ಪಾತಾಳಕ್ಕೆ ಕುಸಿದ ಟೊಮೆಟೊ ದರ; ಕಂಗಾಲಾದ ರೈತರು, ಕಟಾವು ಮಾಡಲೂ ಹಿಂದೇಟು
ಏಷ್ಯಾದ ಎರಡನೇ ಅತಿದೊಡ್ಡ ಟೊಮೆಟೊ ಮಾರುಕಟ್ಟೆಯಾಗಿರುವ ಕೋಲಾರ ಎಪಿಎಂಸಿಯಲ್ಲಿ ಈ ಹಿಂದೆ 15 ಕೆ.ಜಿ ಬಾಕ್ಸ್ ಟೊಮೆಟೊ 2,500 ವರೆಗೂ ಮಾರಾಟವಾಗಿತ್ತು. ಬೆಲೆ ಏರಿಕೆಯಿಂದ ಗ್ರಾಹಕರು ಕಣ್ಣೀರು ಸುರಿಸಿದ್ದರು. ಆದರೆ ಈಗ ಟೊಮೆಟೊ ಬೆಲೆ ಪಾತಾಳಕ್ಕೆ ಕುಸಿದಿದ್ದು ಗ್ರಾಹಕರು ನಿಟ್ಟುಸಿರು ಬಿಟ್ಟರೆ ಟೊಮೆಟೊ ಬೆಳೆದ ರೈತರು ಕಣ್ಣೀರು ಹಾಕುವಂತಾಗಿದೆ.
ಬೆಂಗಳೂರು, ಸೆ.26: ಜುಲೈ-ಆಗಸ್ಟ್ ತಿಂಗಳಲ್ಲಿ ರಾಣಿಯಂತೆ ಮೆರೆದಿದ್ದ ಕೆಂಪು ಸುಂದರಿ ಟೊಮೆಟೊ (Tomato) ಬೆಲೆ ಈಗ ಪಾತಾಳಕ್ಕೆ ಧುಮುಕಿದೆ. ಭಾರೀ ದರ ಏರಿಕೆಯಿಂದ ಟೊಮೆಟೊ ದೇಶದೆಲ್ಲೆಡೆ ಸುದ್ದಿ ಮಾಡಿತ್ತು. ಅದರಲ್ಲೂ ಟೊಮೆಟೊ ಬೆಳೆದ ರೈತರು ಕೋಟ್ಯಾಧಿಪತಿಗಳಾಗಿದ್ದರು. ಆದರೆ ಈಗ ಟೊಮೆಟೊ ದರ ಕಡಿಮೆಯಾಗಿದ್ದು ಸಾಮಾನ್ಯ ಅಂಗಡಿಗಳಲ್ಲಿ ಒಂದು ಟೀ-ಕಾಫಿಗೆ ಖರ್ಚಾಗುವ 10 ರೂ.ಗೆ ಒಂದು ಕೆಜಿ ಟೊಮೆಟೊ ಮಾರಾಟವಾಗುತ್ತಿದೆ. ಇದರಿಂದ ಟೊಮೆಟೊ ಬೆಳೆದ ರೈತರು (Farmers) ಕಂಗಾಲಾಗಿದ್ದಾರೆ.
ಏಷ್ಯಾದ ಎರಡನೇ ಅತಿದೊಡ್ಡ ಟೊಮೆಟೊ ಮಾರುಕಟ್ಟೆಯಾಗಿರುವ ಕೋಲಾರ ಎಪಿಎಂಸಿಯಲ್ಲಿ ಈ ಹಿಂದೆ 15 ಕೆ.ಜಿ ಬಾಕ್ಸ್ ಟೊಮೆಟೊ 2,500 ವರೆಗೂ ಮಾರಾಟವಾಗಿತ್ತು. ಬೆಲೆ ಏರಿಕೆಯಿಂದ ಗ್ರಾಹಕರು ಕಣ್ಣೀರು ಸುರಿಸಿದ್ದರು. ಆದರೆ ಈಗ ಟೊಮೆಟೊ ಬೆಲೆ ಪಾತಾಳಕ್ಕೆ ಕುಸಿದಿದ್ದು ಗ್ರಾಹಕರು ನಿಟ್ಟುಸಿರು ಬಿಟ್ಟರೆ ಟೊಮೆಟೊ ಬೆಳೆದ ರೈತರು ಕಣ್ಣೀರು ಹಾಕುವಂತಾಗಿದೆ.
ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಮಾರುಕಟ್ಟೆಗೆ ಬರುತ್ತಿದೆ ಮತ್ತು ಇತರ ರಾಜ್ಯಗಳಿಂದ ಬೇಡಿಕೆ ಕುಸಿದಿರುವುದು ಬೆಲೆ ಕುಸಿತಕ್ಕೆ ಕಾರಣವಾಗಿದೆ ಎಂದು ತೋಟಗಾರಿಕಾ ಇಲಾಖೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಅಧಿಕಾರಿಗಳು ತಿಳಿಸಿದ್ದಾರೆ. ಈ ತಿಂಗಳೊಂದರಲ್ಲೇ 4.21 ಲಕ್ಷ ಕ್ವಿಂಟಾಲ್ ಟೊಮೆಟೊ ಬಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಎಪಿಎಂಸಿಗೆ 2.31 ಲಕ್ಷ ಕ್ವಿಂಟಾಲ್ ಹಾಗೂ 2021ರ ಸೆಪ್ಟೆಂಬರ್‌ನಲ್ಲಿ 3.82 ಲಕ್ಷ ಕ್ವಿಂಟಾಲ್ ಬಂದಿತ್ತು.
ಜುಲೈ ಮತ್ತು ಆಗಸ್ಟ್‌ನಲ್ಲಿ 2,300 ರೂ.ಗೆ ಮಾರಾಟವಾಗುತ್ತಿದ್ದ 15 ಕೆಜಿ ಟೊಮೆಟೊ ಬಾಕ್ಸ್ ಈಗ ಕೇವಲ 45 ರಿಂದ 120 ರೂ.ಗೆ ಮಾರಾಟವಾಗುತ್ತಿದೆ. ಕೊಪ್ಪಳ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು, ಚಿತ್ರದುರ್ಗ, ಹಾವೇರಿಯಲ್ಲಿ ಟೊಮೆಟೊ ಬೆಲೆ ಏರಿಕೆಯಾಗಿದೆ ಎಂದು ರೈತರು ದೊಡ್ಡ ಪ್ರಮಾಣದಲ್ಲಿ ಟೊಮೆಟೊ ಬೆಳೆದಿದ್ದರು. ಹೀಗಾಗಿ ಈಗ ಮಾರುಕಟ್ಟೆಯಲ್ಲಿ ರಾಶಿ ರಾಶಿ ಟೊಮೆಟೊ ಬಂದಿದೆ ಎಂದು ಅಧಿಕಾರಿ ತಿಳಿಸಿದರು.
ಇದನ್ನೂ ಓದಿ: ಹಾಸನ: ಅಂದು ಟೊಮೆಟೊ, ಇಂದು ಶುಂಠಿಗೆ ಕಳ್ಳರ ಕಾಟ; ಲಕ್ಷಗಟ್ಟಲೇ ಹಣ ಹಾಕಿ ಬೆಳೆದ ಅನ್ನದಾತನಿಗೆ ತಪ್ಪದ ಸಂಕಷ್ಟ
ತೋಟಗಾರಿಕಾ ಇಲಾಖೆಯ ಮೂಲಗಳ ಪ್ರಕಾರ, ಸೆಪ್ಟೆಂಬರ್ 1 ರವರೆಗೆ ಸುಮಾರು 32,323 ಹೆಕ್ಟೇರ್ ಭೂಮಿಯಲ್ಲಿ ಟೊಮೆಟೊ ಬಿತ್ತನೆಯಾಗಿದೆ. ಆದರೆ ಕೋಲಾರ ಮತ್ತು ಸುತ್ತಮುತ್ತಲಿನ ಅನೇಕ ರೈತರು ಕಟಾವು ಮಾಡುವ ಕೂಲಿ ವೆಚ್ಚ ಮಾರುಕಟ್ಟೆಯಲ್ಲಿ ಆದಾಯಕ್ಕಿಂತ ಹೆಚ್ಚಿರುವುದರಿಂದ ಇಳುವರಿ ಮಾಡದಿರಲು ನಿರ್ಧರಿಸಿದ್ದಾರೆ.
ನನ್ನ 10 ಎಕರೆ ಜಮೀನಿನಲ್ಲಿ ಟೊಮೆಟೊ ಕಟಾವು ಮಾಡಿದರೆ ನನಗೆ ಹೆಚ್ಚಿನ ನಷ್ಟವಾಗಲಿದೆ ಎಂದು ಚಿಕ್ಕಬಳ್ಳಾಪುರದ ಚಿಂತಾಮಣಿಯ ರೈತ ಸತೀಶ್ ಹೋತೂರ್ ಅಳಲು ತೋಡಿಕೊಂಡಿದ್ದಾರೆ. ನಾನು ದಿನಕ್ಕೆ 20 ರಿಂದ 28 ಬಾಕ್ಸ್ ಟೊಮೆಟೊಗಳನ್ನು ಕೊಯ್ಲು ಮಾಡಬಹುದು. ವ್ಯಾಪಾರಿಗಳು ಪ್ರತಿ ಬಾಕ್ಸ್‌ಗೆ 150 ರೂ. (ಗರಿಷ್ಠ ರೂ. 4,200 ಗಳಿಸಬಹುದು), ಆದರೆ ಕಾರ್ಮಿಕ ಶುಲ್ಕವೇ 3,000 ರಿಂದ 3,500 ರೂ. ಬರುತ್ತದೆ. ಹೀಗಾಗಿ ಲಾಭಕ್ಕಿಂತ ಖರ್ಚೆ ಜಾಸ್ತಿ. ಟೊಮೆಟೊ ಕಟಾವು ಮಾಡದಿರಲು ನಿರ್ಧರಿಸಿದ್ದೇನೆ ಎಂದರು.
ಇಲಾಖೆಯು ಆಗಸ್ಟ್‌ನಲ್ಲಿ ಹೆಚ್ಚಿನ ಸಂಖ್ಯೆಯ ಟೊಮೆಟೊ ಸಸಿಗಳನ್ನು ಮಾರಾಟ ಮಾಡಿದೆ. ಮತ್ತು ಈ ಹಿಂದೆ ಹತ್ತಿ ಅಥವಾ ಮೆಣಸಿನಕಾಯಿಯನ್ನು ಬೆಳೆಯುತ್ತಿದ್ದ ಅನೇಕ ರೈತರು, ಉತ್ತಮ ಇಳುವರಿಯನ್ನು ನಿರೀಕ್ಷಿಸಿ ಟೊಮೆಟೊ ಬೆಳೆದಿದ್ದಾರೆ. ಈಗ ಹೂಡಿಕೆಯಷ್ಟು ಲಾಭವೂ ಸಿಗುತ್ತಿಲ್ಲ ಎಂದು ರೈತನೋರ್ವ ಬೇಸರ ಹೊರ ಹಾಕಿದರು.
ಏಪ್ರಿಲ್‌ನಲ್ಲಿ 500 ಎಕರೆಯಲ್ಲಿ ಟೊಮೆಟೊ ಕೃಷಿ ಪ್ರದೇಶವನ್ನು ಹೊಂದಿದ್ದ ರೈತರು ಜುಲೈ-ಆಗಸ್ಟ್‌ನಲ್ಲಿ 1,000 ಎಕರೆಗೆ ದ್ವಿಗುಣಗೊಳಿಸಿದ್ದಾರೆ. ಈ ಅವಧಿಯಲ್ಲಿ ಸುಮಾರು ಎರಡು ಕೋಟಿ ಟೊಮೇಟೊ ಸಸಿಗಳು ಮಾರಾಟವಾಗಿವೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ ಕೃಷಿ ಪ್ರದೇಶವನ್ನು ವಿಸ್ತರಿಸದಂತೆ ರೈತರಿಗೆ ಎಚ್ಚರಿಕೆ ನೀಡಲು ತಾಲೂಕು ಮಟ್ಟದಲ್ಲಿ ಹಲವು ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ತೋಟಗಾರಿಕೆ ನಿರ್ದೇಶಕ ಸಿದ್ದಲಿಂಗೇಶ್ವರ ಡಿಎಚ್‌ಗೆ ಮಾಹಿತಿ ನೀಡಿದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ