ಸೋಮವಾರ ಅಖಂಡ ಕರ್ನಾಟಕ ಬಂದ್ ದಿನಾಂಕ ಘೋಷಣೆ ಮಾಡುತ್ತೇವೆ: ವಾಟಾಳ್ ನಾಗರಾಜ್

ತಮಿಳುನಾಡಿಗೆ ಕಾವೇರಿ ನೀರು ಬಿಡದಂತೆ ಆಗ್ರಹಿಸಿ ಅಖಂಡ ಕರ್ನಾಟಕ ಬಂದ್ ನಡೆಸಲು ಕನ್ನಡ ಪರ ಸಂಘಟನೆಗಳು ನಿರ್ಧರಿಸಿವೆ. ಈ ಬಗ್ಗೆ ಮಾಹಿತಿ ನೀಡಿದ ವಾಟಾಳ್ ನಾಗರಾಜ್, ಸೋಮವಾರದಂದು ಬಂದ್ ದಿನಾಂಕ ಘೋಷಣೆ ಮಾಡುತ್ತೇವೆ. ಎಲ್ಲರೂ ಸ್ಪಂದಿಸುವಂತೆ ಮನವಿ ಮಾಡಿದ್ದಾರೆ. ಎಲ್ಲರೂ ಸೇರಿ ಬಂದ್ ಮಾಡಿದರೆ ಒಂದು ಶಕ್ತಿ ಬರಲಿದೆ ಎಂದರು.

ಸೋಮವಾರ ಅಖಂಡ ಕರ್ನಾಟಕ ಬಂದ್ ದಿನಾಂಕ ಘೋಷಣೆ ಮಾಡುತ್ತೇವೆ: ವಾಟಾಳ್ ನಾಗರಾಜ್
ವಾಟಾಳ್ ನಾಗರಾಜ್
Follow us
| Updated By: Rakesh Nayak Manchi

Updated on: Sep 23, 2023 | 2:53 PM

ಬೆಂಗಳೂರು, ಸೆ.23: ತಮಿಳುನಾಡಿಗೆ ಕಾವೇರಿ ನೀರು (Cauvery Water) ಹರಿಸದಂತೆ ಒತ್ತಾಯಿಸಿ ಸೋಮವಾರ ಅಖಂಡ ಕರ್ನಾಟಕ ಬಂದ್ (Karnataka Bandh) ದಿನಾಂಕ ಘೋಷಣೆ ಮಾಡುತ್ತೇವೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಂದ್ ದಿನದಂದು ಎಲ್ಲರೂ ಮನೆಯಲ್ಲಿ ಇದ್ದು ಸ್ಪಂದಿಸುವಂತೆ ಮನವಿ ಮಾಡಿದರು.

26 ರಂದು ಬಂದ್​ಗೆ ಕರೆ ನೀಡಿರುವುದಕ್ಕೆ ನನ್ನ ವಿರೋಧ ವಿಲ್ಲ. ಅವರ ಜೊತೆಗೆ ಮಾತಾಡುತ್ತೇವೆ, ಎಲ್ಲರೂ ಒಟ್ಟಿಗೆ ಸೇರಿ ಅಖಂಡ ಕರ್ನಾಟಕ ಬಂದ್ ಮಾಡೋಣ ಅಂತ ಮನವಿ ಮಾಡುತ್ತೇವೆ. ಎಲ್ಲರೂ ಸೇರಿ ಬಂದ್ ಮಾಡಿದರೆ ಹೋರಾಟಕ್ಕೆ ಒಂದು ಶಕ್ತಿ ಬರಲಿದೆ ಎಂದರು.

ನಾವು ಬಹಳ ಗಂಭೀರವಾದ ಪರಿಸ್ಥಿತಿಯಲ್ಲಿದ್ದೇವೆ. ನದಿ ನೀರು ಗಡಿ ವಿಚಾರದಲ್ಲಿ ಹಿಂದಿನಿಂದಲೂ ನಾವು ಯಾರಿಗೂ ಭಯಪಡದೆ ಹೋರಾಟ ಮಾಡಿದ್ದೇವೆ. ನೀವು ಯಾರನ್ನು ಕೇಳಿಕೊಂಡು ನೀರು ಬಿಡುತ್ತಿದ್ದೀರಾ? ಕರ್ನಾಟಕದಲ್ಲಿ ಕನ್ನಡಿಗರು ಇಲ್ಲವೇ? ಹೋರಾಟಗಾರರು ಇಲ್ವಾ? ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಇದನ್ನೂ ಓದಿ: ಕಾವೇರಿ ವಿವಾದ; ತಮಿಳುನಾಡಿಗೆ ನೀರು ಬಿಡುವುದನ್ನು ಖಂಡಿಸಿ ಮಂಗಳವಾರ ಬೆಂಗಳೂರು ಬಂದ್

ನಾವು ನಿಮ್ಮ ತಂಟೆಗೆ ಬರುವುದಿಲ್ಲ ಎಂದು ನ್ಯಾಯಲಯ ಈಗಾಗಲೇ ಹೇಳಿ ಅರ್ಜಿ ವಜಾ ಮಾಡಿದೆ. ನೀವು ನಮ್ಮ ಹತ್ತಿರ ಬರಬೇಡಿ ಕಾವೇರಿ ನಿರ್ವಹಣಾ ಪ್ರಾಧಿಕಾರದ ಬಳಿ ಹೋಗುವಂತೆ ಸೂಚಿಸಿತ್ತು. ನಮ್ಮ ಎಲ್ಲಾ ಸಂಸದರು ಪ್ರಧಾನ ಮಂತ್ರಿಗಳ ಮನೆ ಮುಂದೆ ಹೋಗಿ ನಮಗೆ ತುಂಬಾ ನೋವಾಗಿದೆ ಎಂದು ಕೇಳಬೇಕಿತ್ತು ಎಂದರು.

ಈ ಹಿಂದೆ ಇದ್ದ ಪ್ರಧಾನ ಮಂತ್ರಿಗಳಾದ ಮನಮೋಹನ್ ಸಿಂಗ್, ಪಿವಿ ನರಸಿಂಹ ರಾವ್ ನಮ್ಮನ್ನು ಕರೆದು ಮಾತಾಡಿದ್ದರು. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಯಿ ಅವರೇ ನಿಮಗೆ ಮೈಸೂರು ಬ್ಯಾಂಕ್ ಸರ್ಕಲ್ ಗೊತ್ತು, ಪ್ರಧಾನ ಮಂತ್ರಿ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.

ಜೆಡಿಎಸ್​ನವರು ನಿನ್ನೆ ಅಮಿತ್ ಶಾ ಅವರನ್ನು ಭೇಟಿ ಮಾಡಿದರು. ಆದರೆ ನೀರಿನ ಬಗ್ಗೆ ಮಾತಾಡಿಲ್ಲ. ಪ್ರಧಾನ ಮಂತ್ರಿಗಳ ಮೇಲೆ ಒತ್ತಡ ತರದೆ ಮೈಸೂರು ಬ್ಯಾಂಕ್ ಸರ್ಕಲ್​ನಲ್ಲಿ ಯಾಕೆ ಪ್ರತಿಭಟನೆ ಮಾಡಿದ್ದೀರಿ? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯನವರೇ ರಾಜೀನಾಮೆ ನೀಡಿ

ಮುಖ್ಯಮಂತ್ರಿ ಸಿದ್ದರಾಮಯ್ಯ ನೀವು ಹಿರಿಯರು ಪ್ರಮಾಣಿಕರಿದ್ದೀರಿ, ನಿಮ್ಮ ನಿಲುವು ಸ್ಪಷ್ಟವಾಗಿ ಇರಲಿ. ತುರ್ತು ಶಾಸಕ ಸಭೆ ಕರೆದು ಸರ್ವಾನುಮತದಿಂದ ನೀರು ಬಿಡಲು ಸಾಧ್ಯವಿಲ್ಲ ಎಂದು ತೀರ್ಮಾನ ಮಾಡಿ. ಅದರ ಮೇಲೂ ನೀರು ಬಿಡಬೇಕೆಂದರೇ ರಾಜೀನಾಮೆ ಕೊಟ್ಟು ಹೊರಗೆ ಬನ್ನಿ ಎಂದು ವಾಟಾಳ್ ನಾಗರಾಜ್ ಹೇಳಿದರು.

ಬೊಮ್ಮಯಿ ಅವರೇ ಸೂಪರ್ ಸ್ಟಾರ್ ರಜಿನಿಕಾಂತ್ ಅವರನ್ನು ಕರೆಸಿ ಪಾದ ಪೂಜೆ ಮಾಡಿದ್ದೀರಿ. ಅವರನ್ನು ರಾಜ್ಯಕ್ಕೆ ಕರೆಯಿಸಬಾರದು. ಈಗ ರಜನಿಕಾಂತ್ ಏನ್ ಮಾಡುತ್ತಾರೆ ಎಂದು ಕೇಳಿ. ರಾಜ್ಯದ ಸಂಸದರಿಗೆ ನಾಚಿಕೆ ಆಗಬೇಕು ಎಂದು ಆಕ್ರೋಶ ಹೊರಹಾಕಿದರು.

ಎಂಕೆ ಸ್ಟಾಲಿನ್ ಅವರೇ ಕರ್ನಾಟಕ ಮುಖ್ಯಮಂತ್ರಿ ಅವರನ್ನು ಮಾತುಕತೆಗೆ ಕರೆಯಿರಿ. ಸೋಮವಾರದವರೆಗೆ ನಿಮಗೆ ಅವಕಾಶ ಕೊಡುತ್ತೇವೆ ಎಂದ ವಾಟಾಳ್ ನಾಗರಾಜ್, ಸೋಮವಾರ 10- 30 ಕ್ಕೆ ವುಡ್ ಲ್ಯಾಂಡ್ಸ್ ಹೋಟೆಲ್​ನಲ್ಲಿ ಸಭೆ ಕರೆದಿದ್ದೇವೆ. ಆ ಸಭೆಯಲ್ಲಿ ಹುಬ್ಬಳ್ಳಿ, ಧಾರವಾಡ, ಕೋಲಾರ, ರಾಜ್ಯದ ಎಲ್ಲಾ ಭಾಗದ ಜನರ ಸಮಸ್ಯೆ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು. ವಿಧಾನಸೌಧಕ್ಕೆ ಮುತ್ತಿಗೆ, ಕೆ.ಆರ್ ಮುತ್ತಿಗೆ ರಾಷ್ಟ್ರೀಯ ಹೆದ್ದಾರಿ ತಡೆಯುತ್ತೇವೆ ಎಂದರು.

ಅಖಂಡ ಕರ್ನಾಟಕ ಬಂದ್ ದಿನಾಂಕ

ಸೋಮವಾರ ವುಡ್ ಲ್ಯಾಂಡ್ಸ್ ಹೋಟೆಲ್​ನಲ್ಲಿ ಎಲ್ಲಾ ಕನ್ನಡಪರ ಹೋರಾಟಗಾರರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಅಖಂಡ ಕರ್ನಾಟಕ ಬಂದ್ ದಿನಾಂಕ ಘೋಷಣೆ ಮಾಡಲಿದ್ದಾರೆ. ಸೆ. 28 ಅಥವಾ 29 ಅಥವಾ 30 ರಂದು ಅಖಂಡ ಕರ್ನಾಟಕ ಬಂದ್ ನಡೆಸುವ ಸಾಧ್ಯತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ