ನವದೆಹಲಿ, ಡಿಸೆಂಬರ್ 30: ದೆಹಲಿಯಲ್ಲಿ ಪ್ರಜಾಪ್ರಭುತ್ವ ಉಳಿಸುವ ಕಾರ್ಯದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿರತರಾಗಿದ್ದರೆ, ಅವರ ಹಿತ್ತಲಿನ ‘ರಿಪಬ್ಲಿಕ್ ಆಫ್ ಕಲಬುರಗಿ’ಯಲ್ಲಿ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರು ಏನು ಮಾಡುತ್ತಿದ್ದಾರೆಂಬುದು ಅವರಿಗೇ ತಿಳಿದಿಲ್ಲ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ ಕಟು ಟೀಕೆ ಮಾಡಿದ್ದಾರೆ. ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ ಸಂಬಂಧ ಖರ್ಗೆ ಕುಟುಂಬದ ವಿರುದ್ಧ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ತೀವ್ರ ವಾಗ್ದಾಳಿ ನಡೆಸಿರುವ ಅವರು, ಖರ್ಗೆ ಹಿತ್ತಲಿನಲ್ಲೇ ನಡೆಯುತ್ತಿವೆ ಉಪದ್ರವಗಳು, ಭೂ ಹಗರಣಗಳು, ಕುಟುಂಬ ಟ್ರಸ್ಟ್ ಹಾವಳಿ, ಕಾಂಗ್ರೆಸ್ ಆಂತರಿಕ ಗೊಂದಲಗಳು ಎಂದು ಉಲ್ಲೇಖಿಸಿದ್ದಾರೆ.
ಸೋನಿಯಾ ಗಾಂಧಿಯವರ ತಂಡದ ಆರ್‌ಟಿಐ ಶಾಸನಕ್ಕೆ ಧನ್ಯವಾದ. ಖರ್ಗೆ ಕುಟುಂಬದ ಟ್ರಸ್ಟ್‌ನ ಹಗರಣದ ವಿವರಗಳು ಉಚಿತವಾಗಿ ಎಲ್ಲರಿಗೂ ಲಭ್ಯವಿದೆ ಎಂದು ಲಹರ್ ಸಿಂಗ್ ವ್ಯಂಗ್ಯವಾಡಿದ್ದಾರೆ.
While respected Mallikarjun @Kharge Ji is busy saving democracy in Delhi, this is what is happening in his backyard, the Republic of Kalaburgi. His son, who acts like a great constitutional expert, is getting into one trouble after another.
This is not the only thing that is… pic.twitter.com/RdOLSVopb0
— Lahar Singh Siroya (@LaharSingh_MP) December 29, 2024
“ಗೌರವಾನ್ವಿತ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಯಲ್ಲಿ ಪ್ರಜಾಪ್ರಭುತ್ವ ಉಳಿಸುವ ಕಾರ್ಯದಲ್ಲಿ ನಿರತರಾಗಿರುವಾಗ, ಅವರ ಬೆನ್ನ ಹಿಂದೆ ಕಲಬುರ್ಗಿ ರಿಪಬ್ಲಿಕ್ನಲ್ಲಿ ನಡೆಯುತ್ತಿರುವುದು ಅವರಿಗೆ ತಿಳಿಯುತ್ತಿಲ್ಲ. ಮಹಾನ್ ಸಾಂವಿಧಾನಿಕ ತಜ್ಞರಂತೆ ವರ್ತಿಸುವ ಅವರ ಮಗ ಸಚಿವ ಪ್ರಿಯಾಂಕ್ ಖರ್ಗೆ ಒಂದಿಲ್ಲೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ’’ ಎಂದು ಲಹರ್ ಸಿಂಗ್ ಉಲ್ಲೇಖಿಸಿದ್ದಾರೆ.
ಮುಂದುವರಿದು, ‘‘ಇದೊಂದೇ ಅಲ್ಲ, ಖರ್ಗೆ ಅವರ ಕುಟುಂಬದ ಟ್ರಸ್ಟ್‌ಗಳು ಮತ್ತು ಭೂ ಹಗರಣಗಳ ವಿವರಗಳೂ ಒಂದರ ಹಿಂದೆ ಒಂದರಂತೆ ಹೊರಬೀಳುತ್ತಿವೆ. ಅವರ ಕುಟುಂಬದ ಟ್ರಸ್ಟ್ ದಲಿತ ಕೋಟಾದಡಿ ಬೆಂಗಳೂರಿನಲ್ಲಿ ಪಡೆದ ಕೆಐಎಡಿಬಿಯ 5 ಎಕರೆ ಜಮೀನಿನ ವಿವಾದ ಜೋರಾದಾಗ ಆ ಜಾಗವನ್ನು ಟ್ರಸ್ಟ್ ಹಿಂದಿರುಗಿಸಿದೆ. ಶ್ರೀಮತಿ ಸೋನಿಯಾ ಗಾಂಧಿಯವರ ಆರ್‌ಟಿಐ ಕಾನೂನಿಂದಾಗಿ ಈ ಹಗರಣದ ಎಲ್ಲ ದಾಖಲೆಗಳು ಸುಲಭವಾಗಿ ಲಭ್ಯವಾಗಿದೆ. ಅದಕ್ಕಾಗಿ ಅವರಿಗೆ ಧನ್ಯವಾದಗಳು’’ ಎಂದು ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಮೃತ ಗುತ್ತಿಗೆದಾರ ಸಚಿನ್ ಮನೆಗೆ ವಿಜಯೇಂದ್ರ ಸೇರಿ ಬಿಜೆಪಿ ನಿಯೋಗ ಭೇಟಿ: ಸಿಬಿಐ ತನಿಖೆಗೆ ಕುಟುಂಬ ಆಗ್ರಹ
ಕರ್ನಾಟಕ ಕಾಂಗ್ರೆಸ್ನಲ್ಲಿನ ನಾಯಕತ್ವಕ್ಕಾಗಿ ನಡೆಯುತ್ತಿರುವ ಕಲಹಕ್ಕೂ ಕೂಡ ಧನ್ಯವಾದಗಳು. ಏಕೆಂದರೆ ಹಗರಣಗಳ ಮಾಹಿತಿ ಸುಲಭವಾಗಿ ಹೊರಬೀಳುತ್ತಿದೆ. ರಾಜ್ಯ ಕಾಂಗ್ರೆಸ್‌ನಲ್ಲಿ ಯಾರಿಗೆ ಯಾರೂ ನಿಷ್ಠರಾಗಿಲ್ಲ. ಎಲ್ಲರೂ ತಮ್ಮ ಕುರ್ಚಿಗೆ ಅಂಟಿಕೊಂಡಿರುವುದರಿಂದ, ದೆಹಲಿ ದೂರದಲ್ಲಿದೆ ಮತ್ತು ಅಲ್ಲಿಗೆ ಏನೂ ತಲುಪುವುದಿಲ್ಲ ಎಂದು ಖರ್ಗೆ ಜೀ ಭಾವಿಸಿದರೆ ಅದು ತಪ್ಪು. ಪ್ರಜಾಪ್ರಭುತ್ವವನ್ನು ಉಳಿಸುವುದು ಎಂದರೆ ತಮ್ಮ ಕುಟುಂಬವನ್ನು ಉಳಿಸುವುದು ಎಂದರ್ಥವಲ್ಲ. ಅದೇನಿದ್ದರೂ ನೆಹರೂ-ಗಾಂಧಿ ಕುಟುಂಬದ ಮಂತ್ರ ಎಂದು ಲಹರ್ ಸಿಂಗ್ ಕಿಡಿ ಕಾರಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ