ಬೆಂಗಳೂರು, ಸೆಪ್ಟೆಂಬರ್ 27: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ಮೇಲೆ ಸಂಕಷ್ಟ ಎದುರಾಗುತ್ತಿವೆ. ಸದ್ಯ ಸಿದ್ದರಾಮಯ್ಯ ಕಾನೂನು ಹೋರಾಟ ನಡೆಸಿದ್ದಾರೆ. ಇದೆಲ್ಲಾ ಒಂದು ಕಡೆಯಾದರೆ ಇದೀಗ ಮುಡಾ ರೀತಿಯಲ್ಲೇ ಕಾಂಗ್ರೆಸ್ ನಾಯಕರ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹಾಗೂ ಅವರ ಕುಟುಂಬದ ಮೇಲೆ ಲೋಕಾಯುಕ್ತಕ್ಕೆ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ದೂರು ನೀಡಿದ್ದಾರೆ.
ಒಟ್ಟು 7 ಜನರ ವಿರುದ್ಧ 394 ಪುಟಗಳ ದಾಖಲೆ ಸಮೇತ ಎನ್.ಆರ್.ರಮೇಶ್ ದೂರು ನೀಡಿದ್ದಾರೆ. ಇದರಲ್ಲಿ ಎಂ.ಬಿ.ಪಾಟೀಲ್ ಮತ್ತು ಐಎಎಸ್ ಅಧಿಕಾರಿಗಳು ಭಾಗಿ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಸೇರಿದ ಟ್ರಸ್ಟ್ಗೆ ಐದು ಎಕರೆ ಸಿಎ ಸೈಟ್ ರೂಪದಲ್ಲಿ ನೀಡಿರುವುದಾಗಿ ವಿಪಕ್ಷ ಬಿಜೆಪಿ ಆರೋಪಿಸಿದ್ದು, ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಸೇರಿದ ಟ್ರಸ್ಟ್ಗೆ 5 ಎಕರೆ ಜಾಗ ಮಂಜೂರು ಮಾಡಲಾಗಿದೆ.
ಇದನ್ನೂ ಓದಿ: ಖರ್ಗೆ ಕುಟುಂಬ ಸದಸ್ಯರ ಟ್ರಸ್ಟ್ಗೆ 5 ಎಕರೆ ಜಮೀನು: ಇದು ಅಧಿಕಾರ ದುರುಪಯೋಗಲ್ಲವೇ ಲಹರ್ ಸಿಂಗ್ ಪ್ರಶ್ನೆ
ಸಿದ್ಧಾರ್ಥ ವಿಹಾರ ಟ್ರಸ್ಟ್ ಗೆ ದೇವನಹಳ್ಳಿಯಲ್ಲಿರುವ ಏರೋಸ್ಪೇಸ್ ಪಾರ್ಕ್ ಸಮೀಪದಲ್ಲಿ ಐದು ಎಕರೆ ಭೂಮಿಯನ್ನು ಕೆಐಎಡಿಬಿಯಿಂದ ಸಿಎ ಸೈಟ್ ಹೆಸರಿನಲ್ಲಿ ಮಂಜೂರು ಮಾಡಿರುವ ಆರೋಪ ಕೇಳಿ ಬಂದಿದೆ. ಇದು ರಾಜಕೀಯ ನಾಯಕರ ಮಧ್ಯೆ ಆರೋಪ, ಪ್ರತ್ಯಾರೋಪಕ್ಕೂ ಕಾರಣವಾಗಿತ್ತು.
ಸದ್ಯ ಮಲ್ಲಿಕಾರ್ಜುನ ಖರ್ಗೆ, ಪುತ್ರರಾದ ಪ್ರಿಯಾಂಕ್ ಖರ್ಗೆ, ರಾಹುಲ್ ಖರ್ಗೆ, ಅಳಿಯ ರಾಧಾಕೃಷ್ಣ ಮತ್ತು ಕುಟುಂಬದ ಹೆಸರಲ್ಲಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್ಗೆ ಶೈಕ್ಷಣಿಕ ಉದ್ದೇಶಕ್ಕೆಂದು ಅಕ್ರಮವಾಗಿ ಎರಡೆರಡು ಬಾರಿ ಸರ್ಕಾರಿ ಭೂಮಿ ಪರಭಾರೆ ಮಾಡಿಸಿಕೊಂಡ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಕೆಐಎಡಿಬಿ ಭೂಮಿ ಹಂಚಿಕೆ ಪ್ರಕರಣ: ಖರ್ಗೆ ಕುಟುಂಬಕ್ಕೂ ಬಿಸಿಮುಟ್ಟಿಸಲು ಮುಂದಾದ ರಾಜ್ಯಪಾಲರು
2014ರಲ್ಲಿ ಬಿಟಿಎಂ 4ನೇ ಸ್ಟೇಜ್ನ ಎರಡನೇ ಬ್ಲಾಕ್ನಲ್ಲಿ 2 ಎಕರೆ ಬಿಡಿಎ ವ್ಯಾಪ್ತಿಯ ಸಿಎ ನಿವೇಶನ, 2024ರಲ್ಲಿ ಬಾಗಲೂರು ಬಳಿ 5 ಎಕರೆಯಷ್ಟು ಕೆಐಎಡಿಬಿ ಭೂಮಿಯನ್ನು ಮತ್ತೆ ಇವರ ಒಡೆತನ ಟ್ರಸ್ಟ್ಗೆ ಪರಭಾರೆ ಮಾಡಿಕೊಳ್ಳಲಾಗಿದೆ. ಈ ಎರಡೂ ನಿವೇಶನಗಳನ್ನು ಒಂದೇ ಸಂಸ್ಥೆಗೆ ಒಂದೇ ಉದ್ದೇಶಕ್ಕೆ ಈ ಟ್ರಸ್ಟ್ ಪಡೆದುಕೊಂಡಿದೆ. ಈ ಎರಡೂ ನಿವೇಶಗಳ ಪ್ರಸ್ತುತ ಒಟ್ಟು ಮೌಲ್ಯ ಬರೋಬ್ಬರಿ 240 ಕೋಟಿ ರೂ. ಅಧಿಕ ಮೊತ್ತ ಎನ್ನಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:08 pm, Fri, 27 September 24