ಆರ್ ಅಶೋಕ್ ಬೆನ್ನಲ್ಲೇ ದೆಹಲಿಗೆ ತೆರಳಿದ ಬಿವೈ ವಿಜಯೇಂದ್ರ: ಬಿಜೆಪಿಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ
ಕರ್ನಾಟಕ ಬಿಜೆಪಿಯಲ್ಲಿನ ಬೆಳವಣಿಗೆಗಳು ಗರಿಗೆದರಿವೆ. ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಮಂಗಳವಾರ ದಿಢೀರ್ ದೆಹಲಿಗೆ ತೆರಳಿದ್ದಾರೆ. ಶೀಘ್ರದಲ್ಲೇ ರಾಜ್ಯಾಧ್ಯಕ್ಷ ಸ್ಥಾನದ ಘೋಷಣೆಯಾಗಬಹುದಾದ ಸಾಧ್ಯತೆ ಹಿನ್ನೆಲೆಯಲ್ಲಿ ಅಶೋಕ್ ಭೇಟಿ ಕುತೂಹಲ ಕೆರಳಿಸಿದೆ. ವಿಶೇಷವೆಂದರೆ, ಅಶೋಕ್ ದೆಹಲಿಗೆ ತೆರಳಿದ ಬೆನ್ನಲ್ಲೇ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕೂಡ ದೆಹಲಿಗೆ ಹೋಗಿದ್ದಾರೆ. ಇಬ್ಬರೂ ಪ್ರತ್ಯೇಕವಾಗಿಯೇ ಹೋಗಿರುವುದು ಕುತೂಹಲ ಮೂಡಿಸಿದೆ.

ಬೆಂಗಳೂರು, ಜೂನ್ 25: ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಭೇಟಿ ನೀಡಿ ಹೋದ ಬಳಿಕ ಕರ್ನಾಟಕ (Karnataka) ಬಿಜೆಪಿಯಲ್ಲಿ (BJP) ರಾಜಕೀಯ ಬೆಳವಣಿಗೆಗಳು ಬಿರುಸುಗೊಂಡಿವೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರತಿ ದಿನ ಬೆಂಗಳೂರಿನಲ್ಲಿರುವ ಪಕ್ಷದ ಪ್ರಧಾನ ಕಚೇರಿಗೆ ಭೇಟಿ ನೀಡಲು ಆರಂಭಿಸಿದ್ದರೆ, ಅತ್ತ ಭಿನ್ನರ ಬಣ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿವೈ ವಿಜಯೇಂದ್ರರನ್ನು (BY Vijayendra) ತೆರವುಗೊಳಿಸುವುದಕ್ಕೆ ಶತಾಯಗತಾಯ ಯತ್ನಿಸುತ್ತಿದೆ. ಇದೇ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಆರ್ ಅಶೋಕ್ ಮತ್ತು ಬಿವೈ ವಿಜಯೇಂದ್ರ ಪ್ರತ್ಯೇಕವಾಗಿ ದೆಹಲಿಗೆ ವರಿಷ್ಠರ ಭೇಟಿಗೆ ತೆರಳಿರುವುದು ಕುತೂಹಲ ಮೂಡಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತ ಚರ್ಚೆಗಳು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದು ಗಮನಾರ್ಹ. ಉಭಯ ನಾಯಕರ ಭೇಟಿಯ ನಿಖರ ಕಾರಣ ಇನ್ನೂ ಸ್ಪಷ್ಟಪಡಿಸಲಾಗಿಲ್ಲ. ಆದರೆ, ಬಿಜೆಪಿ ಹೈಕಮಾಂಡ್ ರಾಜ್ಯಾಧ್ಯಕ್ಷರ ನೇಮಕಾತಿ ಕುರಿತು ಶೀಘ್ರದಲ್ಲೇ ತೀರ್ಮಾನವನ್ನು ಪ್ರಕಟಿಸಬಹುದು ಎಂಬ ನಿರೀಕ್ಷೆ ಇದೆ ಎಂಬುದಾಗಿ ಪಕ್ಷದ ಮೂಲಗಳು ತಿಳಿಸಿವೆ.
ಆರ್ ಅಶೋಕ್ ಅವರ ಆಪ್ತ ಮೂಲಗಳ ಪ್ರಕಾರ, ಅವರು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಭೇಟಿಗೆ ತೆರಳಿದ್ದಾರೆ ಎನ್ನಲಾಗಿದೆ. ಆದರೆ, ಮತ್ತೊಂದು ಮೂಲಗಳ ಪ್ರಕಾರ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಲು ದೆಹಲಿಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಈ ಮಾಹಿತಿಯನ್ನು ಇನ್ನೂ ಅಧಿಕೃತವಾಗಿ ಖಚಿತಪಡಿಸಲಾಗಿಲ್ಲ. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತು ಗೃಹ ಸಚಿವ ಅಮಿತ್ ಶಾ ಅವರೊಂದಿಗೂ ಅಶೋಕ್ ಮಾತುಕತೆ ನಡೆಸುವ ಸಾಧ್ಯತೆಯಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.
ಮತ್ತೊಂದೆಡೆ, ಕಳೆದ 15 ದಿನಗಳಲ್ಲಿ ರಾಜ್ಯದಲ್ಲಿ ನಡೆದ ಬೆಳವಣಿಗೆಗಳು ಮತ್ತು ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸುವ ಪ್ರಯತ್ನದ ಭಾಗವಾಗಿ ಈ ಭೇಟಿ ನಡೆದಿರಬಹುದು ಎಂದೂ ಹೇಳಲಾಗುತ್ತಿದೆ.
ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಮತ್ತೆ ಭಿನ್ನರ ಚಟುವಟಿಕೆ ಬಿರುಸು: ಇತ್ತೀಚಿನ ಬೆಳವಣಿಗೆಗಳ ಸಮಗ್ರ ಮಾಹಿತಿ
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕ ಇಬ್ಬರನ್ನೂ ಬಿಜೆಪಿ ಹೈಕಮಾಂಡ್ ದೆಹಲಿಗೆ ಕರೆಸಿಕೊಂಡಿದೆಯೇ ಅಥವಾ ಇವರಾಗಿಯೇ ಹೈಕಮಾಂಡ್ ಭೇಟಿ ಮಾಡಲು ತೆರಳಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಇಬ್ಬರೂ ಪ್ರತ್ಯೇಕವಾಗಿ ತೆರಳಿರುವುದು ನಿಜ. ಶೀಘ್ರದಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಕುರಿತಾಗಿ ಹೈಕಮಾಂಡ್ ತೀರ್ಮಾನ ಘೋಷಿಸಬಹುದು ಎಂಬ ನಿರೀಕ್ಷೆಯೂ ಇದೆ. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನದ ಕುರಿತಾದ ಚರ್ಚೆಗಾಗಿಯೇ ಉಭಯ ನಾಯಕರು ದೆಹಲಿಗೆ ತೆರಳಿರಬಹುದು ಎನ್ನಲಾಗುತ್ತಿದೆ.








