ಯೋಗೀಶಗೌಡ ಹತ್ಯೆ ಪ್ರಕರಣ: ಸಿಬಿಐ ವಿಚಾರಣೆಗೆ ತತ್ತರಿಸಿದ ವಿನಯ ಕುಲಕರ್ಣಿ ಆಪ್ತ

ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ನಟರಾಜ ತತ್ತರಿಸಿ ಹೋಗಿದ್ದಾನೆ ಎನ್ನಲಾಗಿದೆ. ತನ್ನ ಧಣಿ ವಿರುದ್ಧ ಏನೇ ಹೇಳಿದರೂ ಅದು ತಪ್ಪು. ಹೀಗಾಗಿ ಏನು ಮಾಡಬೇಕು ಅನ್ನೋದೇ ನಟರಾಜನಿಗೆ ಗೊತ್ತಾಗಿಲ್ವಂತೆ.

ಯೋಗೀಶಗೌಡ ಹತ್ಯೆ ಪ್ರಕರಣ: ಸಿಬಿಐ ವಿಚಾರಣೆಗೆ ತತ್ತರಿಸಿದ ವಿನಯ ಕುಲಕರ್ಣಿ ಆಪ್ತ
ಸಿಬಿಐ ಕಚೇರಿ
Arun Belly

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 17, 2020 | 1:50 PM

ಧಾರವಾಡ: ಯೋಗೀಶಗೌಡ ಹತ್ಯೆ ಕೇಸ್‌ನ ಸಿಬಿಐ ತನಿಖೆ ಪ್ರತಿದಿನ ರೋಚಕವಾಗುತ್ತಾ ಸಾಗಿದೆ. ಸಿಬಿಐ ಅಧಿಕಾರಿಗಳು ಇಂದು ಮಾಜಿ ಸಚಿವ ವಿನಯ ಕುಲಕರ್ಣಿ ಸೋದರ, ಆಪ್ತರು ಮಾತ್ರವಲ್ಲದೇ ವಿನಯ ಅವರ ಡೇರಿ ಫಾರ್ಮ್ ನೋಡಿಕೊಳ್ಳುತ್ತಿದ್ದ ನಟರಾಜ ಹೆಸರಿನ ವ್ಯಕ್ತಿಯನ್ನು ಸಹ ವಿಚಾರಣೆಗೊಳಪಡಿಸಿದೆ.

ಯೋಗೀಶಗೌಡ ಹತ್ಯೆ ತನಿಖೆಯನ್ನು ಚುರುಕುಗೊಳಿಸಿರುವ ತನಿಖಾಧಿಕಾರಿಗಳು ವಿನಯ ಒಡೆತನದ ವಿನಯ ಡೈರಿ ಉಸ್ತುವಾರಿ ನೋಡಿಕೊಳ್ಳುವ ನಟರಾಜ್‌ನನ್ನು ವಿಚಾರಣೆ ನಡೆಸಿರುವುದು ಕುತೂಹಲ ಕೆರಳಿಸಿದೆ. ಯೋಗೀಶ್ ಹತ್ಯೆ ನಡೆದ ದಿನ ವಿನಯ ಹಾಗೂ ಬಸವರಾಜ ಮುತ್ತಗಿ ನಡುವೆ ಸಂಭಾಷಣೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದೇ ಈ ನಟರಾಜ ಎನ್ನಲಾಗಿದೆ.

ವಿನಯಗೆ ಬಹಳ ಆಪ್ತನಾಗಿರುವ ನಟರಾಜನಿಗೆ ಸಾಕಷ್ಟು ವಿಚಾರಗಳು ಗೊತ್ತಿವೆ ಎನ್ನಲಾಗಿದೆ. ಅದರಲ್ಲೂ ವಿನಯ ಕುಲಕರ್ಣಿ ಏನೇ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕೆಂದರೂ ಡೈರಿಯಲ್ಲಿಯೇ ಕುಳಿತು ಚರ್ಚೆ ನಡೆಸುತ್ತಿದ್ದರಂತೆ. ಹೀಗಾಗಿ ಡೈರಿಯಲ್ಲಿ ನಡೆಯೋ ಒಂದೊಂದು ವಿಚಾರಕ್ಕೂ ನಟರಾಜ ಸಾಕ್ಷಿಯಾಗಿದ್ದಾನೆ. ಅಲ್ಲದ, ಡೈರಿಗೆ ಯಾರೇ ಬಂದರೂ ವಿನಯಗಿಂತ ಮೊದಲು ನಟರಾಜನನ್ನೇ ಭೇಟಿಯಾಗಬೇಕೆನ್ನುವ ಅಲಿಖಿತ ನಿಯಮ ಜಾರಿಯಲ್ಲಿತ್ತಂತೆ. ಈ ಸಂಗತಿಗಳನ್ನೆಲ್ಲ ಪತ್ತೆ ಮಾಡಿರುವ ಸಿಬಿಐ ಅಧಿಕಾರಿಗಳು ನಟರಾಜನನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆಂದು ಗೊತ್ತಾಗಿದೆ.

ಸಿಬಿಐ ಅಧಿಕಾರಿಗಳು ಸುಮಾರು ಗಂಟೆ ಡ್ರಿಲ್ ಮಾಡಿದ್ದಾರೆ. ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ನಟರಾಜ ತತ್ತರಿಸಿ ಹೋಗಿದ್ದಾನೆ ಎನ್ನಲಾಗಿದೆ. ತನ್ನ ಧಣಿ ವಿರುದ್ಧ ಏನೇ ಹೇಳಿದರೂ ಅದು ತಪ್ಪು. ಹೀಗಾಗಿ ಏನು ಮಾಡಬೇಕು ಅನ್ನೋದೇ ನಟರಾಜನಿಗೆ ಗೊತ್ತಾಗಿಲ್ವಂತೆ.

ಇನ್ನು ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ, ಅವರ ಪಿಎ ಪ್ರಶಾಂತ ಕೇಕರೆ, ವಿನಯ ಸಚಿವರಾಗಿದ್ದಾಗ ಆಪ್ತ ಕಾರ್ಯದರ್ಶಿಯಾಗಿದ್ದ ಸೋಮು ನ್ಯಾಮಗೌಡ, ವಿಜಯ ಕುಲಕರ್ಣಿಯ ಬಿಸಿನೆನ್ ಪಾರ್ಟನರ್ ವೀರೇಶ್ ಕುಲಕರ್ಣಿ, ಬಸವರಾಜ ಮುತ್ತಗಿಯನ್ನು ಮೊದಲಾಚವರನ್ನು ಸಹ ಇಂದು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಇವರಲ್ಲದೆ ಮಂಡ್ಯ ಮೂಲದವರಾಗಿದ್ದು ಪ್ರಕಾಶ ಹಾಗೂ ಸುರೇಶ ಎನ್ನುವವರನ್ನು ಕೂಡ ಇಂದು ವಿಚಾರಣೆಗೊಳಪಡಿಸಲಾಗಿದೆ ಇವರು ಕೂಡ ವಿನಯ ಕುಲಕರ್ಣಿ ಬಸವರಾಜ ಮುತ್ತಗಿ ಹತ್ಯೆಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳು ಎನ್ನಲಾಗಿದೆ.

ಇನ್ನು ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಪ್ರಕರಣದಲ್ಲಿ ಬಂಧಿತನಾಗಿರೋ ಚಂದ್ರಶೇಖರ ಇಂಡಿಯನ್ನು ನ್ಯಾಯಾಲಯ ಎರಡು ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿದೆ. ವಿನಯ ಕುಲಕರ್ಣಿ ಸೋದರಮಾವನೇ ಯೋಗೀಶ್ ಹಂತಕರಿಗೆ ಕಂಟ್ರಿ ಪಿಸ್ತೂಲು ತಂದು ಕೊಟ್ಟಿದ್ದ ವಿಷಯವನ್ನು ವಿಚಾರಣೆಯಲ್ಲಿ ಕಂಡುಕೊಂಡಿದ್ದಾರೆ. ಮಂಗಳವಾರದಂದು ನಡೆದ ವಿಚಾರಣೆಯಲ್ಲಿ ಇಂಡಿ ಪರ ವಕೀಲರು ಸಿಬಿಐ ಕಸ್ಟಡಿಗೆ ಆಕ್ಷೇಪ ವ್ಯಕ್ತಪಡಿಸಿ, ತಕರಾರು ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ಇಂದು ನಡೆಸಿದ ಕೋರ್ಟ್ ಇಂಡಿಯನ್ನು ಎರಡು ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿತು. ಡಿಸೆಂಬರ್ 17 ರ ಸಂಜೆ ಐದು ಗಂಟೆಯೊಳಗೆ ಇಂಡಿಯನ್ನು ಮರಳಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸಿಬಿಐಗೆ ಕೋರ್ಟ್ ಸೂಚಿಸಿತು.

ಈ ಎರಡು ದಿನಗಳಲ್ಲಿ ಸಿಬಿಐ ಮತ್ತಿನ್ಯಾವ ಹೊಸ ಸಂಗತಿಗಳನ್ನು ಇಂಡಿಯ ಬಾಯಿಯಿಂದ ಹೊರ ಹಾಕಿಸುತ್ತದೆಯೋ ಕಾದು ನೋಡಬೇಕಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada