ಬೆಂಗಳೂರು ಬಂದ್: ಭದ್ರತೆಗೆ ನಿಯೋಜನೆಗೊಂಡ ಪೊಲೀಸರಿಗೆ ತಂದ ಊಟದಲ್ಲಿ ಇಲಿ ಪತ್ತೆ
Bengaluru Bandh: ಕಾವೇರಿ ನೀರಿಗಾಗಿ ಬೆಂಗಳೂರಿನಲ್ಲಿ ಪ್ರತಿಭಟನೆ ಜೋರಾಗಿದೆ. ಮತ್ತೊಂದೆಡೆ ಯಾವುದೇ ಅಹಿತಕ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಆದ್ರೆ, ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ನೀಡಲಾದ ಊಟದ ಪ್ಯಾಕೇಟ್ನಲ್ಲಿ ಇಲಿ ಪತ್ತೆಯಾಗಿದೆ. ಇದನ್ನು ಕಂಡು ಪೊಲೀಸ್ ಸಿಬ್ಬಂದಿ ಹೌಹಾರಿದ್ದಾರೆ.
ಬೆಂಗಳೂರು (ಸೆ.26): ತಮಿಳುನಾಡಿಗೆ (Tamil Nadu) ಕಾವೇರಿ ನದಿ ನೀರು (Cauvery Water Dispute) ಹರಿಸುವುದನ್ನು ವಿರೋಧಿಸಿ ರೈತ ಸಂಘಟನೆಗಳು ಸೇರಿದಂತೆ ಕೆಲ ಸಂಘ0ಸಂಸ್ಥೆಗಳು ಸೇರಿ ಇಂದು(ಸೆ.26) ಬೆಂಗಳೂರು ಬಂದ್ (Bengaluru bandh) ಮಾಡಿ ಪ್ರತಿಭಟನೆ ನಡೆಸುತ್ತಿವೆ. ಇದರಿಂದ ರಾಜ್ಯ ರಾಜಧಾನಿಯಲ್ಲಿ ಪೊಲೀಸರು(Police) ಕಟ್ಟೆಚ್ಚರ ವಹಿಸಿದ್ದಾರೆ. ಇನ್ನು ಪ್ರತಿಭಟನೆಯ ಭದ್ರತೆಗೆ ನಿಯೋಜನೆ ಮಾಡಿದ ಪೊಲೀಸರಿಗೆ ಹೋಟೆಲ್‌ನಿಂದ ತಿಂಡಿ ಸರಬರಾಜು ಮಾಡಲಾಗಿದ್ದು, ಅದರಲ್ಲಿ ಸತ್ತ ಇಲಿ ಪತ್ತೆಯಾಗಿದೆ. ಇದನ್ನು ಕಂಡು ಪೊಲೀಸರು ಶಾಕ್ ಆಗಿದ್ದಾರೆ.
ಹೌದು…ಮಂಗಳವಾರ ಬೆಳಗ್ಗೆ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭದ್ರತೆಗೆ ನಿಯೋಜಿಸಲಾಗಿದ್ದ ಯಶವಂತಪುರ ಟ್ರಾಫಿಕ್ ಪೊಲೀಸರಿಗೆ ತಂದಿದ್ದ ಉಪಾಹಾರದಲ್ಲಿ (ರೈಸ್ ಬಾತ್) ಸತ್ತ ಇಲಿ ಪತ್ತೆಯಾಗಿದೆ. ಪೊಲೀಸ್ ಇಲಾಖೆಯಿಂದ ಸರಬರಾಜು ಮಾಡಿದ ಊಟದ ಪ್ಯಾಕೆಟ್ ತೆರೆದಾಗ ಅದರಲ್ಲಿ ಇಲಿ ಕಂಡುಬಂದಿದೆ. ಅದನ್ನು ನೋಡಿ ಪೊಲೀಸ್ ಸಿಬ್ಬಂದಿ ಹೌಹಾರಿದ್ದಾರೆ.
ಇದನ್ನೂ ಓದಿ: Bangalore Bandh Live: ಮೇಕೆದಾಟು ಯೋಜನೆಯಿಂದ ಕಾವೇರಿ ನೀರಿನ ಸಮಸ್ಯೆ ಇತ್ಯರ್ಥ ಸಾಧ್ಯ
ಅಲ್ಲದೇ ಸತ್ತು ಬಿದ್ದಿರುವ ಊಟಕ್ಕೆ ಪೊಲೀಸ್ ಸಿಬ್ಬಂದಿ ಆಕ್ರೋಶಗೊಂಡಿದ್ದು, ಇಂತಹ ಊಟ ತಿಂದು ಹೆಚ್ಚು ಕಡಿಮೆಯಾದ್ರೆ ಯಾರು ಹೊಣೆ ಎಂದು ಕಿಡಿಕಾರಿದ್ದಾರೆ. ಇನ್ನು ಖಾಸಗಿ ಹೋಟೆಲ್ ನಿಂದ ಕಳಪೆ ಮಟ್ಟದ ಊಟ ಪೂರೈಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಅಶೋಕ್ ಟಿಫಿನ್ ಸೆಂಟರ್ನಿಂದ ಉಪಹಾರ ಸಪ್ಲೈ ಮಾಡಲಾಗಿದೆ ಎಂದು ತಿಳಿದುಬಂದಿದ್ದು, ಅಶೋಕ್ ಟಿಫಿನ್ ಸೆಂಟರ್ ಒಟ್ಟು 180 ಊಟ ನೀಡಿದೆ.
ಸಿಬ್ಬಂದಿಗೆ ಇಲಿ ಇದ್ದ ಊಟ ಕೊಟ್ಟ ವಿಚಾರಕ್ಕೆ ಸಂಚಾರಿ ವಿಭಾಗ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಗರಂ ಆಗಿದ್ದು, ಊಟ ಸಪ್ಲೈ ಮಾಡಿದ ಯಶವಂತಪುರ ಪೊಲೀಸರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಒಂದು ದಿನದ ಊಟಕ್ಕೆ ಸರ್ಕಾರ 200 ರೂಪಾಯಿ ಕೊಡುತ್ತೆ. ಆದ್ರೆ, ಗುಣಮಟ್ಟದ ಊಟ ಯಾಕೆ ಕೊಟ್ಟಿಲ್ಲ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಮಡಿದ್ದಾರೆ. ಅಲ್ಲದೇ ಯಶವಂತಪುರ ಸಂಚಾರ ಮತ್ತು ಟ್ರಾಫಿಕ್ ಇನ್ಸ್ಪೆಕ್ಟರ್ ಗಳಿಗೆ ನೋಟೀಸ್ ನೀಡಿದ್ದಾರೆ.
ಹೋಟೆಲ್ ಮಾಲೀಕನ ವಿರುದ್ಧ ಕ್ರಿಮಿನಲ್ ಕೇಸ್
ಈ ಬಗ್ಗೆ ಬೆಂಗಳೂರಲ್ಲಿ ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಪ್ರತಿಕ್ರಿಯಿಸಿದ್ದು, ಸಂಚಾರಿ ಸಿಬ್ಬಂದಿಗೆ ನೀಡಿದ್ದ ಆಹಾರ ಪೊಟ್ಟಣದಲ್ಲಿ ಇಲಿ ಪತ್ತೆಯಾಗಿದೆ. ರೈಸ್‌ಬಾತ್‌ನಲ್ಲಿ ಇಲಿ ಪತ್ತೆಯಾಗಿರುವುದು ಬೆಳಕಿಗೆ ಬಂದಿದ್ದು, ಹೋಟೆಲ್ ಮಾಲೀಕನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸದ್ಯ ಅದೃಷ್ಟವಶಾತ್ ಯಾರೂ ಊಟ ಸೇವಿಸಿಲ್ಲ. ಒಂದು ವೇಳೆ ಇಲಿ ಇದ್ದ ಊಟ ಸೇವಿಸಿದ್ರೆ ಅನಾಹುತ ಆಗುವ ಸಾಧ್ಯತೆ ಇತ್ತು.
ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:38 am, Tue, 26 September 23