ಹುಬ್ಬಳ್ಳಿ, ನವೆಂಬರ್ 06: ರಾಜ್ಯದಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಾಂಗಾಮಿನಲ್ಲಿ ಈಗಾಗಲೇ 22,215 ಮೆಟ್ರಿಕ್ ಟನ್ ಹೆಸರುಕಾಳನ್ನು (Mung Bean) ಬೆಂಬಲ ಬೆಲೆ ಅಡಿಯಲ್ಲಿ ಖರೀದಿಸಿದ್ದು, ಕರ್ನಾಟಕದಿಂದ (Karnataka) ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹೆಸರು ಕಾಳು ಖರೀದಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಆಹಾರ ಸಾರ್ವಜನಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದರು.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿದ ಅವರು, ರಾಜ್ಯದ ರೈತರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹೆಸರು ಕಾಳು ಬೆಳೆದಿದ್ದು ಹೆಚ್ಚುವರಿಯಾಗಿ ಸುಮಾರು 16,105 ಸಾವಿರ ಮೆಟ್ರಿಕ್ ಟನ್ ಹೆಸರು ಖರೀದಿಸಲು ಕೇಂದ್ರ ಬೆಂಬಲ ಬೆಲೆ ಅಡಿಯಲ್ಲಿ ಖರೀದಿಸಲು ಮುಂದಾಗಿದೆ. ಇದರಿಂದಾಗಿ ಒಟ್ಟಾರೆಯಾಗಿ 38.320 ಮೆಟ್ರಿಕ್ ಟನ್ ಖರೀದಿಸಲು ಕೇಂದ್ರ ಒಪ್ಪಿಗೆ ನೀಡಿದೆ. ರಾಜ್ಯದ ರೈತರ ಹಿತದೃಷ್ಟಿಯಿಂದ ಪ್ರಹ್ಲಾದ್ ಜೋಶಿಯವರು ಈ ಕುರಿತು ಕೇಂದ್ರ ಕೃಷಿ ಸಚಿವರಿಗೆ ಮನವಿ ಮಾಡಿದ್ದರು.
ಇದನ್ನೂ ಓದಿ: ಸೌರಶಕ್ತಿ ಸಾಧಿಸುವ ಕನಸು ನನಸಾಗುತ್ತಿದೆ: ಅಂತರರಾಷ್ಟ್ರೀಯ ಸೌರ ಮೈತ್ರಿ ಸಭೆಯಲ್ಲಿ ಪ್ರಹ್ಲಾದ್ ಜೋಶಿ
ಈಗಾಗಲೇ ರಾಜ್ಯದಿಂದ ಒಟ್ಟು 22,215 ಮೆಟ್ರಿಕ್ ಟನ್ ಹೆಸರುಕಾಳು ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಸಲಾಗಿದೆ. ಹೆಚ್ಚುವರಿಯಾಗಿ ರೈತರು ಬೆಳೆದಿರುವ ಸುಮಾರು 16,105 ಮೆಟ್ರಿಕ್‌ಟನ್ ಖರೀದಿಸಲು ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಸಲಾಗುವ ಹೆಸರುಕಾಳಿಗೆ ಎಫ್ಎಕ್ಯೂ ಗುಣಮಟ್ಟದ ಮಾನದಂಡದಲ್ಲಿ ಕೇಂದ್ರ ಸಂಬಂಧಿತ ಸಂಸ್ಥೆಗಳು ಖರೀದಿ ಪ್ರಕ್ರಿಯೆ ಆರಂಭಿಸಲಿವೆ ಎಂದರು.
ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಭಾರತ್ ಬ್ರ್ಯಾಂಡ್ ಎರಡನೇ ಹಂತದ ಮಾರಾಟ ಆರಂಭವಾಗಿದೆ. 2023ರ ಅಕ್ಟೋಬರ್ನಲ್ಲಿ ಮೊದಲ ಹಂತ ಆರಂಭವಾಗಿತ್ತು. ಎರಡನೇ ಹಂತದ ಭಾರತ್ ಬ್ರ್ಯಾಂಡ್ ರೀಟೇಲ್ ಮಾರಾಟ ಯೋಜನೆಯಲ್ಲಿ ಕೇಂದ್ರ ಸರ್ಕಾರ ಆಹಾರ ನಿಗಮದಿಂದ 3.69 ಲಕ್ಷ ಟನ್ ಗೋಧಿ ಮತ್ತು 2.91 ಲಕ್ಷ ಟನ್ ಅಕ್ಕಿಯನ್ನು ವಿತರಿಸುತ್ತಿದೆ.
ಎರಡನೇ ಹಂತದ ಭಾರತ್ ಬ್ರ್ಯಾಂಡ್ ರೀಟೇಲ್ ಮಾರಾಟದಲ್ಲಿ ಗೋಧಿ ಹಿಟ್ಟು, ಅಕ್ಕಿ, ಜೊತೆಗೆ ಕಡಲೆಬೇಳೆ, ಹೆಸರುಬೇಳೆಯ ಮಾರಾಟವೂ ಆಗಲಿದೆ. ಕಿಲೂಗೆ 30 ರೂನಂತೆ ಐದು ಕಿಲೋ ಗೋಧಿ ಹಿಟ್ಟು ಪ್ಯಾಕೆಟ್ಗಳನ್ನು ಮಾರಾಟ ಮಾಡುತ್ತಿದೆ. ಹಾಗೆಯೇ, ಕಿಲೋಗೆ 34 ರೂಗಳಂತೆ 10 ಕಿಲೋ ಅಕ್ಕಿ ಚೀಲ ವಿತರಿಸಲಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:47 pm, Wed, 6 November 24