ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಮತ್ತೆ ಭಿನ್ನರ ಚಟುವಟಿಕೆ ಬಿರುಸು: ಇತ್ತೀಚಿನ ಬೆಳವಣಿಗೆಗಳ ಸಮಗ್ರ ಮಾಹಿತಿ
ಒಂದೆಡೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರು ಭೇಟಿ ಬೆನ್ನಲ್ಲೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಬಿಜೆಪಿಯಲ್ಲಿ ಸಕ್ರಿಯರಾಗಿದ್ದಾರೆ. ಮತ್ತೊಂದೆಡೆ, ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಬಳಿಕ ತಣ್ಣಗಾಗಿದ್ದ ಬಿಜೆಪಿ ಭಿನ್ನರ ಚಟುವಟಿಕೆ ಮತ್ತೆ ಶುರುವಾಗಿದೆ. ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಾಯಕತ್ವದ ವಿರುದ್ಧ ಮತ್ತೆ ಭಿನ್ನಮತ ಸ್ಫೋಟಗೊಂಡಿದೆ. ಕುಮಾರ್ ಬಂಗಾರಪ್ಪ ಸೇರಿದಂತೆ ಬಂಡಾಯ ನಾಯಕರು ರಾಜ್ಯ ವಿಜಯೇಂದ್ರ ಬದಲಾವಣೆಗೆ ಒತ್ತಾಯಿಸಿದ್ದಾರೆ.

ಬೆಂಗಳೂರು, ಜೂನ್ 24: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಬೆಂಗಳೂರಿಗೆ ಭೇಟಿ ನೀಡಿ ಹೋದ ಬೆನ್ನಲ್ಲೇ ಕರ್ನಾಟಕ ಬಿಜೆಪಿಯಲ್ಲಿ (Karnataka BJP) ಹಲವು ಮಹತ್ವದ ಬೆಳವಣಿಗೆಗಳು ಕಂಡುಬರುತ್ತಿವೆ. ಒಂದೆಡೆ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರತಿ ದಿನ ರಾಜ್ಯ ಬಿಜೆಪಿ ಪ್ರಧಾನ ಕಚೇರಿಗೆ ಭೇಟಿಕೊಡುತ್ತಿದ್ದರೆ, ಅತ್ತ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಮತ್ತು ಯಡಿಯೂರಪ್ಪ ಕುಟುಂಬದ ಪ್ರಾಬಲ್ಯದ ವಿರುದ್ಧ ಒಂದು ವರ್ಗದ ನಾಯಕರು ತಿರುಗಿಬಿದ್ದಿದ್ದಾರೆ. ಬೆಂಗಳೂರಿನ ಬಂಡಾಯ ಸಭೆಗಳಿಂದ ಹಿಡಿದು ವಿಜಯಪುರದ ತೀಕ್ಷ್ಣ ಹೇಳಿಕೆಗಳವರೆಗೆ, ಬಿಜೆಪಿ ನಾಯಕತ್ವ ಬದಲಾವಣೆಗೆ ಮತ್ತೆ ಕರೆ ಜೋರಾಗುತ್ತಿದೆ.
ಯತ್ನಾಳ್ ಉಚ್ಚಾಟನೆಯೊಂದಿಗೆ ರಾಜ್ಯ ಬಿಜೆಪಿಯಲ್ಲಿ ತಣ್ಣಗಾಗಿದ್ದ ವಿಜಯೇಂದ್ರ ವಿರೋಧಿ ಬಣದ ಚಟುವಟಿಕೆಗಳು ಮತ್ತೆ ಶುರುವಾಗಿವೆ. ಕೇಂದ್ರ ಸಚಿವ ವಿ. ಸೋಮಣ್ಣ ಕೆಲವೇ ದಿನಗಳ ಹಿಂದೆ ವಿಜಯೇಂದ್ರ ವಿರೋಧಿ ಬಣದ ನಾಯಕರೊಂದಿಗೆ ಸಭೆ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬೆಂಗಳೂರಿನಲ್ಲಿ ನಡೆದ ಕೇಂದ್ರ ಸಚಿವ ವಿ. ಸೋಮಣ್ಣ ನೇತೃತ್ವದ ಬಂಡಾಯ ಬಿಜೆಪಿ ನಾಯಕರ ಸಭೆಯೊಂದಿಗೆ ಮತ್ತೆ ಭಿನ್ನಮತ ಚುರುಕುಪಡೆದಿದೆ. ವಿಜಯೇಂದ್ರರ ಕಡು ವಿರೋಧಿಯಾಗಿರುವ ಕುಮಾರ್ ಬಂಗಾರಪ್ಪ, ರಾಜ್ಯಾಧ್ಯಕ್ಷ ಸ್ಥಾನದ ಬದಲಾವಣೆ ಬಗ್ಗೆ ಒತ್ತಾಯವನ್ನು ಪುನರುಚ್ಚರಿಸಿದ್ದಾರೆ. ನಾವು ಬಿ.ವೈ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರಿಯಬಾರದು ಎಂಬ ಹೋರಾಟ ಮುಂದುವರೆಸಲಿದ್ದೇವೆ. ಬದಲಾವಣೆಯಾಗದಿದ್ದರೆ, ಪಕ್ಷಕ್ಕೆ ಗಂಭೀರ ಸಂಕಷ್ಟ ಬರಲಿದೆ. ವರಿಷ್ಠರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದಿದ್ದಾರೆ.
ವಿಜಯೇಂದ್ರ ವಿರುದ್ದ ವಾಗ್ದಾಳಿ ಮುಂದುವರಿಸಿರುವ ಕುಮಾರ್ ಬಂಗಾರಪ್ಪ, ಪಕ್ಷದ ಕಾರ್ಯಕರ್ತರು ವ್ಯವಸ್ಥಿತ ಬದಲಾವಣೆಯನ್ನು ಬಯಸುತ್ತಾರೆ. ವಿಜಯೇಂದ್ರ ಜನರ ಭಾವನೆಗೆ ತಕ್ಕಂತೆ ಪಕ್ಷವನ್ನು ಹೋರಾಟಕ್ಕೆ ಕರೆದೊಯ್ಯಲು ವಿಫಲರಾಗಿದ್ದಾರೆ. ವಿಜಯೇಂದ್ರ ಜನರ ಭಾವನೆಯಂತೆ ನೇರವಾಗಿ ಹೋರಾಟ ಮಾಡುತ್ತಿಲ್ಲ. ಪಕ್ಷ ಜನರ ಭಾವನೆಯನ್ನು ಪ್ರತಿಬಿಂಬಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೋಮಣ್ಣ ಪೈಪೋಟಿ?
ವಿ. ಸೋಮಣ್ಣ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪ್ರಯತ್ನಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಂಗಾರಪ್ಪ, ಆ ಬಗ್ಗೆ ಯಾವುದೇ ಒತ್ತಾಯವಿಲ್ಲ . ಆದರೆ ಸೋಮಣ್ಣರ ಹಿರಿತನ ಮತ್ತು ಕೇಂದ್ರ ಸಚಿವರಾಗಿರುವ ಅನುಭವ ಅವರನ್ನು ಬಲವಾದ ಸ್ಪರ್ಧಿಯನ್ನಾಗಿಸಿದೆ ಎಂದಿದ್ದಾರೆ.
‘ಸೋಮಣ್ಣ ನಮ್ಮ ಪಕ್ಷದ ಹಿರಿಯ ನಾಯಕ, ಕೇಂದ್ರ ಸಚಿವರಾಗಿದ್ದಾರೆ. ಅವರು ರಾಜ್ಯ ರಾಜಕೀಯಕ್ಕೆ ಬರಬೇಕೇ ಎಂಬುದನ್ನು ವರಿಷ್ಠರು ನಿರ್ಧರಿಸುತ್ತಾರೆ. ನಾವು ಅವರನ್ನು ಅಧ್ಯಕ್ಷರನ್ನಾಗಿ ಎಂದು ಒತ್ತಾಯಿಸಿಲ್ಲ, ಅವರೂ ನಮ್ಮ ಬೆಂಬಲ ಕೇಳಿಲ್ಲ’ ಎಂದು ಕುಮಾರ್ ಬಂಗಾರಪ್ಪ ಹೇಳಿದ್ದಾರೆ.
ಯತ್ನಾಳ್ರಿಂದ ಬಿಎಸ್ವೈ ಕುಟುಂಬದ ವಿರುದ್ಧ ಮತ್ತೆ ವಾಗ್ದಾಳಿ
ವಿಜಯೇಂದ್ರ ಮತ್ತು ಯಡಿಯೂರಪ್ಪ ಕುಟುಂಬದ ವಿರುದ್ಧ ಉಚ್ಚಾಟಿತ ನಾಯಕ ಯತ್ನಾಳ್ ತೀಕ್ಷ್ಣ ಟೀಕೆ ಮುಂದುವರೆಸಿದ್ದಾರೆ. ವಿಜಯೇಂದ್ರ ನಾಯಕತ್ವ ಪಕ್ಷದ ವಿರೋಧ ಪಕ್ಷದ ಧ್ವನಿಯನ್ನು ದುರ್ಬಲಗೊಳಿಸಿದೆ ಮತ್ತು ಪಕ್ಷಕ್ಕೆ ದಿಕ್ಕು ದೆಸೆಯಿಲ್ಲದೆ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.
ನಾವು ಆತ್ಮಹತ್ಯೆಗೆ ತಯಾರಾಗಿದ್ದೇವೆ ಎಂದರೆ, ವಿಜಯೇಂದ್ರ ತಮ್ಮ ಕೈಯಿಂದ ಬಿಜೆಪಿಯನ್ನು ಮುಗಿಸುತ್ತಾರೆ ಎಂದರ್ಥ. ಅವರ ಸಭೆಗಳಿಗೆ, ಹೋರಾಟಗಳಿಗೆ ಎಷ್ಟು ಜನ ಸೇರುತ್ತಿದ್ದಾರೆ? ಬೆಂಗಳೂರಿನ ಆರ್ಸಿಬಿ ಕಾಲ್ತುಳಿತದಲ್ಲಿ 11 ಜನ ಸತ್ತಾಗ ಬಿಜೆಪಿ ಹೋರಾಟಕ್ಕೆ ಕೇವಲ 300 ಜನ ಸೇರಿರಲಿಲ್ಲ. ಆಡಳಿತ ಪಕ್ಷಕ್ಕೆ ಬಿಜೆಪಿಯ ಭಯವೇ ಇಲ್ಲ. ವರಿಷ್ಠರು ಈ ಅಯೋಗ್ಯ ಅಧ್ಯಕ್ಷನನ್ನು ಬದಲಾಯಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ನಾಟಕೀಯ ನಡೆಯಿಂದ ಬಿಜೆಪಿ ಕಾರ್ಯಕರ್ತರ ಮೇಲೆ ಪರಿಣಾಮ: ಯತ್ನಾಳ್
ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಕೊಲೆಯಾಗುತ್ತಿದೆ, ಯಾವ ನ್ಯಾಯ ಕೊಡುತ್ತೀರಿ? ಯಡಿಯೂರಪ್ಪನವರ ಮೊಮ್ಮಗನ ಮದುವೆಯಲ್ಲಿ ಸಿದ್ದರಾಮಯ್ಯ, ಡಿಕೆ, ಜಮೀರ್, ಸಂತೋಷ್ ಲಾಡ್ ತಬ್ಬಿಕೊಳ್ಳುತ್ತಿದ್ದರು. ಈ ನಾಟಕೀಯ ನಡೆ ಕಾರ್ಯಕರ್ತರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಯತ್ನಾಳ್ ಕಿಡಿಕಾರಿದ್ದಾರೆ.
ಇನ್ನು ಬಿಜೆಪಿ-ಜೆಡಿಎಸ್ ಮೈತ್ರಿಯ ಬಗ್ಗೆಯೂ ಯತ್ನಾಳ್ ಕಿಡಿಕಾರಿದ್ದಾರೆ. ವಿಜಯೇಂದ್ರ ಮತ್ತು ಯಡಿಯೂರಪ್ಪ ಜೆಡಿಎಸ್ ನಾಯಕ ಕುಮಾರಸ್ವಾಮಿಯವರನ್ನು ರಾಜಕೀಯವಾಗಿ ಮುಗಿಸಲು ರಹಸ್ಯ ಯೋಜನೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ವೇದಿಕೆಯ ಮೇಲೆ ಹಾಲು-ಸಕ್ಕರೆ ಎಂದು ಮಾತನಾಡುತ್ತಾರೆ, ಆದರೆ ಒಳಗೊಳಗೆ ಕುಮಾರಸ್ವಾಮಿಯನ್ನು ಹೇಗೆ ಮುಗಿಸಬೇಕೆಂದು ಯೋಜನೆ ಮಾಡಿದ್ದಾರೆ. ಇದೇ ತಂದೆ-ಮಗನ ಯೋಜನೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ತಮ್ಮ ವಿರೋಧಿ ಬಣದ ತೀವ್ರ ಟೀಕೆಯ ನಡುವೆಯೂ ಬಿಎಸ್ ವೈ ಮತ್ತೆ ಪಕ್ಷ ಸಂಘಟನೆಯ ಅಖಾಡಕ್ಕೆ ಇಳಿದಿದ್ದಾರೆ.ಕಳೆದ ಮೂರು ದಿನಗಳಿಂದ ನಿರಂತರವಾಗಿ ಬಿಜೆಪಿ ಕಚೇರಿಗೆ ಭೇಟಿ ನೀಡಿ ಪಕ್ಷದ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅಷ್ಟೇ ಅಲ್ಲದೆ ಮುಂದಿನ ವಾರದಿಂದ ಜಿಲ್ಲೆಗಳಿಗೂ ಭೇಟಿ ನೀಡಿ ಪಕ್ಷ ಸಂಘಟನೆಗೆ ಯಡಿಯೂರಪ್ಪ ಮುಂದಾಗಿದ್ದಾರೆ.
ಇದನ್ನೂ ಓದಿ: ಅಮಿತ್ ಶಾ ಭೇಟಿ ಬಳಿಕ ಯಡಿಯೂರಪ್ಪ, ವಿಜಯೇಂದ್ರ ಚಟುವಟಿಕೆಗಳಲ್ಲಿ ಬದಲಾವಣೆ! ಕಾರಣ ಇಲ್ಲಿದೆ
ಯಡಿಯೂರಪ್ಪ ಬಿಜೆಪಿಗೆ ಕಚೇರಿಗೆ ಬರುತ್ತಿರುವುದನ್ನು ಕುಮಾರ್ ಬಂಗಾರಪ್ಪ ವ್ಯಂಗ್ಯವಾಡಿದ್ದಾರೆ. ಯಡಿಯೂರಪ್ಪನವರು ಕಚೇರಿಗೆ ನಿರಂತರವಾಗಿ ಬರುತ್ತಿರುವುದು ವಿಜಯೇಂದ್ರರ ಅನುಭವದ ಕೊರತೆ ಮತ್ತು ಸಂಘಟನೆಯ ಲೋಪಗಳನ್ನು ಅವರು ಒಪ್ಪಿಕೊಂಡಿರಬೇಕು ಎಂದು ವ್ಯಂಗ್ಯವಾಡಿದ್ದಾರೆ.
ವರಿಷ್ಠರು ಭಿನ್ನರ ಆಗ್ರಹಕ್ಕೆ ಮಣಿದು ವಿಜಯೇಂದ್ರರನ್ನು ಹುದ್ದೆಯಿಂದ ಬದಲಾಯಿಸುತ್ತಾರೆಯೇ ಅಥವಾ ಯಡಿಯೂರಪ್ಪ ಕುಟುಂಬದ ಪ್ರಭಾವ ಮುಂದುವರಿಯಲಿಯೋ ಎಂಬುದನ್ನು ಕಾದುನೋಡಬೇಕಿದೆ.







