ಬೆಂಗಳೂರಿನಲ್ಲಿ ಹೆಚ್ಚಾದ ರಸ್ತೆ ಅಪಘಾತ: ವರ್ಷದಲ್ಲಿ ಸುಮಾರು 80 ಸಾವು
ಬೆಂಗಳೂರಿನಲ್ಲಿ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ ಸುಮಾರಿ 80 ಮಂದಿ ಅಪಘಾತಗಳಲ್ಲಿ ಮೃತಪಟ್ಟಿರುವುದು ಬೆಂಗಳೂರು ಸಂಚಾರ ಪೊಲೀಸ್ ನೀಡಿರುವ ಅಂಕಿ ಅಂಶಗಳಿಂದ ತಿಳಿದುಬಂದಿದೆ. ಅಪಘಾತಗಳ ಪೈಕಿ ಹೆಚ್ಚಿನವು ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ಗಳಿಂದ ಸಂಭವಿಸಿರುವುದು ಗಮನಾರ್ಹ. ಅಜಾಗರೂಕತೆಯ ಚಾಲನೆ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬೆಂಗಳೂರು, ಆಗಸ್ಟ್ 27: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ರಸ್ತೆ ಅಪಘಾತಗಳ (Road accidents) ಸಂಖ್ಯೆ ಹೆಚ್ಚಾಗುತ್ತಿದೆ. ಬಿಎಂಟಿಸಿ, ಕೆಎಸ್ಆರ್ಟಿಸಿ, ಖಾಸಗಿ ಬಸ್ಗಳ (BMTC and KSRTC Buses) ಅಪಘಾತಗಳಿಂದ ಕಳೆದ ಒಂದು ವರ್ಷದ ಅವಧಿಯಲ್ಲಿ ಸುಮಾರು 80 ಪ್ರಯಾಣಿಕರು ಮೃತಪಟ್ಟಿದ್ದಾರೆ. ಟ್ರಾಫಿಕ್ ಪೋಲಿಸರ ಮಾಹಿತಿಯ ಪ್ರಕಾರ 2024 ರಿಂದ ಈವರೆಗೆ ಬಿಎಂಟಿಸಿ, ಕೆಎಸ್ಆರ್ಟಿಸಿ, ಖಾಸಗಿ ಬಸ್ ಅಪಘಾತಗಳಿಂದ 80 ಜನ ಪ್ರಾಣ ಕಳೆದು ಕೊಂಡಿದ್ದಾರೆ. ಬಿಎಂಟಿಸಿ ಬಸ್ ಅಪಘಾತಗಳಿಂದಲೇ 42 ಜನ ಪ್ರಾಣ ಕಳೆದುಕೊಂಡಿದ್ದಾರೆ.
ಹೆಚ್ಚುತ್ತಿರುವ ಅಪಘಾತಗಳ ಬಗ್ಗೆ ಪ್ರಯಾಣಿಕರು ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅಜಾಗರೂಕತೆಯ ಚಾಲನೆ ಬಗ್ಗೆ ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ. ಫೋನ್ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸುವುದರಿಂದ ಹೆಚ್ಚಿನ ಅಪಘಾತಗಳಾಗುತ್ತಿವೆ, ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
ಬೆಂಗಳೂರು ರಸ್ತೆ ಅಪಘಾತಗಳ ಅಂಕಿಸಂಖ್ಯೆ
ಕೆಎಸ್ಆರ್ಟಿಸಿ ಬಸ್ ಅಪಘಾತಗಳಿಂದ 10 ಮತ್ತು ಖಾಸಗಿ ಬಸ್ ಅಪಘಾತಗಳಿಂದ 28 ಜನ ಪ್ರಾಣ ಕಳೆದುಕೊಂಡಿದ್ದಾರೆ. ಮಾಹಿತಿಯ ಪ್ರಕಾರ, ಕಳೆದ ಒಂದು ವರ್ಷದಲ್ಲಿಒಟ್ಟಾರೆ 80 ಜನ ಪ್ರಾಣ ಕಳೆದುಕೊಂಡಿದ್ದಾರೆ. ಬಿಎಂಟಿಸಿ ಬಸ್ಗಳಿಂದ 72 ಅಪಘಾತಗಳು ಆಗಿದ್ದು, 21 ಜನ ಸಾವನ್ನಪ್ಪಿದ್ದಾರೆ. 92 ಜನ ಗಾಯಗೊಂಡಿದ್ದಾರೆ. ಇತ್ತ ಕೆಎಸ್ಆರ್ಟಿಸಿ ಬಸ್ಗಳಿಂದ 2024 ರಿಂದ ಇಂದಿನವರೆಗೆ 31 ಅಪಘಾತಗಳಾಗಿದ್ದು 10 ಸಾವು ಸಂಭವಿಸಿದೆ. 22 ಜನ ಗಾಯ ಗೊಂಡಿದ್ದಾರೆ. ಖಾಸಗಿ ಬಸ್ಗಳಿಂದ 121 ಅಪಘಾತಗಗಳಾಗಿದ್ದರೆ, 28 ಜನ ಸಾವನ್ನಪ್ಪಿದ್ದು, 95 ಜನ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಅಪಘಾತಕ್ಕೆ ಬ್ರೇಕ್ ಹಾಕಲು ಬಿಎಂಟಿಸಿಯ ಬಸ್ ಚಾಲಕರಿಗೆ ವಿಶೇಷ ತರಬೇತಿ
ಈ ಅಪಘಾತಗಳಿಂದ 80 ಕುಟುಂಬಗಳು ಬೀದಿಗೆ ಬಿದ್ದಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ, ನಗರದಲ್ಲಿ ಪ್ರತಿದಿನ ಸಂಭವಿಸುತ್ತಿರುವ ಅಪಘಾತಗಳನ್ನು ನೋಡುತ್ತಿದ್ದರೆ, ಸರ್ಕಾರ ಈ ಬಗ್ಗೆ ಏನಾದರೂ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದರೆ ಅಮಾಯಕರು ಮತ್ತಷ್ಟು ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ.



