ಅಂಕೋಲ ಸಮೀಪ ರಸ್ತೆ ಅಪಘಾತ: ಕೇಂದ್ರ ಸಚಿವ ಶ್ರೀಪಾದ್ ನಾಯಕ್ಗೆ ಗಂಭೀರ ಗಾಯ, ಪತ್ನಿ ಸಾವು
ಅಂಕೋಲ ಸಮೀಪ ಸೋಮವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಶ್ರೀಪಾದ್ ನಾಯಕ್ ಅವರ ಪತ್ನಿ ವಿಜಯಾ ನಾಯಕ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕಾರವಾರ: ಅಂಕೋಲ ತಾಲ್ಲೂಕಿನ ಹೊಸಕಂಬಿ ಸಮೀಪ ಸೋಮವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯಕ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಗೋವಾ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಯಲ್ಲಾಪುರದಿಂದ ಗೋಕರ್ಣಕ್ಕೆ ಹೊರಟಿದ್ದ ಸಚಿವರಿದ್ದ ಕಾರು ಹೊಸಕಂಬಿ ಸಮೀಪ ಪಲ್ಟಿಯಾಗಿತ್ತು.
ಕಾರಿನಲ್ಲಿದ್ದ ಸಚಿವರ ಪತ್ನಿ ವಿಜಯಾ ನಾಯಕ್ ಹಾಗೂ ಸಚಿವರ ಶ್ರೀಪಾದ್ ಆಪ್ತ ಕಾರ್ಯದರ್ಶಿ ದೀಪಕ್ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಸಚಿವ ಶ್ರೀಪಾದ್ ನಾಯಕ್, ಸಾಯಿಕಿರಣ್, ತುಕಾರಾಮ್ ಪಾಟೀಲ್, ಚಂದನ್ ಯಶವಂತ್ ನಾಯ್ಕ್ ಅವರಿಗೆ ಗೋವಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಂಕೋಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸಚಿವರು ತಮ್ಮ ಪತ್ನಿ ಮತ್ತು ಆಪ್ತರೊಂದಿಗೆ ಯಲ್ಲಾಪುರದ ಗಂಟೆ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಚಿವರು, ಅಲ್ಲಿಂದ ಗೋಕರ್ಣಕ್ಕೆ ತೆರಳುತ್ತಿದ್ದರು.
ಗೋವಾ ಮುಖ್ಯಮಂತ್ರಿಯೊಂದಿಗೆ ಪ್ರಧಾನಿ ಚರ್ಚೆ ಶ್ರೀಪಾದ್ ನಾಯಕ್ ಆರೋಗ್ಯ ಸ್ಥಿತಿಯ ಬಗ್ಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಚರ್ಚಿಸಿದರು. ಸಚಿವರಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಿದರು.
ಯಡಿಯೂರಪ್ಪ ಸಂತಾಪ ಕಾರು ಅಪಘಾತದಲ್ಲಿ ಮೃತಪಟ್ಟ ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಪತ್ನಿ ವಿಜಯಾ ನಾಯಕ್ ಅವರ ಸಾವಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ. ವಿಜಯಾ ನಾಯ್ಕ್ ಅವರ ಸಾವು ಅತ್ಯಂತ ದುರದೃಷ್ಟಕರ. ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ. ಗಾಯಗೊಂಡಿರುವ ಕೇಂದ್ರಸಚಿವ ಶ್ರೀಪಾದ್ ನಾಯ್ಕ್ ಶೀಘ್ರ ಗುಣಮುಖರಾಗಲಿ. ಸಚಿವರಿಗೆ ಎಲ್ಲ ಅಗತ್ಯ ನೆರವು ನೀಡುವಂತೆ ಜಿಲ್ಲಾಡಳಿತ ಹಾಗೂ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಲ್ಹಾದ್ ಜೋಶಿ ಸಂತಾಪ ವಿಜಯಾ ನಾಯಕ್ ನಿಧನಕ್ಕೆ ಸಂತಾಪ ಸೂಚಿಸಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ಕೇಂದ್ರ ಆಯುಷ್ ಇಲಾಖೆ ಸಚಿವರಾದ ಶ್ರೀಪಾದ್ ನಾಯಕ್ ಅವರ ಪತ್ನಿ ವಿಜಯಾ ಶ್ರೀಪಾದ್ ನಾಯಕ್ ಅವರು ಅಂಕೋಲಾ ಬಳಿ ನಡೆದ ರಸ್ತೆ ಅಪಘಾತದಲ್ಲಿ ನಿಧನರಾಗಿರುವ ವಿಷಾದನೀಯ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ. pic.twitter.com/7vFoQI27hW
— Pralhad Joshi (@JoshiPralhad) January 11, 2021
ಸಚಿವ ಶ್ರೀಪಾದ ನಾಯಕ ದಂಪತಿ ಯಲ್ಲಾಪುರ ತಾಲೂಕಿನಲ್ಲಿ ಸೋಮವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಚಂದಗುಳಿ, ಕವಡಿಕೆರೆ, ಯಲ್ಲಾಪುರದ ಈಶ್ವರ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದ್ದರು.
Published On - 9:31 pm, Mon, 11 January 21