AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ಸಿದ್ದರಾಮಯ್ಯ ಸಭೆ ಬೆನ್ನಲ್ಲೇ ನಾಳೆಯ ಸಾರಿಗೆ ಮುಷ್ಕರ ಹಿಂಪಡೆದ ಜಂಟಿ ಕ್ರಿಯಾ ಸಮಿತಿ

ಡಿಸೆಂಬರ್ 31ರ ಬೆಳಿಗ್ಗೆ 6 ಗಂಟೆಯಿಂದ ಬಸ್ ಮುಷ್ಕರಕ್ಕೆ ಜಂಟಿ ಕ್ರಿಯಾ ಸಮಿತಿ ಮುಂದಾಗಿತ್ತು. ಆದರೆ ಇದೀಗ ಸಿಎಂ ಸಿದ್ದರಾಮಯ್ಯರೊಂದಿಗಿನ ಸಭೆ ಬಳಿಕ ಮುಷ್ಕರ ಕೈಬಿಡಲಾಗಿದೆ. ಹಾಗಾಗಿ ಮಂಗಳವಾರ ಎಂದಿನಂತೆ ಕೆಎಸ್ಆರ್​ಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದ ಬಸ್​ಗಳು ಸಂಚಾರ ಮಾಡಲಿವೆ. ಸಂಕ್ರಾಂತಿ ಹಬ್ಬದ ‌ನಂತರ ಜಂಟಿ ಕ್ರಿಯಾ ಸಮಿತಿ ಜೊತೆಗೆ ಸಿಎಂ ಮತ್ತೆ ಸಭೆ ನಡೆಸಲಿದ್ದಾರೆ. 

ಸಿಎಂ ಸಿದ್ದರಾಮಯ್ಯ ಸಭೆ ಬೆನ್ನಲ್ಲೇ ನಾಳೆಯ ಸಾರಿಗೆ ಮುಷ್ಕರ ಹಿಂಪಡೆದ ಜಂಟಿ ಕ್ರಿಯಾ ಸಮಿತಿ
ಸಿಎಂ ಸಿದ್ದರಾಮಯ್ಯರೊಂದಿಗೆ ಸಭೆ ಬೆನ್ನಲ್ಲೇ ನಾಳೆಯ ಸಾರಿಗೆ ಮುಷ್ಕರ ಹಿಂಪಡೆದ ಜಂಟಿ ಕ್ರಿಯಾ ಸಮಿತಿ
Kiran Surya
| Updated By: ಗಂಗಾಧರ​ ಬ. ಸಾಬೋಜಿ|

Updated on:Dec 29, 2024 | 10:18 PM

Share

ಬೆಂಗಳೂರು, ಡಿಸೆಂಬರ್​ 29: ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಜಂಟಿ ಕ್ರಿಯಾ ಸಮಿತಿ ಡಿ. 31 ರಿಂದ ಸಾರಿಗೆ ‌ಮುಷ್ಕರಕ್ಕೆ ಕರೆ ನೀಡಿತ್ತು. ಆದರೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಸಾರಿಗೆ ಸಚಿವ ‌ರಾಮಲಿಂಗ ರೆಡ್ಡಿ ನೇತೃತ್ವದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಮಹತ್ವದ ಸಭೆ ಬೆನ್ನಲ್ಲೇ ಸಾರಿಗೆ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮುಷ್ಕರ ಹಿಂಪಡೆದಿದೆ. ಆ ಮೂಲಕ ಡಿ.31ರಂದು ಎಂದಿನಂತೆ ಸಾರಿಗೆ ಸಂಸ್ಥೆ ಬಸ್​ಗಳು ರಸ್ತೆಗಿಳಿಯಲಿವೆ.

38 ತಿಂಗಳ ಹರಿಯರ್ಸ್ ಹಣ ಬಿಡುಗಡೆ ಮಾಡಬೇಕು ಮತ್ತು 2024ರ ಜನವರಿಯಿಂದ ವೇತನ ಹೆಚ್ಚಳ ಮಾಡಬೇಕು ಅನ್ನೋ ಎರಡು ‌ಪ್ರಮುಖ ಬೇಡಿಕೆಗಳೊಂದಿಗೆ, ಅನಂತ್ ಸುಬ್ಬರಾವ್ ನೇತೃತ್ವದ ಜಂಟಿ ಕ್ರಿಯಾ ಸಮಿತಿ ಡಿಸೆಂಬರ್​ 31 ರ ಮಂಗಳವಾರ ಬೆಳಿಗ್ಗೆ 6 ರಿಂದ ಕೆಎಸ್ಆರ್ಟಿಸಿ, ಬಿಎಂಟಿಸಿಯ ಸೇರಿದಂತೆ ನಾಲ್ಕು ನಿಗಮದ ಬಸ್ಸುಗಳನ್ನು ನಿಲ್ಲಿಸಿ ಮುಷ್ಕರ ಮಾಡಲು ಸಿದ್ದತೆ ಮಾಡಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಜೊತೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ‌ಸಾರಿಗೆ ಇಲಾಖೆಯ ಅಧಿಕಾರಿಗಳ ಸಭೆ ನಡೆಯಿತು. ಈ ಸಭೆಯಲ್ಲಿ ನೌಕರರ ಬೇಡಿಕೆಗಳನ್ನು ಸಿಎಂ ಗಮನಕ್ಕೆ ತರಲಾಗಿತ್ತು. ಸಿಎಂ ಕೂಡ ಪಾಸಿಟಿವ್ ಆಗಿದ್ದಾರಂತೆ.

ಇದನ್ನೂ ಓದಿ: ಡಿ 31ರಿಂದ ಸಾರಿಗೆ ನೌಕರರ ಮುಷ್ಕರ: ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ, ರಾಮಲಿಂಗಾರೆಡ್ಡಿ ಹೇಳಿದ್ದಿಷ್ಟು

ಸಭೆ ಬಳಿಕ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಡಿ. 31 ರಂದು ಜಂಟಿ ಕ್ರಿಯಾ ಸಮಿತಿಯವರು ವಿವಿಧ ಬೇಡಿಕೆಯನ್ನಿಟ್ಟು ಮುಷ್ಕರ ಮಾಡಲು ಮುಂದಾಗಿದ್ದರು. ನಮ್ಮ‌ ಕಾರ್ಪೊರೇಷನ್ ಆರ್ಥಿಕ ಪರಿಸ್ಥಿತಿ ಅವರಿಗೂ ಗೊತ್ತಿದೆ. ಹಿಂದೆ ಬಿಜೆಪಿ ಸರ್ಕಾರ ಇದ್ದಾಗ 5900 ಕೋಟಿ ರೂ. ಸಾಲ ಇಟ್ಟು ಹೋಗಿದ್ದಾರೆ. ಸಂಘಟನೆಯವರು ನೌಕರರ ಪರವಾಗಿ ಕೆಲಸ ಮಾಡಿದ್ದಾರೆ. ನಾನೂ ಕೂಡ ನೌಕರರ ಬೇಡಿಕೆಯನ್ನು ಸಿಎಂ ಜೊತೆ ಚರ್ಚೆ ಮಾಡಿದ್ದೇನೆ. 11 ಸಾವಿರ ನೌಕರರಿಗೆ ಬಾಕಿಯಿದ್ದ 220 ಕೋಟಿ ಬಿಡುಗಡೆ ಮಾಡಿದ್ದಾರೆ, ಮತ್ತೆ ಎರಡು ಸಾವಿರ ಕೋಟಿ ರೂ. ಸಿಎಂ ಬಿಡುಗಡೆ ಮಾಡಿದ್ದಾರೆ. ಆ ಹಣ ಬಂದರೆ ಸಮಸ್ಯೆ ಪರಿಹಾರ ಆಗುತ್ತದೆ. ವೇತನ ಪರಿಷ್ಕರಣೆ ಬಗ್ಗೆ ಕೂಡ ಸಿಎಂ ಗೆ ಹೇಳಿದ್ದೇವೆ. ಫೆಬ್ರವರಿಯಲ್ಲಿ ಬಜೆಟ್ ಬರಲಿದೆ. ಆಗ ಅನುದಾನ ನೀಡಿ ಅಂತ ಬೇಡಿಕೆ ಇಟ್ಟಿದ್ದೇನೆ. ಸಂಕ್ರಾಂತಿ ಬಳಿಕ ಸಮಸ್ಯೆ ಬಗೆಹರಿಯಲಿದೆ ಎಂದಿದ್ದಾರೆ.

ಇನ್ನೂ ಮುಷ್ಕರಕ್ಕೆ ಸಂಬಂಧಿಸಿದಂತೆ ನಾಳೆ ಕಾರ್ಮಿಕ ಇಲಾಖೆ ಕೂಡ ಮಹತ್ವದ ಸಭೆ ಕರೆದಿತ್ತು. ಕಾರ್ಮಿಕ ಇಲಾಖೆಯ ಆಯುಕ್ತರ ನೇತೃತ್ವದಲ್ಲಿ ನಡೆಯಲಿತ್ತು. ಈ ಸಭೆಯಲ್ಲಿ ಕೆಎಸ್ಆರ್ಟಿಸಿ ಎಂಡಿ, ಬಿಎಂಟಿಸಿ ಎಂಡಿ, ಸೇರಿದಂತೆ ನಾಲ್ಕು ನಿಗಮದ ಎಂಡಿಗಳು ಮುಷ್ಕರಕ್ಕೆ ಕರೆ ನೀಡಿರುವ ಆರು ಸಾರಿಗೆ ನೌಕರರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷರುಗಳು ಭಾಗಿಯಾಗಲಿದ್ದರು.

ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ್ ಸುಬ್ಬರಾವ್ ಹೇಳಿದ್ದಿಷ್ಟು

ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ್ ಸುಬ್ಬರಾವ್ ಮಾತನಾಡಿದ್ದು, ನಮ್ಮ ಬೇಡಿಕೆಗಳಾದ 38 ತಿಂಗಳ ಹರಿಯರ್ಸ್, ಜ. 1 ರಿಂದ ವೇತನ ಒಪ್ಪಂದ ಮಾಡಲಾಗಿದೆ. ಅದರ ಬಗ್ಗೆ ಸಿಎಂ ಸಿದ್ದರಾಮಯ್ಯ ನಮ್ಮ ಜೊತೆಗೆ ಮಾತಾಡುತ್ತಾರೆ. ನಾವು ಈಗಾಗಲೇ ಹೇಳಿದ್ದೇವೆ ಸಿಎಂ ಮಟ್ಟದಲ್ಲಿ ಮಾತಾಡಿದ್ರೆ ಸಮಸ್ಯೆ ಬಗಹರಿಯುತ್ತದೆ ಎಂದು. ಸಿಎಂ ಸಭೆ ಕರೆಯುತ್ತಾರೆ ಎಂದು ಸಚಿವ ರಾಮಲಿಂಗ ರೆಡ್ಡಿ ನಮಗೆ ಪತ್ರ ಕಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಮುಷ್ಕರ ವಾಪಸ್ಸು ಪಡೆದುಕೊಂಡಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: ಸರ್ಕಾರ ನಮ್ಮ ಬೇಡಿಕೆಗೆ ಸಮ್ಮತಿಸಿಲ್ಲ: ಡಿ 31ರಂದು ಕೆಎಸ್​ಆರ್​ಟಿಸಿ ಬಂದ್​ ಎಂದ ಕ್ರಿಯಾ ಸಮಿತಿ ಅಧ್ಯಕ್ಷ

ನೌಕರರಿಗೆ ನಾವು ಕರೆ ಕೊಡುತ್ತಿದ್ದೇವೆ ಎಲ್ಲರೂ ನಾರ್ಮಲ್ ಆಗಿ ಡ್ಯೂಟಿ ಮಾಡಿ. ಸಿಎಂ ಆದಷ್ಟು ಬೇಗ ನಮ್ಮ ಜೊತೆಗೆ ಸಭೆ ನಡೆಸಿ ನಮ್ಮ ಬೇಡಿಕೆಗಳನ್ನು ಈಡೇರಿಸಲು ಮನವಿ ಮಾಡುತ್ತೇವೆ ಎಂದಿದ್ದಾರೆ. ನಿವೃತ್ತ ನೌಕರರಿಗೆ ನೀಡಬೇಕಿದ್ದ 226 ಕೋಟಿ ರೂ. ಹಣವನ್ನು ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದ್ದಾರೆ. ಎರಡು ಸಾವಿರ ಕೋಟಿ ರೂ. ನಿಗಮಕ್ಕೆ ಸಹಾಯಧನ ಬರುತ್ತದೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:18 pm, Sun, 29 December 24