ಇದು ಮುಖ್ಯಮಂತ್ರಿಯನ್ನು ಬದಲಿಸುವ ಸಮಯವಲ್ಲ; ಸಿಎಂ ಯಡಿಯೂರಪ್ಪಗೆ ರಾಜ್ಯ ಬಿಜೆಪಿ ಅಭಯ

| Updated By: Skanda

Updated on: May 28, 2021 | 7:16 AM

ಒಂದು ಕಡೆ ಕೊರೊನಾ ಕಾಟ ಮತ್ತೊಂದು ಕಡೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕಾಟ ನಡೆದಿರುವ ಬಗ್ಗೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತಾದ ಚಟುವಟಿಕೆ ಸಚಿವರಿಂದಲೇ ನಡೆದಿದೆ ಎಂಬುದನ್ನು ಪರೋಕ್ಷವಾಗಿ ಪುಷ್ಠೀಕರಿಸಿದ್ದಾರೆ.

ಇದು ಮುಖ್ಯಮಂತ್ರಿಯನ್ನು ಬದಲಿಸುವ ಸಮಯವಲ್ಲ; ಸಿಎಂ ಯಡಿಯೂರಪ್ಪಗೆ ರಾಜ್ಯ ಬಿಜೆಪಿ ಅಭಯ
ರವಿಕುಮಾರ್ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿಯನ್ನು ಬದಲಿಸುವ ಸಮಯ ಇದಲ್ಲ. ಮೊದಲು ರಾಜ್ಯದ ಜನರನ್ನು ಕೊರೊನಾ ಮುಕ್ತರನ್ನಾಗಿ ಮಾಡೋಣ ಎಂದು ರಾಜ್ಯ ಬಿಜೆಪಿ ಪ್ರತಿಕ್ರಿಯೆ ನೀಡಿದೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಟ್ವೀಟ್ ಮೂಲಕ ಈ ಪ್ರತಿಕ್ರಿಯೆ ನೀಡಿದ್ದು, ಇದು ನಾಯಕತ್ವ ಬದಲಾವಣೆ ಕುರಿತು ರಾಜ್ಯ ಬಿಜೆಪಿ ವತಿಯಿಂದ ಮೊದಲ ಪ್ರತಿಕ್ರಿಯೆಯಾಗಿದೆ.

ಜನತೆಗೆ ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ರಾಜ್ಯದ ಜನಸಾಮಾನ್ಯರ ಜೀವನ ಅಯೋಮಯವಾಗಿದೆ. ಇಂತಹ ಸಂದರ್ಭದಲ್ಲಿ ಜನರ ಸೇವೆಯನ್ನು ಮಾಡೋಣ. ಸಿಎಂ ಯಡಿಯೂರಪ್ಪ ಅವರ ಕೈ ಬಲಪಡಿಸೋಣ, ಇದು ನಮ್ಮೆಲ್ಲರ ಆದ್ಯತೆ ಆಗಲಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಟ್ವೀಟ್ ಮಾಡಿದ್ದಾರೆ.

ನಾಯಕತ್ವ ಬದಲಾವಣೆ ಚಟುವಟಿಕೆ ಸಚಿವರಿಂದಲೇ ನಡೆದಿದೆ -ಪರೋಕ್ಷವಾಗಿ ಪುಷ್ಠೀಕರಿಸಿದ್ದ ಸಿಎಂ ಯಡಿಯೂರಪ್ಪ

ಒಂದು ಕಡೆ ಕೊರೊನಾ ಕಾಟ ಮತ್ತೊಂದು ಕಡೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕಾಟ ನಡೆದಿರುವ ಬಗ್ಗೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತಾದ ಚಟುವಟಿಕೆ ಸಚಿವರಿಂದಲೇ ನಡೆದಿದೆ ಎಂಬುದನ್ನು ಪರೋಕ್ಷವಾಗಿ ಪುಷ್ಠೀಕರಿಸಿದ್ದಾರೆ. ಅದೇ ವೇಳೆ, ರಾಜ್ಯವನ್ನು ಕಾಡುತ್ತಿರುವ ಕೊರೊನಾ ಸಂಕಟದಿಂದ ಜನರನ್ನು ಕಾಪಾಡುವ ಕೆಲಸ ನನ್ನ ಜವಾಬ್ದಾರಿಯಾಗಿದೆ. ಹಾಗಾಗಿ ರಾಜಕೀಯ ಬೆಳವಣಿಗೆಗಳ ಬಗ್ಗೆ ತಲೆಕೆಡಿಸಿಕೊಳ್ಲುವುದಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

ನಾಯಕತ್ವ ಬದಲಾವಣೆ ಕುರಿತಾದ ಚಟುವಟಿಕೆ ಸಚಿವರಿಂದಲೇ ನಡೆದಿದೆ ಎಂಬುದು ಗಮನಕ್ಕೆ ಬಂದಿದೆ. ಆದರೆ ಯಾರು, ಎಲ್ಲಿಗೆ ಹೋಗಿದ್ರೋ ಅವರಿಗೆ ನಮ್ಮ ರಾಷ್ಟ್ರೀಯ ನಾಯಕರು ತಕ್ಕ ಉತ್ತರ ಕೊಟ್ಟು ಕಳುಹಿಸಿದ್ದಾರೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ತನ್ಮೂಲಕ, ದೆಹಲಿಗೆ ಹೋಗಿ ಬಂದವರಿಗೆ ವರಿಷ್ಠರ ಮಟ್ಟದಲ್ಲಿ ಯಾವುದೇ ಕೆಲಸ ಆಗಿಲ್ಲ ಎಂಬುದನ್ನೂ ಮಾಹಿತಿ ಪಡೆದುಕೊಂಡಂತಿದ್ದಾರೆ ಸಿಎಂ ಯಡಿಯೂರಪ್ಪ. ಹೀಗಾಗಿ ದೆಹಲಿಗೆ ಹೋಗಿ ಚಟುವಟಿಕೆ ನಡೆಸಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಅವರು ಪರೋಕ್ಷವಾಗಿ ಹೇಳಿದ್ದಾರೆ.

ಇನ್ನು ಸಚಿವ ಸಂಪಟ ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಕೆಲ ಸಚಿವರು ಮತ್ತು ಶಾಸಕರು ಉಳಿದ ಇನ್ನೆರಡು ವರ್ಷ ಕಾಲ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾತೇ ಇಲ್ಲ. ಬಿ ಎಸ್​ ಯಡಿಯೂರಪ್ಪ ಅವರೇ ಕರ್ನಾಟಕದ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ರಾಜ್ಯ ನಾಯಕತ್ವದಲ್ಲಿ ಅಚಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ, ಮುಖ್ಯಮಂತ್ರಿ ಬದಲಾವಣೆ ಚರ್ಚೆಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಮಾಡುವುದಾಗಿ ಹಿರಿಯ ಸಚಿವ ವಿ ಸೋಮಣ್ಣ ಹೇಳಿದ್ದಾರೆ. ಇನ್ನು ಮತ್ತೊಬ್ಬ ಸಚಿವ ಸಿಪಿ ಯೋಗೀಶ್ವರ್​ ಸಂಪುಟ ಸಭೆಗೆ ಪಾಲ್ಗೊಳ್ಳಲು ಆಗಮಿಸಿದ್ದಾರೆ. ಆದರೆ ಸುದ್ದಿಗಾರರೊಂದಿಗೆ ಮಾತನಾಡಲು ಹಿಂಜರಿದ ಯೋಗೀಶ್ವರ್​ ಅವರು ಸಂಪುಟ ಸಭೆ ಬಳಿಕ ಸುದ್ದಿಗೋಷ್ಟಿ ನಡೆಸಿ, ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ಸವಿಸ್ತಾರವಾಗಿ ಮಾತನಾಡುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಕೊವಿಡ್ ಮೃತದೇಹ ಹೊತ್ತ ಆ್ಯಂಬುಲೆನ್ಸ್​ನ್ನು ಸ್ವತಃ ಚಾಲನೆ ಮಾಡುವ ಶಾಸಕ, ಯಾರಿವರು ಗೊತ್ತೇ? 

ಕೊವಿಡ್​ ಸೋಂಕಿನಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ 3 ಲಕ್ಷ ರೂ.ಪರಿಹಾರ, ಪ್ರತಿ ತಿಂಗಳೂ 2000 ರೂ.: ಕೇರಳ ಸಿಎಂ ಘೋಷಣೆ