ಕೊರೊನಾ ಟೆಸ್ಟ್ ಹೆಸರಲ್ಲಿ ತಲೆಯೆತ್ತಿವೆ ನಕಲಿ ಲ್ಯಾಬ್; ಬೆಳಗಾವಿ ಪೊಲೀಸರ ಕಾರ್ಯಾಚರಣೆಯಲ್ಲಿ ಅಕ್ರಮ ಬಯಲು
ಕೊರೊನಾ ಹಾವಳಿ ಇರುವ ಕಾರಣ ಅದರ ಲಾಭ ಪಡೆದುಕೊಂಡು ನಕಲಿ ಲ್ಯಾಬ್ ಇನ್ವೆಸ್ಟಿಗೇಷನ್, ಕೋವಿಡ್ ಪ್ರೊಫೈಲಿಂಗ್ ರಿಪೋರ್ಟ್ ನೀಡುತ್ತಿದ್ದ ಹಸನಸಾಬ್ ಸಯ್ಯದ್, ರ್ಯಾಪಿಡ್ ಟೆಸ್ಟ್, ಆರ್‌ಟಿಪಿಸಿಆರ್ ಟೆಸ್ಟ್ ಮಾಡಿಸುವ ಕಿಟ್ ಇಟ್ಟುಕೊಂಡು ಯಾವುದೇ ವೈದ್ಯಕೀಯ ಉಪಕರಣ ಇಲ್ಲದೇ ತನಗೆ ತಿಳಿದ ವರದಿಯನ್ನೇ ಪ್ರಿಂಟ್ ತೆಗೆದು ಜನರಿಗೆ ಕೊಡುತ್ತಿದ್ದ.

ಬೆಳಗಾವಿ: ಕೊರೊನಾ ನೆಪದಲ್ಲಿ ಈಗಾಗಲೇ ಎಗ್ಗಿಲ್ಲದಷ್ಟು ಅಕ್ರಮಗಳು ನಡೆದುಹೋಗಿವೆ. ಇದೀಗ ಬೆಳಗಾವಿ ಜನತೆ ಯೋಚನೆ ಮಾಡಬೇಕಾದ ಸುದ್ದಿಯೊಂದು ಹೊರಬಿದ್ದಿದ್ದು, ಕೊವಿಡ್ ಹೆಸರನ್ನೇ ಬಂಡವಾಳ ಮಾಡಿಕೊಂಡು ನಕಲಿ ಲ್ಯಾಬೋರೇಟರಿ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬೆಳಗಾವಿ ಸಿಇಎನ್ ಸಿಪಿಐ ಬಿ.ಆರ್ ಗಡ್ಡೆಕರ್ ನೇತೃತ್ವದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಲೆಗೆ ಕೆಡವಿದ್ದಾರೆ. ಬೆಳಗಾವಿ ತಾಲೂಕಿನ ಪೀರನವಾಡಿಯಲ್ಲಿ ಹಸನಸಾಬ್ ಸಯ್ಯದ್(44) ಎಂಬಾತನನ್ನು ಬಂಧಿಸಲಾಗಿದ್ದು, ಪಿಯುಸಿ ವ್ಯಾಸಂಗ ಮಾಡಿದ್ದಾತ ಯಾವುದೇ ಅಧಿಕೃತ ಪದವಿ, ಪ್ರಮಾಣಪತ್ರ ಇಲ್ಲದಿದ್ದರೂ ಮೆಡ್‌ಸಿಟಿ ಕ್ಲಿನಿಕಲ್ ಲ್ಯಾಬೋರೇಟರಿ ಹೆಸರಲ್ಲಿ ನಕಲಿ ಲ್ಯಾಬ್ ನಡೆಸುತ್ತಿದ್ದ ಎನ್ನುವುದು ಬೆಳಕಿಗೆ ಬಂದಿದೆ.
ಈ ಮೊದಲು ಲೋಟಸ್ ಡಯಾಗ್ನಸ್ಟಿಕ್ ಸೆಂಟರ್ ಎಂಬ ಲ್ಯಾಬ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಕಾರಣಾಂತರಗಳಿಂದ ಡಯಾಗ್ನಸ್ಟಿಕ್ ಸೆಂಟರ್ ಬಂದ್ ಆದ ಮೇಲೆ ಮೆಡ್‌ಸಿಟಿ ಹೆಸರಲ್ಲಿ ತಾನೇ ಒಂದು ಲ್ಯಾಬ್ ತೆರೆದಿದ್ದ. ಈಗಂತೂ ಕೊರೊನಾ ಹಾವಳಿ ಇರುವ ಕಾರಣ ಅದರ ಲಾಭ ಪಡೆದುಕೊಂಡು ನಕಲಿ ಲ್ಯಾಬ್ ಇನ್ವೆಸ್ಟಿಗೇಷನ್, ಕೋವಿಡ್ ಪ್ರೊಫೈಲಿಂಗ್ ರಿಪೋರ್ಟ್ ನೀಡುತ್ತಿದ್ದ. ರ್ಯಾಪಿಡ್ ಟೆಸ್ಟ್, ಆರ್‌ಟಿಪಿಸಿಆರ್ ಟೆಸ್ಟ್ ಮಾಡಿಸುವ ಕಿಟ್ ಇಟ್ಟುಕೊಂಡು ಯಾವುದೇ ವೈದ್ಯಕೀಯ ಉಪಕರಣ ಇಲ್ಲದೇ ತನಗೆ ತಿಳಿದ ವರದಿಯನ್ನೇ ಪ್ರಿಂಟ್ ತೆಗೆದು ಜನರಿಗೆ ಕೊಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿ ವೇಳೆ ಪತ್ತೆಯಾದ ವಸ್ತುಗಳು
ಈ ಮೊದಲು ತಾನು ಕೆಲಸ ನಿರ್ವಹಿಸುತ್ತಿದ್ದ ಡಯಾಗ್ನಸ್ಟಿಕ್ ಸೆಂಟರ್‌ಗೆ ರೆಫರ್ ಮಾಡುತ್ತಿದ್ದ ವೈದ್ಯರನ್ನು ಸಂಪರ್ಕ ಮಾಡಿ, ತಾನೇ ಆಸ್ಪತ್ರೆಗಳಿಗೆ ತೆರಳಿ ರೋಗಿಗಳ ಸ್ಯಾಂಪಲ್ ಪಡೆಯುತ್ತೇನೆ. ನಂತರ ವರದಿ ಪಡೆಯಲು ಲ್ಯಾಬ್‌ಗೆ ತರುತ್ತೇನೆ ಎನ್ನುತ್ತಿದ್ದ. ಹೀಗೆ ಎಲ್ಲರನ್ನೂ ನಂಬಿಸಿ ಒಂದೊಂದು ವರದಿಗೆ ಸಾವಿರಾರು ರೂಪಾಯಿ ವಸೂಲಿ ಮಾಡುತ್ತಿದ್ದ. ಇದೀಗ ಪೊಲೀಸರ ಕಾರ್ಯಾಚರಣೆ ವೇಳೆ ಆರೋಪಿ ಹಸನಸಾಬ್ ಸಯ್ಯದ್ ಬಳಿ ರ್ಯಾಪಿಡ್ ಆ್ಯಂಟಿಜೆನ್ ಕಿಟ್, ಕಾರು, ಲ್ಯಾಪ್‌ಟಾಪ್, ಪ್ರಿಂಟರ್ ಪತ್ತೆಯಾಗಿದ್ದು ಪೊಲೀಸರು ಅವುಗಳನ್ನು ಜಪ್ತಿ ಮಾಡಿದ್ದಾರೆ.

ಅಕ್ರಮ ಲ್ಯಾಬೋರೇಟರಿ ಮೇಲೆ ದಾಳಿ ಮಾಡಿದ ಅಧಿಕಾರಿಗಳು
ಇಂಥದ್ದೊಂದು ಅಕ್ರಮ ಬೆಳಕಿಗೆ ಬಂದ ನಂತರ ಬೆಳಗಾವಿ ಜನತೆಯಲ್ಲಿ ಡಿಸಿಪಿ ವಿಕ್ರಂ ಆಮಟೆ ಮನವಿ ಮಾಡಿದ್ದು, ಕೊರೊನಾ ಹೆಸರಲ್ಲಿ ಮೋಸ ಹೋಗಬೇಡಿ. ನಕಲಿ ಲ್ಯಾಬೋರೇಟರಿ ಬಗ್ಗೆ ಎಚ್ಚರಿಕೆ ವಹಿಸಿ ಎಂದು ತಿಳಿಸಿದ್ದಾರೆ. ರಾಜ್ಯದ ಹಲವೆಡೆ ಕೊರೊನಾ ಹೆಸರಲ್ಲಿ ದಂಧೆ ನಡೆಸುವವರು ಪತ್ತೆಯಾಗುತ್ತಿದ್ದು ಜನ ಸಾಮಾನ್ಯರು ಸಾಕಷ್ಟು ಜಾಗರೂಕರಾಗಿರಬೇಕಿದೆ.
ಇದನ್ನೂ ಓದಿ: ಅಕ್ರಮವಾಗಿ ಕೊವಿಶೀಲ್ಡ್ ಲಸಿಕೆ ಹಾಕಿ ಹಣ ಮಾಡುತ್ತಿದ್ದ ಲೇಡಿ ಡಾಕ್ಟರ್ ವಜಾ
ಹೊಸ ರೀತಿಯ ಕೊರೊನಾ ಟೆಸ್ಟ್ ನಡೆಸಲು ಒಪ್ಪಿಗೆ; ಭಾರತೀಯ ವಿಜ್ಞಾನ ಸಂಸ್ಥೆ ಸಹಯೋಗದ ಸ್ಟಾರ್ಟ್ಅಪ್ಗೆ ಅನುಮತಿ



