ದೆಹಲಿ, ಬೆಂಗಳೂರು, ಆಗಸ್ಟ್ 22: ಕಾವೇರಿ ನದಿಯಿಂದ (cauvery river) ನಿಗದಿಗಿಂತ ಹೆಚ್ಚಿನ ನೀರು ತಮಿಳುನಾಡಿಗೆ ಹರಿದಿದೆ. ಮುಂದಿನ ತಿಂಗಳು ರಾಜ್ಯ ಹರಿಸಬೇಕಾದ ನೀರಿಗೆ ಜಮೆ ಮಾಡಿಕೊಳ್ಳಬೇಕು ಎಂದು ಕರ್ನಾಟಕ ವಾದ ಮಂಡಿಸಿದೆ. ಕರ್ನಾಟಕದ ಈ ವಾದವನ್ನು ಪರಿಗಣಿಸಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು, ಈಗ ನಿಗದಿಗಿಂತ ನೀರು ಹರಿದಿದೆ. ಅದನ್ನೇ ಮುಂದಿನ ತಿಂಗಳ ನೀರಿಗೆ ಜಮೆ ಮಾಡಿಕೊಳ್ಳಿ ಎಂದು ಸೂಚನೆ ನೀಡಿದೆ.
ಈವರೆಗೆ ತಮಿಳುನಾಡು ರಾಜ್ಯಕ್ಕೆ 71.56 ಟಿಎಂಸಿ ನೀರು ಹರಿಸಬೇಕಿತ್ತು. ಮಳೆ ಹೆಚ್ಚಾಗಿ ಸುರಿದಿರುವ ಪರಿಣಾಮ 170 ಟಿಎಂಸಿ ನೀರು ಹರಿದಿದೆ. ಅಂದರೆ ಹೆಚ್ಚುವರಿಯಾಗಿ 100 ಟಿಎಂಸಿ ನೀರು ಹರಿದಿದೆ ಎಂದು ಕರ್ನಾಟಕದಿಂದ ವಾದ ಮಂಡಿಸಲಾಗಿದೆ.
ಎರಡೂ ರಾಜ್ಯಗಳು ಕಾವೇರಿ ನದಿ ನೀರನ್ನು ವಿವೇಚನೆಯಿಂದ ಬಳಸಿಕೊಳ್ಳಿ. ಜಲಾಶಯಗಳಲ್ಲಿ ನಿರನ್ನು ಸಂಗ್ರಹಿಸಿಟ್ಟು ಕೊಳ್ಳಿ ಎಂದು ಎರಡೂ ರಾಜ್ಯಗಳಿಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಲಹೆ ನೀಡಿದೆ.
ಇದನ್ನೂ ಓದಿ: ತಮಿಳುನಾಡಿನ ನೀರಿನ ದಾಹ ತಣಿಸಿದ ಕಾವೇರಿ, ಜಲ ಮಾಪನ ಕೇಂದ್ರದ ಬಳಿ ನೀರು ಹರಿಯುವ ದೃಶ್ಯ ಟಿವಿ9ಗೆ ಲಭ್ಯ
ಕಳೆದ ಬಾರಿಯ ತೀವ್ರ ಬರದಿಂದಾಗಿ ಕಾವೇರಿ ಕೊಳ್ಳದ ಡ್ಯಾಂಗಳೆಲ್ಲಾ ಬರಿದಾಗಿದ್ದವು. ಬಂದ ಅಲ್ಪಸ್ವಲ್ಪ ಮಳೆಯಿಂದ ಡ್ಯಾಂಗಳಿಗೆ ಜೀವಕಳೆ ಬಂದಿದೆ ಅಷ್ಟೇ. ಡ್ಯಾಂನಲ್ಲಿ ಸ್ವಲ್ಪ ನೀರು ಕಾಣ್ತಿದ್ದಂತೆ ತಮಿಳುನಾಡು ಮತ್ತೆ ಆಟ ಆರಂಭಿಸಿತ್ತು. ನಿತ್ಯ 1 ಟಿಎಂಸಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮೂಲಕ ಶಿಫಾರಸ್ಸು ಮಾಡಿಸಿತ್ತು.
ರಾಜ್ಯದ ಡ್ಯಾಂಗಳು ತುಂಬದೇ ಇರುವಾಗಲೇ ನೀರು ಹರಿಸುವುದು ಹೇಗೆ ಎನ್ನವ ಚಿಂತೆಯಲ್ಲಿದ್ದ ಸರ್ಕಾರ ಸರ್ವಪಕ್ಷ ಸಭೆ ಕರೆದಿತ್ತು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಆರ್ ಅಶೋಕ್, ಜೆಡಿಎಸ್‌ನ ಜಿಟಿ ದೇವೇಗೌಡ ಸೇರಿದಂತೆ ಕಾವೇರಿ ಕೊಳ್ಳದ ಶಾಸಕರು, ಸಂಸದರು, ಸಚಿವರು ಸಭೆಯಲ್ಲಿ ಭಾಗಿಯಾಗಿದ್ದರು. ಶಿಫಾರಸು ವಿರುದ್ಧ CWMAಗೆ ಮೇಲ್ಮನವಿ ಸಲ್ಲಿಸೋಣ, ಸದ್ಯಕ್ಕೆ ತಮಿಳು ನಾಡಿಗೆ ನೀರು ಬಿಡೋದು ಬೇಡ ಅಂತಾ ವಿಪಕ್ಷ ನಾಯಕರು, ಸಚಿವರು ಸರ್ಕಾರಕ್ಕೆ ಸಲಹೆ ನೀಡಿದ್ದರು.
ಇದನ್ನೂ ಓದಿ: ಬರದಲ್ಲೂ ಕರ್ನಾಟಕಕ್ಕೆ ಬರೆ, ತಮಿಳುನಾಡಿಗೆ ನೀರು ಬಿಡುವಂತೆ CWMA ನಿರ್ದೇಶನ
ಸಭೆಯಲ್ಲಿ ಸರ್ಕಾರಕ್ಕೆ ಸಲಹೆ ನೀಡಿದ ಹಿರಿಯ ವಕೀಲ ಮೋಹನ್ ಕಾತರಕಿ, ನಿತ್ಯ 11,000 ಕ್ಯೂಸೆಕ್ ಬದಲು 8000 ಕ್ಯೂಸೆಕ್ ನೀರು ಬಿಡುಗಡೆ ಮಾಡೋಣ. ಬಳಿಕ ಕಾನೂನು ಹೋರಾಟ ಮಾಡೋಣ ಅಂದರು. ಸಭೆ ಬಳಿಕ ಮಾತನಾಡಿದ ಸಿಎಂ, ನಾಳೆಯಿಂದ 8 ಸಾವಿರ ಕ್ಯೂಸೆಕ್ ನೀರು ಹರಿಸುತ್ತೇವೆ. ಕಾನೂನು ಹೋರಾಟ ಮಾಡುತ್ತೇವೆ ಎಂದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.