ಗಾಯಗೊಂಡ ಗೋವಿಗೆ ಅನಾಥಾಶ್ರಮದಲ್ಲಿ ನಡಿಗೆ ಯಂತ್ರ ಹಾಗೂ ಸೀಮಂತ ಶಾಸ್ತ್ರ!

ಉಡುಪಿಯ ಪರ್ಕಳದ ‘ಹೊಸಬೆಳಕು’ ಆಶ್ರಮದ ವಾಸಿಗಳು ತಮ್ಮ ಕತ್ತಲೆ ಜಗತ್ತಿನಿಂದ ಈ ಆಶ್ರಮದಲ್ಲೇ ಬೆಳಕು ಕಂಡವರು. ಅವರೆಲ್ಲರೂ ಸೇರಿ ಒಂದು ಅಪೂರ್ವ ಸೀಮಂತ ಶಾಸ್ತ್ರ ಮಾಡಿದ್ದಾರೆ. ಮಗಳು ಗೌರಿಗೆ ಮಂಗಳಾರತಿ ಬೆಳಗಿದ್ದಾರೆ. ಯಾರು ಈ ಗೌರಿ ಗೊತ್ತಾ? ಆ ಮುದ್ದು ಗೌರಿಯ ಕುತೂಹಲ ಕೆರಳಿಸುವ ಕಥೆಯೇ ಇದೆ. ಇಲ್ಲಿದೆ ಓದಿ ಮಾಹಿತಿ.

ಗಾಯಗೊಂಡ ಗೋವಿಗೆ ಅನಾಥಾಶ್ರಮದಲ್ಲಿ ನಡಿಗೆ ಯಂತ್ರ ಹಾಗೂ ಸೀಮಂತ ಶಾಸ್ತ್ರ!
ಗರ್ಭಿಣಿ ಹಸು(ಗೌರಿ) ಸೀಮಂತ ಶಾಸ್ತ್ರ
Follow us
shruti hegde
| Updated By: ಸಾಧು ಶ್ರೀನಾಥ್​

Updated on:Jan 11, 2021 | 3:33 PM

ಬೆಂಗಳೂರು: ಅದೊಂದು ಅಪರೂಪದಲ್ಲಿ ಅಪರೂಪದ ಕಾರ್ಯಕ್ರಮ. ಬರೀ ಅನಾಥರಿಂದಲೇ ತುಂಬಿರುವ ಅನಾಥಾಶ್ರಮದಲ್ಲಿ, ನಾಳೆಯ ತಮ್ಮ ಬದುಕಿನ ಬಗ್ಗೆಯೇ ಸಂದಿಗ್ಧತೆ ಇದ್ದರೂ ಗಾಯಗೊಂಡ ಅನಾಥ ಹಸುವಿಗೆ ಸೀಮಂತ ಶಾಸ್ತ್ರ ಮಾಡಿದ್ದಾರೆ ಹೃದಯವಂತರು. ಅವರಾರಿರಬಹುದು ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ.

ಉಡುಪಿಯ ಪರ್ಕಳದ ‘ಹೊಸ ಬೆಳಕು’ ಆಶ್ರಮದ ವಾಸಿಗಳು ತಮ್ಮ ಕತ್ತಲೆ ಜಗತ್ತಿನಿಂದ ಈ ಆಶ್ರಮದಲ್ಲೇ ಬೆಳಕು ಕಂಡವರು. ಅವರೆಲ್ಲರೂ ಸೇರಿ ಒಂದು ಅಪೂರ್ವ ಸೀಮಂತ ಶಾಸ್ತ್ರ ಮಾಡಿದ್ದಾರೆ. ಮಗಳು ಗೌರಿಗೆ ಮಂಗಳಾರತಿ ಬೆಳಗಿದ್ದಾರೆ. ಯಾರು ಈ ಗೌರಿ ಗೊತ್ತಾ? ಆ ಮುದ್ದು ಗೌರಿಯ ಕುತೂಹಲ ಕೆರಳಿಸುವ ಕಥೆಯೇ ಇದೆ. ಇಲ್ಲಿದೆ ಓದಿ ಮಾಹಿತಿ.

ಯಾರಿವಳು ಗೌರಿ?

ಗೌರಿ ಎಂದರೆ ಮುಗ್ಧ ಮನಸ್ಸಿನ ಮುದ್ದು ಹಸು. ಕಾಲಲ್ಲಿ ಬಲವಿಲ್ಲದ, ಕುಂಟುತ್ತಾ ಬರುವ ಹಸುವಿಗೆ ಆಶ್ರಮ ವಾಸಿಗಳು ಗೌರಿ ಎಂಬುದಾಗಿ ನಾಮಕರಣ ಮಾಡಿದ್ದಾರೆ. ಮಣಿಪಾಲ ಜಿಲ್ಲಾಡಳಿತ ಕಚೇರಿ ಬಳಿಯಲ್ಲಿ ಕಳೆದ ಇಪ್ಪತ್ತು ದಿನಗಳ ಹಿಂದೆ, ಅಪಘಾತದಿಂದ ಗಂಭೀರ ಗಾಯಗೊಂಡ ಹಸು ಪತ್ತೆಯಾಗಿತ್ತು. ವಾರಸುದಾರರು ಇಲ್ಲದ ಇದನ್ನು ಅಸಹಾಯಕ ಸ್ಥಿತಿಯಲ್ಲಿ ಕಂಡವರು, ಜಿಲ್ಲಾನಾಗರಿಕ ಸಮಿತಿಗೆ ಮಾಹಿತಿ ನೀಡಿದರು. ತಕ್ಷಣ ಗೋವನ್ನು ರಕ್ಷಿಸಿ, ಹೊಸ ಬೆಳಕು ಆಶ್ರಮದಲ್ಲಿ ಆಶ್ರಯ ಒದಗಿಸಿದ್ದರು.

ಹಸು ಗೌರಿ

ಗಾಯಾಳು ಹಸುವಿಗೆ ನಡಿಗೆ ಯಂತ್ರ:

ಆಶ್ರಮ ಸಂಚಾಲಕ ವಿನಯಚಂದ್ರ ಅವರು ಗಂಭೀರ ಸ್ಥಿತಿಯಲ್ಲಿದ್ದ ಹಸುವಿಗೆ ಚಿಕಿತ್ಸೆ ನೀಡಿ, ಆರೈಕೆ ಮಾಡಿಸಿದ್ದಾರೆ. ನಡೆಯಲಾಗದ ಸ್ಥಿತಿಯಲ್ಲಿದ್ದ ಹಸುವಿಗೆ ಬೇಕಾಗುವಂತಹ ‘ನಡಿಗೆ ಯಂತ್ರ’ವನ್ನು ಅಳವಾಡಿಸಿ ಗೌರಿ ಮತ್ತೆ ನಡೆದಾಡುವಂತೆ ಮಾಡಿದ್ದಾರೆ. ಇದಲ್ಲದೇ, ಪಕ್ಕಾ ಉಡುಪಿಯ ಸಂಪ್ರದಾಯದಂತೆ ಶಾಸ್ತ್ರಬದ್ಧವಾಗಿ ಗೌರಿಯ ಸೀಮಂತ ನಡೆಸಲಾಗಿದೆ.

ಗೌರಿಯ ಸೀಮಂತ ಶಾಸ್ತ್ರ:

ಗೌರಿಯನ್ನು ಸ್ನಾನ ಮಾಡಿಸಿದ ಬಳಿಕ, ಅಲಂಕಾರಗೊಳಿಸಿದ ನಡಿಗೆ ಯಂತ್ರದ ಸಹಾಯದಿಂದ ಮಂಟಪಕ್ಕೆ ಕರೆತರಲಾಯಿತು. ನಂತರ ಹಸಿರು ಬಣ್ಣದ ಸೀರೆ ಉಡಿಸಿ, ರವಿಕೆ ಕಣ, ಅಕ್ಕಿ, ತೆಂಗಿನಕಾಯಿ ಮೊದಲಾದ ಸಾಮಗ್ರಿಗಳೊಂದಿಗೆ ಮಡಿಲು ತುಂಬಿಸಲಾಯಿತು. ಮೊಳಕೆ ಬರಿಸಿದ ನವಧಾನ್ಯಗಳು, ವಿಧವಿಧ ಹಿಂಡಿಗಳು, ಹಾಗೂ ಬಯಕೆಯ ಖಾದ್ಯಗಳನ್ನು ಹಸುವಿಗೆ ಬಡಿಸಲಾಯಿತು. ಪಂಚ ಮುತ್ತೈದೆಯರು ಆರತಿ ಬೆಳಗಿದರೆ, ಆಶ್ರಮದ ಸದಸ್ಯರು ಮನೆ ಮಗಳ ಸಂತೋಷದಲ್ಲಿ ಭಾಗಿಯಾಗಿ ಮನತುಂಬಿ ಹರಸಿದ್ದಾರೆ.

ಗೌರಿಗೆ(ಹಸು) ಸೀಮಂತ ಶಾಸ್ತ್ರ

Published On - 3:32 pm, Mon, 11 January 21