ಬಿಜೆಪಿ ಆಂತರಿಕ ಕಲಹದ ಬಗ್ಗೆ ಅಭಿಪ್ರಾಯ ಸಂಗ್ರಹಕ್ಕೆ ಚುಗ್​ ಬಂದಿಲ್ಲ: ಬಿವೈ ವಿಜಯೇಂದ್ರ ಸ್ಪಷ್ಟನೆ

| Updated By: Ganapathi Sharma

Updated on: Dec 03, 2024 | 12:11 PM

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರ ಬೆಂಗಳೂರು ಭೇಟಿ ಪಕ್ಷದ ಆಂತರಿಕ ಸಂಘರ್ಷಕ್ಕೆ ಸಂಬಂಧಿಸಿಲ್ಲ ಎಂದು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ಇದು ಪಕ್ಷ ಸಂಘಟನಾ ಕಾರ್ಯಕ್ಕಾಗಿ ಎಂದು ಅವರು ಹೇಳಿದ್ದಾರೆ. ಯತ್ನಾಳ್ ವಿರುದ್ಧ ಜಿಲ್ಲಾಧ್ಯಕ್ಷರು ದೂರು ನೀಡುವ ವರದಿಗಳನ್ನು ಅವರು ನಿರಾಕರಿಸಿದ್ದಾರೆ.

ಬಿಜೆಪಿ ಆಂತರಿಕ ಕಲಹದ ಬಗ್ಗೆ ಅಭಿಪ್ರಾಯ ಸಂಗ್ರಹಕ್ಕೆ ಚುಗ್​ ಬಂದಿಲ್ಲ: ಬಿವೈ ವಿಜಯೇಂದ್ರ ಸ್ಪಷ್ಟನೆ
ಬಿವೈ ವಿಜಯೇಂದ್ರ
Follow us on

ಬೆಂಗಳೂರು, ಡಿಸೆಂಬರ್ 3: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಬೆಂಗಳೂರಿಗೆ ಬಂದಿರುವುದು ಪಕ್ಷದ ಆಂತರಿಕ ಸಂಘರ್ಷದ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಅಲ್ಲ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸ್ಪಷ್ಟಪಡಿಸಿದರು. ಬೆಂಗಳೂರಿನಲ್ಲಿ ಸೋಮವಾರ ಸಭೆ ಸೇರಿದ್ದ ಸುಮಾರು 21 ರಷ್ಟು ಬಿಜೆಪಿ ಜಿಲ್ಲಾಧ್ಯಕ್ಷರು, ಇಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ತರುಣ್ ಚುಗ್​ಗೆ ದೂರು ನೀಡಲಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ವಿಜಯೇಂದ್ರ ಈ ಸ್ಪಷ್ಟನೆ ನೀಡಿದ್ದಾರೆ.

ಕರ್ನಾಟಕ ಸೇರಿದಂತೆ ದೇಶಾದ್ಯಂತ ಸಂಘಟನಾ ಪರ್ವ ನಡೆಯುತ್ತಿದೆ. ಸದಸ್ಯತ್ವ ಅಭಿಯಾನ, ಜಿಲ್ಲಾ, ಮಂಡಲ ಸದಸ್ಯರ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ತರುಣ್ ಚುಗ್ ಬೆಂಗಳೂರಿಗೆ ಬಂದಿದ್ದಾರೆ. ಪಕ್ಷದ ಕಚೇರಿಯಲ್ಲಿ ಇಡೀ ದಿನ ಸಂಘಟನಾ ಸಭೆಗಳು ನಡೆಯಲಿವೆ. ಇದು ಬಿಟ್ಟರೆ ರಾಜಕೀಯ ವಿಚಾರ ಆಗಲೀ ಮತ್ಯಾವುದರ ಬಗ್ಗೆಯೂ ಏನೂ ಇಲ್ಲ. ಅಂತಹ ವಿಚಾರದ ಕುರಿತು ಚರ್ಚೆ ಇದ್ದಿದ್ದರೆ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಬರುತ್ತಿದ್ದರು. ತರುಣ್ ಚುಗ್ ಬಂದಿರುವುದು ಪಕ್ಷ ಸಂಘಟನೆ ದೃಷ್ಟಿಯಿಂದ ಮಾತ್ರ ಎಂದು ವಿಜಯೇಂದ್ರ ಹೇಳಿದರು.

ಯತ್ನಾಳ್ ಉಚ್ಚಾಟನೆಗೆ ಜಿಲ್ಲಾಧ್ಯಕ್ಷರು ಮನವಿ ಕೊಡುವ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಮನವಿ ಕೊಡಲು ಇದು ವೇದಿಕೆ ಅಲ್ಲ ಎಂದರು. ಇದು ಪಕ್ಷ ಸಂಘಟನೆ ದೃಷ್ಟಿಯಿಂದ ನಡೆಯುತ್ತಿರುವ ಸಭೆ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿ ಸಭೆ ಸೇರಿದ್ದ ಬಿಜೆಪಿ ಜಿಲ್ಲಾಧ್ಯಕ್ಷರು

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸುವ ಸಲುವಾಗಿ ಸೋಮವಾರ ಸುಮಾರು 21 ರಷ್ಟು ಜಿಲ್ಲಾಧ್ಯಕ್ಷರು ಬೆಂಗಳೂರಿನಲ್ಲಿ ಸಭೆ ಸೇರಿದ್ದರು. ಬಿಜೆಪಿ ರಾಜ್ಯ ಕಚೇರಿಯಲ್ಲಿ ತರುಣ್ ಚುಗ್ ಸಂಘಟನಾತ್ಮಕ ಸಭೆಗಳನ್ನು ನಡೆಸುತ್ತಿರುವ ಸಂದರ್ಭದಲ್ಲೇ ಯತ್ನಾಳ್ ವಿರುದ್ಧವೂ ದೂರು ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು.

ಇದನ್ನೂ ಓದಿ: ಹೈಕಮಾಂಡ್ ವಿಜಯೇಂದ್ರ ಪರವೂ ಇಲ್ಲ..ಯತ್ನಾಳ್‌ ವಿರುದ್ಧವೂ ಇಲ್ಲ: ನೊಟೀಸ್​ಗೆ ಸೀಮಿತವಾಗುತ್ತಾ ಕ್ರಮ?

ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ, ಹಾವೇರಿ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ಪೂಜಾರ್ ಮಂಗಳವಾರ ಬೆಳಗ್ಗೆ ಚುಗ್ ಭೇಟಿಗೆ ತೆರಳಿದ್ದರು. ಇದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ವಿಜಯೇಂದ್ರ ಸ್ಪಷ್ಟನೆ ನೀಡಿದ್ದಾರೆ. ಈಮಧ್ಯೆ, ವಕ್ಫ್ ವಿಚಾರವಾಗಿ ಜಂಟಿ ಸಂಸದೀಯ ಸಮಿತಿಗೆ ವರದಿ ಸಲ್ಲಿಸಲು ದೆಹಲಿಗೆ ತೆರಳಿರುವ ಯತ್ನಾಳ್ ಬಣದ ಶಾಸಕರು ಅಲ್ಲಿ ಸಭೆ ನಡೆಸುತ್ತಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:09 pm, Tue, 3 December 24