CT Scan: ಪದೇ ಪದೇ ಸಿಟಿ ಸ್ಕ್ಯಾನಿಂಗ್ ಮಾಡಿಸಿಕೊಂಡರೆ ಬರಬಹುದು ಈ ಮಾರಕ ರೋಗ!
ಸಂಶೋಧನಾ ವರದಿಯೊಂದರಲ್ಲಿ ಸಿಟಿ ಸ್ಕ್ಯಾನ್ ಕ್ಯಾನ್ಸರ್ ಗೆ ಕಾರಣವಾಗಬಹುದು ಎಂಬ ಮಾಹಿತಿ ಹೊರಬಿದ್ದಿದೆ. ಹಲವಾರು ಬಾರಿ ಈ ಸ್ಕ್ಯಾನ್ ಮಾಡಿಸಿಕೊಳ್ಳುವ ಜನರು ಅಪಾಯದಲ್ಲಿದ್ದಾರೆ ಎಂದು ಈ ಸಂಶೋಧನೆ ಹೇಳುತ್ತಿದೆ. ಆದರೆ ರೋಗಗಳನ್ನು ಪತ್ತೆ ಹಚ್ಚುವ ಸಿಟಿ ಸ್ಕ್ಯಾನ್ ಕ್ಯಾನ್ಸರ್ ಗೆ ಹೇಗೆ ಕಾರಣವಾಗುತ್ತದೆ? ಸಿಟಿ ಸ್ಕ್ಯಾನ್ ಮಾಡಬಾರದೇ? ಈ ಬಗ್ಗೆ ಡಾ. ಜುಗಲ್ ಕಿಶೋರ್ ನೀಡಿರುವ ಮಾಹಿತಿ ಇಲ್ಲಿದೆ.

ಸಿಟಿ ಸ್ಕ್ಯಾನ್ ಅಥವಾ ಕಂಪ್ಯೂಟೆಡ್ ಟೊಮೊಗ್ರಫಿ (CT Scan) ಬಗ್ಗೆ ನೀವು ಕೇಳಿರುತ್ತೀರಿ. ಈ ಪರೀಕ್ಷೆ ಹಲವಾರು ರೀತಿಯ ರೋಗಗಳನ್ನು ಪತ್ತೆ ಹಚ್ಚಲು ಸಹಾಯ ಮಾಡುತ್ತದೆ. ವಿಪರ್ಯಾಸವೆಂದರೆ ಈ ಸಿಟಿ ಸ್ಕ್ಯಾನ್, ಕ್ಯಾನ್ಸರ್ (Cancer) ಗೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಜಾಮಾ ಇಂಟರ್ನಲ್ ಮೆಡಿಸಿನ್ ಜರ್ನಲ್ ನಲ್ಲಿ ಸಂಶೋಧನಾ ವರದಿ ಪ್ರಕಟಗೊಂಡಿದ್ದು ಅದರ ಪ್ರಕಾರ, ಹಲವು ಬಾರಿ ಸಿಟಿ ಸ್ಕ್ಯಾನ್ ಒಳಗಾಗುವುದರಿಂದ ಕ್ಯಾನ್ಸರ್ ಉಂಟಾಗಬಹುದು ಎಂಬ ಅಚ್ಚರಿ ವಿಷಯ ಹೊರಬಿದ್ದಿದೆ. ಅಮೆರಿಕದಲ್ಲಿ ರೋಗಿಗಳ ಮೇಲೆ ನಡೆಸಲಾಗುತ್ತಿರುವ ಸ್ಕ್ಯಾನ್ ಗಳ ಆಧಾರದ ಮೇಲೆ ಈ ಸಂಶೋಧನೆಯನ್ನು ಮಾಡಲಾಗಿದೆ. ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ. 5 ರಷ್ಟು ಸಿಟಿ ಸ್ಕ್ಯಾನ್ ನಿಂದ ಉಂಟಾಗಬಹುದು ಎಂದು ಅಧ್ಯಯನ ಹೇಳಿದೆ. ಈ ಸ್ಕ್ಯಾನ್ ಮಾಡುವ ಸಮಯದಲ್ಲಿ ಹೊರಸೂಸುವ ವಿಕಿರಣವು ಕ್ಯಾನ್ಸರ್ ಅಪಾಯವನ್ನು ಉಂಟುಮಾಡಬಹುದಂತೆ! ಈ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ.
ಸಿಟಿ ಸ್ಕ್ಯಾನ್ ದೇಹದೊಳಗಿನ ಅಂಗಗಳ ನಿಖರವಾದ ಚಿತ್ರಣವನ್ನು ನೀಡುವ ಮೂಲಕ ಅನೇಕ ರೀತಿಯ ರೋಗಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಆದರೆ ಈ ಸಿಟಿ ಸ್ಕ್ಯಾನ್ ಮಾಡುವ ಸಮಯದಲ್ಲಿ, ದೇಹವು ಎಕ್ಸ್-ರೇ ವಿಕಿರಣಕ್ಕೆ ಒಡ್ಡಿಕೊಳ್ಳುತ್ತದೆ, ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಸ್ಕ್ಯಾನ್ ನಲ್ಲಿ ಹೆಚ್ಚಿನ ವಿಕಿರಣವನ್ನು ಬಳಸಿದಾಗ ಅದರ ಅಪಾಯವು ಮತ್ತಷ್ಟು ಹೆಚ್ಚಾಗುತ್ತದೆ. ಸಿಟಿ ಸ್ಕ್ಯಾನ್ ಕ್ಯಾನ್ಸರ್ ಗೆ ಹೇಗೆ ಕಾರಣವಾಗುತ್ತದೆ? ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮಾವಿನ ಹಣ್ಣಿನ ಮಿಲ್ಕ್ ಶೇಕ್ ಯಾರು ಸೇವನೆ ಮಾಡಬಾರದು? ಡಾ. ಪ್ರಿಯಾ ನೀಡಿರುವ ಮಾಹಿತಿ ಇಲ್ಲಿದೆ
ಸಿಟಿ ಸ್ಕ್ಯಾನ್ ಮತ್ತು ಕ್ಯಾನ್ಸರ್ ಅಪಾಯ
ಡಾ. ಜುಗಲ್ ಕಿಶೋರ್ ಅವರು ಹೇಳುವ ಪ್ರಕಾರ, ಒಂದು ಅಥವಾ ಎರಡು ಸಿಟಿ ಸ್ಕ್ಯಾನ್ಗಳು ಕ್ಯಾನ್ಸರ್ ಗೆ ಕಾರಣವಾಗುತ್ತವೆ ಎಂಬುದಕ್ಕೆ ಯಾವುದೇ ರೀತಿಯ ಪುರಾವೆಗಳಿಲ್ಲ. ಆದರೆ ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ 5 ರಿಂದ 10 ಸ್ಕ್ಯಾನ್ ಗಳನ್ನು ಮಾಡಿಸಿಕೊಂಡವರಲ್ಲಿ ಕ್ಯಾನ್ಸರ್ ಬರುವ ಅಪಾಯವಿರಬಹುದು. ಸಿಟಿ- ಸ್ಕ್ಯಾನ್ ಗಳಲ್ಲಿ ವಿಕಿರಣ ಅಪಾಯ, ಅಲರ್ಜಿ ಮತ್ತು ಸ್ಕ್ಯಾನ್ ನಲ್ಲಿ ಬಳಸುವ ಕಾಂಟ್ರಾಸ್ಟ್ ಡೈಯ ಅಡ್ಡಪರಿಣಾಮಗಳು ಸೇರಿವೆ. ವಯಸ್ಸಾದವರಲ್ಲಿ ಸಿಟಿ ಸ್ಕ್ಯಾನ್ ಗಳನ್ನು ಹೆಚ್ಚಾಗಿ ಮಾಡುವುದರಿಂದ ಅವರಲ್ಲಿ ಕ್ಯಾನ್ಸರ್ ಅಪಾಯವೂ ಹೆಚ್ಚಾಗಿದ್ದು, ಎದೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರ್ ಬರಬಹುದು.
ಸಿಟಿ ಸ್ಕ್ಯಾನ್ ಮಾಡಬಾರದೇ?
ಜೀವನದಲ್ಲಿ ಎರಡರಿಂದ ಮೂರು ಬಾರಿ ನೀವು ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳಬಹುದು. ರೋಗಗಳನ್ನು ಗುರುತಿಸಲು ಸ್ಕ್ಯಾನ್ ಗಳು ಅವಶ್ಯಕವಾಗಿದ್ದು ವೈದ್ಯರು ಸ್ಕ್ಯಾನ್ ಮಾಡಿಸಲು ಸೂಚಿಸಿದ ಸಂದರ್ಭಗಳಲ್ಲಿ ನೀವಿದನ್ನು ಮಾಡಿಸಿಕೊಳ್ಳುವುದು ಒಳ್ಳೆಯದು. ಆದರೆ ಸಿಟಿ ಸ್ಕ್ಯಾನ್ ಗಳ ಸಂಖ್ಯೆ ಹೆಚ್ಚಾದಂತೆ, ವಿಕಿರಣ- ಸಂಬಂಧಿತ ಕ್ಯಾನ್ಸರ್ ಅಪಾಯವೂ ಹೆಚ್ಚಾಗುತ್ತದೆ. ಹಾಗಾಗಿ ಅಗತ್ಯವಿದ್ದರೆ ಮಾತ್ರ ಮಾಡಿಸಿ, ಅದರ ಮೊದಲು ವೈದ್ಯರೊಂದಿಗೆ ಚರ್ಚಿಸಿರಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ