ಮಣ್ಣೆತ್ತಿನ ಅಮಾವಾಸ್ಯೆ ದಿನವೇ ರೈತನ ಎತ್ತುಗಳನ್ನು ಹೊತ್ತೊಯ್ದ ಸಾಲ ನೀಡಿದವ
ಮುಂಗಾರಿನ ವೇಳೆ ಬಿತ್ತನೆ ಸಮಯದಲ್ಲಿ ಬರುವ ಮಣ್ಣೆತ್ತಿನ ಅಮವಾಸ್ಯೆ ರೈತರ ಹಬ್ಬ. ಬುಧವಾರ ಮಣ್ಣೆತ್ತಿನ ಅಮಾವಾಸ್ಯೆಯನ್ನು ರೈತರು ರಾಜ್ಯಾದ್ಯಂತ ಅದ್ಧೂರಿಯಾಗಿ ಆಚರಿಸಿದರು. ಆದರೆ, ಈ ರೈತ ಕುಟುಂಬಕ್ಕೆ ಮಣ್ಣೆತ್ತಿನ ಅಮಾವಾಸ್ಯೆ ದಿನ ಸಾಲಗಾರ ಬಿಗ್ ಶಾಕ್ ಕೊಟ್ಟಿದ್ದಾನೆ. ಏನದು? ಇಲ್ಲಿದೆ ವಿವರ

ರಾಯಚೂರು, ಜೂನ್ 25: ಸಾಲ ಕಟ್ಟಿಲ್ಲ ಎಂಬ ಒಂದೇ ಕಾರಣಕ್ಕೆ ವ್ಯಕ್ತಿಯೋರ್ವ ಮಣ್ಣೆತ್ತಿನ ಅಮಾವಾಸ್ಯೆ (Mannettina Amavasye) ದಿನವೇ ರೈತ ದಂಪತಿಯ ಎತ್ತುಗಳನ್ನು ಹೊಡೆದುಕೊಂಡು ಹೋಗಿದ್ದಾನೆ. ರಾಯಚೂರು (Raichur) ಜಿಲ್ಲೆಯ ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮದಲ್ಲಿ ಘಟನೆ ನಡೆದಿದೆ. ಮಸರಕಲ್ ಗ್ರಾಮದ ಮರಿಯಪ್ಪ ಹಾಗೂ ಮರಿಯಮ್ಮ ದಂಪತಿ ಕೃಷಿಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಮುಂಗಾರು ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ರೈತ ದಂಪತಿ ಬಿತ್ತನೆ ಕಾರ್ಯ ಆರಂಭಿಸುವ ತವಕದಲ್ಲಿದ್ದರು. ಆದರೆ, ಸಾಲ ತೀರಿಸಿಲ್ಲ ಅಂತ ಜಯಪ್ಪ ಎಂಬುವರು ಈ ರೈತ ದಂಪತಿಗೆ ಸೇರಿದ ಜೋಡೆತ್ತುಗಳನ್ನು ಹೊಡೆದುಕೊಂಡು ಹೋಗಿದ್ದಾರೆ. ಈ ದಂಪತಿಗೆ ಜಯಪ್ಪ ಐದು ವರ್ಷಗಳ ಹಿಂದೆ ಕರಾರು ಪತ್ರದ ಮೂಲಕ ಬಡ್ಡಿ ಆಧಾರದಲ್ಲಿ ಒಂದು ಲಕ್ಷ ಸಾಲ ಕೊಟ್ಟಿದ್ದರು. ದಂಪತಿ ಪ್ರತಿ ವರ್ಷ ಸಮಯಕ್ಕೆ ಸರಿಯಾಗಿ ಬಡ್ಡಿ ಕಟ್ಟುತ್ತಲೇ ಬಂದಿದ್ದರು. ಆದರೆ, ಈ ವರ್ಷ ಸ್ವಲ್ಪ ಹಣವನ್ನು ರೈತ ಮರಿಯಪ್ಪ, ತುರ್ತು ಪರಿಸ್ಥಿತಿ ಇದೆ ಅಂತ ತನ್ನ ಸಂಬಂಧಿಯ ಓರ್ವ ಮಹಿಳೆಗೆ ನೀಡಿದ್ದಾರೆ. ಮಹಿಳೆ ಹಣ ವಾಪಸ್ ನೀಡುವಲ್ಲಿ ತಡ ಮಾಡಿದ್ದಾರೆ. ಈ ವಿಚಾರವನ್ನು ಮರಿಯಪ್ಪ ಜಯಪ್ಪಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಚಿನ್ನಾಭರಣ ಹಾಕೊಂಡು ಓಡಾಡಿದ್ರೆ ದಂಡ: ಪೊಲೀಸರ ಸೋಗಿನಲ್ಲಿ ಸುಲಿಗೆ
ಆದರೂ ಕೂಡ ಜಯಪ್ಪ ರೈತ ದಂಪತಿಯ ಒಂದುವರೆ ಲಕ್ಷ ಮೌಲ್ಯದ ಜೋಡೆತ್ತುಗಳನ್ನು ಹೊಡೆದುಕೊಂಡು ಹೋಗಿದ್ದಾರೆ. ಆಗ, ರೈತ ದಂಪತಿ ಎತ್ತುಗಳನ್ನು ಕೊಡಿಸಿ ಅಂತ ಗಬ್ಬೂರು ಪೊಲೀಸ್ ಠಾಣೆಗೆ ಹೋಗಿದ್ದಾರೆ. ಆದರೆ, ಠಾಣೆಯಲ್ಲಿ ರೈತ ದಂಪತಿಗೆ ಸೂಕ್ತ ಸ್ಪಂದನೆ ದೊರೆಯುವುದಿಲ್ಲ. ಅದಕ್ಕೆ, ರೈತ ದಂಪತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಕದ ತಟ್ಟಿದ್ದಾರೆ.
ಕೊನೆಗೆ, ಹಿರಿಯ ಅಧಿಕಾರಿಗಳ ಸೂಚನೆ ಮೆರೆಗೆ ಗಬ್ಬೂರು ಪೊಲೀಸರು ಜಯಪ್ಪಗೆ ಎಚ್ಚರಿಕೆ ನೀಡಿ ಎತ್ತುಗಳನ್ನು ವಾಪಸ್ ಕೊಡಿಸಿದ್ದಾರೆ. ಎತ್ತುಗಳು ವಾಪಸ್ ಮನೆಗೆ ಬಂದಿದ್ದು, ರೈತ ದಂಪತಿ ನಿಟ್ಟುಸಿರು ಬಿಟ್ಟಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ







