ಡಿಕೆಶಿ ರಕ್ಷಣೆಗೆ ಸಂವಿಧಾನವನ್ನೇ ಗಾಳಿಗೆ ತೂರಿದ ಸ್ವಘೋಷಿತ ಸಂವಿಧಾನ ತಜ್ಞ ಸಿದ್ದರಾಮಯ್ಯ: ಬಿಜೆಪಿ
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಸಿದ್ದರಾಮಯ್ಯ ಸರ್ಕಾರ ವಾಪಸ್ ಪಡೆದಿದೆ. ಈ ಬಗ್ಗೆ ವಿಪಕ್ಷಗಳಾದ ಬಿಜೆಪಿ, ಜೆಡಿಎಸ್ ನಾಯಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಈ ನಡುವೆ ಟ್ವೀಟ್ ಮಾಡಿದ ಬಿಜೆಪಿ, ಸಿಎಂ ಸಿದ್ದರಾಮಯ್ಯ ಅವರನ್ನು ಸ್ವಘೋಷಿತ ಸಂವಿಧಾನ ತಜ್ಞ ಎಂದು ಜರಿದಿದೆ.

ಬೆಂಗಳೂರು, ನ.24: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಸ್ವಘೋಷಿತ ಸಂವಿಧಾನ ತಜ್ಞ ಎಂದು ರಾಜ್ಯ ಬಿಜೆಪಿ ಘಟಕ ಆಕ್ರೋಶ ಹೊರಹಾಕಿದೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಕಾಂಗ್ರೆಸ್ ಸರ್ಕಾರ ವಾಪಸ್ ಪಡೆದಿದ್ದು, ವಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಆಕ್ರೋಶ ಹೊರಹಾಕುತ್ತಿದೆ.
ಈ ನಡುವೆ ಟ್ವೀಟ್ ಮಾಡಿದ ಬಿಜೆಪಿ, ಸ್ವಘೋಷಿತ ಸಂವಿಧಾನ ತಜ್ಞ ಸಿದ್ಧರಾಮಯ್ಯ ಅವರು ಅಕ್ರಮ ಆಸ್ತಿ ಗಳಿಕೆ ಆರೋಪಿ ಡಿ.ಕೆ. ಶಿವಕುಮಾರ್ ಅವರನ್ನು ರಕ್ಷಿಸಲು ಸಂವಿಧಾನವನ್ನೇ ಗಾಳಿಗೆ ತೂರಿದ್ದಾರೆ. ಡಿ. ಕೆ. ಶಿವಕುಮಾರ್ ಅವರ ಖಾಸಗಿ ವಕೀಲರನ್ನೇ ಅಡ್ವೋಕೇಟ್ ಜನರಲ್ ಆಗಿ ನೇಮಿಸಿ, ಈಗ ತನಿಖೆ ಹಿಂಪಡೆಯಲು ಅಡ್ವೋಕೇಟ್ ಜನರಲ್ ಅವರಿಂದಲೇ ಶಿಫಾರಸು ಮಾಡುವ ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದೆ.
ಇದನ್ನೂ ಓದಿ: ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ಕೇಸ್ ವಾಪಸ್: ಸಿದ್ದರಾಮಯ್ಯ ಸಂಪುಟ ಡಿಕೆಶಿ ಪಾದದಡಿಯಲ್ಲಿದೆ ಎಂದ ಕುಮಾರಸ್ವಾಮಿ
ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ಸರ್ಕಾರದ ಹಿತಾಸಕ್ತಿಯಾಗಿಸಿ ರಾಜ್ಯದ ಸಮಸ್ತ ಜನರ ಕಿವಿಗೆ ಹೂವು ಮುಡಿಸಿದ್ದಾರೆ. ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಸಂವಿಧಾನವನ್ನು ತಿರುಚುವ ಬುದ್ದಿ ಕಾಂಗ್ರೆಸ್ಸಿಗರ ರಕ್ತದಲ್ಲೇ ಇದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಸ್ವಘೋಷಿತ ಸಂವಿಧಾನ ತಜ್ಞ @siddaramaiah ಅವರು ಅಕ್ರಮ ಆಸ್ತಿ ಗಳಿಕೆ ಆರೋಪಿ @DKShivakumar ಅವರನ್ನು ರಕ್ಷಿಸಲು ಸಂವಿಧಾನವನ್ನೇ ಗಾಳಿಗೆ ತೂರಿದ್ದಾರೆ. ಡಿ. ಕೆ. ಶಿವಕುಮಾರ್ ಅವರ ಖಾಸಗಿ ವಕೀಲರನ್ನೇ ಅಡ್ವೋಕೇಟ್ ಜನರಲ್ ಆಗಿ ನೇಮಿಸಿ, ಈಗ ತನಿಖೆ ಹಿಂಪಡೆಯಲು ಅಡ್ವೋಕೇಟ್ ಜನರಲ್ ಅವರಿಂದಲೇ ಶಿಫಾರಸು ಮಾಡುವ ಷಡ್ಯಂತರ ರೂಪಿಸಿದ್ದಾರೆ.
ತಮ್ಮ…
— BJP Karnataka (@BJP4Karnataka) November 24, 2023
ನಾಳೆ ಬೆಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ
ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ವಾಪಸ್ ಪಡೆದಿರುವುನ್ನು ಖಂಡಿಸಿ ನಾಳೆ (ನ.25) ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಿದೆ. ಈ ಬಗ್ಗೆ ಟ್ವೀಟ್ ಮಾಡಿದ ಬಿಜೆಪಿ, ಕಾಂಗ್ರೆಸ್ ಸರ್ಕಾರದ ಅಸಂವಿಧಾನಿಕ ನಡೆಗೆ ಧಿಕ್ಕಾರ ಧಿಕ್ಕಾರ. ಡಿಕೆ ಶಿವಕುಮಾರ್ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐ ತನಿಖೆಯನ್ನು ಸಚಿವ ಸಂಪುಟವು ಹಿಂಪಡೆದಿದ್ದನ್ನು ವಿರೋಧಿಸಿ ನವೆಂಬರ್ 25 ರಂದು ಬೆಳಿಗ್ಗೆ 10 ಗಂಟೆಗೆ ಫ್ರೀಡಂ ಫಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದೆ.
ಡಿಕೆ ಶಿವಕುಮಾರ್ ವಿರುದ್ಧ ದಾಖಲಾದ ಪ್ರಕರಣದ ಹಿನ್ನೆಲೆ
2018ರಲ್ಲಿ ಡಿಕೆ ಶಿವಕುಮಾರ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿತ್ತು. ಬಳಿಕ ಭ್ರಷ್ಟಾಚಾರ ತಡೆ ಕಾಯ್ದೆಯಡಿ ತನಿಖೆ ಅಗತ್ಯವಿದೆ ಎಂಬ ಕಾರಣಕ್ಕೆ ಸಿಬಿಐ ತನಿಖೆ ನಡೆಸಲು ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಅಂದಿನ ಸರ್ಕಾರದ ಸಮ್ಮತಿ ಪಡೆದು ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿತ್ತು.
ಇದನ್ನೂ ಓದಿ: ಡಿಕೆ ಶಿವಕುಮಾರ್ ವಿರುದ್ಧದ ತನಿಖೆ ವಾಪಸ್: ಸುಪ್ರೀಂ ತಿಳಿವಳಿಕೆ ಇಲ್ಲದೆ ಹೋಯ್ತೇ ಸಿದ್ದರಾಮಯ್ಯ ಸರ್ಕಾರಕ್ಕೆ?
ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಡಿ ಕೇಸ್ ದಾಖಲಿಸಿದ್ದ ಸಿಬಿಐ, 2013 ರಿಂದ 2018ರ ಅವಧಿಯಲ್ಲಿ ಗಳಿಸಿದ ಆದಾಯ, ಹಾಗೂ ವೆಚ್ಚದ ಮಾಹಿತಿ ಆಧರಿಸಿ 74.93 ಕೋಟಿ ರೂ. ಆದಾಯ ಮೀರಿ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಸಿಬಿಐ ಎಫ್‌ಐಆರ್ ದಾಖಲಿಸಿದೆ. ಈ ಪ್ರಕರಣದ ತನಿಖೆ ಬಹುತೇಕ ಮುಕ್ತಾಯದ ಹಂತದಲ್ಲಿತ್ತು. ಈ ಹಂತದಲ್ಲಿ ಸರ್ಕಾರದ ಸಮ್ಮತಿ ಪ್ರಶ್ನಿಸಿ ಡಿಕೆ ಶಿವಕುಮಾರ್ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಏಕಸದಸ್ಯ ಪೀಠ ರಿಟ್ ಅರ್ಜಿ ವಜಾಗೊಳಿಸಿತ್ತು. ನಂತರ ಡಿಕೆ ಶಿವಕುಮಾರ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ವಿಭಾಗೀಯ ಪೀಠ ಸಿಬಿಐ ತನಿಖೆಗೆ ಸರ್ಕಾರದ ಸಮ್ಮತಿ ನೀಡಿದ ಕ್ರಮಕ್ಕೆ ತಡೆ ನೀಡಿದೆ. ಇದೀಗ ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಹೈಕೋರ್ಟ್ ಪ್ರಕರಣದ ವಿಚಾರಣೆಯನ್ನು ನ.29 ಕ್ಕೆ ನಿಗದಿ ಮಾಡಿದೆ.
ಈ ಮಧ್ಯೆ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಸರ್ಕಾರ ನೀಡಿದ ಸಮ್ಮತಿಯನ್ನು ಹಿಂಪಡೆಯಲು ಸಚಿವ ಸಂಪುಟ ಇಂದು ತೀರ್ಮಾನ ಕೈಗೊಂಡಿದೆ. ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಕಾನೂನು ಅಭಿಪ್ರಾಯ ಆಧರಿಸಿ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ. ಆದರೆ ಸರ್ಕಾರದ ಈ ಕ್ರಮ ಇದೀಗ ವಿವಾದಕ್ಕೆ ಒಳಗಾಗುವ ಸಾಧ್ಯತೆಗಳಿವೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:04 pm, Fri, 24 November 23