
ಬೆಂಗಳೂರು, (ಮೇ 22): ಕರ್ನಾಟಕ ಸರ್ಕಾರ ಕ್ಯಾನ್ಸರ್ ಪೀಡಿತ ರೋಗಿಗಳ (cancer patients) ಚಿಕಿತ್ಸೆ ವಿಚಾರದಲ್ಲಿ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಕರ್ನಾಟಕದ 16 ಜಿಲ್ಲಾಸ್ಪತ್ರೆಗಳಲ್ಲಿ ಡೇ ಕೇರ್ ಕೀಮೋಥೆರಪಿ (Chemotherapy) ಆರಂಭವಾಗಲಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (dinesh gundu rao) ಘೋಷಣೆ ಮಾಡಿದ್ದಾರೆ. ವಿಕಾಸ ಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಇನ್ಮುಂದೆ ಜಿಲ್ಲಾ ಆಸ್ಪತ್ರೆಗಳಲ್ಲೂ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯಬಹುದು. ಪ್ರತಿ ವರ್ಷ ಹೊಸದಾಗಿ 70 ಸಾವಿರ ಕ್ಯಾನ್ಸರ್ ಪ್ರಕರಣ ದಾಖಲಾಗುತ್ತಿದೆ. ಬಡವರು ಕಡಿಮೆ ವೆಚ್ಚದಲ್ಲಿ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯಬೇಕು ಅಂದರೆ ಬೆಂಗಳೂರಿನ ಕಿದ್ವಾಯಿ ಅಂತಹ ಸಂಸ್ಥೆಗಳಿಗೆ ಬರಬೇಕು. ಇದೂ ಕೂಡ ಕಷ್ಟದ ಕೆಲಸ. ಹಾಗಾಗಿ ಬಡವರಿಗೆ ಅನುಕೂಲ ಆಗಲಿ ಎಂದು 16 ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್ ಓಪನ್ ಮಾಡುತ್ತೇವೆ ಎಂದರು.
ಆಪ್ತ ಸಮಾಲೋಚನೆ, ಮೆಡಿಕಲ್ ಅಂಕಾಲಜಿಸ್ಟ್, ವೈದ್ಯರು ಹಾಗೂ ಫಾರ್ಮಾಸಿ ಅಧಿಕಾರಿಗಳು ಕಿಮೋಥೆರಪಿ ಕೇಂದ್ರಗಳಲ್ಲಿ ಇರುತ್ತಾರೆ. ರೋಗಿಗಳು ಹೆಚ್ಚಾಗುತ್ತಿದೆ, ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಿದೆ. ಶೇಕಡಾ 60ರಷ್ಟು ರೋಗಿಗಳು ಬೆಂಗಳೂರು ನಗರ, ಹುಬ್ಬಳ್ಳಿ, ಕಲಬುರಗಿ, ಬೆಳಗಾವಿ ಮತ್ತು ಮೈಸೂರಿನಲ್ಲಿ ಕಿಮೋಥೆರಪಿಗಾಗಿ 100 ಕಿ.ಮೀ. ದೂರು ಹೋಗಬೇಕು. ಲಾಜಿಸ್ಟಿಕ್ ಕಾರಣದಿಂದ ಹೆಚ್ಚಿನ ರೋಗಿಗಳು ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ. ಸಮಯ ಮತ್ತು ತೊಂದರೆ ಜೊತೆಗೆ ಖರ್ಚು ಹೆಚ್ಚಾಗುತ್ತಿದೆ. ಆದರೆ ಇನ್ಮುಂದೆ ಅಂತಹ ಸಮಸ್ಯೆಗಳು ಕಡಿಮೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಬಜೆಟ್ನಲ್ಲಿ ಕೀಮೋಥೆರಪಿ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದೆವಯ. ನಾಳೆ 16 ಜಿಲ್ಲಾಸ್ಪತ್ರೆಗಳಲ್ಲಿ ಡೇ ಕೇರ್ ಕಿಮೋಥೆರಪಿ ಪ್ರಾರಂಭಿಸುತ್ತಿದ್ದೇವೆ. ನಾಳೆ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಉದ್ಘಾಟನೆ ಮಾಡಲಿದ್ದಾರೆ. ಕ್ಯಾನ್ಸರ್ ಪತ್ತೆಯಾಗಿದೆ ಅನ್ನುವವರು ಕೀಮೋ ಥೆರಪಿ ಪಡೆಯಬಹುದು. ಎಲ್ಲಾ ರೀತಿಯ ಟ್ರೈನಿಂಗ್ಗಳನ್ನು ಮಾಡಲಾಗಿದೆ. ಮೆಡಿಕಲ್ ಅಂಕಾಲಜಿಸ್ಟ್ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ನರ್ಸ್ಗಳಿಗೆ ತರಬೇತಿ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಪ್ರತಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳಿಗಾಗಿ 10 ಬೆಡ್ ಮೀಸಲು ಇಡುತ್ತೇವೆ. ಅದಕ್ಕೆ ಇಬ್ಬರು ನರ್ಸ್ ಗಳು ಇರುತ್ತಾರೆ. ಅಲ್ಲದೇ ಆಪ್ತ ಸಮಾಲೋಚನೆ, ಮೆಡಿಕಲ್ ಅಂಕಾಲಜಿಸ್ಟ್, ವೈದ್ಯರು ಹಾಗೂ ಫಾರ್ಮಾಸಿ ಅಧಿಕಾರಿಗಳು ಇರುತ್ತಾರೆ. ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ಕಿಮೋಥೆರಪಿ ಸಿಗಲಿದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ 1400 ಜನೌಷಧ ಕೇಂದ್ರಗಳಿವೆ. 180 ಆಸ್ಪತ್ರೆಗಳ ಆವರಣಗಳಲ್ಲೂ ಜನೌಷಧ ಕೇಂದ್ರಗಳಿವೆ. ಆಸ್ಪತ್ರೆ ಆವರಣದಲ್ಲಿ ಔಷಧ ಮಾರಾಟಕ್ಕೆ ಅವಕಾಶ ನೀಡಬಾರದು. ಔಷಧಗಳ ಕೇಂದ್ರ ಉಚಿತವಾಗಿರಬೇಕು. ಜನೌಷಧಿಗಳಲ್ಲಿ ಬ್ರ್ಯಾಂಡೆಂಡ್ ಮೆಡಿಸಿನ್ ಮಾರಾಟ ಮಾಡಲಾಗುತ್ತದೆ. ಜನೌಷಧ ಜೊತೆಗೆ ಇತರೆ ಮೆಡಿಸಿನ್ ಶಾಪ್ ಸಹ ಇವೆ. ಸಂಜೀವಿನಿ ಎನ್ನುವ ಔಷಧ ಮಳಿಗೆ ಇವೆ. ಈ ಎಲ್ಲ ಔಷಧಿ ಮಳಿಗೆಗಳಿಗೂ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.
Published On - 6:54 pm, Thu, 22 May 25