ಹೈಕಮಾಂಡ್ ವಿಜಯೇಂದ್ರ ಪರವೂ ಇಲ್ಲ..ಯತ್ನಾಳ್ ವಿರುದ್ಧವೂ ಇಲ್ಲ: ನೊಟೀಸ್ಗೆ ಸೀಮಿತವಾಗುತ್ತಾ ಕ್ರಮ?
ಕರ್ನಾಟಕ ಬಿಜೆಪಿ ಮನೆಯಲ್ಲಿ ಭುಗಿಲೆದ್ದಿರುವ ಆಂತರಿಕ ಕಚ್ಚಾಟ ಕೈ ಮೀರಿ ಹೋಗಿದೆ. ಯತ್ನಾಳ್ ಹಾಗೂ ವಿಜಯೇಂದ್ರ ಬಣದ ನಡುವೆ ಬಹಿರಂಗ ಕಿತ್ತಾಟ ಶುರುವಾಗಿದೆ. ಇದು ತಾರಕಕ್ಕೇರುತ್ತಿದ್ದಂತೆಯೇ ಹೈಕಮಾಂಡ್ ಮಧ್ಯ ಪ್ರವೇಶ ಮಾಡಿದ್ದು, ಯತ್ನಾಳ್ಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ಇಷ್ಟು ದಿನ ಒಂದು ಲೆಕ್ಕ. ಈಗ ಇನ್ನೊಂದು ಲೆಕ್ಕ ಎನ್ನುವಂತಾಗಿದ್ದು, ಎಲ್ಲರ ಚಿತ್ತ ಈಗ ಹೈಕಮಾಂಡ್ನತ್ತ ನೆಟ್ಟಿದೆ.
ಬೆಂಗಳೂರು, (ಡಿಸೆಂಬರ್ 02): ಕರ್ನಾಟಕ ಬಿಜೆಪಿಯಲ್ಲಿನ ಬಣ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡು ತಾರಕಕ್ಕೇರುತ್ತಿದ್ದಂತೆಯೇ ಹೈಕಮಾಂಡ್ ಮಧ್ಯ ಪ್ರವೇಶಿಸಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಸಿಡಿದೆದ್ದಿರುವ ಯತ್ನಾಳ್ಗೆ ಕೇಂದ್ರ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದ್ದು, 10 ದಿನಗಳ ಒಳಗೆ ಉತ್ತರ ನೀಡುವಂತೆ ಸೂಚಿಸಿದೆ. ಇನ್ನು ನೋಟಿಸ್ ಕೊಟ್ಟ ವಿಚಾರವಾಗಿ ಮಾತನಾಡಿದ ವಿಜಯೇಂದ್ರ, ಇಂದು ನೋಟಿಸ್ ಬಂದಿದೆ. 10 ದಿನ ಟೈಮ್ ಇದೆ ಕಾದು ನೋಡೋಣ ಎಂದಿದ್ದಾರೆ. ಆದ್ರೆ, ಯತ್ನಾಳ್, ವಿಜಯೇಂದ್ರ ವಿರುದ್ಧ ಹೋರಾಟ ನಿರಂತರವಾಗಿರುತ್ತದೆ ಎಂದು ಖಡಕ್ ಆಗಿ ಹೇಳಿದ್ದಾರೆ. ಇದೆಲ್ಲದರ ಮಧ್ಯ ಹೈಕಮಾಂಡ್ ಮುಂದೆ ಏನು ಮಾಡಲಿದೆ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ. ಯಾಕಂದ್ರೆ ನೋಟಿಸ್ ನೀಡುತ್ತಿರುವುದು ಇದು ಮೊದಲಲ್ಲ. ಈ ಹಿಂದೆಯೂ ಹೈಕಮಾಂಡ್, ಯತ್ನಾಳ್ಗೆ ಮೂರ್ನಾಲ್ಕು ನೋಟಿಸ್ ನೀಡಿ ಸುಮ್ಮನಾಗಿದೆ. ಈಗ ಮತ್ತೆ ಅದನ್ನೇ ಮಾಡುತ್ತೋ ಅಥವಾ ಪಕ್ಷದೊಳಗಿನ ಭಿನ್ನಮತವನ್ನು ಶಾಶ್ವತವಾಗಿ ಸರಿ ಮಾಡುತ್ತೋ ಎನ್ನುವ ಚರ್ಚೆ ಶುರುವಾಗಿದೆ.
ಯತ್ನಾಳ್ಗೆ ನೋಟಿಸ್ ಹೊಸದೇನಲ್ಲ
ಯತ್ನಾಳ್ಗೆ ಶೋಕಾಸ್ ನೋಟಿಸ್ ಹೊಸದೇನಲ್ಲ. ವಿಜಯೇಂದ್ರ, ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿ ಕೆಲ ಆರೋಪಗಳನ್ನು ಮಾಡಿದ್ದಕ್ಕೆ ಈ ಹಿಂದೆ ಮೂರ್ನಾಲ್ಕು ನೋಟಿಸ್ಗಳನ್ನು ನೀಡಲಾಗಿದೆ. ಆದ್ರೆ, ಹೈಕಮಾಂಡ್ ಏನು ಮಾಡಿತ್ತು? ಕೇವಲ ಯತ್ನಾಳ್ದಿಂದ ಉತ್ತರ ಪಡೆದುಕೊಂಡು ಸೈಲೆಂಟ್ ಆಗಿತ್ತು. ಇದರೊಂದಿಗೆ ಯತ್ನಾಳ್ಗೆ ನೋಟಿಸ್ ನೀಡಿದೆ ಎಂದು ಯಡಿಯೂರಪ್ಪ ಬಣಕ್ಕೆ ಸಮಾಧಾನ ಮಾಡಿತ್ತು. ಈಗ ಮತ್ತೆ ಅದನ್ನೇ ಮುಂದುವರಿಸುವ ಎಲ್ಲಾ ಲಕ್ಷ್ಮಣಗಳು ಇವೆ. ಯತ್ನಾಳ್ ವಿರುದ್ಧ ಕ್ರಮಕ್ಕೆ ವಿಜಯೇಂದ್ರ ಒತ್ತಡ ಹೇರಿದ್ದರಿಂದ ಕೇವಲ ಶೋಕಾಸ್ ನೊಟೀಸ್ಗೆ ಸೀಮಿತವಾಗುತ್ತೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ನೋಟಿಸ್ ಕೊಟ್ಟರೂ ತಣ್ಣಗಾದದ ಕಿಚ್ಚು: ಯತ್ನಾಳ್ಗೆ ಎರಡಲ್ಲಿ ಒಂದಾಗಬೇಕೆಂದು ಪಟ್ಟು
ವಿಜಯೇಂದ್ರ ಒತ್ತಡಕ್ಕೆ ನೊಟೀಸ್ಗೆ ಸೀಮಿತವಾಗುತ್ತಾ ಕ್ರಮ?
ಎರಡು ದಿನಗಳ ಹಿಂದೆ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗಿದ್ದ ವಿಜಯೇಂದ್ರ, ಯತ್ನಾಳ್ ವಿರುದ್ಧ ಕ್ರಮಕೈಕೊಳ್ಳುವಂತೆ ಒತ್ತಡ ಹೇರಿದ್ದರು. ಅಲ್ಲದೇ ಅವರ ಬಹಿರಂಗ ಆರೋಪಗಳಿಂದ ವೈಯಕ್ತಿಕ ಮಾತ್ರವಲ್ಲ ಪಕ್ಷಕ್ಕೂ ಹಾನಿಯಾಗುತ್ತದೆ. ಹೀಗೆ ಮುಂದುವರಿದರೆ ಪಕ್ಷ ಸಂಘಟನೆ ಮಾಡುವುದು ಕಷ್ಟಸಾಧ್ಯ. ಹೀಗಾಗಿ ಈಗಲೇ ಯತ್ನಾಳ್ಗೆ ಬ್ರೇಕ್ ಹಾಕಲೇಬೇಕೆಂದು ವಿಜಯೇಂದ್ರ ಹೇಳಿ ಬಂದಿದ್ದರು. ಹೀಗಾಗಿ ವಿಜಯೇಂದ್ರ ಒತ್ತಡಕ್ಕೆ ಮಣಿದು ಹೈಕಮಾಂಡ್ ಯತ್ನಾಳ್ಗೆ ನೋಟಿಸ್ ಜಾರಿ ಮಾಡಿದೆ. ಹತ್ತು ದಿನಗಳಲ್ಲಿ ಉತ್ತರ ನೀಡುವಂತೆ ಹೇಳಿದೆ. ಆದ್ರೆ, 10 ದಿನಗಳ ಬಳಿಕ ಹೈಕಮಾಂಡ್ ಯಾವ ಕ್ರಮಕೈಗೊಳ್ಳುತ್ತೆ ಎನ್ನುವುದೇ ಮುಂದಿರುವ ಪ್ರಶ್ನೆ. ಯಾಕಂದ್ರೆ ಹೈಕಮಾಂಡ್ಗೆ ವಿಜಯೇಂದ್ರ ಬೇಕು, ಇತ್ತ ಯತ್ನಾಳ್ ಸಹ ಬೇಕು. ಯಾರನ್ನು ಬಿಟ್ಟುಕೊಡುವ ಪರಿಸ್ಥಿತಿಯಲ್ಲಿ ಹೈಕಮಾಂಡ್ ಇಲ್ಲ. ಹೀಗಾಗಿ ಯತ್ನಾಳ್ ವಿರುದ್ಧದ ಕ್ರಮ ವಿಜಯೇಂದ್ರ ಒತ್ತಡಕ್ಕೆ ನೊಟೀಸ್ಗೆ ಸೀಮಿತವಾಗುತ್ತಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.
ಹೈಕಮಾಂಡ್ ವಿಜಯೇಂದ್ರ ಪರವೂ ಇಲ್ಲ.. ಯತ್ನಾಳ್ ವಿರುದ್ಧವೂ ಇಲ್ಲ
ಬಿಜೆಪಿ ಬಣಗಳ ಬಡಿದಾಟದಿಂದ ಹೈಕಮಾಂಡ್ ತಟಸ್ಥವಾಗಿದೆ. ವಿಜಯೇಂದ್ರ ಪರವೂ ಇಲ್ಲ, ಯತ್ನಾಳ್ ವಿರುದ್ಧವೂ ಇಲ್ಲ ಎನ್ನಲಾಗುತ್ತಿದೆ. ಒಂದು ವೇಳೆ ವಿಜಯೇಂದ್ರ ಬದಲಿಸಿದರೆ ಲಿಂಗಾಯತರನ್ನು ಎದುರು ಹಾಕಿಕೊಂಡಂತಾಗುತ್ತದೆ. ಈಗಾಗಲೇ ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಕೈಸುಟ್ಟುಕೊಂಡಾಗಿದೆ. ಈಗ ಏಕಾಏಕಿ ಈ ಸಂದರ್ಭದಲ್ಲಿ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷದಿಂದ ಕೆಳಗಿಳಿಸಿದರೆ ಲಿಂಗಾಯತ ಸಮುದಾಯವನ್ನು ಮತ್ತಷ್ಟು ಕೆರಳಿಸಿದಂತಾಗುತ್ತದೆ ಎನ್ನುವುದು ಹೈಕಮಾಂಡ್ ನಾಯಕರ ತಲೆಯಲ್ಲಿದೆ.
ಇನ್ನು ಯತ್ನಾಳ್ ವಿರುದ್ಧ ಕ್ರಮಕೈಗೊಂಡರೇ ಹಿಂದುತ್ವ ಹಿಂದುತ್ವ ಎಂದು ಹೇಳಿಕೊಂಡು ತಿರುಗಾಡಿ ಕಟ್ಟರ್ ಹಿಂದುತ್ವವಾದಿಗಳನ್ನು ತುಳಿಯುತ್ತೀರಿ ಎನ್ನುವ ಆರೋಪಗಳು ಕೇಳಿಬರುತ್ತವೆ. ಇದು ಹೈಕಮಾಂಡ್ ಗಮನಕ್ಕೂ ಇದೆ. ಈಗಾಗಲೇ ಅನಂತ್ ಕುಮಾರ್ ಹೆಗಡೆ ಸೇರಿದಂತೆ ಕಟ್ಟರ್ ಹಿಂದೂ ರಾಷ್ಟ್ರೀಯವಾದಿ ನಾಯಕರನ್ನು ಕರ್ನಾಟಕ ಬಿಜೆಪಿಯಲ್ಲಿ ಸೈಡ್ಲೈನ್ ಮಾಡಲಾಗಿದೆ ಎನ್ನುವ ಆರೋಪಗಳು ಇವೆ. ಇದರ ಮಧ್ಯ ಇದೀಗ ವಿಜಯೇಂದ್ರ ಮಾತು ಕಟ್ಟಿಕೊಂಡು ಯತ್ನಾಳ್ ವಿರುದ್ಧ ಕ್ರಮಕೈಗೊಂಡರೇ ಮತ್ತಷ್ಟು ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತೆ ಎನ್ನುವುದು ಹೈಕಮಾಂಡ್ ಗೆ ಗೊತ್ತಿದೆ. ಹೀಗಾಗಿ ಯತ್ನಾಳ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ಸ್ಥಿತಿಯಲ್ಲಿ ಹೈಕಮಾಂಡ್ ಇದೆ. ಇದರಿಂದ ಸದ್ಯಕ್ಕೆ ನೋಟಿಸ್ ನೀಡಿ ಪರಿಸ್ಥಿತಿ ತಿಳಿಗೊಳಿಸಲು ಮಾತ್ರ ಹೈಕಮಾಂಡ್ ಮುಂದಾಗಿದೆ
ಒಂದು ವೇಳೆ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುವುದೇ ಆಗಿದ್ದರೆ ಈ ಹಿಂದೆಯೇ ಅಮಾನತು ಮಾಡಬಹುದಿತ್ತು. ಆದ್ರೆ, ಅದನ್ನು ಹೈಕಮಾಂಡ್ ಮಾಡಿಲ್ಲ. ಕೇವಲ ಯತ್ನಾಳ್ ಬಿಎಸ್ವೈ ಕುಟುಂಬದ ವಿರುದ್ಧ ಆರೋಪ ಮಾಡಿದಾಗಲೆಲ್ಲ ನೋಟಿಸ್ ನೀಡಿ ಸುಮ್ಮನಾಗಿದೆ. ಈಗಲೂ ಅದೇ ಆಗಲಿದೆ.
ಯತ್ನಾಳ್ ವಿರುದ್ಧ ಕ್ರಮಕ್ಕೆ ಬಿಗಿಪಟ್ಟು
ಈ ನಡುವೆ ಯತ್ನಾಳ್ಗೆ ಕೇವಲ ಶೋಕಾಸ್ ನೋಟೀಸ್ ಮಾತ್ರ ನೀಡಿ ಉತ್ತರ ಪಡೆದು ಹೈಕಮಾಂಡ್ ಸುಮ್ಮನಾಗಬಹುದು ಎಂಬ ಅನುಮಾನ ವಿಜಯೇಂದ್ರ ಆಪ್ತರಲ್ಲಿ ಮನೆ ಮಾಡಿದೆ. ಅದಕ್ಕಾಗಿ ಯತ್ನಾಳ್ ಗೆ ಕೇವಲ ನೋಟೀಸ್ ಕೊಡದೇ ಪಕ್ಷದಿಂದಲೇ ಉಚ್ಚಾಟನೆ ಮಾಡಬೇಕು ಎಂಬ ಒತ್ತಾಯವನ್ನು ವಿಜಯೇಂದ್ರ ನಿಷ್ಠರು ಶುರು ಮಾಡಿದ್ದಾರೆ. ಎಂಪಿ ರೇಣುಕಾಚಾರ್ಯ ನೇತೃತ್ವದ ವಿಜಯೇಂದ್ರ ಬಣ ಈಗಾಗಲೇ ಎಲ್ಲಾ ನಾಯಕರನ್ನು ಒಗ್ಗೂಡಿಸುವ ಪ್ರಯತ್ನ ನಡೆಸಿದ್ದು, ದಾವಣಗೆರೆಯಲ್ಲಿ ಬೃಹತ್ ಸಮಾವೇಶ ಮಾಡುವ ಮೂಲಕ ಬಿಎಸ್ವೈ ಹಾಗೂ ವಿಜಯೇಂದ್ರ ಪರವಾಗಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಈ ಮೂಲಕ ಪರೋಕ್ಷವಾಗಿ ಹೈಕಮಾಂಡ್ಗೂ ತಮ್ಮ ಶಕ್ತಿ ಏನು ಎನ್ನುವುದನ್ನು ತೋರಿಸಲು ಮುಂದಾಗಿದೆ.
ಒಟ್ಟಿನಲ್ಲಿ ಹೈಕಮಾಂಡ್ , ಸದ್ಯಕ್ಕೆ ಬಣಗಳ ಬಡಿದಾಟಕ್ಕೆ ಬ್ರೇಕ್ ಹಾಕಿ ತಟಸ್ಥವಾಗಿದೆ. ವಿಜಯೇಂದ್ರ ಪರವೂ ಇಲ್ಲ, ಯತ್ನಾಳ್ ವಿರುದ್ಧವೂ ಇಲ್ಲ ಎನ್ನಲಾಗ್ತಿದೆ. ಆದ್ರೆ, ವಿಜಯೇಂದ್ರ ಹಾಗೂ ಯತ್ನಾಳ್ ಬಣಗಳ ಜಂಗೀಕುಸ್ತಿ ಮುಂದೆ ಎಲ್ಲಿಗೆ ಹೋಗಿ ನಿಲ್ಲುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.