 23, 2024 | 11:57 AM

CP Yogeshwar Joins Congress: ಚನ್ನಪಟ್ಟಣ ಉಪಚುನಾವಣೆ ಅಖಾಡಲ್ಲಿ ಬಿಜೆಪಿ ಟಿಕೆಟ್​ನಿಂದಲೇ ಎನ್​ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿಪಿ ಯೋಗೇಶ್ವರ್​ ಶತಪ್ರಯತ್ನ ಮಾಡಿದ್ದರು. ಆದ್ರೆ, ಕುಮಾರಸ್ವಾಮಿ ಅದಕ್ಕೆ ಅವಕಾಶ ನೀಡದೇ ಬೇಕಿದ್ದರೆ ಜೆಡಿಎಸ್​​ ಚಿಹ್ನೆಯಲ್ಲಿ ಸ್ಪರ್ಧಿಸುವಂತೆ ಆಫರ್ ನೀಡಿದ್ದರು. ಆದ್ರೆ, ಸಿಪಿ ಯೋಗೇಶ್ವರ್​, ಎಚ್​ಡಿಕೆ ಆಫರ್​ ನಿರಾಕರಿಸಿ ಕಾಂಗ್ರೆಸ್​ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಬಿಜೆಪಿ ಜೆಡಿಎಸ್​ ಮೈತ್ರಿ ನಾಯಕರಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ.

CP Yogeshwar: ಸಿಪಿ ಯೋಗೇಶ್ವರ್​​ ಕಾಂಗ್ರೆಸ್​ ಸೇರ್ಪಡೆ: ಸಿಎಂ, ಡಿಕೆ ಬ್ರದರ್ಸ್​ ತಂತ್ರ ಸಕ್ಸಸ್!
ಸಿಪಿ ಯೋಗೇಶ್ಸರ್ ಕಾಂಗ್ರೆಸ್ ಸೇರ್ಪಡೆ
Follow us on

ಬೆಂಗಳೂರು.ರಾಮನಗರ, (ಅಕ್ಟೋಬರ್ 23): ಚನ್ನಪಟ್ಟಣ ಉಪಚುನಾವಣೆ ಕಾಂಗ್ರೆಸ್​ ಅಭ್ಯರ್ಥಿ ಯಾರು ಎನ್ನುವುದು ಬಹಿರಂಗವಾಗಿದೆ. ಕಳೆದ ಎರಡು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಚರ್ಚೆ ನಡೆದಂತೆ, ಕುಮಾರಸ್ವಾಮಿ ಹೇಳಿದಂತೆ ಕೊನೆ ಕ್ಷಣದಲ್ಲಿ ಸಿಪಿ ಯೋಗೇಶ್ವರ್ ಅವರು​ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇಂದು (ಅಕ್ಟೋಬರ್ 23) ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್​​ ಸಮ್ಮುಖದಲ್ಲಿ ಯೋಗೇಶ್ವರ್​ ಅಧಿಕೃತವಾಗಿ ಕಾಂಗ್ರೆಸ್ ಮನೆ ಸೇರಿದರು. ಈ ಮೂಲಕ ಯೋಗೇಶ್ವರ್​, ಚನ್ನಪಟ್ಟಣ ಉಪಚುನಾವಣೆಗೆ ಕಾಂಗ್ರೆಸ್​ನಿಂದ ಕಣಕ್ಕಿಳಿಯುವುದು ಖಚಿತವಾಗಿದೆ.

ಕಾಂಗ್ರೆಸ್ ಸೇರ್ಪಡೆಗೆ ಇನ್ನೇನು ಕೆಲವೇ ನಿಮಿಷಗಳು ಬಾಕಿ ಇರುವಾಗಲೇ ಬಿಜೆಪಿ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ಯೋಗೇಶ್ವರ್ ರಾಜೀನಾಮೆ ನೀಡಿದ್ದಾರೆ. ವಾಟ್ಸಾಪ್​ ಮೂಲಕ ರಾಜೀನಾಮೆ ಪತ್ರವನ್ನು ರವಾನಿಸಿದ್ದು, ಈ ದಿನ ನಾನು ರಾಜೀನಾಮೆಯನ್ನು ಸಲ್ಲಿಸುತ್ತಿದ್ದೇನೆ. ದಯವಿಟ್ಟು ನನ್ನ ರಾಜೀನಾಮೆ ಸ್ವೀಕರಿಸಬೇಕೆಂದು ಕೋರುತ್ತೇನೆ. ಇಲ್ಲಿಯವರೆಗೆ ನನಗೆ ತಾವು ನೀಡಿದ ಸಹಕಾರಕ್ಕಾಗಿ ವಂದನೆಗಳು ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಬಳಿಕ ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದರು.

ಇದನ್ನೂ ಓದಿ: ವರ್ಣರಂಜಿತ ರಾಜಕಾರಣಿ: 3 ಪಕ್ಷ ಬದಲಿಸಿರುವ ಯೋಗೇಶ್ವರ್ ರಾಜಕೀಯ ಹಾದಿ ಇಲ್ಲಿದೆ

ಈ ಮೊದಲೇ ಸುಳಿವು ನೀಡಿದ್ದ ಎಚ್​ಡಿಕೆ

ಇನ್ನು ಸಿಪಿ ಯೋಗೇಶ್ವರ್​ ಬಿಜೆಪಿ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅವರು ಕಾಂಗ್ರೆಸ್​ ಸೇರುತ್ತಾರೆ ಎನ್ನುವ ಚರ್ಚೆಗಳು ನಡೆದಿದ್ದವು. ಅಷ್ಟೇ ಅಲ್ಲದೇ ಸ್ವತಃ ಕುಮಾರಸ್ವಾಮಿ ಅವರೇ ಯೋಗೇಶ್ವರ್​ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ ಎಂದು ಅಂದೇ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಮೈತ್ರಿ ನಾಯಕರಲ್ಲಿ ನಡುಕ ಉಂಟುಮಾಡಿತ್ತು. ಅಲ್ಲದೇ ಸ್ವತಃ ಕುಮಾರಸ್ವಾಮಿಗೆಯೇ ಕೊಂಚ ಆತಂಕವಾಗಿತ್ತು. ಯಾಕಂದ್ರೆ,  ಪುತ್ರ ನಿಖಿಲ್​ಗೆ ಟಿಕೆಟ್​ ನೀಡಬೇಕೆಂಬ ಆಸೆ ಇತ್ತು. ಒಂದು ವೇಳೆ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರಿದರೆ ಬಿಜೆಪಿಯ ಒಳ ಏಟು ಬೀಳುವ ಆತಂಕ ಅವರನ್ನು ಕಾಡಿದೆ. ಹೀಗಾಗಿ ಕುಮಾರಸ್ವಾಮಿ, ಯೋಗೇಶ್ವರ್​ಗೆ ಜೆಡಿಎಸ್​ನಿಂದ ಸ್ಪರ್ಧಿಸಿ ಎಂದು ಆಫರ್ ಕೊಟ್ಟಿದ್ದರು. ಇತ್ತ ಡಿಕೆ ಸುರೇಶ್ ಮತ್ತು ಡಿಕೆ ಶಿವಕುಮಾರ್, ಸಿಪಿ ಯೋಗೇಶ್ವರ್​ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಅವರು ನಮ್ಮನ್ನು ಸಂಪರ್ಕ ಮಾಡಿಲ್ಲ ಎಂದು ಹೇಳಿಕೊಂಡೇ ಬಂದಿದ್ದರು.

ಡಿಕೆ ಬ್ರದರ್ಸ್​ ತಂತ್ರ ಸಕ್ಸಸ್

ಆದ್ರೆ, ಒಳಗೊಳಗೆ ಕಳೆದ ಮೂರ್ನಾಲ್ಕು ದಿನಗಳಿಂದ ಡಿ.ಕೆ.ಶಿವಕುಮಾರ್ ಮತ್ತು ಡಿಕೆ ಸುರೇಶ್ ತಂತ್ರಗಾರಿಕೆ ರೂಪಿಸಿ ಸೈಲೆಂಟ್ ಆಗಿಯೇ ಯೋಗೇಶ್ವರ್​ಗೆ ಗಾಳ ಹಾಕಿದ್ದರು ಎಂದು ತಿಳಿದುಬಂದಿದೆ. ಹೇಗಿದ್ದರೂ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡಲ್ಲ. ಇದರಿಂದ ಯೋಗೇಶ್ವರ್​ ಬಂಡಾಯ ಎದ್ದೇಳುವುದು ಖಚಿತ ಎನ್ನುವ ಸುಳಿವು ಡಿಕೆ ಬ್ರದರ್ಸ್​ಗೆ ಸಿಗುತ್ತಿದ್ದಂತೆಯೇ ಅವರನ್ನು ಕಾಂಗ್ರೆಸ್​ಗೆ ಕರೆತರಲು ಸೈಲೆಂಟ್​ ಆಗಿಯೇ ಪ್ಲಾನ್ ಮಾಡಿದ್ದರು. ಅದು ಇದೀಗ ಕೊನೆ ಕ್ಷಣದಲ್ಲಿ ಡಿಕೆ ಬ್ರದರ್ಸ್​ ಪ್ರಯೋಗಿಸಿದ್ದ ಅಸ್ತ್ರ ಯಶಸ್ವಿಯಾಗಿದೆ.

ಯೋಗೇಶ್ವರ್​ ಕರೆತರುವಲ್ಲಿ ಆಸಕ್ತಿ ವಹಿಸಿದ್ದ ಸಿಎಂ

ಇನ್ನು ಸಿಎಂ ಸಿದ್ದರಾಮಯ್ಯ ಸಹ ಯೋಗೇಶ್ವರ್​ ಕರೆತರುವಲ್ಲಿ ಆಸಕ್ತಿ ತೋರಿಸಿದ್ದರು. ಆದ್ರೆ, ಯೋಗೇಶ್ವರ್​ ಅವರನ್ನು ಸೇರಿಸಿಕೊಳ್ಳು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಒಲವುತೋರಿರಲಿಲ್ಲ. ಆದರೆ ಸಿ.ಪಿ.ಯೋಗೇಶ್ವರ್​ ಬಗ್ಗೆ ಪಟ್ಟು ಬಿಡದ ಸಿಎಂ ಸಿದ್ದರಾಮಯ್ಯ, ನೇರವಾಗಿ ಹೈಕಮಾಂಡ್ ನಾಯಕರಿಗೆ ಕರೆ ಮಾಡಿ ಒಪ್ಪಿಸಿದ್ದರು.ಬಳಿಕ ಸಿಎಂ ತಮ್ಮ ಆಪ್ತರ ಮೂಲಕ ಯೋಗೇಶ್ವರ್​ ಸೆಳೆಯಲು ಕಾರ್ಯಾಚರಣೆ ನಡೆಸಿದ್ದರು. ಇದಕ್ಕೆ ಜೆಡಿಎಸ್​ನ ಹಿರಿಯ ನಾಯಕರೊಬ್ಬರು ಸಹ ಸಾಥ್ ಕೊಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಯೋಗೇಶ್ವರ್ ಕರೆತರುವ ಹೊಣೆ ಇಬ್ಬರು ಶಾಸಕರ ಹೆಗಲಿಗೆ ಬಿದ್ದಿತ್ತು

ಹೌದು…ಯಾವಾಗ ಬಿಜೆಪಿ ಪರಿಷತ್​ ಸ್ಥಾನಕ್ಕೆ ರಾಜೀನಾಮೆ ನೀಡಿದ್ರೋ ಅಂದಿನಿಂದ ಸಿಪಿ ಯೋಗೇಶ್ವರ್​​ ಅವರನ್ನು ಸೆಳೆಯಲು ಕಾಂಗ್ರೆಸ್​ ಕಸರತ್ತು ನಡೆಸಿತ್ತು. ಯೋಗೇಶ್ವರ್​ ಅವರನ್ಜ ಕಾಂಗ್ರೆಸ್​ಗೆ ಕರೆತರುವ ಜವಾಬ್ದಾರಿಯನ್ನು ಕದಲೂರು ಉದಯ್ ಗೌಡ, ಮತ್ತು ಮಾಗಡಿ ಶಾಸಕ ಬಾಲಕೃಷ್ಣ ಹೆಗಲಿಗೆ ಹಾಕಲಾಗಿತ್ತು. ಡಿಕೆ ಶಿವಕುಮಾರ್​ ನೀಡಿದ್ದ ಟಾಸ್ಕ್​ನಿಂದ ಈ ಇಬ್ಬರು ನಾಯಕರು ಯೋಗೇಶ್ವರ್ ಜೊತೆಗೆ ನಿರಂತರ ಸಂಪರ್ಕದಲ್ಲಿ ಇದ್ದು ಮಾತುಕತೆ ನಡೆಸಿದ್ದರು. ಯೋಗೇಶ್ವರ್ ಗ್ರೀನ್ ಸಿಗ್ನಲ್ ನೀಡಿದ್ದರೆ ನಿನ್ನೆ (ಅಕ್ಟೋಬರ್ 22) ಕಾಂಗ್ರೆಸ್ ಸೇರ್ಪಡೆ ಆಗಬೇಕಿತ್ತು. ಆದ್ರೆ, ಕುಮಾರಸ್ವಾಮಿ ಅಭ್ಯರ್ಥಿ ಘೋಷಣೆ ಮಾಡದಿದ್ದರಿಂದ ಬಿಜೆಪಿ ಟಿಕೆಟ್​ ಸಿಗಬಹುದು ಎಂದು ಯೋಗೇಶ್ವರ್ ಕಾದು ಕುಳಿತ್ತಿದ್ದರು.

ಆದ್ರೆ, ಬಿಜೆಪಿ ಟಿಕೆಟ್​ ಘೋಷಣೆ ಮಾಡದಿದ್ದರಿಂದ ಸಿಪಿ ಯೋಗೇಶ್ವರ್​ ನಿನ್ನೆ ರಾತ್ರಿಯೇ ಕಾಂಗ್ರೆಸ್ ಸೇರ್ಪಡೆಗೆ ಒಪ್ಪಿಗೆ ಸೂಚಿಸಿದ್ದು, ಇಂದು (ಅಕ್ಟೋಬರ್ 23) ನೇರವಾಗಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಬಳಿಕ ಸಿದ್ದರಾಮಯ್ಯನವರನ್ನು ಕಂಡು ಮಾತು ಕತೆ ನಡೆಸಿ ಬಳಿಕ ಕಾಂಗ್ರೆಸ್ ಸೇರ್ಪಡೆಯಾದರು.

ಇದರೊಂದಿಗೆ ಚನ್ನಪಟ್ಟಣ ಉಪಚುನಾವಣೆ ಕದನ ಮತ್ತಷ್ಟು ರಂಗೇರಿದ್ದು, ಈಗ ಜೆಡಿಎಸ್​-ಬಿಜೆಪಿ ಮೈತ್ರಿ ಅಭ್ಯರ್ಥಿ ಯಾರು ಎನ್ನುವುದೇ ಕುತೂಹಲ ಮೂಡಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:47 am, Wed, 23 October 24