
ಬೆಂಗಳೂರು, (ಜೂನ್ 25): ಕರ್ನಾಟಕ ಬಿಜೆಪಿಯಲ್ಲಿ (Karnataka BJP) ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ವಿರೋಧ ಪಕ್ಷದ ನಾಯಕ ಆರ್ ಅಶೋಕ್ (R Ashoka) ದೆಹಲಿ (Delhi) ತೆರಳಿದ ಬೆನ್ನಲ್ಲೇ ಅವರ ಹಿಂದೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಸಹ ವಿಮಾನ ಏರಿ ದಲ್ಲಿ ತಲುಪ್ಪಿದ್ದರು. ಇದೀಗ ವಿಜಯೇಂದ್ರ ದೆಹಲಿಯಿಂದ ಇಂದು (ಜೂನ್ 25) ಸಂಜೆ ಬೆಂಗಳೂರಿಗೆ ವಾಪಸ್ ಆಗಿದ್ದು, ಮಹತ್ವದ ವಿಷಯಗಳನ್ನು ಹೊತ್ತು ತಂದಿದ್ದಾರೆ. ಇನ್ನು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ಬಿಜೆಪಿ ರಾಜ್ಯ ಪದಾಧಿಕಾರಿಗಳ ಬಗ್ಗೆ ಮಹತ್ವದ ಸುಳಿವು ನೀಡಿದ್ದಾರೆ. ಅಲ್ಲದೇ ರಾಜ್ಯಾಧ್ಯಕ್ಷ ಹಾಗೂ ರಾಷ್ಟ್ರೀಯ ಅಧ್ಯಕ್ಷರ ನೇಮಕದ ಬಗ್ಗೆ ವಿಚಾರಗಳನ್ನು ಹಂಚಿಕೊಂಡಿದ್ದು, ರಾಜ್ಯ ಬಿಜೆಪಿಯಲ್ಲಿ ಕೆಲ ಬದಲಾವಣೆಗಳು ಆಗುವುದು ಪಕ್ಕಾ ಆದಂತಾಗಿದೆ.
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಅತಿ ಶೀಘ್ರದಲ್ಲೇ ಬಿಜೆಪಿ ರಾಜ್ಯ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ. ಎಲ್ಲ ಜಿಲ್ಲಾಧ್ಯಕ್ಷರ ಅಭಿಪ್ರಾಯ ಸಂಗ್ರಹಿಸಿ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲಿದ್ದಾರೆ. ಈಗಾಗಲೇ ದೇಶಾದ್ಯಂತ 14 ರಾಜ್ಯಗಳಲ್ಲಿ ಮಾತ್ರ ಅಧ್ಯಕ್ಷರನ್ನ ನೇಮಿಸಲಾಗಿದೆ. ಉಳಿದ ರಾಜ್ಯಗಳಲ್ಲೂ ಆಯ್ಕೆ ಮಾಡಲಿದ್ದಾರೆ. ಇದಾದ ಬಳಿಕ ರಾಷ್ಟ್ರೀಯ ಅಧ್ಯಕ್ಷರನ್ನ ನೇಮಕ ಮಾಡಲಿದ್ದಾರೆ. ಇದು ಬಿಜೆಪಿ ಪಕ್ಷದಲ್ಲಿರುವಂತ ಒಂದು ವಿಧಾನ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ರಾಜ್ಯ ಬಿಜೆಪಿ ಪದಾಧಿಕಾರಿಗಳ ಬದಲಾವಣೆಯಾಗುವ ಸುಳಿವು ನೀಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರ ನೇಮಕಾತಿ ಕುರಿತ ನಿರೀಕ್ಷೆ ಹಾಗೂ ಸಸ್ಪೆನ್ಸ್ ಏಕಕಾಲದಲ್ಲಿ ಮುಂದುವರೆದಿದೆ. ಇದರ ನಡುವೆ ನಿನ್ನೆ (ಜೂನ್ 24) ಬೆಳಗ್ಗೆ ವಿಪಕ್ಷ ನಾಯಕ ಆರ್. ಅಶೋಕ್ ದೆಹಲಿಗೆ ತೆರಳಿದ್ದು, ರಾಜ್ಯ ಬಿಜೆಪಿ ಪದಾಧಿಕಾರಿಗಳ ನೇಮಕದ ಬಗ್ಗೆ ಚರ್ಚೆ ನಡೆದಿದ್ದು, ಕೆಲ ಮಹತ್ವದ ಬದಲಾವಣೆಗೆ ಅಶೋಕ್ ಮನವಿ ಮಾಡಿದಂತಿದೆ. ಹೀಗಾಗಿ ಹೈಕಮಾಂಡ್ ಕೂಡಲೇ ವಿಜಯೇಂದ್ರ ಅವರನ್ನ ಕರೆಯಿಸಿಕೊಂಡು ಈ ಬಗ್ಗೆ ಚರ್ಚಿಸಿದೆ ಎನ್ನಲಾಗಿದೆ. ಇದರಿಂದ ವಿಜಯೇಂದ್ರ ದೆಹಲಿಯಿಂದ ವಾಪಸ್ ಆಗುತ್ತಿದ್ದಂತೆಯೇ ಪದಾಧಿಕಾರಿಗಳ ಬದಲಾವಣೆ ಬಗ್ಗೆ ಮಾತುಗಳನ್ನಾಡಿದ್ದಾರೆ.
ಜಿಲ್ಲಾಧ್ಯಕ್ಷರು ಸೇರಿದಂತೆ ತಮಗೆ ಬೇಕಾದವರನ್ನು ಪದಾಧಿಕಾರಿಗಳನ್ನಾಗಿ ಮಾಡಲಾಗಿದೆ ಎನ್ನುವ ಆರೋಪ ವಿಜಯೇಂದ್ರ ವಿರುದ್ಧ ಕೇಳಿಬರುತ್ತಲೇ ಇದ್ದವು. ಈ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಸಾಕಷ್ಟು ಬಾರಿ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಅಲ್ಲದೇ ಚಿಕ್ಕಬಳ್ಳಾಪುರ ಸಂಸದ ಸುಧಾಕರ್ ಸಹ ತಮ್ಮ ಜಿಲ್ಲೆಯ ಅಧ್ಯಕ್ಷರ ಆಯ್ಕೆ ಬಗ್ಗೆ ಪ್ರಶ್ನಿಸಿದ್ದರು. ಅಲ್ಲದೇ ಈ ಬಗ್ಗೆ ಹೈಕಮಾಂಡ್ ನಾಯಕರ ಗಮನಕ್ಕೂ ತಂದಿದ್ದರು. ಇದಾದ ಬಳಿಕ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರನ್ನ ಬದಲಾವಣೆ ಮಾಡಲಾಗಿತ್ತು.
ಈ ಎಲ್ಲಾ ಬೆಳವಣಿಗೆಗಳ ನಂತರ ಇದೀಗ ವಿಜಯೇಂದ್ರ ದಿಲ್ಲಿಯಿಂದ ವಾಪಸ್ ಬಂದು ಪಕ್ಷದ ಪದಾಧಿಕಾರಿಗಳ ಬದಲಾವಣೆ ಬಗ್ಗೆ ಮಾತನಾಡಿರುವುದು ಭಾರೀ ಸಂಚಲನಕ್ಕೆ ಕಾರಣವಾಗಿದೆ. ಹೀಗೆ ರಾಜ್ಯ ಬಿಜೆಪಿ ಪಾಳಯದಲ್ಲಿ ಕುತೂಹಲ ಕೆರಳಿಸಿರುವ ವಿಚಾರಗಳು ನಡೆಯುತ್ತಿದ್ದು, ಅಂತಿಮವಾಗಿ ಏನೆಲ್ಲಾ ಬದಲಾವಣೆಗಳು ಆಗುತ್ತವೆ ಎನ್ನುವುದನ್ನು ಕಾದುನೋಡಬೇಕಿದೆ.
Published On - 8:16 pm, Wed, 25 June 25