ಆಸ್ತಿ ತೆರಿಗೆ ಪಾವತಿಗೆ ನೀಡಿದ್ದ ಗಡುವು ಅಂತ್ಯ: ಪಾವತಿಸದವರಿಗೆ ಬಡ್ಡಿ ಅಸ್ತ್ರ ಪ್ರಯೋಗಕ್ಕೆ ಬಿಬಿಎಂಪಿ ಸಜ್ಜು

ಬಿಬಿಎಂಪಿ ವ್ಯಾಪ್ತಿಯ ಆಸ್ತಿ ತೆರಿಗೆ ಬಾಕಿ ಪಾವತಿಗೆ ನೀಡಿದ್ದ ಒನ್ ಟೈಮ್ ಸೆಟಲ್​​ಮೆಂಟ್ ಅವಕಾಶ ಜುಲೈ 31ಕ್ಕೆ ಮುಕ್ತಾಯವಾಗಿದೆ. ಇನ್ನೂ ತೆರಿಗೆ ಪಾವತಿಸದವರಿಗೆ ಬಿಸಿ ಮುಟ್ಟಿಸಲು ಪಾಲಿಕೆ ಸಜ್ಜಾಗಿದೆ. ಈಗಾಗಲೇ ಸಾಕಷ್ಟು ಅವಕಾಶ ಕೊಟ್ಟರೂ ಕೂಡ ಬಾಕಿ ತೆರಿಗೆ ಕಟ್ಟದವರಿಗೆ ನಾಳೆಯಿಂದ ಬಡ್ಡಿಯ ಅಸ್ತ್ರ ಪ್ರಯೋಗಿಸಲು ಪಾಲಿಕೆ ಸಜ್ಜಾಗಿದೆ.

ಆಸ್ತಿ ತೆರಿಗೆ ಪಾವತಿಗೆ ನೀಡಿದ್ದ ಗಡುವು ಅಂತ್ಯ: ಪಾವತಿಸದವರಿಗೆ ಬಡ್ಡಿ ಅಸ್ತ್ರ ಪ್ರಯೋಗಕ್ಕೆ ಬಿಬಿಎಂಪಿ ಸಜ್ಜು
ಆಸ್ತಿ ತೆರಿಗೆ ಪಾವತಿಗೆ ನೀಡಿದ್ದ ಗಡುವು ಅಂತ್ಯ: ಪಾವತಿಸದವರಿಗೆ ಬಡ್ಡಿ ಅಸ್ತ್ರ ಪ್ರಯೋಗಕ್ಕೆ ಬಿಬಿಎಂಪಿ ಸಜ್ಜು
Follow us
| Updated By: ಗಣಪತಿ ಶರ್ಮ

Updated on:Aug 01, 2024 | 10:55 AM

ಬೆಂಗಳೂರು, ಆಗಸ್ಟ್ 1: ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ಬಾರಿಯ ಪರಿಹಾರ ಯೋಜನೆಯಡಿ (ಒನ್ ಟೈಮ್ ಸೆಟಲ್​ಮೆಂಟ್) ಬಾಕಿ ಆಸ್ತಿ ತೆರಿಗೆ ಪಾವತಿಗೆ ನೀಡಿದ್ದ ಗಡುವು ಜುಲೈ 31ರ ಬುಧವಾರ ಮುಕ್ತಾಯವಾಗಿದೆ. ಪಾಲಿಕೆ ವ್ಯಾಪ್ತಿಯ ಬಾಕಿ ತೆರಿಗೆ ವಸೂಲಿಗೆ ಸರ್ಕಾರ ನೀಡಿದ್ದ ಗಡುವು ಮುಗಿದಿದ್ದು, ಈವರೆಗೆ ಬೆಂಗಳೂರು ನಗರದಲ್ಲಿ ಓಟಿಎಸ್ ಮೂಲಕ 1 ಲಕ್ಷ ಜನರು ಮಾತ್ರ ತೆರಿಗೆ ಪಾವತಿಸಿದ್ದಾರೆ. ಇತ್ತ ಅವಕಾಶ ಕೊಟ್ಟರೂ ತೆರಿಗೆ ಕಟ್ಟದ 3 ಲಕ್ಷ ತೆರಿಗೆದಾರರಿಗೆ ಬಿಸಿ ಮುಟ್ಟಿಸಲು ಪಾಲಿಕೆ ತಯಾರಿ ನಡೆಸಿದೆ.

ಸದ್ಯ ಇಂದಿನಿಂದ (ಆಗಸ್ಟ್ 1) ದುಪ್ಪಟ್ಟು ದಂಡದ ಜೊತೆಗೆ ತೆರಿಗೆ ವಸೂಲಿ ಮಾಡಲು ಬಿಬಿಎಂಪಿ ಮುಂದಾಗಿದ್ದು, ತೆರಿಗೆದಾರರಿಗೆ ಬಾಕಿ ತೆರಿಗೆಗೆ ಅದರ ಜತೆ ದಂಡ ಕೂಡ ಬೀಳಲಿದೆ. ನೂರಕ್ಕೆ ನೂರರಷ್ಟು ದಂಡ ವಸೂಲಿ ಮಾಡಲು ಬಿಬಿಎಂಪಿ ಮುಂದಾಗಲಿದ್ದು ಜೊತೆಗೆ ಆಗಸ್ಟ್ ತಿಂಗಳಲ್ಲಿ ಮೂರು ಹಂತಗಳಲ್ಲಿ ನೋಟೀಸ್ ನೀಡಲಿದೆ.

ಮೊದಲ ನೋಟೀಸ್‌ಗೆ ಪಾವತಿಸಿದರೆ ದಂಡ ಮಾತ್ರ ವಸೂಲಿ ಆಗಲಿದೆ. ಎರಡನೇ ನೋಟೀಸ್‌ಗೆ ಪಾವತಿಸಿದರೆ ದಂಡದ ಜೊತೆಗೆ ಮೂಲ ಬಾಕಿ ತೆರಿಗೆಗೆ ಶೇ 15 ಬಡ್ಡಿ ಬೀಳಲಿದೆ. ಮೂರನೇ ನೋಟೀಸ್‌ನಲ್ಲಿ ಪಾವತಿಸಿದರೆ ದಂಡದ ಜೊತೆಗೆ ಮೂಲ ಬಾಕಿಗೆ ಶೇ 25 ಬಡ್ಡಿ ವಸೂಲಿ ಆಗಲಿದೆ. ಇದಲ್ಲದೇ ಮೂರು ನೋಟೀಸ್ ಗೂ ತೆರಿಗೆ ಪಾವತಿಸದಿದ್ದರೆ ಆಸ್ತಿ ಮುಟ್ಟುಗೋಲಿಗೆ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ.

ಆಗಸ್ಟ್​ ವರೆಗೆ ಒಟಿಎಸ್ ವಿಸ್ತರಿಸಲು ಮನವಿ

ಇತ್ತ ಒನ್ ಟೈಮ್ ಸೆಟಲ್​ಮೆಂಟ್ ಅವಕಾಶ ಮುಗಿದರೂ ದೊಡ್ಡ ದೊಡ್ಡ ವ್ಯಕ್ತಿಗಳೇ ತೆರಿಗೆ ಬಾಕಿ ಉಳಿಸಿಕೊಂಡಿರುವುದು ಬಯಲಾಗಿದ್ದು, ಒಟಿಎಸ್ ವ್ಯವಸ್ಥೆಯನ್ನು ಆಗಸ್ಟ್​​ವರೆಗೂ ವಿಸ್ತರಿಸುವಂತೆ ಒತ್ತಾಯ ಕೇಳಿಬರುತ್ತಿದೆ. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್​ಗೆ ಪತ್ರ ಬರೆದಿರುವ ಬೆಂಗಳೂರು ಹೊಟೇಲ್ ಮಾಲೀಕರ ಸಂಘ, ಒಟಿಎಸ್ ಅವಕಾಶವನ್ನ ಆಗಸ್ಟ್ ತನಕ ವಿಸ್ತರಿಸುವಂತೆ ಆಗ್ರಹ ಮಾಡಿದೆ.

ಇದನ್ನೂ ಓದಿ: ಕೊರಮಂಗಲ ಪಿಜಿಯಲ್ಲಿ ಯುವತಿ ಕೊಲೆ ಬಳಿಕ ಎಚ್ಚೆತ್ತ ಪೊಲೀಸರು, ಬೆಂಗಳೂರು ಪಿಜಿಗಳಿಗೆ ಕಠಿಣ ಮಾರ್ಗಸೂಚಿ

ಒಂದು ಲಕ್ಷ ತೆರಿಗೆ ಬಾಕಿದಾರರಿಂದ ಪಾವತಿ

ಒಟಿಎಸ್ ಮೂಲಕ ಬಿಬಿಎಂಪಿಯ ಬೊಕ್ಕಸಕ್ಕೆ 1 ಲಕ್ಷ ತೆರಿಗೆದಾರರಿಂದ ಬಾಕಿ ಹಣ ಹರಿದುಬಂದಿದ್ದು, ಕಾಯ್ದೆಯಂತೆ ಈಗ ನೀಡಿದ್ದ ಅವಕಾಶವನ್ನು ಮತ್ತೆ ವಿಸ್ತರಿಸಲ್ಲ ಎಂದು ಪಾಲಿಕೆ ಸ್ಪಷ್ಟನೆ ನೀಡಿದೆ. ಇತ್ತ ಅವಕಾಶ ಕೊಟ್ಟರೂ ಎಚ್ಚೆತ್ತುಕೊಳ್ಳದ ತೆರಿಗೆದಾರರಿಗೆ ನಾಳೆಯಿಂದ ಬಡ್ಡಿಯ ಹೊರೆ ಹೊರುವ ಸ್ಥಿತಿ ನಿರ್ಮಾಣವಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:55 am, Thu, 1 August 24