ಅಪಘಾತಕ್ಕೆ ಬ್ರೇಕ್ ಹಾಕಲು ಬಿಎಂಟಿಸಿಯ ಬಸ್ ಚಾಲಕರಿಗೆ ವಿಶೇಷ ತರಬೇತಿ
ಬೆಂಗಳೂರಿನಲ್ಲಿ BMTC ಬಸ್ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ, 12,000 ಚಾಲಕರು ಮತ್ತು ನಿರ್ವಾಹಕರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಟ್ರಾಫಿಕ್ ತಜ್ಞರು ಮತ್ತು ಚಾಲನಾ ತಜ್ಞರಿಂದ ನೀಡಲಾಗುವ ಈ ತರಬೇತಿಯು ಸುರಕ್ಷಿತ ಚಾಲನಾ ತಂತ್ರಗಳು ಮತ್ತು ಸಂಚಾರ ನಿಯಮಗಳನ್ನು ಒಳಗೊಂಡಿದೆ. ಅಪಘಾತಗಳ CCTV ದೃಶ್ಯಗಳನ್ನು ತೋರಿಸಿ ತರಬೇತಿ ನೀಡಲಾಗುತ್ತಿದ್ದು, ಚಾಲಕರ ನಿರ್ಲಕ್ಷ್ಯಕ್ಕೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.

ಬೆಂಗಳೂರು, ಆಗಸ್ಟ್ 26: ಬೆಂಗಳೂರು (Bengaluru) ಮಹಾನಗರದಲ್ಲಿ ದಿನದಿಂದ ದಿನಕ್ಕೆ ಬಿಎಂಟಿಸಿ ಬಸ್ಗಳಿಂದ ಅಪಘಾತ ಹೆಚ್ಚಾಗುತ್ತಿವೆ. ಅಪಘಾತದಲ್ಲಿ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಬ್ರೇಕ್ ಹಾಕಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಯು ತನ್ನ ಚಾಲಕರಿಗೆ ವಿಶೇಷ ತರಬೇತಿ ನೀಡುತ್ತಿದೆ.
ಬಿಎಂಟಿಸಿಯ 50 ಡಿಪೋಗಳಲ್ಲಿರುವ 12 ಸಾವಿರ ಚಾಲಕ ಕಂ ನಿರ್ವಾಹಕರಿಗೆ ತರಬೇತಿ ನೀಡಲಾಗುತ್ತಿದೆ. ಟ್ರಾಫಿಕ್ ಎಕ್ಸ್ಪರ್ಟ್ ಮತ್ತು ಚಾಲನಾ ತಜ್ಞರಿಂದ ತರಬೇತಿ ನೀಡಲಾಗುತ್ತಿದ್ದು, ಗುಂಡಿಗಳು ಇದ್ದಾಗ ಯಾವ ರೀತಿ ಚಾಲನೆ ಮಾಡಬೇಕು?, ಸಂಚಾರಿ ನಿಯಮ ಪಾಲಿಸುವುದರಿಂದ ಯಾವ ರೀತಿ ಅಪಘಾತ ತಪ್ಪಿಸಬಹುದು?, ವೇಗವಾಗಿ ಚಾಲನೆ ಮಾಡುವುದರಿಂದ ಹೇಗೆ ಅನಾಹುತವಾಗುತ್ತದೆ?, ಓವರ್ ಟೇಕ್ ಮಾಡುವುದರಿಂದ ಏನು ಸಮಸ್ಯೆ ಆಗುತ್ತದೆ? ಹೀಗೆ ಹಿಂದಿನ ಎಲ್ಲ ಅಪಘಾತಗಳ ಸಿಸಿಟಿವಿ ವಿಡಿಯೋಗಳನ್ನು ತೋರಿಸಿ ತರಬೇತಿ ನೀಡಲಾಗುತ್ತಿದೆ.
ಬಿಎಂಟಿಸಿಯ ಡಿಸೇಲ್ ಬಸ್ಗಳ 10 ಸಾವಿರ ಚಾಲಕರಿಗೆ, ಎಲೆಕ್ಟ್ರಿಕ್ ಬಸ್ಗಳ 2 ಸಾವಿರ ಚಾಲಕರಿಗೆ ತರಬೇತಿ ನೀಡಲಾಗುತ್ತಿದೆ. ಕಳೆದ 15 ದಿನದಲ್ಲಿ ಬಿಎಂಟಿಸಿ ಬಸ್ಗಳಿಂದ ಸಂಭವಿಸಿದ ಅಪಘಾತದಲ್ಲಿ ಐವರು ಪ್ರಾಣ ಕಳೆದುಕೊಂಡಿದ್ದಾರೆ. ಸಾಕಷ್ಟು ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಿಎಂಟಿಸಿ ಸಂಸ್ಥೆ ಈ ಅಪಘಾತದಲ್ಲಿ ನಮ್ಮ ಚಾಲಕರ ತಪ್ಲಿಲ್ಲ ಎಂದು ಹೇಳುತ್ತಿದ್ದರೂ, ಕೆಲವೊಂದು ಅಪಘಾತದಲ್ಲಿ ಚಾಲಕರ ನಿರ್ಲಕ್ಷ್ಯ ಎದ್ದು ಕಾಣಿಸುತ್ತಿದೆ.
ಬಿಎಂಟಿಸಿ ಬಸ್ ಚಾಲಕರ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿ, ಪ್ರಕರಣ ಸಾಬೀತಾದರೇ 6 ತಿಂಗಳು ಅಮಾನತು ಮಾಡಲಾಗುತ್ತದೆ. ಪುನರಾರ್ವತನೆಗೊಂಡರೆ ಕೆಲಸದಿಂದಲೇ ವಜಾ ಮಾಡಲಾಗುತ್ತದೆ. ಚಾಲನೆ ವೇಳೆ ಫೋನ್ನಲ್ಲಿ ಮಾತಾಡಿದರೆ ಚಾಲಕರನ್ನು ಅಮಾನತು ಮಾಡಲಾಗುವುದು. ಇನ್ನು, ಎಲೆಕ್ಟ್ರಿಕ್ ಬಸ್ ಚಾಲಕರನ್ನು 15 ದಿನ ಅಮಾನತು ಮಾಡಲಾಗುತ್ತದೆ. ಎಲೆಕ್ಟ್ರಿಕ್ ಬಸ್ ಕಂಪನಿಗೆ 5 ಸಾವಿರ ರುಪಾಯಿ ದಂಡ ಹಾಕಲಾಗುತ್ತದೆ ಎಂದು ಬಿಎಂಟಿಸಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಚಾಲಕರು ಫುಲ್ ಅಲರ್ಟ್ ಆಗಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಗಳಿಂದಲೇ ಅತಿ ಹೆಚ್ಚು ಅಪಘಾತ: ವಾರದಲ್ಲಿ ನಾಲ್ವರ ಸಾವು
ತರಬೇತಿ ನೀಡುತ್ತಿರುವ ಬಗ್ಗೆ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕರು ಟಿವಿ9 ಪ್ರತಿನಿಧಿ ಜೊತೆ ಮಾತನಾಡಿದ್ದು, ಈ ತರಬೇತಿಯಿಂದ ತುಂಬಾ ಸಹಾಯ ಆಗುತ್ತದೆ. ಇದರಿಂದ ನಗರದಲ್ಲಿ ಅಪಘಾತ ಪ್ರಕರಣಗಳು ಕಡಿಮೆ ಆಗುತ್ತವೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ನಗರದಲ್ಲಿ ಬಿಎಂಟಿಸಿ ಬಸ್ಗಳಿಂದ ಆಗುತ್ತಿರುವ ಸಾವು ನೋವುಗಳನ್ನು ನೋಡುತ್ತಿದ್ದರೇ ಬಿಎಂಟಿಸಿ ಚಾಲಕರು ಮತ್ತು ನಿರ್ವಾಹಕರು ತುಂಬಾ ಜಾಗರೂಕರಾಗಿ ಕೆಲಸ ಮಾಡಬೇಕು. ಅಜಾಗರೂಕತೆಯಿಂದ ಕೆಲಸ ಮಾಡಿದ್ರೆ ಅಮಾಯಕರ ಪ್ರಾಣವೂ ಹೋಗುತ್ತೆ, ಇತ್ತ ಕೆಲಸವೂ ಹೋಗುತ್ತದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:29 am, Tue, 26 August 25



