ಕರ್ನಾಟಕದ ಹಲವೆಡೆ ಮಳೆ ಅಬ್ಬರ: ಇಂದು ಎಲ್ಲೆಲ್ಲಿ ಶಾಲೆ ಕಾಲೇಜು ರಜೆ? ಇಲ್ಲಿದೆ ಮಾಹಿತಿ
School and college holiday: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆ ಆರ್ಭಟ ಮುಂದುವರಿದಿದ್ದು, ಮುನ್ನೆಚ್ಚರಿ ಕಾರ್ಯಕ್ರಮವಾಗಿ ಬುಧವಾರ (ಜೂನ್ 25) ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಯಾವ್ಯಾವ ಜಿಲ್ಲೆಗಳಲ್ಲಿ ಮತ್ತು ತಾಲೂಕು ವ್ಯಾಪ್ತಿಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಇದೆ ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು, ಜೂನ್ 25: ಮೋಡವೇ ಬಾಯ್ತೆರದಂತೆ ಮಳೆ ಸುರಿಯುತ್ತಿದೆ, ಹೊಲಗದ್ದೆಗಳೆಲ್ಲ ಜಲಾವೃತಗೊಂಡಿವೆ. ಗುಡ್ಡಗಳು ಕುಸಿಯುತ್ತಿವೆ, ಮರಗಳು ಬುಡಮೇಲಾಗುತ್ತಿವೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆ (Monsoon Rain) ಅಬ್ಬರ ಮುಂದುವರಿದಿದ್ದು, ಅನಾಹುತಗಳನ್ನೇ ಸೃಷ್ಟಿಸಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಕೆಲವು ಜಿಲ್ಲೆಗಳಲ್ಲಿ ಮತ್ತು ಇನ್ನು ಕೆಲವು ಜಿಲ್ಲೆಗಳ ಹಲವು ತಾಲೂಕು ವ್ಯಾಪ್ತಿಗಳಲ್ಲಿ ಶಾಲಾ ಕಾಲೇಜುಗಳಿಗೆ ಇಂದು (ಜೂನ್ 25) ರಜೆ ಘೋಷಣೆ (School and College Holiday) ಮಾಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಎಲ್ಲೆಲ್ಲಿ ಶಾಲೆ, ಕಾಲೇಜು ರಜೆ?
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಮುಂಜಾಗ್ರತಾ ಕ್ರಮವಾಗಿ ನಾಲ್ಕು ತಾಲೂಕುಗಳಲ್ಲಿ ಅಂಗನವಾಡಿ ಮತ್ತು ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಹಳಿಯಾಳ, ದಾಂಡೇಲಿ, ಜೋಯಿಡಾ ಮತ್ತು ಯಲ್ಲಾಪುರ ತಾಲೂಕಿನಲ್ಲಿ ಶಾಲೆಗಳಿಗೆ ರಜೆ ಘೋಷಿಸಿ ಡಿಸಿ ಲಕ್ಷ್ಮೀಪ್ರಿಯಾ ಆದೇಶಿಸಿದ್ದಾರೆ.
ಹಾಸನ ಜಿಲ್ಲೆಯ ಈ ತಾಲೂಕು ವ್ಯಾಪ್ತಿಯಲ್ಲಿ ರಜೆ
ಹಾಸನ ಜಿಲ್ಲೆಯಲ್ಲೂ ಮುಂಗಾರು ಮಳೆ ಆರ್ಭಟ ಮುಂದುವರಿದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಂದು ಹಾಸನದ ಸಕಲೇಶಪುರ, ಆಲೂರು, ಅರಕಲಗೂಡು ಸೇರಿ 3 ತಾಲೂಕುಗಳಲ್ಲಿ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಿ ಡಿಸಿ ಲತಾಕುಮಾರಿ ಆದೇಶಿಸಿದ್ದಾರೆ.
ಬೆಳಗಾವಿಯ ಜಿಲ್ಲೆಯಲ್ಲೂ ಶಾಲಾ ಕಾಲೇಜಿಗೆ ರಜೆ
ಬೆಳಗಾವಿ ಜಿಲ್ಲೆಯಲ್ಲೂ ಮಳೆ ಅಬ್ಬರ ಮುಂದುವರಿದಿದೆ. ಮಹಾರಾಷ್ಟ್ರದಲ್ಲಿಯೂ ಭಾರಿ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿ ತುಂಬಿ ಹರಿಯುತ್ತಿದೆ. ನದಿ ಪಾತ್ರದ ಹಲವು ತಾಲೂಕುಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಬೆಳಗಾವಿ, ಖಾನಾಪುರ ತಾಲೂಕಿನಲ್ಲಿ ಶಾಲೆ ಮತ್ತು ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶಿಸಿದ್ದಾರೆ.
ಮತ್ತೊಂದೆಡೆ, ಚಿಕ್ಕಮಗಳೂರಿನಲ್ಲಿಯೂ ಮಳೆಯಿಂದಾಗಿ ಸಾಲು ಸಾಲು ಅವಾಂತರಗಳು ಸಂಭವಿಸಿವೆ. ಮೂಡಿಗೆರೆ ಬಳಿ ಮಳೆಯ ಅಬ್ಬರಕ್ಕೆ ಚಾಲಕನ ನಿಯಂತ್ರಣ ತಪ್ಪಿದ ಕ್ಯಾಂಟರ್ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರ ಸಾಗರ್ ಗಂಭೀರ ಗಾಯಗೊಂಡಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ತೀರ್ಥಕೆರೆ ಬಳಿ ಗುಡ್ಡ ಕುಸಿದಿದೆ. ಪರಿಣಾಮವಾಗಿ ಶೃಂಗೇರಿ-ಹೊರನಾಡು ಸಂಪರ್ಕಿಸುವ ರಸ್ತೆ ತಾತ್ಕಾಲಿಕ ಬಂದ್ ಆಗಿದೆ.
ಇದನ್ನೂ ಓದಿ: ಮನೆ ಹಂಚಿಕೆಗೆ ಹಣ: ಆಡಿಯೋ ರಿಲೀಸ್ ಮಾಡಿದ್ದ ಬಿಆರ್ ಪಾಟೀಲ್ ಕ್ಷೇತ್ರದ ವಿಡಿಯೋ ವೈರಲ್
ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಬನ್ನೂರು ಬಳಿ ಹಸು ಮೇಯಿಸಲು ತೆರಳಿದ್ದ ವೇಳೆ ಕಾವೇರಿ ನದಿಯಲ್ಲಿ ಸಿಲುಕಿದ್ದ ತಂದೆ ಮತ್ತು ಮಗನನ್ನು ಇನ್ಸ್‌ಪೆಕ್ಟರ್ ಒಬ್ಬರು ರಕ್ಷಣೆ ಮಾಡಿದ್ದಾರೆ. ನದಿ ಮಧ್ಯೆ ಸಿಲುಕಿದ್ದ ಕೃಷ್ಣೇಗೌಡ ಮತ್ತು ಪುತ್ರ ಪ್ರವೀಣ್‌ನನ್ನು ರಕ್ಷಿಸಲು ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದರು. ಸ್ಥಳಕ್ಕೆ ಬಂದ ಇನ್ಸ್‌ಪೆಕ್ಟರ್ ಮನೋಜ್ ಕುಮಾರ್ ತೆಪ್ಪದ ಮೂಲಕ ಅಪ್ಪ, ಮಗನನ್ನು ಬಚಾವ್ ಮಾಡಿದ್ದಾರೆ.








