ಕುಡಿದು ಬರ್ತಿದ್ದ ಡ್ರೈವರ್​ಗಳಿಗೆ ಲಂಚ ಪಡೆದು ಡ್ಯೂಟಿ: ಅಧಿಕಾರಿಗಳಿಗೆ ಶಾಕ್​ಕೊಟ್ಟ BMTC

ಬಿಎಂಟಿಸಿ ಕನ್ನಹಳ್ಳಿ ಡಿಪೋದಲ್ಲಿ ಕುಡಿದು ಕೆಲಸಕ್ಕೆ ಬರುತ್ತಿದ್ದ ಎಲೆಕ್ಟ್ರಿಕ್ ಬಸ್ ಚಾಲಕರಿಗೆ ಲಂಚ ಪಡೆದು ಡ್ಯೂಟಿ ನೀಡಿದ ಪ್ರಕರಣ ಸಂಬಂಧ 9 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಬಿಎಂಟಿಸಿ ಅಧಿಕಾರಿಗಳ ಈ ನಡೆ ಪ್ರಯಾಣಿಕರ ಜೀವಕ್ಕೆ ಅಪಾಯ ತಂದೊಡ್ಡಿರುವ ಬಗ್ಗೆ ಟಿವಿ9 ವರದಿ ಮಾಡಿತ್ತು. ಇದರಿಂದಾಗಿ ಎಚ್ಚೆತ್ತ ಬಿಎಂಟಿಸಿ, ಇಂತಹ ಘಟನೆಗಳನ್ನು ತಡೆಯಲು ಮುಂದಾಗಿದೆ.

ಕುಡಿದು ಬರ್ತಿದ್ದ ಡ್ರೈವರ್​ಗಳಿಗೆ ಲಂಚ ಪಡೆದು ಡ್ಯೂಟಿ: ಅಧಿಕಾರಿಗಳಿಗೆ ಶಾಕ್​ಕೊಟ್ಟ BMTC
BMTC ಎಲೆಕ್ಟ್ರಿಕ್​ ಬಸ್​
Updated By: ಪ್ರಸನ್ನ ಹೆಗಡೆ

Updated on: Nov 05, 2025 | 4:02 PM

ಬೆಂಗಳೂರು, ನವೆಂಬರ್​ 05: ಕುಡಿದು ಕೆಲಸಕ್ಕೆ ಬರ್ತಿದ್ದ ಎಲೆಕ್ಟ್ರಿಕ್ ಬಸ್ ಡ್ರೈವರ್​ಗಳ ಬಳಿ ಲಂಚ ಪಡೆದು ಬಿಎಂಟಿಸಿ ಅಧಿಕಾರಿಗಳು ಡ್ಯೂಟಿ ನೀಡಿದ್ದ ಪ್ರಕರಣ ಸಂಬಂಧ ಡಿಪೋ ಮ್ಯಾನೇಜರ್ ಸೇರಿದಂತೆ 9 ಜನರನ್ನು ಸಸ್ಪೆಂಡ್ ಮಾಡಲಾಗಿದೆ. ಅಕ್ಟೋಬರ್ 13ರಂದು ಈ ಬಗ್ಗೆ ಟಿವಿ9 ಕನ್ನಡ ವರದಿ ಮಾಡಿತ್ತು. ಆ ಬೆನ್ನಲ್ಲೇ ಎಚ್ಚೆತ್ತುಕೊಂಡ ಬಿಎಂಟಿಸಿ, ಕಠಿಣ ಕ್ರಮವನ್ನು ತೆಗೆದುಕೊಂಡಿದೆ.

ಡಿಪೋ- 35ರ (ಕನ್ನಹಳ್ಳಿ) ಎಲೆಕ್ಟ್ರಿಕ್ ಬಸ್​ಗಳನ್ನು ಚಾಲನೆ ಮಾಡಲು ಬರುವ ಕೆಲ ಚಾಲಕರು ಮದ್ಯ ಸೇವಿಸಿ ಬರುತ್ತಿದ್ದರು. ಹೀಗಿದ್ದರೂ ಸುಮಾರು 150ಕ್ಕೂ ಹೆಚ್ಚು ಡ್ರೈವರ್ ಗಳ ಬಳಿ ಅಧಿಕಾರಿಗಳು ಸಾವಿರಾರು ರೂ. ಲಂಚ ಪಡೆದು ಬಸ್ ಓಡಿಸಲು ಅವಕಾಶ ನೀಡಿದ್ದರು. ರೂಲ್ಸ್​ ಪ್ರಕಾರ ಬಸ್ ಡ್ರೈವಿಂಗ್ ಮಾಡಲು ಡಿಪೋಗೆ ಬರುವ ಪ್ರತಿ ಚಾಲಕನನ್ನು ಆತ ಮದ್ಯಸೇವಿಸಿದ್ದಾನಾ ಅಥವಾ ಇಲ್ಲವಾ ಎಂದು ಅಧಿಕಾರಿಗಳು ಪರೀಕ್ಷಿಸಬೇಕು. ಕುಡಿದು ಬಂದಿದ್ದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹೀಗಿದ್ದರೂ ಲಂಚದ ಹಣಕ್ಕಾಗಿ ಪ್ರಯಾಣಿಕರ ಜೀವದ ಜೊತೆ ಅಧಿಕಾರಿಗಳು ಚೆಲ್ಲಾಟ ಆಡಿದ್ದು ಬೆಳಕಿಗೆ ಬಂದಿತ್ತು.

ಇದನ್ನೂ ಓದಿ: ಬೆಂಗಳೂರಿನ ಸುತ್ತಮುತ್ತಲಿನ ಜನರಿಗೆ ಬಿಎಂಟಿಸಿ ಗುಡ್ ನ್ಯೂಸ್: ಇನ್ಮುಂದೆ ಅಕ್ಕಪಕ್ಕದ ಜಿಲ್ಲೆಗಳಿಗೂ ಬಸ್​ ಸಂಚಾರ

ಯಾರೆಲ್ಲ ಸಸ್ಪೆಂಡ್​?

ಘಟಕ ವ್ಯವಸ್ಥಾಪಕ ಎಂ.ಜಿ ಕೃಷ್ಣ, ಸಂಚಾರ ನಿರೀಕ್ಷಕ ಶ್ರೀನಿವಾಸ ಡಿ., ಇ.ಎಸ್. ಅರುಣ್ ಕುಮಾರ್, ಕಿರಿಯ ಸಹಾಯಕಿ ಪ್ರತಿಭಾ ಕೆ.ಎಸ್., ಕ.ರಾ.ಸಾ.ಹವಲ್ದಾರ್ ಮಂಜುನಾಥ ಎಂ., ಕ.ರಾ.ಸಾ. ಪೇದೆಗಳಾದ ಮಂಜುನಾಥ ಎಸ್.ಜಿ., ಚೇತನಕುಮಾರ್, ಪುನೀತ್ ಕುಮಾರ್, ಲಕ್ಷ್ಮೀ ಕೆ. ಅವರನ್ನು ಅಮಾನತು ಮಾಡಿ ಬಿಎಂಟಿಸಿ ಆದೇಶಿಸಿದೆ.

ಕಠಿಣ ಕ್ರಮ ಯಾಕೆ?

ಬೆಂಗಳೂರು ನಗರದಲ್ಲಿ ಮೇಲಿಂದ ಮೇಲೆ ಬಿಎಂಟಿಸಿ ಬಸ್​ಗಳು ಅಪಘಾತಕ್ಕೀಡಾಗುತ್ತಿವೆ. ಈ ಹಿನ್ನಲೆ ಇಂತಹ ಪ್ರಕರಣಗಳ ತಡೆಗೆ ಬಿಎಂಟಿಸಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿರುವ ನಡುವೆ, ಅದೇ ಸಂಸ್ಥೆಯ ಅಧಿಕಾರಿಗಳ ಈ ನಡೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ನಗರದಲ್ಲಿ ಈಗಾಗಲೇ ಎಲೆಕ್ಟ್ರಿಕ್ ಬಸ್​ಗಳ ಅಪಘಾತದಲ್ಲಿ 33 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಿದ್ದರೂ ಅಧಿಕಾರಿಗಳು ಬುದ್ಧಿ ಕಲಿಯದ ಹಿನ್ನಲೆ ಕಠಿಣ ಕ್ರಮಕ್ಕೆ ಬಿಎಂಟಿಸಿ ಮುಂದಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.