BJP Protest: ಡಿಕೆ ಸುರೇಶ್ ದೇಶ ವಿಭಜನೆ ಹೇಳಿಕೆ ಬೆಂಬಲಿಸಲು ದೆಹಲಿಗೆ ಹೋಗಿದ್ದಾರೆ: ಕಾಂಗ್ರೆಸ್ ವಿರುದ್ಧ ಆರ್ ಅಶೋಕ್ ಕಿಡಿ

| Updated By: Ganapathi Sharma

Updated on: Feb 07, 2024 | 1:08 PM

ಕಾಂಗ್ರೆಸ್ ಸರ್ಕಾರದ ಪ್ರತಿನಿಧಿಗಳು ದೆಹಲಿಯಲ್ಲಿ ಹೋಗಿ ಕೇಂದ್ರದ ವಿರುದ್ಧ ಪ್ರತಿಭಟನೆಗೆ ಕುಳಿತಿರುವುದು ಸಂಸದ ಡಿಕೆ ಸುರೇಶ್ ಅವರ ದೇಶ ವಿಭಜನೆ ಹೇಳಿಕೆಯನ್ನು ಸಮರ್ಥಿಸಲು ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಆರೋಪಿಸಿದ್ದಾರೆ. ಇತ್ತ ಕಾಂಗ್ರೆಸ್ ವಿರುದ್ಧ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ.

BJP Protest: ಡಿಕೆ ಸುರೇಶ್ ದೇಶ ವಿಭಜನೆ ಹೇಳಿಕೆ ಬೆಂಬಲಿಸಲು ದೆಹಲಿಗೆ ಹೋಗಿದ್ದಾರೆ: ಕಾಂಗ್ರೆಸ್ ವಿರುದ್ಧ ಆರ್ ಅಶೋಕ್ ಕಿಡಿ
ಆರ್ ಅಶೋಕ್
Follow us on

ಬೆಂಗಳೂರು, ಫೆಬ್ರವರಿ 7: ಕಾಂಗ್ರೆಸ್ (Congress) ಪಕ್ಷದ ಡಿಎನ್​ಎಯಲ್ಲೇ ಜಿನ್ನಾ ಸಂಸ್ಕೃತಿ ಅಂಟಿಕೊಂಡಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ (R Ashoka) ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧ ಆವರಣದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ (BJP) ಪ್ರತಿಭಟನೆ ವೇಳೆ ಮಾತನಾಡಿದ ಅವರು, ಮಾನ ಮರ್ಯಾದೆ ಇರುವ ಪಕ್ಷ ದೇಶ ವಿಭಜನೆಯ ಮಾತು ಯಾವತ್ತೂ ಆಡಿರಲಿಲ್ಲ. ಕಾಂಗ್ರೆಸ್ ನವರಿಗೆ ನಾಚಿಕೆ ಆಗಲ್ವಾ, ಮಾನ ಮರ್ಯಾದೆ ಇದ್ಯಾ? ನಮ್ಮ ಹಣ ಎಲ್ಲಾ ಉತ್ತರ ಪ್ರದೇಶಕ್ಕೆ ಹೋಗುತ್ತದೆ ಅಂತಾ ಹೇಳುತ್ತೀರಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಾಂಧಿ ಪ್ರತಿಮೆ ಎದುರು ಹೋರಾಟ ಮಾಡುತ್ತಿದ್ದೇವೆ. 136 ಜನ ಕಾಂಗ್ರೆಸ್ ಶಾಸಕರು ಸಂಸದ ಡಿ‌ಕೆ ಸುರೇಶ್ ಹೇಳಿಕೆಯನ್ನು ಬೆಂಬಲಿಸಲು ದೆಹಲಿಗೆ ಹೋಗಿದ್ದಾರೆ ಎಂದು ಅವರು ದೂರಿದ್ದಾರೆ.

ಕಾಂಗ್ರೆಸ್​​ನ ಗುರಿ ಪ್ರಧಾನಿ ನರೇಂದ್ರ ಮೋದಿ. ಅವರು ಹತ್ತು ವರ್ಷ ಏನು ಬಿಡುಗಡೆ ಮಾಡಿದ್ದಾರೆ, ನೀವೇನು ಬಿಡುಗಡೆ ಮಾಡಿದ್ದೀರಿ ದಾಖಲೆ‌ ಮುಂದಿಡಿ ಎಂದು ಅಶೋಕ್ ಸವಾಲು ಹಾಕಿದರು. ಜತೆಗೆ, ಬರಕ್ಕೆ ಹಣ ಬಿಡುಗಡೆ ಮಾಡಲು 9 ತಿಂಗಳು ತೆಗೆದುಕೊಂಡಿದ್ದಾರೆ. ಅದಕ್ಕೆ ದಾಖಲೆ ನನ್ನ ಹತ್ತಿರ ಇದೆ. ರಾಮ ಮಂದಿರ ಆದ ರೀತಿ ನೋಡಿ ಕಾಂಗ್ರೆಸ್​​ನವರು ಹುಚ್ಚರ ರೀತಿ ಬೀದಿ ಬೀದಿ ಅಲೆಯುತ್ತಿದ್ದಾರೆ. ಕೆರೆಗೋಡು ಪ್ರಕರಣದ ಬಳಿಕ ಇನ್ನೂ ಹುಚ್ಚು ಹತ್ತಿದೆ ಎಂದು ಅವರು ಹೇಳಿದರು.

ಇವರ (ಕಾಂಗ್ರೆಸ್​​ನವರ) ಸ್ನೇಹಿತ ಸ್ಟಾಲಿನ್​​ಗೆ (ತಮಿಳುನಾಡಿಗೆ) ನೀರು ಬಿಡುವಾಗ ಬಾಯಿ ಮುಚ್ಚಿಕೊಂಡಿದ್ದರು. ದೇಶದ್ರೋಹ, ಬರ ಹಣ ಬಿಡುಗಡೆ ವಿಳಂಬ ಮುಚ್ಚಿಟ್ಟುಕೊಳ್ಳಲು ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಡಿಕೆ ಸುರೇಶ್ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಎಲ್ಲರೂ ದೆಹಲಿಗೆ ಹೋಗಿದ್ದಾರೆ ಎಂದು ಅಶೋಕ್ ಆರೋಪ ಮಾಡಿದರು.

ಇದನ್ನೂ ಓದಿ: ಬಜೆಟ್ ಬಳಿಕ ಶ್ವೇತಪತ್ರ ಹೊರಡಿಸುತ್ತೇವೆ: ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ

ಕ್ಯಾಬಿನೆಟ್ ದರ್ಜೆ ಕೊಡಲು ನಿಮಗೆ ದುಡ್ಡು ಇದೆ. ಅದಕ್ಕೆ ನಿಮಗೆ ಮೋದಿ ದುಡ್ಡು ಕೊಡುತ್ತಾರಾ? ಕೇಂದ್ರ ಸರ್ಕಾರ ವಿರುದ್ಧ ಆರೋಪ ಮಾಡುವ ಸಿದ್ದರಾಮಯ್ಯ 15 ನೇ ಹಣಕಾಸು ಆಯೋಗದಲ್ಲಿ ಹೋಗಿ ಕೂತಿದ್ರಲ್ಲಾ ಅಗ ಯಾಕೆ ಬಾಯಿ ಬಿಡಲಿಲ್ಲ? ಲೋಕಸಭೆ, ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸೈಲೆಂಟ್, ಆಚೆ ಬಂದು ವೈಲೆಂಟ್. ಸಿದ್ದರಾಮಯ್ಯಗೆ ಎಂಟು ತಿಂಗಳಿಂದ ಮರೆವು ಕಾಯಿಲೆ ಇದೆ. ಹೆಸರಿಗೆ ಮಾತ್ರ ಮುಖ್ಯಮಂತ್ರಿ ಅಷ್ಟೇ ಎಂದು ಅಶೋಕ್ ಲೇವಡಿ ಮಾಡಿದರು.

ಪ್ರತಿಭಟನೆ ವೇಳೆ ಬಿಜೆಪಿ ಶಾಸಕರು ಜೈ ಶ್ರೀರಾಂ ಘೋಷಣೆ ಕೂಗಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ