AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಡಾ ಹಗರಣ: 2 ಗಂಟೆ ವಿಚಾರಣೆ ಎದುರಿಸಿದ ಸಿದ್ದರಾಮಯ್ಯ, ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿ ಹಾಲಿ ಸಿಎಂ ವಿಚಾರಣೆ

ಮುಡಾ ಹಗರಣದಲ್ಲಿ ಎ1 ಆಗಿರುವ ಸಿಎಂ ಸಿದ್ದರಾಮಯ್ಯ ಇಂದು ಲೋಕಾಯುಕ್ತ ಪೊಲೀಸರ ವಿಚಾರಣೆ ಎದುರಿಸಿದರು. ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ಸುಮಾರು 2 ತಾಸು ವಿಚಾರಣೆ ಎದುರಿಸಿದ ಸಿದ್ದರಾಮಯ್ಯಗೆ ಪ್ರಶ್ನೆಗಳ ಸುರಿಮಳೆಯೇ ಎದುರಾಯಿತು. ವಿಚಾರಣೆ ಹೇಗಿತ್ತು, ಸಿಎಂ ಕೊಟ್ಟ ಉತ್ತರ ಏನು? ವಿವರ ಇಲ್ಲಿದೆ.

ಮುಡಾ ಹಗರಣ: 2 ಗಂಟೆ ವಿಚಾರಣೆ ಎದುರಿಸಿದ ಸಿದ್ದರಾಮಯ್ಯ, ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿ ಹಾಲಿ ಸಿಎಂ ವಿಚಾರಣೆ
ಸಿದ್ದರಾಮಯ್ಯImage Credit source: PTI
ದಿಲೀಪ್​, ಚೌಡಹಳ್ಳಿ
| Edited By: |

Updated on: Nov 06, 2024 | 1:00 PM

Share

ಮೈಸೂರು, ನವೆಂಬರ್ 6: ಮುಡಾ ಸೈಟ್ ಹಂಚಿಕೆ ಹಗರಣ ಪ್ರಕರಣದಲ್ಲಿ ಎ1 ಆಗಿರುವ ಸಿಎಂ ಸಿದ್ದರಾಮಯ್ಯ ಇಂದು ಲೋಕಾಯುಕ್ತ ಪೊಲೀಸರ ವಿಚಾರಣೆ ಎದುರಿಸಿದರು. ಇದರೊಂದಿಗೆ, ಕರ್ನಾಟಕದ ಇತಿಹಾಸದಲ್ಲಿ ಹಾಲಿ ಮುಖ್ಯಮಂತ್ರಿಯೊಬ್ಬರು ವಿಚಾರಣೆ ಎದುರಿಸಿದ ಮೊದಲ ವಿದ್ಯಮಾನ ದಾಖಲಾಯಿತು. ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿಗಳನ್ನು ಸುಮಾರು 2 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದರು.

ಈಗಾಗಲೇ ಪ್ರಕರಣದಲ್ಲಿ ಎ2 ಆಗಿರುವ ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ, ಭೂ ಮಾಲೀಕ ದೇವರಾಜುನನ್ನ ಮೈಸೂರಿನ ಲೋಕಾಯುಕ್ತ ಎಸ್​ಪಿ ಉದೇಶ್ ನೇತೃತ್ವದ ತಂಡ ವಿಚಾರಣೆ ನಡೆಸಿತ್ತು. ಸೈಟ್ ಹಂಚಿಕೆ ಸಂಬಂಧ ಅವರಿಂದ ಲಿಖಿತ ಉತ್ತರಗಳನ್ನ ಪಡೆದುಕೊಂಡಿತ್ತು. ಎ1 ಆಗಿರುವ ಸಿಎಂ ಸಿದ್ದರಾಮಯ್ಯ ವಿಚಾರಣೆ ಮಾತ್ರ ಬಾಕಿ ಇತ್ತು. ಹೀಗಾಗಿ ಎರಡು ದಿನಹಳ ಹಿಂದೆ ನೋಟಿಸ್ ನೀಡಿದ್ದ ಲೋಕಾಯುಕ್ತ ಪೊಲೀಸರು, ಇಂದು ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಹೀಗಾಗಿ ಇಂದು ಬೆಳಗ್ಗೆ ಮೈಸೂರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ, ಸರಿಯಾಗಿ ಬೆಳಗ್ಗೆ 10 ಗಂಟೆಗೆ ಲೋಕಾಯುಕ್ತ ಕಚೇರಿಗೆ ತಲುಪಿದರು.

ಖಾಸಗಿ ವಾಹನದಲ್ಲಿ ಎಂಟ್ರಿ

ಲೋಕಾಯುಕ್ತ ಪೊಲೀಸರ ವಿಚಾರಣೆಗೆ ಹಾಜರಾಗುವ ಮುನ್ನ ಸಿಎಂ ಸಿದ್ದರಾಮಯ್ಯ ಕಾನೂನು ಸಲಹೆಗಾರ ಜೊತೆ ಸಭೆ ನಡಸಿದ್ದರು. ಸರ್ಕಾರಿ ಕಾರಿನಲ್ಲಿ, ಬೆಂಗಾವಲು ವಾಹನದಲ್ಲಿ ವಿಚಾರಣೆಗೆ ಬರಲು ಸಿಎಂ ಸಜ್ಜಾಗಿದ್ದರು. ಆದರೆ, ಕಾನೂನು ಸಲಹೆಗಾರು ನೀಡಿದ ಸಲಹೆಯಂತೆ ಸರ್ಕಾರಿ ಸವಲತ್ತು ಬಳಸದೇ, ಸರ್ಕಾರಿ ಕಾರನ್ನೂ ಬಳಸದೇ ತಮ್ಮ ಸಿಬ್ಬಂದಿಯನ್ನೂ ಜೊತೆಗೆ ಕರೆ ತರದೇ ಸಿಎಂ ಸಿದ್ದರಾಮಯ್ಯ ಸಾಮಾನ್ಯರಂತೆ ಬಂದರು.

ಅಂಜಿಕೆಯಿಲ್ಲದೇ ಕೆಲಸ ಮಾಡಿ: ಲೋಕಾಯುಕ್ತಗೆ ಸಿದ್ದರಾಮಯ್ಯ ಸಲಹೆ

ವಿಚಾರಣೆ ಎದುರಿಸಲು ಕಚೇರಿಯೊಳಗೆ ಬಂದ ಸಿಎಂ ಸಿದ್ದರಾಮಯ್ಯ, ಮೊದಲಿಗೆ ಅನೌಪಚಾರಿಕವಾಗಿ ಎಸ್​ಪಿ ಉದೇಶ್​ ಜೊತೆ ಮಾತನಾಡಿದರು. ನಾನು ಸಿಎಂ ಎಂದು ಅಂಜಿಕೆ ಇಟ್ಟುಕೊಳ್ಳಬೇಡಿ, ಸಂಕೋಚ ಇಲ್ಲದೇ ವಿಚಾರಣೆ ಮಾಡಿ ಎಂದು ಸಲಹೆ ನೀಡಿದರು.

ಲೋಕಾಯುಕ್ತ ಎಸ್​ಪಿಗೆ ಸಿದ್ದರಾಮಯ್ಯ ಹೇಳಿದ್ದೇನು?

‘ನಾನು ಸಿಎಂ ಎಂದು ಅಂಜಿಕೆ ಇಟ್ಟುಕೊಳ್ಳಬೇಡಿ, ಆರಾಮಾಗಿ ನಿಮ್ಮ ಕೆಲಸ ನೀವು ಮಾಡಿ. ನಾನು ಈ ಕ್ಷಣಕ್ಕೆ ನಿಮಗೆ ಸಿಎಂ ಅಲ್ಲ, ನೀವು ಒಂದು ಕೇಸ್​ನಲ್ಲಿ ನನಗೆ ನೋಟಿಸ್ ಕೊಟ್ಟಿದ್ದೀರಿ. ನೋಟಿಸ್​ ಕೊಟ್ಟಿದ್ದಕ್ಕೆ ನಾನು ಬಂದಿದ್ದೇನೆ. ನಿಮ್ಮ ಪ್ರಕ್ರಿಯೆಗಳು ಹೇಗಿದೆಯೋ ಹಾಗೇ ಮಾಡಿ. ನೀವು ಯಾವ ಪ್ರಶ್ನೆ ಬೇಕಾದರೂ ಕೇಳಿ, ನನಗೆ ಗೊತ್ತಿರುವುದನ್ನು ಹೇಳುತ್ತೇನೆ. ಎಷ್ಟು ಸಮಯವಾದ್ರೂ ತೆಗೆದುಕೊಳ್ಳಿ, ಯಾವ ಪ್ರಶ್ನೆಗಳಿದ್ರೂ ಕೇಳಿ’ ಎಂದು ಲೋಕಾಯುಕ್ತ ಎಸ್​​ಪಿಗೆ ಸಿದ್ದರಾಮಯ್ಯ ಹೇಳಿದರು.

ಲೋಕಾಯುಕ್ತರು ಕೇಳಿದ ಪ್ರಶ್ನೆ, ಸಿದ್ದರಾಮಯ್ಯ ಉತ್ತರದ ವಿವರ

  • ಎಸ್​​ಪಿ: ತಮ್ಮ ಅಧಿಕಾರವಧಿಯಲ್ಲಿ ಸಂಗತಿ ಗಮನಕ್ಕೆ ಬಂದಿತ್ತಾ?
  • ಸಿದ್ದರಾಮಯ್ಯ: ನನ್ನ ಗಮನಕ್ಕೆ ಇದು ಬಂದಿಲ್ಲ. ಕಾನೂನುಬದ್ಧವಾಗಿ ನಾವು ಸೈಟ್ ತೆಗದುಕೊಂಡಿದ್ದೇವೆ.
  • ಎಸ್​​ಪಿ: ನೀವು ಪ್ರಭಾವ ಬಳಸಿದ್ದೀರಾ?
  • ಸಿದ್ದರಾಮಯ್ಯ: ನಾನು ಯಾರ ಮೇಲೂ ಪ್ರಭಾವ ಬೀರಿಲ್ಲ. ಪ್ರಭಾವ ಬೀರುವಂತಹ ಪ್ರಮೇಯ ಬಂದಿಲ್ಲ.
  • ಎಸ್​ಪಿ: ನೀವು ಸಿಎಂ & ವಿಪಕ್ಷದ ನಾಯಕರೂ ಸಹ ಆಗಿದ್ದಿರಿ…
  • ಸಿದ್ದರಾಮಯ್ಯ: ನನ್ನ ಅಧಿಕಾರದ ಅವಧಿಯಲ್ಲಿ ಯಾವುದೇ ತಪ್ಪು ಮಾಡಿಲ್ಲ. ಕಾನೂನು ಪ್ರಕಾರವೇ ನಾನು ನಡೆದುಕೊಂಡು ಬಂದಿದ್ದೇನೆ.
  • ಎಸ್​​ಪಿ: ಈ ಹಗರಣದಲ್ಲಿ ನಿಮ್ಮ ಪಾತ್ರವೇನು?
  • ಸಿದ್ದರಾಮಯ್ಯ: ಈ ಪ್ರಕರಣದಲ್ಲಿ ಪಾತ್ರವಿಲ್ಲ
  • ಎಸ್​ಪಿ: ನಿಮ್ಮ ಪತ್ನಿ ಹಾಗೂ ಮಗನ ಪಾತ್ರವೇನು?
  • ಸಿದ್ದರಾಮಯ್ಯ: ನನ್ನ ಪತ್ನಿ ಇಲ್ಲೇ ಸೈಟ್ ಕೊಡಿ ಎಂದು ಕೇಳಿಲ್ಲ. ಈ ಪ್ರಕರಣದಲ್ಲಿ ನನ್ನ ಮಗನ ಪಾತ್ರ ಇಲ್ಲ.
  • ಎಸ್​ಪಿ: ಸೈಟ್ ಹಂಚಿಕೆಗಾಗಿ ಯಾರಿಗಾದ್ರೂ ಕರೆ ಮಾಡಲಾಗಿತ್ತಾ?
  • ಸಿದ್ದರಾಮಯ್ಯ: ನಾನು ಯಾರಿಗೂ ಕರೆ ಮಾಡಿಲ್ಲ, ಪ್ರಭಾವವನ್ನೂ ಬೀರಿಲ್ಲ.

ಇದನ್ನೂ ಓದಿ: ಮತ್ತೆ ವಿಚಾರಣೆಗೆ ಕರೆದಿಲ್ಲ, ಲೋಕಾಯುಕ್ತ ವಿಚಾರಣೆ ಬಳಿಕ ಸಿಎಂ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ

ಹೀಗೆ, ಸಿಎಂ ಸಿದ್ದರಾಮಯ್ಯಗೆ ಅನೇಕ ಪ್ರಶ್ನೆಗಳನ್ನು ಕೇಳಲಾಗಿದೆ. ಇದಕ್ಕೆ ಸಿಎಂ ಉತ್ತರವನ್ನೂ ಕೊಟ್ಟಿದ್ದಾರೆ. ನಂತರ ಲೋಕಾಯುಕ್ತ ಕಚೇರಿಯಿಂದ ನಗುಮೊಗದಿಂದಲೇ ಹೊರಬಂದ ಸಿಎಂ ಸಿದ್ದರಾಮಯ್ಯ, ಮರಳಿ ವಿಚಾರಣೆಗೆ ಕರೆದಿಲ್ಲ ಎಂದರು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ