ಆಂಬ್ಯುಲೆನ್ಸ್​ನಲ್ಲಿ ಪ್ರಚಾರಕ್ಕೆ ಬರ್ತಾರೆ: ದೇವೇಗೌಡ ವಿರುದ್ಧ ಡಿಕೆ ಸುರೇಶ್ ಹೇಳಿಕೆಯನ್ನೇ ಪ್ರತ್ಯಸ್ತ್ರ ಮಾಡಲು ಮುಂದಾದ ದಳ

| Updated By: Ganapathi Sharma

Updated on: Oct 28, 2024 | 9:29 AM

ಚನ್ನಪಟ್ಟಣ ಉಪಚುನಾವಣೆ ಪ್ರಚಾರದ ಭರಾಟೆ ಜೋರಾಗುತ್ತಿದ್ದು, ರಾಜಕೀಯ ನಾಯಕರ ವಾಗ್ಯುದ್ಧ ಆರಂಭವಾಗಿದೆ. ಅತ್ತ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ಬಗ್ಗೆ ಕಾಂಗ್ರೆಸ್ ನಾಯಕ ಡಿಕೆ ಸುರೇಶ್ ವಿವಾದಾತ್ಮಕ ಹೇಳಿಕೆ ನೀಡಿದ್ದು ಜೆಡಿಎಸ್ ನಾಯಕರನ್ನು ಕೆರಳಿಸಿದೆ. ಸುರೇಶ್ ಹೇಳಿದ್ದೇನು? ಜೆಡಿಎಸ್ ನಾಯಕರ ತಿರುಗೇಟು ಏನು ಎಂಬ ವಿವರ ಇಲ್ಲಿದೆ.

ಆಂಬ್ಯುಲೆನ್ಸ್​ನಲ್ಲಿ ಪ್ರಚಾರಕ್ಕೆ ಬರ್ತಾರೆ: ದೇವೇಗೌಡ ವಿರುದ್ಧ ಡಿಕೆ ಸುರೇಶ್ ಹೇಳಿಕೆಯನ್ನೇ ಪ್ರತ್ಯಸ್ತ್ರ ಮಾಡಲು ಮುಂದಾದ ದಳ
ದೇವೇಗೌಡ & ಡಿಕೆ ಸುರೇಶ್ (ಸಂಗ್ರಹ ಚಿತ್ರ)
Follow us on

ರಾಮನಗರ, ಅಕ್ಟೋಬರ್ 28: ಚನ್ನಪಟ್ಟಣ ಉಪಚುನಾವಣೆ ಕಣ ರಂಗೇರುತ್ತಿದೆ. ರಾಜಕೀಯ ಆರೋಪ, ಪ್ರತ್ಯಾರೋಪಗಳು ಬಿರುಸುಪಡೆದುಕೊಳ್ಳುತ್ತಿವೆ. ಈ ಮಧ್ಯೆ, ಕಾಂಗ್ರೆಸ್ ನಾಯಕ ಡಿಕೆ ಸುರೇಶ್ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ವಿರುದ್ಧ ನೀಡಿರುವ ಹೇಳಿಕೆಯೊಂದು ಇದೀಗ ಜೆಡಿಎಸ್​ಗೆ ಹೊಸ ಅಸ್ತ್ರ ಒದಗಿಸಿಕೊಟ್ಟಿದೆ. ಇದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ತಿರುಗೇಟು ನೀಡಲು ಜೆಡಿಎಸ್ ನಾಯಕರು, ಕಾರ್ಯಕರ್ತರು ತಂತ್ರಗಾರಿಕೆ ರೂಪಿಸುತ್ತಿದ್ದಾರೆ.

ದೇವೇಗೌಡರ ಬಗ್ಗೆ ಡಿಕೆ ಸುರೇಶ್ ಹೇಳಿದ್ದೇನು?

ಚನ್ನಪಟ್ಟಣ ಉಪಚುನಾವಣೆಗೆ ಭಾನುವಾರ ಕೋಡಂಬಹಳ್ಳಿಯಲ್ಲಿ ಪ್ರಚಾರ ನಡೆಸಿದ್ದ ಡಿಕೆ ಸುರೇಶ್ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಟೀಕೆ ಮಾಡಿದ್ದರು. ನಾಳೆ ಆಂಬ್ಯುಲೆನ್ಸ್​ ತೆಗೆದುಕೊಂಡು ಬಂದು ಪ್ರಚಾರ ಮಾಡುತ್ತಾರೆ. ಪ್ರಚಾರಕ್ಕೆ ಬರಲಿ, ಅವರ ಆರೋಗ್ಯವೂ ಚೆನ್ನಾಗಿರಲಿ ಎಂದು ಹೇಳಿದ್ದರು.

ಡಿಕೆ ಸುರೇಶ್ ಮಾತಿನಿಂದ ಜೆಡಿಎಸ್ ನಾಯಕರು ಕೆಂಡಾಮಂಡಲವಾಗಿದ್ದಾರೆ. ಇದೀಗ ಡಿಕೆ ಸುರೇಶ್ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಕೌಂಟರ್ ಕೊಡಲು ಸಿದ್ಧತೆ ನಡೆಸಿದ್ದಾರೆ.

ಜೆಡಿಎಸ್ ನಾಯಕರಿಂದ ಹೈ ಸ್ಪೀಡ್ ಪ್ರಚಾರ

ಚನ್ನಪಟ್ಟಣ ಎನ್​ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಇಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಹೆಚ್​ಡಿ ಕುಮಾರಸ್ವಾಮಿ ಪ್ರಚಾರ ನಡೆಸಲಿದ್ದಾರೆ. ಮತ್ತೊಂದೆಡೆ, 26 ಹಳ್ಳಿಗಳ ಗ್ರಾಮಸ್ಥರ ಜೊತೆ ನಿಖಿಲ್ ಪ್ರಚಾರ ಮಾಡಲಿದ್ದಾರೆ. ಸಂಸದ ಯದುವೀರ್ ಒಡೆಯರ್ ಜೊತೆ ಪ್ರತ್ಯೇಕವಾಗಿ ಕುಮಾರಸ್ವಾಮಿ ಪ್ರಚಾರ ಮಾಡಲಿದ್ದಾರೆ. ಒಂದೇ‌ ದಿನದಲ್ಲಿ 25 ಸಾವಿರಕ್ಕೂ ಅಧಿಕ ಮತದಾರರ ಸಂಪರ್ಕ ಮಾಡಲು ಜೆಡಿಎಸ್ ಮುಂದಾಗಿದೆ. ಕಡಿಮೆ ಸಮಯದಲ್ಲಿ ಅಧಿಕ ಸ್ಥಳಗಳಿಗೆ ಭೇಟಿ ನೀಡಲು ಉದ್ದೇಶಿಸಲಾಗಿದೆ.

ಇದನ್ನೂ ಓದಿ: ಸಿಎಂ ಆಗಬಲ್ಲ ಡಿಕೆ ಶಿವಕುಮಾರ್​ರನ್ನು ಬಿಟ್ಟುಕೊಡುತ್ತೀರಾ: ಚನ್ನಪಟ್ಟಣದಲ್ಲಿ ಶಿವಲಿಂಗೇಗೌಡ ಪ್ರಶ್ನೆ

ಯಾವುದೇ ಕಾರಣಕ್ಕೂ ಪಕ್ಷಾಂತರಿಗಳಿಗೆ ಮತ ನೀಡಬೇಡಿ ಎಂದು ಮತದಾರರಲ್ಲಿ ಮನವಿ ಮಾಡಲು ದಳಪತಿಗಳು ಉದ್ದೇಶಿಸಿದ್ದಾರೆ. ಜತೆಗೆ, ರಾಜ್ಯ ಸರ್ಕಾರದ ಮೇಲಿನ ಅಪಾದನೆಗಳನ್ನೇ ಅಸ್ತ್ರವನ್ನಾಗಿಸಿಕೊಳ್ಳಲು ಮುಂದಾಗಿದ್ದಾರೆ. ಸಿಪಿ ಯೋಗೇಶ್ವರ್ ಮಾತಿಗೆ ತಪ್ಪಿದ್ದಾರೆ, ಟಿಕೆಟ್ ತೆಗದುಕೊಳ್ಳದೇ ಪಕ್ಷಾಂತರ ಮಾಡಿದ್ದಾರೆ ಎಂಬುದನ್ನು ಮತದಾರರಿಗೆ ಮನವರಿಕೆ ಮಾಡಿಕೊಡಲು ಜೆಡಿಎಸ್ ನಾಯಕರು ಉದ್ದೇಶಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ