ನವದೆಹಲಿ, ಆಗಸ್ಟ್ 1: ಅನ್ನಭಾಗ್ಯ ಯೋಜನೆಯಡಿ ಕರ್ನಾಟಕ ಸರ್ಕಾರದ ಪಾಲಿನ ಉಚಿತ 5 ಕೆಜಿ ಅಕ್ಕಿ ನೀಡಲು ಕೇಂದ್ರದಿಂದ ಅಕ್ಕಿ ದೊರೆಯುತ್ತಿಲ್ಲ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಸಚಿವರು ಆರೋಪಿಸುತ್ತಲೇ ಬಂದಿದ್ದಾರೆ. ದುಡ್ಡು ಕೊಟ್ಟರೂ ಅಕ್ಕಿ ಕೊಡಲು ಕೇಂದ್ರ ಸರ್ಕಾರ ಸಿದ್ಧವಿಲ್ಲ. ಬಡವರ ಅಕ್ಕಿ ವಿಚಾರದಲ್ಲೂ ರಾಜಕೀಯ ಮಾಡುತ್ತಿದೆ ಎಂಬ ಆರೋಪ ನಿರಂತರ ಕೇಳಿಬಂದಿತ್ತು. ಆದರೆ, ಕೇಂದ್ರ ಸರ್ಕಾರ ಬೇರೆಯದೇ ಕಾರಣ ನೀಡಿ ತನ್ನ ನಡೆಯನ್ನು ಸಮರ್ಥಿಸಿಕೊಂಡಿತ್ತು. ಇದೀಗ ಮಹತ್ವದ ಬೆಳವಣಿಗೆಯಲ್ಲಿ, ರಾಜ್ಯಕ್ಕೆ ಅಕ್ಕಿ ನೀಡಲು ಕೇಂದ್ರ ಸಿದ್ಧವಾಗಿದೆ ಎಂದು ಆಹಾರ ಸಚಿವ ಪ್ರಲ್ಹಾದ್ ಜೋಶಿ ಘೋಷಿಸಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಅಕ್ಕಿಕೊಡಲು ಕೇಂದ್ರ ಸಿದ್ಧವಿದೆ. ಮನವಿ ಬಂದರೆ ಹೆಚ್ಚುವರಿ ಅಕ್ಕಿ ಕೊಡಲಿದ್ದೇವೆ. ಕೆಜಿಗೆ 28ರೂ.ನಂತೆ ನಾವು ಅಕ್ಕಿ ಕೊಡಲು ಸಿದ್ಧರಿದ್ದೇವೆ. ಎಷ್ಟು ಬೇಕಾದರೂ ಅಕ್ಕಿಕೊಡಲಿದ್ದೇವೆ ಎಂದು ಹೇಳಿದ್ದಾರೆ.
ಈ ಹಿಂದೆ ರಾಜ್ಯಕ್ಕೆ ಅಕ್ಕಿ ಕೊಡಲು ಕೇಂದ್ರ ಸುತರಾಂ ಒಪ್ಪಿರಲಿಲ್ಲ. ಇರುವ ಸ್ಟಾಕನ್ನೆಲ್ಲ ರಾಜ್ಯಕ್ಕೆ ಮಾರಾಟ ಮಾಡಿ ಖಾಲಿ ಮಾಡಿದರೆ ತುರ್ತು ಸಂದರ್ಭಗಳಲ್ಲಿ ವಿತರಣೆ ಮಾಡಲು ಕಷ್ಟ ಎಂಬುದು ಕೇಂದ್ರದ ವಾದವಾಗಿತ್ತು.
ಅಕ್ಕಿ ನೀಡುವಂತೆ ಕರ್ನಾಟಕ ಸರ್ಕಾರ ಹಲವು ಬಾರಿ ಕೇಂದ್ರಕ್ಕೆ ಮನವಿ ಮಾಡಿತ್ತು. ರಾಜ್ಯದಿಂದ ಸಚಿವ ಕೆಹೆಚ್ ಮುನಿಯಪ್ಪ ಖುದ್ದು ದೆಹಲಿಗೆ ಬೇಟಿ ಮಾಡಿ ಕೇಂದ್ರ ಸಚಿವರ ಜತೆ ಮಾತುಕತೆಯನ್ನೂ ನಡೆಸಿದ್ದರು. ಆದರೆ, ಪ್ರಯೋಜನವಾಗಿರಲಿಲ್ಲ.
ನಂತರ ರಾಜ್ಯ ಸರ್ಕಾರದ ಪಾಲಿನ ಅಕ್ಕಿಯ ಬದಲು ಅದರ ಮೊತ್ತವನ್ನು ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ನೀಡಲು ಆರಂಭಿಸಲಾಗಿತ್ತು. ಇದೀಗ ಕೇಂದ್ರದಿಂದ ಅಕ್ಕಿ ದೊರೆತರೆ ರಾಜ್ಯ ಸರ್ಕಾರವು ಫಲಾನುಭವಿಗಳಿಗೆ ಅಕ್ಕಿಯನ್ನೇ ವಿತರಿಸಬಹುದಾಗಿದೆ.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆ ಅಂದುಕೊಂಡಂತೆಯೇ ನಡೆಯಲಿದೆ ಎಂದು ಪ್ರಲ್ಹಾದ್ ಜೋಶಿ ತಿಳಿಸಿದರು. ಪಾದಯಾತ್ರೆಗೆ ಜೆಡಿಎಸ್ ಬೆಂಬಲವಿಲ್ಲದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹೆಚ್ಡಿ ಕುಮಾರಸ್ವಾಮಿ ಜತೆ ಮಾತುಕತೆ ಮಾಡಿ ಪಾದಯಾತ್ರೆ ನಡೆಸಲಿದ್ದೇವೆ. ಪಕ್ಷದ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಜೊತೆಯೂ ಮಾತನಾಡುತ್ತವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ, ಬಿಜೆಪಿ ಪಾದಯಾತ್ರೆಗೆ ಬೆಂಬಲವಿಲ್ಲ; ಹೆಚ್ಡಿ ಕುಮಾರಸ್ವಾಮಿ
ಜೆಡಿಎಸ್ ಅನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಕಾರಣ ಪಾದಯಾತ್ರೆಗೆ ಬೆಂಬಲ ನೀಡುವುದಿಲ್ಲ. ಚುನಾವಣೆ ಸಂದರ್ಭ ಮೈತ್ರಿ ಬೇರೆ, ರಾಜಕಾರಣ ಬೇರೆ ಎಂದು ಕುಮಾರಸ್ವಾಮಿ ಬುಧವಾರ ಹೇಳಿದ್ದರು.
ಮುಖ್ಯಮಂತ್ರಿಗಳ ವಿರುದ್ಧದ ತನಿಖೆ ವಿಚಾರವಾಗಿ ಕಾಂಗ್ರೆಸ್ ನಾಯಕರು, ಸಚಿವರಿಗೆ ಜೋಶಿ ತಿರುಗೇಟು ನೀಡಿದ್ದಾರೆ. ರಾಜ್ಯಪಾಲರ ಬಗ್ಗೆ ಮಾತನಾಡಲು ಕಾಂಗ್ರೆಸ್ ನಾಯಕರಿಗೆ ಹಕ್ಕಿಲ್ಲ. ಅವರು ಸಂವಿಧಾನದ ರಕ್ಷಕರು. ಗಂಭೀರ ಸ್ವರೂಪದ ಆರೋಪ ಬಂದಾಗ ತನಿಖೆಗೆ ಅನುಮತಿ ಕೊಡ್ತಾರೆ. ಕಾಂಗ್ರೆಸ್ ನಾಯಕರು ಯಾಕೆ ಭಯದಲ್ಲಿದ್ದಾರೆ? ಅವರೇನಾದ್ರು ನೇರವಾಗಿ ಜೈಲಿಗೆ ಹಾಕುತ್ತೇನೆ ಎಂದರೇ ಎಂದು ಅವರು ಪ್ರಶ್ನಿಸಿದರು.
ಅಕ್ರಮ ನಡೆದಿರುವ ಬಗ್ಗೆ ಸಿಎಂ ಒಪ್ಪಿಕೊಂಡಿದ್ದಾರೆ. ಹಿಂದೆ ನಾನು 100 ಪರ್ಸೆಂಟ್ ಸರ್ಕಾರದ ಎಂದಿದ್ದೆ. ಬಹಳ ಅಂದ್ರೆ 70-80 ಪರ್ಸೆಂಟ್ ಎಂದು ರಿಯಾಯಿತಿ ಕೊಡಬಹುದು. ಹಿಂದೆ ರಾಜ್ಯಪಾಲರನ್ನು ಕಾಂಗ್ರೆಸ್ ನಾಯಕರು ಹೊಗಳಿದ್ದರು. ಈಗ ಯಾಕೆ ತೆಗಳುತ್ತಿದ್ದಾರೆ? ಬಿಜೆಪಿ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಲಿ, ಸರ್ಕಾರ ಅವರದ್ದೇ ಇದೆ. ನಮ್ಮನ್ನು ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹಗರಣ ಇದಿದ್ದರೆ ಕಾಂಗ್ರೆಸ್ ನಾಯಕರು ರಾಜೀನಾಮೆ ನೀಡುತ್ತಿದ್ದರೇ? ನಮ್ಮ ರಾಜ್ಯ ಅಧ್ಯಕ್ಷರು ತನಿಖೆ ಮಾಡಿ ಎಂದು ಸವಾಲು ಹಾಕಿದ್ದಾರೆ ಎಂದು ಜೋಶಿ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:55 am, Thu, 1 August 24