ಕೋಲಾರ: ವೀಲಿಂಗ್ ಪುಂಡರ ಹುಚ್ಚಾಟಕ್ಕೆ ಅರ್ಚಕ ಬಲಿ; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಅವರು ಸಂಜೆ ದೇವಸ್ಥಾನದ ಪೂಜೆ ಮುಗಿಸಿಕೊಂಡು ದೇವಾಲಯಕ್ಕೆ ಬೀಗ ಹಾಕಿಕೊಂಡು ಮನೆಕಡೆ ಹೊರಟಿದ್ದ ದೇವಾಲಯದ ಅರ್ಚಕರು, ತನ್ನ ಪಾಡಿಗೆ ತಾನು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ವೀಲಿಂಗ್ ಮಾಡಿಕೊಂಡು ಅತಿ ವೇಗದಲ್ಲಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಅರ್ಚಕರು ಇಹಲೋಕ ತ್ಯಜಿಸಿದ್ದಾರೆ.
ಕೋಲಾರ, ಆ.22: ಬಂಗಾರಪೇಟೆ ಪಟ್ಟಣದ ವಿಜಯನಗರ ನಿವಾಸಿ ಗೋಪಾಲ್ ರಾವ್ ಎಂಬುವವರು ಪೋಸ್ಟ್ ಆಫೀಸ್ನಲ್ಲಿ ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದರು. ಅದರ ಜೊತೆಗೆ ಬಂಗಾರಪೇಟೆ(Bangarapet)ಯ ಗಾಂಧಿನಗರದ ದೇವಸ್ಥಾನದಲ್ಲಿ ಅರ್ಚಕ ವೃತ್ತಿಯನ್ನು ನಿರ್ವಹಿಸುತ್ತಿದ್ದರು. ಹೀಗೆ ಕಳೆದ ರಾತ್ರಿ(ಆ.21) ಎಂದಿನಂತೆ ಗೋಪಾಲ್ ರಾವ್ ಅವರು ದೇವಸ್ಥಾನದಲ್ಲಿ ಪೂಜೆ ಮುಗಿಸಿಕೊಂಡು ದೇವಾಲಯಕ್ಕೆ ಬೀಗ ಹಾಕಿಕೊಂಡು ಕೋಲಾರ-ಕೆಜಿಎಫ್ ಮುಖ್ಯರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೈಕ್ನಲ್ಲಿ ವೀಲಿಂಗ್ ಮಾಡಿಕೊಂಡು ವೇಗವಾಗಿ ಬಂದ ವ್ಯಕ್ತಿಯೊಬ್ಬ ಹಿಂಬದಿ ಗೋಪಾಲ್ ರಾವ್ ಅವರಿಗೆ ಡಿಕ್ಕಿ ಹೊಡೆದಿದ್ದ.
ಗೋಪಾಲ್ ರಾವ್ ಅವರ ತಲೆಗೆ ಗಂಭೀರ ಗಾಯವಾಗಿದ್ದು, ತಕ್ಷಣ ಅವರನ್ನು ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಅಲ್ಲಿಂದ ಕೋಲಾರ ಜಿಲ್ಲಾಸ್ಪತ್ರೆಗೆ ಕಳಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನೆ ಮಾಡುವ ವೇಳೆ ಮಾರ್ಗಮಧ್ಯ ಮೃತಪಟ್ಟಿದ್ದಾರೆ. ಸದ್ಯ ಮೃತ ಗೋಪಾಲ್ ರಾವ್ ಅವರ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದಿದ್ದಾರೆ.
ಇನ್ನು ವಿಷಯ ತಿಳಿದು ಸ್ಥಳಕ್ಕೆ ಬಂದ ಬಂಗಾರಪೇಟೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಅಕ್ಕ-ಪಕ್ಕದ ಅಂಗಡಿಗಳಲ್ಲಿ ಹಾಕಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಹುಡುಕಾಡಿದ್ದಾರೆ. ಈ ವೇಳೆ ಅರ್ಚಕ ಗೋಪಾಲ್ ರಾವ್ ಅವರು ರಸ್ತೆ ದಾಟಿಕೊಂಡು ಹೋದ ಕೆಲವೇ ಹೊತ್ತಿನಲ್ಲಿ ಬಿಳಿ ಬಣ್ಣದ ಆಕ್ಟೀವಾ ಬೈಕ್ವೊಂದು ವೇಗವಾಗಿ ಹೋಗುವ ದೃಶ್ಯ ಕೂಡ ಸೆರಯಾಗಿದೆ. ಸದ್ಯ ಕೆಲವು ಸ್ಥಳೀಯರು ಹೇಳುವ ಪ್ರಕಾರ ಯುವಕನೊಬ್ಬ ಬೈಕ್ ವೀಲಿಂಗ್ ಮಾಡಿಕೊಂಡು ವೇಗವಾಗಿ ಬಂದು ಪಾದಾಚಾರಿ ಈ ಅರ್ಚಕ ಗೋಪಾಲ್ ರಾವ್ ಅವರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಹೇಳಿದ್ದಾರೆ. ಘಟನೆ ಸಂಬಂಧ ಮೃತ ಅರ್ಚಕ ಗೋಪಾಲ್ ರಾವ್ ಅವರ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಬಂಗಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಅಲ್ಲದೆ ಅಪಘಾತದ ನಂತರ ಬೈಕ್ ವಶಕ್ಕೆ ಪಡೆದಿದ್ದು, ವೀಲಿಂಗ್ ಆಗಲಿ ಯಾವುದೇ ರೀತಿ ಘಟನೆ ನಡೆದಿದ್ದರೂ ಅದಕ್ಕೆ ತಕ್ಕಂತೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಾರೆ ಪೋಲಿ ಹುಡುಗರ ಪುಂಡಾಟ ಇಲ್ಲಿ ಓರ್ವ ಅಮಾಯಕ ಜೀವವನ್ನು ಬಲಿ ತೆಗೆದುಕೊಂಡಿದೆ. ಅಲ್ಲದೆ ಅವರನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದ ಕುಟುಂಬವನ್ನೂ ಇಲ್ಲಿ ಅನಾಥವಾಗಿಸಿದೆ. ಈ ಹುಡುಗರ ಕ್ಷಣ ಕಾಲದ ಹುಡುಗಾಟ ಅದೆಷ್ಟೋ ಅನಾಹುತಗಳನ್ನು ಸೃಷ್ಟಿಮಾಡುತ್ತಿದೆ. ಕೂಡಲೇ ಪೊಲೀಸ್ ಇಲಾಖೆ ಪುಂಡರ ಬೈಕ್ ವೀಲಿಂಗ್ಗೆ ಕಡಿವಾಣ ಹಾಕಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ