ದಾಳಿಗೆ ಹೆದರಲ್ಲ, ಕದ್ದು ಓಡಿಹೋಗುವ ಜಾಯಮಾನ ನನ್ನದಲ್ಲ: ಡಿಕೆ ಶಿವಕುಮಾರ
ಇಂದು ಬೆಳಗ್ಗೆಯಿಂದ ಸಾಯಂಕಾಲದವರೆಗೆ ನಡೆದ ಸಿಬಿಐ ದಾಳಿ ಮತ್ತು ಶೋಧದ ನಂತರ ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿಕೆ ಶಿವಕುಮಾರ್, ಉತ್ತರ ಪ್ರದೇಶದ ಹತ್ರಾಸ್ನಲ್ಲಿ ನಡೆದ ಬರ್ಬರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ಒಂದೇ ಒಂದು ಮಾತಾಡದ ರಾಜ್ಯ ಬಿಜೆಪಿ ಸರ್ಕಾರ ತನ್ನ ಮೇಲೆ ಸಿಬಿಐ ದಾಳಿ ನಡೆಸಿದೆ ಎಂದು ಹೇಳಿದರು. ‘‘2017, ಗುಜರಾತನಲ್ಲಿ ಚುನಾವಣೆ ನಡೆಯುತ್ತಿದ್ದ ಸಂದರ್ಭದಲ್ಲೂ ಇದೇ ಮನೆ ಮೇಲೆ ಐಟಿ ದಾಳಿ […]

ಇಂದು ಬೆಳಗ್ಗೆಯಿಂದ ಸಾಯಂಕಾಲದವರೆಗೆ ನಡೆದ ಸಿಬಿಐ ದಾಳಿ ಮತ್ತು ಶೋಧದ ನಂತರ ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿಕೆ ಶಿವಕುಮಾರ್, ಉತ್ತರ ಪ್ರದೇಶದ ಹತ್ರಾಸ್ನಲ್ಲಿ ನಡೆದ ಬರ್ಬರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ಒಂದೇ ಒಂದು ಮಾತಾಡದ ರಾಜ್ಯ ಬಿಜೆಪಿ ಸರ್ಕಾರ ತನ್ನ ಮೇಲೆ ಸಿಬಿಐ ದಾಳಿ ನಡೆಸಿದೆ ಎಂದು ಹೇಳಿದರು.
‘‘2017, ಗುಜರಾತನಲ್ಲಿ ಚುನಾವಣೆ ನಡೆಯುತ್ತಿದ್ದ ಸಂದರ್ಭದಲ್ಲೂ ಇದೇ ಮನೆ ಮೇಲೆ ಐಟಿ ದಾಳಿ ನಡೆದಿತ್ತು. 2019ರಲ್ಲಿ ಜಾರಿ ನಿರ್ದೇಶನಾಲಯ ನನ್ನ ವಿರುದ್ಧ ಕೇಸ್ ದಾಖಲಿಸಿ ಕೇಸ್ ಹಾಕಿ ಜೈಲಿಗೆ ಕಳಿಸಿತು. 48 ದಿನಗಳ ಕಾಲ ನಾನು ತಿಹಾರ್ ಜೈಲಿನಲ್ಲಿದ್ದೆ. ಆಗ ನಮ್ಮ ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿ ಆವರು ಮತ್ತು ಉಳಿದೆಲ್ಲ ಪಕ್ಷಗಳ ಮುಖಂಡರು ನನ್ನ ಬೆಂಬಲಕ್ಕೆ ನಿಂತರು ಮತ್ತು ನನಗಾದ ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸಿದರು,’’ ಎಂದು ಶಿವಕುಮಾರ್ ಹೇಳಿದರು.
ಪ್ರತಿಭಟನಾಕಾರರನ್ನು ಆಗಿನ ಪೊಲೀಸ್ ಕಮಿಷನರ್ ಹೆದರಿಸಿದರೂ ಜನ ಹೆದರಲಿಲ್ಲ. ಅವರಿಗೆ ತಮ್ಮ ಮೇಲಿರುವ ಪ್ರೀತಿ ಅಗಾಧವಾದ್ದು ಅಂತ ಶಿವಕುಮಾರ ಹೇಳಿದರು.
‘‘ನಮ್ಮ ಜನ ತೋರಿಸಿದ ಪ್ರೀತಿಯನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ಎಷ್ಟೋ ಮಠಮಾನ್ಯಗಳು, ಧಾರ್ಮಿಕ ಮುಖಂಡರು ನನ್ನಲ್ಲಿ ಧೀಶಕ್ತಿಯನ್ನು ತುಂಬಿದರು. ತಿಹಾರ್ ಜೈಲಿನಿಂದ ಹೊರ ಬಂದಾಗಲೂ ರಾಷ್ಟ್ರ, ರಾಜ್ಯದ ಮುಖಂಡರು, ಕಾರ್ಯಕರ್ತರ ಬೆಂಬಲ ನನಗೆ ಸಿಕ್ಕಿತು. ಕೆಲವರು ಜೈಲಿಂದ ಹೊರಬಂದವನಿಗೆ ಮೆರವಣಿಗೆ ಬೇಕಿತ್ತಾ ಎಂದರು. ಅದೇ ಪರಪ್ಪನ ಅಗ್ರಹಾರದಿಂದ ಬಂದವರು ಯಾವ ಶೈಲಿಯಲ್ಲಿ ಹೊರಬಂದರೆಂದು ಜನ ನೋಡಿದ್ದಾರೆ. ನಾನು ಅವರಂತೆ ವಿಕ್ಟರಿ ಸಿಂಬಲ್ ತೋರಿಸಿಕೊಂಡು ಬರಲಿಲ್ಲ. ಜನರಿಗೆ ಕೈ ಮುಗಿದುಕೊಂಡು ಬಂದಿದ್ದೆ. ಅದಾದ ಬಳಿಕ ನನ್ನನ್ನು ಕೆಪಿಸಿಸಿ ಅಧ್ಯಕ್ಷ ಮಾಡಲಾಯಿತು,’’ ಎಂದು ಕೆಪಿಸಿಸಿ ಅಧ್ಯಕ್ಷ ಹೇಳಿದರು.
ಅವೈಜ್ಞಾನಿಕವಾಗಿ ಲಾಕ್ಡೌನ್ ಮಾಡಿದಾಗ ತಮ್ಮ ಪಕ್ಷ ಅದನ್ನು ವಿರೋಧಿಸದೆ ಒಪ್ಪಿಕೊಂಡಿತು ಅಂತ ಸುದ್ದಿಗೋಷ್ಠಿಯಲ್ಲಿ ಶಿವಕುಮಾರ್ ಹೇಳಿದರು.
‘‘ದೇಶದಾದ್ಯಂತ ಜನ ಕೊರೊನಾದಿಂದ ಬಳಲುತ್ತಿದ್ದಾರೆ, ಏಕಾಏಕಿ ಲಾಕ್ಡೌನ್ ಮಾಡಿದಾಗ ನಾವು ಒಪ್ಪಿಕೊಂಡು ಎಲ್ಲ ರೀತಿಯ ಸಹಕಾರ ಕೊಟ್ಟೆವು. ಆದರೆ ಕ್ರಮಬದ್ಧವಲ್ಲದ ಲಾಕ್ಡೌನ್ನಿಂದ ರೈತರು, ಕೃಷಿಕರು, ಬೀದಿ ಬದಿಯ ವ್ಯಾಪಾರಿಗಳು ಸೇರಿದಂತೆ ಕೋಟ್ಯಾಂತರ ಜನ ಹಸಿವಿನಿಂದ ಬಳಲುವಂತಾಯಿತು. ಕೇಂದ್ರ ಸರ್ಕಾರ ಘೋಷಿಸಿದ ರೂ. 20 ಲಕ್ಷ ಕೋಟಿ ಹಣ ಎಲ್ಲಿ ಹೋಯ್ತು? ರಾಜ್ಯ ಸರ್ಕಾರ ಪ್ರಕಟಿಸಿದ ರೂ. 1,700 ಕೋಟಿ ಹಣ ಜನರಿಗೆ ಇನ್ನೂ ತಲುಪಿಲ್ಲ. ಸರ್ಕಾರದ ಹಣ ಬಳಸಿಕೊಂಡು ಬಿಜೆಪಿ ಪಕ್ಷ ಕಟ್ಟುತ್ತಿದೆ,’’ ಎಂದು ಶಿವಕುಮಾರ್ ನೇರವಾಗಿ ಆರೋಪಿಸಿದರು.
ಸಿಬಿಐ ದಾಳಿಗಳಿಂದ ತಾನು ಹೆದರುವುದಿಲ್ಲ, ಕಂಗೆಡುವುದಿಲ್ಲ ಮತ್ತು ಎಲ್ಲೂ ಓಡಿಹೋಗುವುದಿಲ್ಲ ಎಂದು ಶಿವಕುಮಾರ್ ಹೇಳಿದರು.
‘‘ಸಿಬಿಐನವರು ಯಾವಾಗ ಕರೆದರೂ ವಿಚಾರಣೆಗೆ ಹಾಜರಾಗುತ್ತೇನೆ. ಅವರು ತನಿಖೆ ಮುಂದುವರಿಸಲಿ, ನನಗೆ ಯಾವ ಪ್ರಶ್ನೆಯನ್ನಾದರೂ ಕೇಳಲಿ, ಸಮರ್ಥವಾದ ಉತ್ತರ ನೀಡುತ್ತೇನೆ, ಕದ್ದು ಓಡಿ ಹೋಗುವ ಜಾಯಮಾನ ನನ್ನದಲ್ಲ,’’ ಎಂದು ಶಿವಕುಮಾರ್ ಹೇಳಿದರು.
ಸಿಬಿಐ ದಾಳಿಗೆ ರಾಜ್ಯದ ಮುಖ್ಯಮಂತ್ರಿಗಳು ಅನುಮತಿ ನೀಡಿದ್ದಾರೆಂದು ಶಿವಕುಮಾರ್ ಆರೋಪಿಸಿದರು.
‘‘ಸಿಬಿಐ ದಾಳಿಗೆ ಅನುಮತಿ ಕೊಟ್ಟಿರುವುದು ರಾಜ್ಯದ ಮುಖ್ಯಮಂತ್ರಿಗಳು, ಅಡ್ವೊಕೇಟ್ ಜನರಲ್ ಹೇಳಿದರೂ ಒಪ್ಪದೆ ಅನುಮತಿ ನೀಡಿದ್ದಾರೆ. ನನ್ನ ನಿವಾಸ, ಕಚೇರಿಗಳ ಮೇಲಿನ ಸಿಬಿಐ ದಾಳಿ ರಾಜಕೀಯ ಪ್ರೇರಿತವಾಗಿದೆ. ಉತ್ತರ ಪ್ರದೇಶದ ಘಟನೆ ಬಗ್ಗೆ ತುಟಿ ಬಿಚ್ಚದ ಇವರು, ಚುನಾವಣೆ ವೇಳೆ ಗಮನ ಬೇರೆಡೆ ಸೆಳೆಯಲು ದಾಳಿ ನಡೆಸಿದ್ದಾರೆ,’’ ಎಂದು ಶಿವಕುಮಾರ್ ಹೇಳಿದರು.