ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಬಿಎಂಟಿಸಿ: ಮೂರು ಸಾವಿರ ಬಸ್ ಮಾರ್ಗಗಳ ವೇಳಾಪಟ್ಟಿ ಪರಿಷ್ಕರಣೆ
ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ಗಳಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಚಾಲಕರ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಬಿಎಂಟಿಸಿ ಮುಂದಾಗಿದೆ. ಟಿವಿ9 ವರದಿ ಬೆನ್ನಲ್ಲೇ ಮೂರು ಸಾವಿರಕ್ಕೂ ಹೆಚ್ಚು ಮಾರ್ಗಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ. ಚಾಲಕರಿಗೆ ಹೆಚ್ಚುವರಿ ಸಮಯ ನೀಡುವ ಮೂಲಕ ಅಪಘಾತಗಳನ್ನು ತಡೆಯುವ ಉದ್ದೇಶವಾಗಿದೆ.

ಬೆಂಗಳೂರು, ಸೆಪ್ಟೆಂಬರ್ 01: ನಗರದಲ್ಲಿ ದಿನದಿಂದ ದಿನಕ್ಕೆ ಬಿಎಂಟಿಸಿ ಬಸ್ (BMTC Bus) ಅಪಘಾತಗಳಿಂದ (accident) ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದು, ಇದಕ್ಕೆ ಪ್ರಮುಖ ಕಾರಣ ಚಾಲಕರಿಗಿರುವ ಒತ್ತಡವಂತೆ. ಈ ಬಗ್ಗೆ ಟಿವಿ9 ಸುದ್ದಿ ಮಾಡಿತ್ತು. ಇದೀಗ ಎಚ್ಚೆತ್ತುಕೊಂಡ ಬಿಎಂಟಿಸಿ 3 ಸಾವಿರ ಮಾರ್ಗಗಳ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿದ್ದು, ಇದರಿಂದ ಅಪಘಾತಗಳ ಸಂಖ್ಯೆ ಕಡಿಮೆ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಟಿವಿ9 ವರದಿ ಇಂಪ್ಯಾಕ್ಟ್
ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ಬಿಎಂಟಿಸಿ ಬಸ್ಗಳಿಂದ ಆಕ್ಸಿಡೆಂಟ್ ಆಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. 2024ರಿಂದ ಇಲ್ಲಿಯವರೆಗೆ ಬಿಎಂಟಿಸಿ ಬಸ್ ಆಕ್ಸಿಡೆಂಟ್ನಿಂದಾಗಿ 42 ಜನರು ಪ್ರಾಣ ಕಳೆದುಕೊಂಡಿದ್ದರೆ, ಕಳೆದ ಒಂದು ತಿಂಗಳಲ್ಲಿ 5 ಜನರು ಉಸಿರು ಚೆಲ್ಲಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಅಂದರೆ ಡ್ರೈವರ್ಗಳಿಗೆ ಬಿಎಂಟಿಸಿ ನಿಗಮದಿಂದ ಇರುವ ಒತ್ತಡವಂತೆ. ಕಡಿಮೆ ಸಮಯದಲ್ಲೇ ರೂಟ್ ಕ್ಲಿಯರ್ ಮಾಡಲು ಹೇಳ್ತಿದ್ದಾರಂತೆ. ಈ ಬಗ್ಗೆ ಟಿವಿ9 ಆಗಸ್ಟ್ 28 ರಂದು ಸುದ್ದಿ ಮಾಡಿತ್ತು. ಸುದ್ದಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಬಿಎಂಟಿಸಿ 3 ಸಾವಿರ ರೂಟ್ಗಳ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿದೆ.
ಹೆಚ್ಚುವರಿ ಸಮಯ ಆಕ್ಸಿಡೆಂಟ್ ಸಂಖ್ಯೆ ಕಡಿಮೆಗೆ ಸಹಾಯವಾಗಲಿದೆ: ಬಿಎಂಟಿಸಿ ಪ್ರಯಾಣಿಕ
ಇನ್ನು ಈ ಬಗ್ಗೆ ಮಾತನಾಡಿದ ಬಿಎಂಟಿಸಿ ಪ್ರಯಾಣಿಕರಾದ ಸತ್ಯಪ್ರಕಾಶ್ ಎಂಬುವವರು, ಡ್ರೈವರ್ಗಳಿಗೆ ರೂಟ್ ಕ್ಲಿಯರ್ ಮಾಡಲು ಹೆಚ್ಚುವರಿ ಸಮಯ ನೀಡಿರುವುದರಿಂದ ಖಂಡಿತವಾಗಿ ಸಹಾಯ ಆಗುತ್ತದೆ. ಇದರಿಂದ ಆಕ್ಸಿಡೆಂಟ್ ಸಂಖ್ಯೆಯೂ ಕಡಿಮೆ ಆಗುತ್ತದೆ ಎಂದಿದ್ದಾರೆ.
ಯಾವೆಲ್ಲಾ ಮಾರ್ಗಗಳ ವೇಳಾಪಟ್ಟಿ ಪರಿಷ್ಕರಣೆ
- ಈ ಹಿಂದೆ ಎಲೆಕ್ಟ್ರಾನಿಕ್ ಸಿಟಿ ಟು ಕೆಂಗೇರಿ ಟಿಟಿಎಂಸಿಗೆ (29.6 ಕಿಮೀ ) 01 ಗಂಟೆ 40 ನಿಮಿಷದಲ್ಲಿ ರೂಟ್ ಕ್ಲಿಯರ್ ಮಾಡಬೇಕಿತ್ತು. ಇದೀಗ ಈ ರೂಟ್ ಕ್ಲಿಯರ್ ಮಾಡಲು 02 ಗಂಟೆ ಸಮಯ ನೀಡಲಾಗಿದೆ. ಅಂದರೆ ಈ ರೂಟ್ ಕ್ಲಿಯರ್ ಮಾಡಲು ಡ್ರೈವರ್ಗಳಿಗೆ ಹೆಚ್ಚುವರಿ 20 ನಿಮಿಷ ನೀಡಲಾಗಿದೆ.
- ಈ ಹಿಂದೆ ಕೆಂಗೇರಿ ಟು ದ್ವಾರಕನಗರ (28.8 ಕಿಮೀ) ಈ ರೂಟ್ ಕ್ಲಿಯರ್ ಮಾಡಲು 01 ಗಂಟೆ 30 ನಿಮಿಷ ಸಮಯ ನೀಡಲಾಗಿತ್ತು. ಇದೀಗ 01 ಗಂಟೆ 50 ನಿಮಿಷ ನೀಡಲಾಗಿದೆ. ಅಂದರೆ ಈ ರೂಟ್ ಕ್ಲಿಯರ್ ಮಾಡಲು ಡ್ರೈವರ್ಗಳಿಗೆ ಹೆಚ್ಚುವರಿಯಾಗಿ 20 ನಿಮಿಷಗಳ ಸಮಯ ನೀಡಲಾಗಿದೆ.
- ಈ ಹಿಂದೆ ಕೆ.ಆರ್. ಮಾರ್ಕೆಟ್ ಟು ಜಾಲಹಳ್ಳಿ ಕ್ರಾಸ್ಗೆ (22.5 ಕಿಮೀ) 1:25 ನಿಮಿಷ ಸಮಯ ನೀಡಲಾಗಿತ್ತು. ಇದೀಗ 1:40 ನಿಮಿಷ ನೀಡಲಾಗಿದೆ ಅಂದರೆ ಹೆಚ್ಚುವರಿ 15 ನಿಮಿಷಗಳು ಸಿಗಲಿದೆ.
- ಈ ಹಿಂದೆ ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ ಟು ಉತ್ತರಹಳ್ಳಿ (15.8 ಕಿಮೀ) ರೂಟ್ ಕ್ಲಿಯರ್ ಮಾಡಲು 55 ನಿಮಿಷ ನೀಡಲಾಗಿತ್ತು. ಇದೀಗ 1:15 ನಿಮಿಷ ನೀಡಲಾಗಿದೆ, ಹೆಚ್ಚುವರಿಯಾಗಿ 20 ನಿಮಿಷ ಸಿಗುತ್ತದೆ.
- ಶಿವಾಜಿನಗರ ಬಸ್ ಸ್ಟ್ಯಾಂಡ್ನಿಂದ ಬನಶಂಕರಿ (12.5 ಕಿಮೀ) ಬಸ್ ಸ್ಟ್ಯಾಂಡ್ ರೂಟ್ ಕ್ಲಿಯರ್ ಮಾಡಲು 45 ನಿಮಿಷ ನೀಡಲಾಗಿತ್ತು. ಈಗ 1 ಗಂಟೆ ನೀಡಲಾಗಿದೆ ಅಂದರೆ 15 ನಿಮಿಷ ಹೆಚ್ಚಿಗೆ ಸಮಯ ನೀಡಲಾಗಿದೆ.
ವಾಹನ ಸವಾರರು ಹೇಳಿದ್ದಿಷ್ಟು
ಹೆಚ್ಚಿನ ಕಾಲಾವಕಾಶ ನೀಡಿರುವುದರಿಂದ ಆಕ್ಸಿಡೆಂಟ್ ಕಡಿಮೆ ಆಗುತ್ತದೆ. ಡ್ರೈವರ್ಗಳಿಗೆ ಡೆಡ್ ಲೈನ್, ಟಾರ್ಗೆಟ್ ಕೊಟ್ಟರೆ ಸ್ಪೀಡ್ ಆಗಿ ಡ್ರೈವಿಂಗ್ ಮಾಡುತ್ತಾರೆ. ಜನರು ಆಫೀಸ್ಗೆ ಹೋಗುವ ವೇಳೆ ತುಂಬಾ ಅವಸರದಲ್ಲಿ ಇರ್ತಾರೆ. ಇದರಿಂದ ಡ್ರೈವರ್ಗಳಿಗೂ ಒಂದಷ್ಟು ಒತ್ತಡ ಇರುತ್ತದೆ. ಒತ್ತಡ ಕಡಿಮೆ ಮಾಡಿದರೆ ಆಕ್ಸಿಡೆಂಟ್ಗಳ ಸಂಖ್ಯೆ ಕಡಿಮೆ ಆಗುತ್ತದೆ ಎಂದು ವಾಹನ ಸವಾರರ ಅಭಿಪ್ರಾಯವಾಗಿದೆ.
ಇದನ್ನೂ ಓದಿ: ಅಪಘಾತಕ್ಕೆ ಬ್ರೇಕ್ ಹಾಕಲು ಬಿಎಂಟಿಸಿಯ ಬಸ್ ಚಾಲಕರಿಗೆ ವಿಶೇಷ ತರಬೇತಿ
ಒಟ್ಟಿನಲ್ಲಿ ಆಕ್ಸಿಡೆಂಟ್ಗಳು ಹೆಚ್ಚಾಗುತ್ತಿರುವುದರಿಂದ ಬಿಎಂಟಿಸಿ ಅಧಿಕಾರಿಗಳು ಡ್ರೈವರ್ಗಳಿಗೆ ಹೆಚ್ಚಿನ ಸಮಯ ನೀಡಿರುವುದರಿಂದ ಆಕ್ಸಿಡೆಂಟ್ಗಳ ಸಂಖ್ಯೆ ಕಡಿಮೆ ಆಗಲಿದೆ ಎಂದು ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:08 am, Mon, 1 September 25







