PU ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್: ಮಕ್ಕಳ ದಿನಾಚರಣೆಯಂದೇ ಬಂಪರ್ ಗಿಫ್ಟ್
ಕರ್ನಾಟಕ ಸರ್ಕಾರ ಯೋಜನೆಯೊಂದನ್ನು ಪಿಯು ವಿದ್ಯಾರ್ಥಿಗಳಿಗೂ ವಿಸ್ತರಿಸಲು ಚಿಂತನೆ ನಡೆಸಿದೆ. ಮಕ್ಕಳ ದಿನಾಚರಣೆಯಂದು ಈ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಯಿದ್ದು, ಇದರಿಂದ ಗ್ರಾಮೀಣ ಭಾಗದ 3 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಹಾಗಾದ್ರೆ, ಏನದು ಯೋಜನೆ? ಎನ್ನುವ ಸಂಪೂರ್ಣ ವಿವರ ಈ ಕೆಳಗಿನಂತಿದೆ.

ಬೆಂಗಳೂರು, (ನವೆಂಬರ್ 05): ಇಷ್ಟು ದಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಬಿಸಿಯೂಟ ಯೋಜನೆಯನ್ನು (midday meal scheme )ಇದೀಗ ಪಿಯುಸಿ ವಿದ್ಯಾರ್ಥಿಗಳಿಗೂ (PUC Students) ಸಹ ನೀಡಲು ಕರ್ನಾಟಕ ಸರ್ಕಾರ (Karnataka Governmnet) ಚಿಂತನೆ ನಡೆಸಿದೆ. ಹೌದು…ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಬಿಸಿಯೂಟ ನೀಡಲು ತೀರ್ಮಾನಿಸಿದ್ದು, ನವೆಂಬರ್ 14 ಮಕ್ಕಳ ದಿನಾಚರಣೆದಂದು ಸರ್ಕಾರದಿಂದ ಅಧಿಕೃತ ಘೋಷಣೆಯಾಗುವ ಸಾಧ್ಯತೆಗಳಿವೆ.
ಸದ್ಯ 1 ರಿಂದ 10ನೇ ತರಗತಿ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ನೀಡಲಾಗುತ್ತಿದೆ. ಈ ಯೋಜನೆಯನ್ನು ಪಿಯು ವಿದ್ಯಾರ್ಥಿಗಳಿಗೆ ವಿಸ್ತರಣೆ ಮಾಡಲು ಸಿಎಂ ಸಿದ್ದರಾಮಯ್ಯ ಸರ್ಕಾರ ಚಿಂತನೆ ನಡೆಸಿದೆ. ರಾಜ್ಯದಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಲ್ಲಿ ಓದುತ್ತಿದ್ದಾರೆ. ಅದರಲ್ಲಿಯೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಸರ್ಕಾರಿ ಕಾಲೇಜ್‌ಗೆ ದಾಖಲಾತಿ ಪಡೆದುಕೊಂಡಿದ್ದಾರೆ. ಹಾಗಾಗಿ ಈ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆ ವಿಸ್ತರಣೆಗೆ ಸರ್ಕಾರ ಮುಂದಾಗಿದ್ದು, ಈ ಬಗ್ಗೆ ಶಿಕ್ಷಣ ಇಲಾಖೆ ಈಗಾಗಲೇ ಇಲಾಖೆಯಿಂದ ಸರ್ಕಾರಿ ಪದವಿ ಪೂರ್ವ ವಿದ್ಯಾರ್ಥಿಗಳ ಸಂಖ್ಯೆ ಮಾಹಿತ ಪಡೆದುಕೊಂಡಿದೆ.
ಇದನ್ನೂ ಓದಿ: SSLC, 2nd PUC Exam 2026 TimeTable: ಎಸ್ಎಸ್ಎಲ್ಸಿ, ಪಿಯು ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ
2002-03ನೇ ಸಾಲಿನಲ್ಲಿ ಎಸ್ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಶಾಲೆ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ರಾಜ್ಯಾದ್ಯಂತ ಆರಂಭಿಸಲಾಗಿತ್ತು. ಆರಂಭದಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಮಾತ್ರ ಬಿಸಿಯೂಟ ನೀಡಲಾಗುತ್ತಿತ್ತು. ಬಳಿಕ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿತ್ತು. ಶಾಲಾ ಮಕ್ಕಳಿಗೆ ಉತ್ತಮ ಪೋಷಕಾಂಶ ಭರಿತ ಆಹಾರವನ್ನು ಒದಗಿಸುವ ದೃಷ್ಟಿಯಿಂದ ಸರ್ಕಾರವು ಊಟದಲ್ಲಿ ತೊಗರಿಬೇಳೆ, ಸಂಸ್ಕರಿತ ತಾಳೆಎಣ್ಣೆ ಮತ್ತು ಕಡಲೆಬೇಳೆಗಳನ್ನೊಳಗೊಂಡ ಆಹಾರವನ್ನು ಒದಗಿಸುತ್ತಿದೆ.
ಈಗಾಗಲೇ 10ನೇ ತರಗತಿಯ ವರೆಗೆ ಶಾಲಾ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಮಧ್ಯಾಹ್ನದ ಬಿಸಿ ಊಟ ಸಿಗುತ್ತಿದೆ. ಇದೀಗ ಹೊಸದಾಗಿ ಪಿಯೂ ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಬಿಸಿ ಊಟ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಇನ್ನು ಬಿಸಿಯೂಟದಲ್ಲಿ ಏನೇನು ಮೆನ್ಯು ಇರಲಿದೆ ಎನ್ನುವುದು ತಿಳಿದುಬರಬೇಕಿದೆ.
Published On - 3:42 pm, Wed, 5 November 25



