ಮಾವಿನ ಹಣ್ಣಿನ ಮಿಲ್ಕ್ ಶೇಕ್ ಯಾರು ಸೇವನೆ ಮಾಡಬಾರದು? ಡಾ. ಪ್ರಿಯಾ ನೀಡಿರುವ ಮಾಹಿತಿ ಇಲ್ಲಿದೆ
ಮಾವಿನ ಹಣ್ಣಿನ ಮಿಲ್ಕ್ ಶೇಕ್ ಅನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟ ಪಟ್ಟು ಕುಡಿಯುತ್ತಾರೆ. ಇದು ಬೇಸಿಗೆಯ ಧಗೆಯನ್ನು ಕಡಿಮೆ ಮಾಡಿ ತಾಜಾತನ ನೀಡುತ್ತದೆ. ಇದು ಸಾಕಷ್ಟು ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಇದರಿಂದ ಅನುಕೂಲ ಮಾತ್ರವಲ್ಲ ಅನಾನುಕೂಲಗಳು ಇದೆ. ಹಾಗಾಗಿ ಮಾವಿನ ಹಣ್ಣಿನ ಮಿಲ್ಕ್ ಶೇಕ್ ಸೇವನೆ ಮಾಡುವಾಗ ಕೆಲವರು ಎಚ್ಚರಿಕೆ ವಹಿಸಬೇಕಾಗುತ್ತದೆ. ಹಾಗಾದರೆ ಯಾರು ಇವುಗಳನ್ನು ಸೇವನೆ ಮಾಡಬಾರದು? ಡಾ. ಪ್ರಿಯಾ ಈ ಬಗ್ಗೆ ಏನೆನ್ನುತ್ತಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಹಣ್ಣುಗಳ ರಾಜ ಮಾವಿನಹಣ್ಣುನ್ನು (Mango) ಸವಿಯಲು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಹಣ್ಣು ದೊಡ್ಡದಿರಲಿ ಚಿಕ್ಕದಿರಲಿ ಮಾರುಕಟ್ಟೆಯಲ್ಲಿ ಕಂಡಾಗ ಖರೀದಿ ಮಾಡದೆಯೇ ಮನೆಗೆ ಬರಲು ಮನಸ್ಸು ಒಪ್ಪುವುದಿಲ್ಲ. ಈಗ ಬೇಸಿಗೆಯಾದ್ದರಿಂದ ಈ ಹಣ್ಣು ಎಲ್ಲೆಡೆ ಸಿಗುತ್ತದೆ. ಇನ್ನು, ನಿಮಗೆ ತಿಳಿದಂತೆ ಈ ಹಣ್ಣಿನಿಂದ ಸಾಕಷ್ಟು ಬಗೆಯ, ರುಚಿಕರವಾದ ಖಾದ್ಯಗಳನ್ನು ಮತ್ತು ಪಾನೀಯಗಳನ್ನು ತಯಾರಿಸಲಾಗುತ್ತದೆ. ಇವುಗಳಲ್ಲಿ ಮಾವಿನ ಶೇಕ್ ಅಥವಾ ಮಾವಿನ ಹಣ್ಣಿನ ಮಿಲ್ಕ್ ಶೇಕ್ (Mango milkshake) ಅತ್ಯಂತ ಪ್ರಸಿದ್ಧ. ಮಕ್ಕಳಿಂದ ಹಿಡಿದು ವಯಸ್ಕರ ವರೆಗೆ ಎಲ್ಲರೂ ಇದನ್ನು ಇಷ್ಟಪಟ್ಟು ಕುಡಿಯುತ್ತಾರೆ. ಮಾಗಿದ ಮಾವಿನಹಣ್ಣಿನ ಜೊತೆಗೆ ಹಾಲನ್ನು ಬೆರೆಸಿ ಮಾಡಿದಂತಹ ಮಾವಿನ ಹಣ್ಣಿನ ಮಿಲ್ಕ್ ಶೇಕ್ ಬೇಸಿಗೆಯಲ್ಲಿ ದೇಹಕ್ಕೆ ಸಾಕಷ್ಟು ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಈ ಹಣ್ಣು ಎಲ್ಲರಿಗೂ ಒಳ್ಳೆಯದಲ್ಲ. ಇದರಿಂದ ದೇಹಕ್ಕೆ ಲಾಭಗಳಿದ್ದರೂ ಕೂಡ ಇದರ ಸೇವನೆ ಮಾಡುವಾಗ ಕೆಲವರು ಎಚ್ಚರಿಕೆ ವಹಿಸಬೇಕಾಗುತ್ತದೆ. ಹಾಗಾದರೆ ಯಾರು ಇವುಗಳನ್ನು ಸೇವನೆ ಮಾಡಬಾರದು? ಡಾ. ಪ್ರಿಯಾ ಈ ಬಗ್ಗೆ ಏನೆನ್ನುತ್ತಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಮಾವಿನ ಹಣ್ಣಿನ ಮಿಲ್ಕ್ ಶೇಕ್ ಕುಡಿಯುವುದರಿಂದ ಸಿಗುವ ಪ್ರಯೋಜನಗಳು:
ಆಹಾರ ತಜ್ಞೆಯಾಗಿರುವ ಪ್ರಿಯಾ ಅವರು ನೀಡಿರುವ ಮಾಹಿತಿ ಪ್ರಕಾರ, “ಬೇಸಿಗೆಯಲ್ಲಿ ಮಾವಿನ ಹಣ್ಣಿನ ಮಿಲ್ಕ್ ಶೇಕ್ ಕುಡಿಯುವುದು ತುಂಬಾ ರುಚಿಕರ ಜೊತೆಗೆ ಇದು ದೇಹಕ್ಕೂ ತಂಪು. ಆದರೆ ಇದನ್ನು ಕುಡಿಯುವುದರಿಂದ ಅನುಕೂಲ ಮತ್ತು ಅನಾನುಕೂಲ ಎರಡೂ ಇವೆ. ಮಾವಿನಹಣ್ಣಿನಲ್ಲಿ ವಿಟಮಿನ್ ಎ, ಸಿ ಮತ್ತು ಫೈಬರ್ ಸಮೃದ್ಧವಾಗಿದೆ. ಅವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಜೊತೆಗೆ ಇದು ದೇಹಕ್ಕೆ ತಕ್ಷಣದ ಶಕ್ತಿಯನ್ನು ಒದಗಿಸುತ್ತದೆ. ಅದರಲ್ಲಿಯೂ ಬೇಸಿಗೆ ಸಮಯದಲ್ಲಿ ದೇಹವನ್ನು ಶಾಖದಿಂದ ರಕ್ಷಿಸುತ್ತದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ನೀರಿಗೆ ಚಿಟಿಕೆ ಉಪ್ಪು ಸೇರಿಸಿ ಕುಡಿಯಿರಿ! ಆರೋಗ್ಯದಲ್ಲಾಗುವ ಬದಲಾವಣೆ ನೋಡಿ
ಮಾವಿನ ಹಣ್ಣಿನ ಮಿಲ್ಕ್ ಶೇಕ್ ಯಾರಿಗೆ ಒಳ್ಳೆಯದಲ್ಲ?
ಸಾಮಾನ್ಯವಾಗಿ ಈ ಹಣ್ಣಿನ ಜ್ಯೂಸ್ ಅಥವಾ ಮಿಲ್ಕ್ ಶೇಕ್ ಅನ್ನು ಸೀಮಿತ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ. ವಿಶೇಷವಾಗಿ ಮಧುಮೇಹಿಗಳು ಇದರಿಂದ ದೂರವಿರಬೇಕು. ಏಕೆಂದರೆ ಇದರಲ್ಲಿ ಸಕ್ಕರೆ ಅಧಿಕವಾಗಿರುತ್ತದೆ. ಇದಲ್ಲದೆ, ತೂಕ ಇಳಿಸಿಕೊಳ್ಳಲು ಬಯಸುವವರು ಹೆಚ್ಚಿನ ಪ್ರಮಾಣದಲ್ಲಿ ಈ ಹಣ್ಣಿನಿಂದ ಮಾಡಿದ ಜ್ಯೂಸ್ ಗಳನ್ನು ಕುಡಿಯಬಾರದು. ಏಕೆಂದರೆ ಇದರಲ್ಲಿ ಅಧಿಕ ಪ್ರಮಾಣದ ಕ್ಯಾಲೊರಿಗಳಿದ್ದು, ಇದಕ್ಕೆ ಸಕ್ಕರೆ ಹಾಕಿ ಕುಡಿಯುವುದರಿಂದ ಆ ಪ್ರಮಾಣ ಮತ್ತಷ್ಟು ಜಾಸ್ತಿಯಾಗುತ್ತದೆ. ಜೊತೆಗೆ ಗ್ಯಾಸ್, ಆಮ್ಲೀಯತೆ ಅಥವಾ ಪಿತ್ತಜನಕಾಂಗಕ್ಕೆ ಸಂಬಂಧಿಸಿದ ಸಮಸ್ಯೆ ಇರುವವರು ಸಹ ವೈದ್ಯರ ಸಲಹೆ ಪಡೆದ ಬಳಿಕವೇ ಮಾವಿನ ಹಣ್ಣಿನ ಶೇಕ್ ಗಳನ್ನು ಕುಡಿಯಬೇಕು.
ತಜ್ಞರು ಹೇಳುವುದೇನು?
ದಿನಕ್ಕೊಮ್ಮೆ ಒಂದು ಸಣ್ಣ ಲೋಟದಲ್ಲಿ ಸೀಮಿತ ಪ್ರಮಾಣದ ಸಕ್ಕರೆ ಬೆರೆಸಿ ಮಾವಿನ ಶೇಕ್ ಕುಡಿಯುವುದು ಪ್ರಯೋಜನಕಾರಿ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ತೂಕ ಹೆಚ್ಚಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವು ಕೂಡ ಹದಗೆಡಬಹುದು. ಆದ್ದರಿಂದ, ಬೇಸಿಗೆಯಲ್ಲಿ ನೀವು ಮಾವಿನ ಹಣ್ಣಿನ ಶೇಕ್ ಕುಡಿಯಬಹುದು. ಆದರೆ ನಿಮ್ಮ ದೇಹದ ಅಗತ್ಯಕ್ಕೆ ಅನುಗುಣವಾಗಿ ಕುಡಿಯಲು ಮರೆಯಬೇಡಿ. ನೀವು ಯಾವುದೇ ರೀತಿಯ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಹೊಂದಿದ್ದರೆ, ವೈದ್ಯರನ್ನು ಸಂಪರ್ಕಿಸಿದ ನಂತರವೇ ಇದನ್ನು ಸೇವನೆ ಮಾಡಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ