ಕಾವೇರಿ ನೀರಿಗಾಗಿ ಬೆಂಗಳೂರು ಬಂದ್: ಸಿದ್ದರಾಮಯ್ಯ, ಹೆಚ್​ಡಿ ದೇವೇಗೌಡ ಹೇಳಿದ್ದಿಷ್ಟು

| Updated By: ವಿವೇಕ ಬಿರಾದಾರ

Updated on: Sep 26, 2023 | 12:28 PM

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಹಳೇ ಮೈಸೂರು ಭಾಗ ಮತ್ತು ಬೆಂಗಳೂರಲ್ಲಿ ಕನ್ನಡ ಪರ ಸಂಘಟನೆಗಳು, ರೈತರು ಮತ್ತು ವಿರೋಧ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವಿಚಾರವಾಗಿ ಬೆಂಗಳೂರು ಬಂದ್​ಗೆ ಕರೆ ಕೊಟ್ಟಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಏನಂದ್ರು ಇಲ್ಲಿದೆ ಓದಿ.

ಕಾವೇರಿ ನೀರಿಗಾಗಿ ಬೆಂಗಳೂರು ಬಂದ್: ಸಿದ್ದರಾಮಯ್ಯ, ಹೆಚ್​ಡಿ ದೇವೇಗೌಡ ಹೇಳಿದ್ದಿಷ್ಟು
ಸಿದ್ದರಾಮಯ್ಯ, ಹೆಚ್​ಡಿ ದೇವೇಗೌಡ
Follow us on

ಮೈಸೂರು ಸೆ.26: ತಮಿಳುನಾಡಿಗೆ ಕಾವೇರಿ ನೀರು (Cauvery Water Dispute) ಬಿಡುತ್ತಿರುವುದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು, ರೈತರು, ಬಿಜೆಪಿ (BJP) ಮತ್ತು ಜೆಡಿಎಸ್ (JDS)​​ ಪ್ರತಿಭಟನೆ ಮಾಡುತ್ತಿವೆ. “ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಬೆಂಗಳೂರು” ಮಂಗಳವಾರ ಬೆಂಗಳೂರು ಬಂದ್​ಗೆ (Bengaluru Bandh) ಕರೆಕೊಟ್ಟಿದ್ದು, ರಾಜಧಾನಿ ಇಂದು ಸಂಪೂರ್ಣ ಸ್ತಬ್ಧವಾಗಿದೆ. ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ಪ್ರತಿಭಟನೆ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಪ್ರತಿಭಟನೆಯಿಂದ ಇನ್ನೊಬ್ಬರಿಗೆ ತೊಂದರೆ ಆಗಬಾರದು. ಪ್ರತಿಭಟನೆ ಹೇಗೆ ಸಂವಿಧಾನತ್ಮಕ ಹಕ್ಕು ಇದೆ ಹಾಗೆಯೇ ಸಾಮಾನ್ಯ ಜನರಿಗೂ ಹಕ್ಕು ಇದೆ. ಹೀಗಾಗಿ ಅವರ ಹಕ್ಕಿಗೆ ಧಕ್ಕೆ ತರಬೇಡಿ ಎಂದರು.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಜನರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕಾಗಿ 144 ಸೆಕ್ಷನ್ ಜಾರಿ ಮಾಡಿದ್ದೇವೆ. ಜನರ ಹಕ್ಕನ್ನು ರಕ್ಷಿಸಿಸುವುದು ಸರ್ಕಾರದ ಕರ್ತವ್ಯ. ಅದೇ ಕೆಲಸವನ್ನ ನಾವು ಮಾಡಿದ್ದೇವೆ. ಕಾವೇರಿ ನೀರು ವಿಚಾರವಾಗಿ ಹೆಚ್​​ಡಿ ದೇವೇಗೌಡರು, ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರವನ್ನ ನಾವು ಸ್ವಾಗತಿಸುತ್ತೇವೆ. ಈಗ ಅವರದು ಬಿಜೆಪಿ ಜೊತೆಗೆ ಹೊಸ ಪ್ರೇಮ ಶುರುವಾಗಿದೆ. ಅವರು ಸಮಸ್ಯೆ ಬಗೆಹರಿಸುವ ಕಾರ್ಯ ಮಾಡಲಿ ಎಂದು ಹೇಳಿದರು.

ಆದರೆ ಸರ್ಕಾರ ಸರಿಯಾದ ನಿರ್ಧಾರ ಕೈಗೊಳ್ಳಲಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿರುವುದನ್ನು ನಾವು ಒಪ್ಪುವುದಿಲ್ಲ. ಸರ್ಕಾರ ಎಲ್ಲಾ ಹಂತದಲ್ಲೂ ನಾಡಿನ ಜನರ ರಕ್ಷಣೆಗೆ ಬದ್ಧವಾಗಿಯೇ ಇದೆ. ಕಾನೂನು ತಜ್ಞರು ಸರಿಯಾಗಿ ವಾದ ಮಾಡಿಲ್ಲ ಎಂಬ ಆರೋಪ ಸುಳ್ಳು. ಹಿಂದಿನ ಎಲ್ಲಾ ಸರ್ಕಾರಗಳು ಇದ್ದಾಗಲೂ ಇದ್ದ ಲೀಗಲ್ ಟೀಮ್ ಈಗಲೂ ಇದೆ. ಅವರೇ ವಾದ ಮಾಡಿದ್ದಾರೆ. ಕಾನೂನು ತಜ್ಞರಲ್ಲಿ ಯಾವ ಬದಲಾವಣೆ ಆಗಿಲ್ಲ. ಹೀಗಾಗಿ ಸಮರ್ಥವಾದ ಮಂಡಿಸಿಲ್ಲ ಎಂಬುದರಲ್ಲಿ ಅರ್ಥವಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ರಾಜ್ಯದ ಹಲವೆಡೆ ಧಗಧಗಿಸಿದ ಕಾವೇರಿ ಕಿಚ್ಚು; ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ ವಿವರ

ಬಿಜೆಪಿಯಿಂದ ಚಡ್ಡಿ ಚಳುವಳಿ ವಿಚಾರವಾಗಿ ಮಾತನಾಡಿದ ಅವರು ಬಿಜೆಪಿಯವರನ್ನು ನಾವೂ ಮೊದಲಿನಿಂದಲೂ ಚಡ್ಡಿಗಳು ಎಂದೇ ಕರೆಯುತ್ತಿದ್ದೇವೆ. ಈಗ ಅವರು ಚಡ್ಡಿ ಚಳುವಳಿ ಮಾಡುತ್ತಿದ್ದಾರೆ. ಚಳುವಳಿ ಮಾಡಲಿ ಬಿಡಿ. ರಾಜ್ಯ ಕಾಂಗ್ರೆಸ್ ಡಿಎಂಕೆಯ ಬಿ ಟೀಮ್ ಎಂಬ ಹೆಚ್ ಡಿ ಕುಮಾರಸ್ವಾಮಿ ಆರೋಪದ ವಿಚಾರವಾಗಿ ಮಾತನಾಡಿದ ಅವರು ಎಐಡಿಎಂಕೆ ಬಿಜೆಪಿ ಜೊತೆ ಇತ್ತಲ್ಲ ಆಗ ಅದು ಯಾವ ಟೀಮ್ ? ಸುಮ್ಮನೆ ರಾಜಕೀಯ ಕಾರಣಕ್ಕೆ ಎನೇನೋ ಹೇಳಿಕೆ ಕೊಡಬಾರದು. ಸುಮ್ಮನೆ ಬಿ ಟೀಮ್ ಎ ಟೀಮ್ ಅನ್ನಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾವೇರಿ ನೀರು ಪ್ರಸ್ತುತ ವರದಿಗಾಗಿ ಕೇಂದ್ರದ ತಂಡ ಆಗಮಿಸುವ ವಿಚಾರವಾಗಿ ಮಾತನಾಡಿ ಪ್ರಧಾನಮಂತ್ರಿಗಳು ಮಧ್ಯಸ್ಥಿಕೆ ವಹಿಸಬೇಕು. ಕೇಂದ್ರದಿಂದ ತಜ್ಞರ ತಂಡ ಬರಬೇಕು. ಇದನ್ನು ನಾನು ಎರಡು ಬಾರಿ ಕೇಂದ್ರಕ್ಕೆ ಕೇಳಿದ್ದೇನೆ. ಹೆಚ್​ ಡಿ ದೇವೇಗೌಡರು ಕೂಡ ಈಗ ಪತ್ರ ಬರೆದು ಕೇಳಿದ್ದಾರೆ. ಈಗಲಾದರೂ ಕೇಂದ್ರದಿಂದ ತಂಡ ಬರಲಿ. ಯಾಕೆ ಕೇಂದ್ರದ ತಂಡ ಬರುತ್ತಿಲ್ಲ ಅಂತಾ ಬಿಜೆಪಿಯವರು ಹೇಳಲಿ. ಬಿಜೆಪಿಯವರು ಹಾದಿ ಬೀದಿಯಲ್ಲಿ ಹೋರಾಟ ಮಾಡುವ ಬದಲು ಕೇಂದ್ರದಿಂದ ತಜ್ಞರ ತಂಡ ಕರೆಸಲಿ. ಕೋರ್ಟ್ ಮಧ್ಯಸ್ಥಿಕೆ ಇಲ್ಲದೆ ಎರಡು ರಾಜ್ಯ ಕೂತು ಮಾತುಕತೆಗೆ ಈಗಲೂ ನಾವೂ ಸಿದ್ದವಿದ್ದೇವೆ. ಇಂತಹ ಪ್ರಕರಣಗಳು ನ್ಯಾಯಾಲಯದ ಹೊರಗೆ ಬಗೆಹರಿಯಬೇಕು ಎಂದು ಒತ್ತಾಯಿಸಿದರು.

ಬೆಂಗಳೂರು ನಗರ ಬಂದ್​ಗೆ ಜೆಡಿಎಸ್ ಪಕ್ಷ ಬೆಂಬಲ: ಹೆಚ್​ಡಿ ದೇವೇಗೌಡ

ನಮ್ಮ ನೋವು ನಮ್ಮ ಪಕ್ಕದ ರಾಜ್ಯದವರು ಅರ್ಥ ಮಾಡಿಕೊಳ್ಳಬೇಕು. ಸ್ವಲ್ಪವಾದರೂ ಬದಲಾವಣೆಗೆ ಮುಂದಾಗಲಿ ಎಂದು ಬಂದ್​​​ ಮಾಡಲಾಗುತ್ತದೆ. ತಮಿಳುನಾಡು‌ ರೈತರು ನಮ್ಮ ನೋವನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ಮನಸಿನ ನೋವಿನ ಸಂದೇಶವನ್ನ ಶಾಂತಿಯುತವಾಗಿ ಕಳಿಸಬೇಕು. ಹೀಗಾಗಿ ಬೆಂಗಳೂರು ನಗರ ಬಂದ್​ಗೆ ಜೆಡಿಎಸ್ ಪಕ್ಷ ಬೆಂಬಲ ನೀಡಿದೆ ಎಂದು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಹೇಳಿದರು.

ರೈತರು, ಕನ್ನಡಪರ ಸಂಘಗಳ ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ ಬೆಂಬಲ ನೀಡಬೇಕು. ಮಾಜಿ ಮುಖ್ಯಮಂತ್ರಿಗಳಾದ ಹೆಚ್​ ಡಿ ಕುಮಾರಸ್ವಾಮಿ, ಬಿಎಸ್​ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ‌ ಎಲ್ಲರೂ ಬೆಂಬಲ ಕೊಟ್ಟಿದ್ದಾರೆ. ಎಲ್ಲರೂ ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು ಎಂದು ಕೇಳಿಕೊಂಡರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ