ಬೆಂಗಳೂರು, ಮಾರ್ಚ್ 15: ರಸ್ತೆ ವಿಸ್ತರಣೆ ಉದ್ದೇಶಕ್ಕಾಗಿ ಬೆಂಗಳೂರಿನ ಅರಮನೆ ಮೈದಾನದ (Palace Ground) ಜಮೀನು ಸ್ವಾಧೀನಪಡಿಸಿಕೊಳ್ಳಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣವು ವಿಚಾರಣೆಗೆ ಬರಲಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಆದರೆ, ಸಂಪುಟದ ನಿರ್ಧಾರವನ್ನು ಅವರು ಪ್ರಕಟಿಸಿದ ಬೆನ್ನಲ್ಲೇ ಪ್ರತಿಪಕ್ಷ ಬಿಜೆಪಿ (BJP) ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ (Congress) ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದೆ.
ಮೇಖ್ರಿ ವೃತ್ತದ ಬಳಿ 15.5 ಎಕರೆ ಅರಮನೆ ಮೈದಾನವನ್ನು ರಸ್ತೆ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಳ್ಳಲು 2006ರಲ್ಲಿ ಕರ್ನಾಟಕ ಸರ್ಕಾರ ನಿರ್ಧರಿಸಿತ್ತು. ಅದರಂತೆ ಅರಮನೆ ಮೈದಾನದೊಳಗೆ ಕಾಂಪೌಂಡ್ ಗೋಡೆ ನಿರ್ಮಿಸಲಾಗಿತ್ತು. ಆದರೆ ಹಿಂದಿನ ಬಿಜೆಪಿ ಸರ್ಕಾರ ಅದರ ಅಗತ್ಯವಿಲ್ಲ ಎಂದು ಹೇಳಿತ್ತು. ಹೀಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ರಾಜ ಮನೆತನ, 2006-07ರಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಉದ್ದೇಶವಿದ್ದ ಕಾರಣ ಅರಮನೆ ಮೈದಾನದೊಳಗೆ ಕಾಂಪೌಂಡ್ ಗೋಡೆ ನಿರ್ಮಿಸಲಾಗಿತ್ತು, ಆದರೆ ಈಗ ರಸ್ತೆ ವಿಸ್ತರಣೆಗೆ ಆ ಜಾಗದ ಅಗತ್ಯವಿಲ್ಲ ಎಂದು ಸರ್ಕಾರ ಹೇಳಿದೆ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತ್ತು.
ಸುಪ್ರೀಂ ಕೋರ್ಟ್ ಆ ಪ್ರಕರಣವನ್ನು ನ್ಯಾಯಾಂಗ ನಿಂದನೆ ಪ್ರಕರಣವನ್ನಾಗಿ ಪರಿವರ್ತಿಸಿತ್ತು. ಭೂಮಿ ಸ್ವಾಧೀನಪಡಿಸಿಕೊಂಡಿರುವುದರಿಂದ ಪರಿಹಾರ ನೀಡಬೇಕು. ಜಮೀನು ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ತೀರ್ಮಾನಕ್ಕೆ ಬರುವಂತೆ ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿತ್ತು ಎಂದು ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಮೈಸೂರು ರಾಜಮನೆತನದವರು ಭೂಸ್ವಾಧೀನ ಸಂಬಂಧಿತ ಕಾಯ್ದೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದರು. ಆಗ ನ್ಯಾಯಾಲಯ ಯಥಾಸ್ಥಿತಿಗೆ ಆದೇಶ ನೀಡಿತ್ತು. ಈ ವಿಷಯವನ್ನು ಯಥಾಸ್ಥಿತಿಯಲ್ಲಿ ಏಕೆ ಮುಂದುವರಿಸಲಾಗಿದೆ ಎಂದು ಸಿಎಂ ಗುರುವಾರ ಕೇಳಿದ್ದಾರೆ ಎಂದು ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಇದನ್ನೂ ಓದಿ: ವಿಧಾನಸೌಧದಲ್ಲಿ ಭುವನೇಶ್ವರಿ ಪ್ರತಿಮೆ ಸ್ಥಾಪನೆ: 3ನೇ ಹಂತದ ಮೆಟ್ರೋ ಮಾರ್ಗ ಕೈಗೆತ್ತಿಕೊಳ್ಳಲು ಸಂಪುಟ ಒಪ್ಪಿಗೆ
ದ್ವೇಷದ ರಾಜಕಾರಣಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಕಿಡಿಕಾರಿದ್ದಾರೆ. ನಾಡು ಕಟ್ಟಿದ ದೊರೆ ಮನ್ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಏಕವಚನ ಪ್ರಯೋಗ ಮಾಡಿದ್ದ ಸಿಎಂ ಸಿದ್ದರಾಮಯ್ಯಗೆ ಜನಾನುರಾಗಿ ರಾಜಮನೆತನದ ಬಗ್ಗೆ ಎಷ್ಟು ದ್ವೇಷವಿದೆ ಎನ್ನುವುದು ಗುಟ್ಟೇನು ಅಲ್ಲ. ಈಗ ಯದುವಂಶದ ಕುಡಿ ಯದುವೀರ್ ಒಡೆಯರ್ ಅವರಿಗೆ ಮೈಸೂರಿನಿಂದ ಬಿಜೆಪಿ ಟಿಕೆಟ್ ಸಿಕ್ಕ ಕೂಡಲೇ ರಾಜಮನೆತನದ ವಿರುದ್ಧ ದ್ವೇಷ ರಾಜಕಾರಣ ಮಾಡಲು ಹೊರಟಿರುವ ಸಿಎಂ ಸಿದ್ದರಾಮಯ್ಯ ನಡೆ ನೋಡಿದರೆ ತವರು ಜಿಲ್ಲೆಯಲ್ಲೇ ಲೋಕಸಭೆ ಚುನಾವಣೆಯ ಸೋಲಾಗುತ್ತಿರುವುದು ಅವರ ನಿದ್ದೆ ಕೆಡಿಸಿದಂತಿದೆ ಎಂದು ಅಶೋಕ್ ಉಲ್ಲೇಖಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ