ವಿಜಯೇಂದ್ರ ಟ್ವೀಟ್, ಸಿಸಿಬಿ ಪೊಲೀಸರಿಗೆ ಒತ್ತಡ ಹೆಚ್ಚಳ, ರಾಜಣ್ಣ ನನ್ನ ಪಿಎ ಅಲ್ಲ ನನಗೆ ಗೊತ್ತಿರುವ ಹುಡುಗ ಅಷ್ಟೇ ಎಂದ ಸಚಿವ ರಾಮುಲು

| Updated By: ಸಾಧು ಶ್ರೀನಾಥ್​

Updated on: Jul 02, 2021 | 5:00 PM

minister sriramulu pa rajanna cheating case: ಸಾರ್ವಜನಿಕರು ಮೋಸ ಹೋಗಬಾರದೆಂಬ ಹಿತದೃಷ್ಟಿಯಿಂದ ಹಾಗೂ ನನ್ನ ವ್ಯಕ್ತಿತ್ವ ರಕ್ಷಣೆಗಾಗಿ, ಅನಿವಾರ್ಯವಾಗಿ ನೀಡಿದ ದೂರಿನ ಮೇಲೆ ಪೋಲಿಸರು ಕ್ರಮ ತೆಗೆದುಕೊಂಡಿದ್ದಾರೆ. ನನ್ನನೂ ಸೇರಿದಂತೆ ಸಾರ್ವಜನಿಕ ಕ್ಷೇತ್ರದಲ್ಲಿರುವ ಮುಖಂಡರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವ, ವಂಚಿಸುವವರ ಬಗ್ಗೆ ಸಮಾಜ ಎಚ್ಚರದಿಂದರಬೇಕೆಂದು ವಿನಂತಿಸುವೆ... ವಿಜಯೇಂದ್ರ ಟ್ವೀಟ್

ವಿಜಯೇಂದ್ರ ಟ್ವೀಟ್, ಸಿಸಿಬಿ ಪೊಲೀಸರಿಗೆ ಒತ್ತಡ ಹೆಚ್ಚಳ, ರಾಜಣ್ಣ ನನ್ನ ಪಿಎ ಅಲ್ಲ ನನಗೆ ಗೊತ್ತಿರುವ ಹುಡುಗ ಅಷ್ಟೇ ಎಂದ ಸಚಿವ ರಾಮುಲು
ವಿಜಯೇಂದ್ರ
Follow us on

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಹೆಸರು ದುರ್ಬಳಕೆ ಮಾಡಿಕೊಂಡು ಸರ್ಕಾರದ ಮಟ್ಟದಲ್ಲಿ ಆಯಕಟ್ಟಿನ ಜಾಗಗಳನ್ನು ಕೊಡಿಸುವುದಾಗಿ ಆಮಿಷವೊಡ್ಡಿ ಜನರನ್ನು ಸುಲಿಗೆ ಮಾಡುತ್ತಿದ್ದ ಆರೋಪದ ಮೇರೆಗೆ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರ ಆಪ್ತ ಸಹಾಯಕ, ಬಳ್ಳಾರಿ ನಿವಾಸಿ ರಾಜಣ್ಣನನ್ನು ಸಿಸಿಬಿ ಪೊಲೀಸರು ಬಂಧಿಸಿಲ್ಲವಾದರೂ, ವಿಚಾರಣೆಯನ್ನಷ್ಟೇ ನಡೆಸುತ್ತಿದ್ದಾರೆ.

ವಿಜಯೇಂದ್ರ ನೀಡಿದ ದೂರಿನಲ್ಲಿ ಉಲ್ಲೇಖಿಸಿರುವ ಮೂವರಲ್ಲದೆ ಇನ್ನೂ ಹಲವರಿಗೆ ರಾಜಣ್ಣ ಹಣ ಕೇಳಿದ್ದಾರೆ. ಕೇವಲ ವಿಜಯೇಂದ್ರ ಅಲ್ಲದೆ ಇನ್ನೂ ಹಲವು ರಾಜಕಾರಣಿಗಳ ಹೆಸರನ್ನು ಉಲ್ಲೇಖ ಮಾಡಿರುವುದರ ಬಗ್ಗೆ ಸಿಸಿಬಿಗೆ ಸಾಕ್ಷ್ಯ ಲಭ್ಯವಾಗುತ್ತಿದೆ.

ಆಪ್ತನ ಬಂಧನ ಹಿನ್ನೆಲೆ ಬೇಸರದಲ್ಲಿರುವ ಸಚಿವ ರಾಮುಲು ರಾಜಣ್ಣ ನನ್ನ ಪಿಎ ಅಲ್ಲ, ನನ್ನ ಹತ್ತಿರ ಕೆಲಸ ಮಾಡ್ತಿದ್ದ. ರಾಜಣ್ಣ ನನಗೆ ಗೊತ್ತಿರುವ ಹುಡುಗ ಅಷ್ಟೇ ಎಂದು ಹೇಳಿದ್ದಾರೆ. ಯಾರ ಹೆಸರನ್ನೂ ದುರ್ಬಳಕೆ ಮಾಡಿಕೊಳ್ಳಬಾರದು. ಈ ಸಂಬಂಧ ವಿಜಯೇಂದ್ರ ನನ್ನ ಗಮನಕ್ಕೆ ತಂದಿಲ್ಲ. ಹೀಗಾಗಿ ನಾನು ವಿಜಯೇಂದ್ರ ಜತೆ ಚರ್ಚಿಸುತ್ತೇನೆ. ಪ್ರಕರಣ ಸಂಬಂಧ ಎಲ್ಲೋ ಮಿಸ್ ಕಮ್ಯೂನಿಕೇಷನ್ ಆಗಿದೆ.

ಸಿಎಂ ಮತ್ತು ವಿಜಯೇಂದ್ರ ಜೊತೆ ನಾನು ಚರ್ಚಿಸುತ್ತೇನೆ. ರಾಜು ವಿರುದ್ಧ ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ತನಿಖೆಯ ನಂತರ ಸತ್ಯಾಂಶ ಬಯಲಾಗುತ್ತದೆ. ಕಾನೂನು ರೀತಿಯಲ್ಲಿ ಕ್ರಮ ಆಗಲಿ ಎಂದು ವಿಧಾನಸೌಧದಲ್ಲಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ಈ ಮಧ್ಯೆ, ಸಚಿವ ಶ್ರೀರಾಮುಲು ಪಿಎ ವಿರುದ್ಧ ವಂಚನೆ ಆರೋಪ ಕೇಸ್ ದಾಖಲಾಗಿ, ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರಿಗೆ ರಾಜಣ್ಣನ ಸಂಪರ್ಕದಲ್ಲಿದ್ದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಕಡೆಯಿಂದ ಒತ್ತಡ ಹೆಚ್ಚಳವಾಗಿದೆ. ರಾಜಣ್ಣನನ್ನು ವಶಕ್ಕೆ ಪಡೆದ ಕೂಡಲೇ ಮೊಬೈಲ್ ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದಿರುವ ಮೊಬೈಲ್​​ನಲ್ಲಿ ಸಾಕಷ್ಟು ಜನರ ಮಾಹಿತಿ ದೊರೆತಿದೆ.

ಹೀಗಾಗಿ ರಾಜಣ್ಣನ ಸಂಪರ್ಕದಲ್ಲಿದ್ದ ವ್ಯಕ್ತಿಗಳಿಗೆ ಡವ ಡವ ಶುರುವಾಗಿದೆ. ಇದರಲ್ಲಿ ತಮ್ಮ ಹೆಸರು ಉಲ್ಲೇಖಿಸದಂತೆ ಸಿಸಿಬಿ ಮೇಲೆ ಕೆಲವರು ಒತ್ತಡ ಹೇರತೊಡಗಿದ್ದಾರೆ. ಹಲವರ ಬಳಿ ರಾಜಣ್ಣ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಲ್ಲಿ ಈವರೆಗೆ ರಾಜಣ್ಣನನ್ನು ಬಂಧಿಸದೆ ಸಿಸಿಬಿಯಿಂದ ವಿಚಾರಣೆ ನಡೆದಿದೆ ಎಂದು ಸಿಸಿಬಿ ಉನ್ನತ ಮೂಲಗಳಿಂದ ಟಿವಿ9ಗೆ ಮಾಹಿತಿ ಲಭ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರು ಟ್ವೀಟ್​ ಮಾಡಿದ್ದು ಸ್ಪಷ್ಟನೆಯ ರೂಪದಲ್ಲಿ ಜನರನ್ನು ಎಚ್ಚರಿಸಿದ್ದಾರೆ, ವಿಜಯೇಂದ್ರ ಟ್ವೀಟ್​ ಸಾರಾಂಶ ಇಲ್ಲಿದೆ:

ಸಾರ್ವಜನಿಕ ಕ್ಷೇತ್ರದಲ್ಲಿರುವಾಗ ನೆರವು ಕೇಳುವವರನ್ನು ಅನುಮಾನಿಸಿ ನೋಡಲಾಗದು. ಹಾಗೆಂದು ಎಚ್ಚರ ತಪ್ಪಲಾಗದು. ಹೆಸರು ದುರುಪಯೋಗಪಡಿಸಿಕೊಂಡು ಕಳಂಕ ಹಚ್ಚುವ ವಂಚಕರಿಂದ ತೊಂದರೆ ತುಸು ಹೆಚ್ಚಾಗಿಯೇ ಬಾಧಿಸುತ್ತಿದೆ. ಇದು ವಿರೋಧಿಗಳಿಗೆ ಅಪಪ್ರಚಾರದ ಸರಕಾಗಿಯೂ ಬಳಕೆಯಾಗುತ್ತಿದೆ.

ಸಾರ್ವಜನಿಕರು ಮೋಸ ಹೋಗಬಾರದೆಂಬ ಹಿತದೃಷ್ಟಿಯಿಂದ ಹಾಗೂ ನನ್ನ ವ್ಯಕ್ತಿತ್ವ ರಕ್ಷಣೆಗಾಗಿ, ಅನಿವಾರ್ಯವಾಗಿ ನೀಡಿದ ದೂರಿನ ಮೇಲೆ ಪೋಲಿಸರು ಕ್ರಮ ತೆಗೆದುಕೊಂಡಿದ್ದಾರೆ. ನನ್ನನೂ ಸೇರಿದಂತೆ ಸಾರ್ವಜನಿಕ ಕ್ಷೇತ್ರದಲ್ಲಿರುವ ಮುಖಂಡರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವ, ವಂಚಿಸುವವರ ಬಗ್ಗೆ ಸಮಾಜ ಎಚ್ಚರದಿಂದರಬೇಕೆಂದು ವಿನಂತಿಸುವೆ.

(by vijayendra tweet ccb intensifies investigation in to alleged cheating by minister sriramulu pa rajanna)

Published On - 12:08 pm, Fri, 2 July 21