AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಕ್ತ ಕೊಟ್ಟೇವು ನೀರು ಕೊಡೆವು!: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ

“ರಕ್ತ ಕೊಟ್ಟೇವು ನೀರು ಕೊಡೆವು!”: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ

ಅಕ್ಷಯ್​ ಪಲ್ಲಮಜಲು​​
|

Updated on:Jul 29, 2026 | 9:37 AM

Share

ಕಾವೇರಿ ನಿಯಂತ್ರಣ ಸಮಿತಿಯು ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ಸ್‌ ನೀರು ಬಿಡಲು ಆದೇಶಿಸಿದ ನಂತರ ಕರ್ನಾಟಕದಲ್ಲಿ ಭಾರೀ ಆಕ್ರೋಶ ಭುಗಿಲೆದ್ದಿದೆ. ಮಳೆಯ ಕೊರತೆಯಿಂದ ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ. ರೈತರ ಹಿತಾಸಕ್ತಿ ಕಾಪಾಡುವಂತೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಎಚ್ಚರಿಕೆ ನೀಡಿವೆ.

ಬೆಂಗಳೂರು, ಜು.29: ಕಾವೇರಿ ನಿಯಂತ್ರಣ ಸಮಿತಿ (CWRC) ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ಸ್‌ ಕಾವೇರಿ ನೀರನ್ನು 15 ದಿನಗಳ ಕಾಲ ಹರಿಸುವಂತೆ ನೀಡಿರುವ ಆದೇಶವು ಕರ್ನಾಟಕದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಮಳೆ ಕೊರತೆ ಮತ್ತು ಭೀಕರ ಬರಗಾಲದಿಂದ ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಈ ಆದೇಶವು “ಗಾಯದ ಮೇಲೆ ಬರೆ ಎಳೆದಂತಿದೆ” ಎಂದು ರೈತರು ಮತ್ತು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಮಂಡ್ಯ, ಮೈಸೂರು ಮತ್ತು ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕನ್ನಡ ಸಂಘಟನೆಗಳು ಮತ್ತು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ನಿನ್ನೆ ಪಂಜಿನ ಮೆರವಣಿಗೆ ನಡೆಸಿ, ಟೈರ್‌ಗಳಿಗೆ ಬೆಂಕಿ ಹಚ್ಚುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಕೃಷಿ ಚಟುವಟಿಕೆಗಳಿಗೆ ನೀರು ಇಲ್ಲದಿದ್ದರೂ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವುದು ಸರಿಯಲ್ಲ ಎಂದು ರೈತರು ಪ್ರಶ್ನಿಸಿದ್ದಾರೆ. ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿದ್ದು, ಕೇವಲ 17 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಇದರಲ್ಲಿ 5 ಟಿಎಂಸಿ ಡೆಡ್ ಸ್ಟೋರೇಜ್ ಆಗಿದ್ದು, ಕುಡಿಯುವ ನೀರಿಗೂ ತೀವ್ರ ಅಭಾವ ಎದುರಾಗಲಿದೆ. ಈ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವುದು ರಾಜ್ಯದ ರೈತರಿಗೆ ಮರಣ ಶಾಸನ ಎಂದು ಹೇಳಲಾಗಿದೆ. ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಎಚ್ಚರಿಕೆ ನೀಡಿವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jul 29, 2026 09:35 AM

Follow Us