ಬೆಂಗಳೂರು ಸೆ.28: ತಮಿಳುನಾಡಿಗೆ ಕಾವೇರಿ ನೀರು (Cauvery Water Dispute) ಹರಿಸುತ್ತಿರುವ ರಾಜ್ಯ ಸರ್ಕಾರದ ನಡೆ ವಿರುದ್ಧ ರೈತರು, ಕನ್ನಡಪರ ಸಂಘಟನೆಗಳು ಮತ್ತು ವಿರೋಧ ಪಕ್ಷಗಳು ಸಿಡಿದೆದ್ದಿವೆ. ಕಾವೇರಿ ವಿಚಾರವಾಗಿ ಸರ್ಕಾರದ ವಿರುದ್ಧ ಹಳೇ ಮೈಸೂರು ಭಾಗ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿದಡೆ ಜನರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಇನ್ನು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ ಸೇರಿದಂತೆ ವಿವಿಧ ಸಂಘಟನೆಗಳು ಕರ್ನಾಟಕ ಬಂದ್ (Karnataka Bandh) ಗೆ ಕರೆ ನೀಡಿವೆ. ಈ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ (G Parameshwara) ಮಾತನಾಡಿ ಪ್ರತಿಭಟನೆ ಮಾಡೋದಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ ಬಂದ್‌ಗೆ ಅವಕಾಶವಿಲ್ಲ ಎಂದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಯಾವ ಸಂಘಟನೆಗಳು ಬಂದ್‌ಗೆ ಕರೆ ಕೊಟ್ಟಿವೆಯೋ ಅವರಿಗೆ ತಿಳಿಸುತ್ತಿದ್ದೇನೆ, ಕೋರ್ಟ್ ಕೂಡ ಹೇಳಿದೆ, ಯಾವುದೇ ಬಂದ್ ಮಾಡುವಂತಿಲ್ಲ. ಇದನ್ನ ಮೀರಿ ಬಂದ್ ಮಾಡಿದರೇ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು. ಯಾವ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ನಿರ್ದೇಶನ ಕೊಡುವ ಅಗತ್ಯವಿಲ್ಲ ಎಂದರು.
ಸೆ.26 ರಂದು ಬೆಂಗಳೂರು ಬಂದ್ ಮಾಡಿ 1500 ರಿಂದ 2000 ಕೋಟಿ ರೂ. ನಷ್ಟ ಆಗಿದೆ. ಈಗ ಮತ್ತೆ ಬಂದ್ ಮಾಡಿದರೆ ಆರ್ಥಿಕ ಸಮಸ್ಯೆ ಆಗಲಿದೆ. ಮೊದಲೇ ಮಳೆ ಇಲ್ಲದ ಕಾರಣ ಸಮಸ್ಯೆ ಉಂಟಾಗಿದೆ. ಇದರ ನಡುವೆ ಬಂದ್ ಮಾಡಿದರೇ ಇನ್ನಷ್ಟು ಸಮಸ್ಯೆ ಆಗಲಿದೆ. ಇದನ್ನೆಲ್ಲ ಸಂಘಟನೆಯವರು ತಿಳಿದುಕೊಳ್ಳಬೇಕು. ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು ಪ್ರತಿಭಟನೆ ಮಾಡಲಿ. ಆದರೆ ಬಂದ್ ಮಾಡಿದರೇ ಕಾನೂನು ಕ್ರಮ ಆಗಲಿದೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಸೆ.29ರ ಕರ್ನಾಟಕ ಬಂದ್‌ಗೆ ಬೆಂಬಲ ಕೊಟ್ಟ ಸಂಘಟನೆಗಳು ಯಾವುವು? ಇಲ್ಲಿದೆ ಪಟ್ಟಿ
ಕಾವೇರಿ ನೀರು ವಿಚಾರದಲ್ಲಿ ರಾಜ್ಯದ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ. ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ, ಅದಕ್ಕೆ ಅಡ್ಡಿ ಮಾಡಲ್ಲ. ಕಾನೂನಿನ ಮಿತಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು. ತಮಿಳುನಾಡಿನ ಜೊತೆ ಯಾವುದೇ ಹೊಂದಾಣಿಕೆ ಮಾಡಿಕೊಂಡಿಲ್ಲ. ಕಾವೇರಿ ನದಿ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಬಿಜೆಪಿ, ಜೆಡಿಎಸ್ ಹೊಸದಾಗಿ ಮದುವೆ ಆಗಿವೆ. ಬಿಜೆಪಿಯವರು ಸರ್ಕಾರವನ್ನು ದೂಷಿಸುವುದರಿಂದ ಪ್ರಯೋಜನವಿಲ್ಲ. ವಿಪಕ್ಷಗಳು ರಾಜ್ಯ ಸರ್ಕಾರಕ್ಕೆ ಸಹಕಾರ ನೀಡುವ ಕೆಲಸ ಮಾಡಬೇಕು ಎಂದು ವಾಗ್ದಾಳಿ ಮಾಡಿದರು.
ಸೆ.29 ರಂದು ಯಾವುದೇ ಕಾರಣಕ್ಕೂ ಬಲವಂತವಾಗಿ ಬಂದ್ ಮಾಡುಸುವಂತಿಲ್ಲ. ಸಾರ್ವಜನಿಕರಿಗೆ ತೊಂದರೆ ಕೊಟ್ಟರೆ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಈಗಾಗಲೇ ಎಲ್ಲಾ ಎಸ್‌ಪಿ ಮತ್ತು ಡಿಸಿಪಿಗಳಿಗೆ ಸೂಚಿಸಲಾಗಿದೆ. ಶನಿವಾರದ ಬಂದ್‌ಗೆ ಸಕಲ ಸಿದ್ದತೆಯನ್ನ ಕೈಗೊಳ್ಳಲಾಗಿದೆ. ಬಲವಂತವಾಗಿ ಅಂಗಡಿ ಮುಗಟ್ಟಗಳನ್ನ ಬಂದ್ ಮಾಡಿಸಿದ್ರೆ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಎಚ್ಚರಿಕೆ ಕೊಟ್ಟರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.